ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಯು ಮುಕ್ತಾಯಗೊಂಡಿದೆ. ಸುಖಾಂತ್ಯ ಕಾಣುವ ಮೂಲಕ ತನ್ನ ಪ್ರಯಾಣವನ್ನು ಕೊನೆಗೊಳಿಸಿದೆ. ಯಾರಿವಳು ಧಾರಾವಾಹಿಯಲ್ಲಿ ಖಳನಾಯಕಿ ಗೌತಮಿಯಾಗಿ ನಟಿಸುತ್ತಿದ್ದ ರಶ್ಮಿತಾ ಚೆಂಗಪ್ಪ ಅವರು ತಮ್ಮ ಪಾತ್ರದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.
“ಗೌತಮಿ ಪಾತ್ರ ನಿಜಕ್ಕೂ ತುಂಬಾ ಅದ್ಭುತವಾದುದು. ಒಂದೇ ಪಾತ್ರದಲ್ಲಿ ಪಾಸಿಟಿವ್ ಜೊತೆಗೆ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದೇನೆ. ಇನ್ನು ಕೊನೆಯ ಒಂದಷ್ಟು ಸಂಚಿಕೆಗಳಲ್ಲಿ ನಟನೆಗೆ ತುಂಬಾನೇ ಅವಕಾಶ ಸಿಕ್ಕಿತ್ತು”ಎನ್ನುತ್ತಾರೆ ರಶ್ಮಿತಾ.
ಇನ್ನು ಧಾರಾವಾಹಿ ತಂಡದವರ ಕುರಿತು ಮಾತನಾಡಿರುವ ರಶ್ಮಿತಾ “ಧಾರಾವಾಹಿ ತಂಡ ಕೂಡಾ ತುಂಬಾ ಒಳ್ಳೆಯದಾಗಿತ್ತು. ಕೊನೆಯ ದಿನದ ಶೂಟಿಂಗ್ ತನಕ ನಾವೆಲ್ಲಾ ನಗುನಗುತ್ತಾ, ಸಂತಸದಿಂದ ಶೂಟಿಂಗ್ ಮಾಡುತ್ತಿದ್ದೆವು. ಧಾರಾವಾಹಿ ಮುಗಿಯುತ್ತಿದೆ ಎಂದಾಗ, ಕೊನೆಯ ಸಂಚಿಕೆ ಶೂಟಿಂಗ್ ಮಾಡುವಾಗ ನಾನು ಮಾತ್ರವಲ್ಲದೇ ಇಡೀ ತಂಡದವರು ಭಾವುಕರಾಗಿದ್ದೆವು” ಎಂದು ಹೇಳುತ್ತಾರೆ.
ಅಭಿನಯಿಸಿರುವಂತಹ ಹೆಚ್ಚಿನ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿಯೇ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿತಾಗೆ ಸದ್ಯ ಪಾಸಿಟಿವ್ ಪಾತ್ರದಲ್ಲಿ ನಟಿಸುವ ಬಯಕೆ. “ಇಲ್ಲಿಯ ತನಕ ನಾನು ಖಳನಾಯಕಿಯಾಗಿ ನಟಿಸಿದ್ದರೂ ಪ್ರತಿ ಪಾತ್ರವೂ ವಿಭಿನ್ನ ಆಗಿತ್ತು. ನೆಗೆಟಿವ್ ಪಾತ್ರವಾದರೂ ಬೇರೆ ಬೇರೆ ಶೇಡ್ ನ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದಕ್ಕೆ ಸಂತಸವಿದೆ” ಎನ್ನುತ್ತಾರೆ.
“ನೆಗೆಟಿವ್ ಪಾತ್ರ ಎಂದರೆ ಯಾವ ರೀತಿಯಾಗಿ ಬೇಕಾದರೂ ನಟಿಸಬಹುದು. ಅದು ನೆಗೆಟಿವ್ ಪಾತ್ರದ ಪ್ಲಸ್ ಪಾಯಿಂಟ್. ಆದರೆ ಸದ್ಯ ನನಗೆ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬಬೇಕು ಎನ್ನುವ ಆಸೆ. ಇಷ್ಟು ದಿನಗಳ ಕಾಲ ಖಳನಾಯಕಿಯಾಗಿ ಪ್ರೇಕ್ಷಕರು ನನ್ನನ್ನು ಸ್ವೀಕರಿಸಿದ್ದರು. ಇದೀಗ ಪಾಸಿಟಿವ್ ಪಾತ್ರ ಮಾಡಿದಾಗ ವೀಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ತಿಳಿಯುವ ಕುತೂಹಲ ನನಗಿದೆ” ಎನ್ನುತ್ತಾರೆ ರಶ್ಮಿತಾ ಚೆಂಗಪ್ಪ.