ಸಿನಿರಂಗ ಅಥವಾ ಕಿರುತೆರೆಗೆ ಅಡಿಪಾಯ ರಂಗಭೂಮಿ. ನಟನಾ ಜಗತ್ತಿನಲ್ಲಿ ಮೋಡಿ ಮಾಡುತ್ತಿರುವ ನಟನಟಿಯರು ರಂಗಭೂಮಿಯ ಹಿನ್ನೆಲೆ ಇರುವವರೆ ಎಂಬುದು ಗಮನಾರ್ಹ. ಅಂತೆಯೇ ರಂಗಭೂಮಿಯಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟವರ ಪೈಕಿ ಪಲ್ಲವಿ ರಾಜು ಕೂಡಾ ಒಬ್ಬರು.
“ಕ” ಎಂಬ ಹೆಸರಿನ ಚಿತ್ರದ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಪಲ್ಲವಿ ಅದರಲ್ಲಿ ನರ್ಸ್ ಸಿಮ್ರನ್ ಆಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ ಮಂತ್ರಂ ಚಿತ್ರದಲ್ಲಿ ನಾಯಕಿ ರಾಧಾ ಆಗಿ ಅಭಿನಯಿಸಿದ್ದ ಈಕೆ ಕಳೆದ ವರ್ಷ ಸದ್ದು ಮಾಡಿದ ಗುಲ್ಟು ಸಿನಿಮಾದಲ್ಲಿ ಮಾನಸ ಪಾತ್ರಕ್ಕೆ ಜೀವ ತುಂಬಿದ್ದರು.
ರವಿ ಹಿಸ್ಟರಿ ಸಿನಿಮಾದಲ್ಲಿ ಎಸ್.ಐ. ಅನಿತಾ ಆಗಿ ಕಾಣಿಸಿಕೊಂಡಿದ್ದ ಪಲ್ಲವಿ ರಾಜು ರತ್ನಮಂಜರಿಯ ಕಮಲಿ, ಪಾರ್ಚುನರ್ ನ ಪಲ್ಲವಿ ಆಗಿ ಮಿಂಚಿದರು. ಮಾತ್ರವಲ್ಲದೇ ಅವರ ಅಭಿನಯದ ದ್ವಿಭಾಷಾ ಸಿನಿಮಾ ನಿಕ್ಸನ್, ಉತ್ತಮರು, ಸಾಲಿಗ್ರಾಮ, ಒಂದಿಷ್ಟು ದಿನಗಳ ಕೆಳಗೆ ಬಿಡುಗಡೆಗೆ ಬಾಕಿಯಿದೆ.
ಇಂತಿಪ್ಪ ಪಲ್ಲವಿ ರಾಜು ಹುಟ್ಟಿದ್ದು ಬೆಳೆದಿದ್ದು ಓದಿದ್ದೆಲ್ಲಾ ಬೆಂಗಳೂರಿನಲ್ಲಿ. ಬಿಕಾಂ ಪದವಿ ಮುಗಿಸಿರುವ ಪಲ್ಲವಿಗೆ ನಟನೆ ಪ್ಯಾಶನ್ ಹೌದು. ಮೊದಲಿನಿಂದಲೂ ಪಲ್ಲವಿ ಅವರಿಗೆ ನಟನೆಯ ಮೇಲೆ ವಿಶೇಷವಾದ ಆಕರ್ಷಣೆ ಇದ್ದುದ್ದಂತೂ ನಿಜ. ಬಹುಶಃ ಅದೇ ಆಕರ್ಷಣೆ ಅವರ ನಟನಾ ಪಯಣಕ್ಕೆ ಮುನ್ನುಡಿ ಆಯಿತೇನೋ? ರಂಗಭೂಮಿಯ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಈಕೆ ಹಲವು ನಾಟಕಗಳಲ್ಲಿ ನಟಿಸಿದರು.
ಫ್ಲೈ ಓವರ್ ಹಾಗೂ ನಗುವ ನಯನ ಅನ್ನುವ ಕಿರುಚಿತ್ರದಲ್ಲಿ ನಟಿಸಿರುವ ಪಲ್ಲವಿ ಅವರು ಈಗಾಗಲೇ ತಮಿಳು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಾಗಿದೆ. ಇದರ ಜೊತೆಗೆ ವಿನಯ್ ಗೋವಿಂದ ರಾಜ್ ನಿರ್ಮಾಣದ, ಸ್ಯಾಮುಯೆಲ್ ಟೋನಿ ನಿರ್ದೇಶನದ ಇನ್ನು ಹೆಸರಿಡಬೇಕಾದ ಸಿನಿಮಾದಲ್ಲಿ ಪಲ್ಲವಿ ರಾಜ್ ಬಣ್ಣ ಹಚ್ಚಿದ್ದು ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೂರ್ಯ ಅವರೊಂದಿಗೆ ಈಕೆ ನಟಿಸಿದ್ದು ತುಂಬಾ ಸ್ಪೆಷಲ್ ಹಾಗೂ ಸ್ಟೈಲಿಶ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
“ಉತ್ತಮ ಪಾತ್ರಗಳಿಗೆ ಜೀವ ತುಂಬಬೇಕು ಎಂಬುದು ನನ್ನ ಜೀವನದ ಬಹು ದೊಡ್ಡ ಕನಸು ಹೌದು. ಇಲ್ಲಿಯ ತನಕ ನಾನು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಮುಂದೆಯೂ ಭಿನ್ನವಾದ ಪಾತ್ರಗಳನ್ನು ನಾನು ನಿರೀಕ್ಷಿಸುತ್ತೇನೆ. ನಾನು ಈಗಾಗಲೇ ಎರಡು ಕಿರುಚಿತ್ರದಲ್ಲಿ ನಟಿಸಿದ್ದು ಮುಂದೆಯೂ ಅವಕಾಶ ದೊರೆತರೆ ಕಿರುಚಿತ್ರ, ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸಲು ತಯಾರಾಗಿದ್ದೇನೆ” ಎಂದು ಹೇಳುತ್ತಾರೆ ಪಲ್ಲವಿ ರಾಜು.