ಸಿನಿಮಾ ಮಂದಿ ಕಿರುತೆರೆ ಪ್ರವೇಶಿಸಿ ಜನಮಾನಸ ಗೆಲ್ಲುವುದು ಹೊಸದೇನೂ ಅಲ್ಲ. ಹಲವು ನಟನಟಿಯರು ಸಿನಿಮಾದಲ್ಲಿ ನಟಿಸಿ ಕಿರುತೆರೆಯಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಈಗ ಆ ಸಾಲಿಗೆ ಸೇರ್ಪಡೆ ಅಖಿಲಾ ಪ್ರಕಾಶ್. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಧಾರಾವಾಹಿಯಲ್ಲಿ ತಂಗಿ ತುಳಸಿಯಾಗಿ ನಟಿಸುತ್ತಿದ್ದಾರೆ.
ಮೂಲತಃ ಕೊಡಗಿನವರಾದ ಅಖಿಲಾ ಬೆಳೆದದ್ದೆಲ್ಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಮೆಡಿಕಲ್ ಓದಿ ವೈದ್ಯೆಯಾಗಬೇಕೆಂಬ ಹಂಬಲ ಹೊಂದಿದ್ದ ಅಖಿಲಾ ಓದಿದ್ದು ಬಿಕಾಂ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ “ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು” ಸೀಸನ್ ೩ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ಅಖಿಲಾ ಕಾಲಿಟ್ಟಿದ್ದು ಸಿನಿರಂಗಕ್ಕೆ.
ನಟನೆಯ ಗಂಧಗಾಳಿ ಗೊತ್ತಿರದ ಅಖಿಲಾ ಅವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದವು. ನಟನೆಯ ಆಗು ಹೋಗುಗಳು, ರೀತಿ ನೀತಿಗಳು ತಿಳಿಯದಿದ್ದ ಅಖಿಲಾ ಪ್ರಕಾಶ್ ಬರೋಬ್ಬರಿ ಒಂದು ತಿಂಗಳ ಕಾಲ ತರಬೇತಿಯನ್ನು ಪಡೆದುಕೊಂಡರು. ಜೊತೆಗೆ ನಟನೆಯಲ್ಲಿ ಪಳಗತೊಡಗಿದರು.
ಸೋಜಿಗ ಸಿನಿಮಾದ ಮೂಲಕ ಸಿನಿಕೆರಿಯರ್ ಆರಂಭಿಸಿದ ಅಖಿಲಾ ಅವರು ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. “ನಾನು ಇದುವರೆಗೆ ನಾಲ್ಕೈದು ಸಿನಿಮಾಗಳಲ್ಲಿ ಅಭಿನಯಿಸದ್ದರೂ, ರತ್ನಮಂಜರಿಯ ಗೌರಿ ಪಾತ್ರ ನನಗೆ ತುಂಬಾ ಫೇವರಿಟ್. ಯಾಕೆಂದರೆ ನಾನು ಪ್ರಸ್ತುತ ಸಿನಿಮಾದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಫ್ಯಾಷನ್ ಡಿಸೈನರ್ ಪಾತ್ರಕ್ಕೆ ಜೀವ ತುಂಬಿದ್ದೆ” ಎಂದು ನೆನಪಿಸಿಕೊಳ್ಳುತ್ತಾರೆ ಅಖಿಲಾ ಪ್ರಕಾಶ್.
“ಸಿನಿಮಾ ಹಾಗೂ ಸೀರಿಯಲ್ ಮಧ್ಯೆ ತುಂಬಾ ಅಂತರ ಇದೆ” ಎನ್ನುವ ಅಖಿಲಾ ಪ್ರಕಾಶ್ ” ಸಿನಿಮಾಗಳ ಚಿತ್ರೀಕರಣದ ಸಂದರ್ಭದಲ್ಲಿ ನಾವು ದಿನಕ್ಕೆ ಕೇವಲ ಒಂದೆರಡು ದೃಶ್ಯಗಳನ್ನು ಮಾತ್ರ ಮಾಡುತ್ತೇವೆ. ಆದರೆ ಕಿರುತೆರೆಯಲ್ಲಿ ಹಾಗಿಲ್ಲ. ಇಲ್ಲಿ ಚಿತ್ರೀಕರಣ ನಿರಂತರವಾಗಿ ನಡೆಯುತ್ತದೆ. ಜೊತೆಗೆ ಒತ್ತಡವೂ ಕೂಡಾ ಕೊಂಚ ಜಾಸ್ತಿ. ಅದೇ ಕಾರಣದಿಂದ ಮೊದಮೊದಲು ನನಗೆ ಕಿರುತೆರೆಯಲ್ಲಿ ನಟಿಸುವುದಕ್ಕೆ ಕಷ್ಟವಾದರೂ ಇದೀಗ ಅಭ್ಯಾಸವಾಗಿದೆ” ಎಂದು ಹೇಳುತ್ತಾರೆ ಅಖಿಲಾ ಪ್ರಕಾಶ್.
ಸದ್ಯ ಅಣ್ಣ ತಂಗಿಯ ತುಳಸಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಅಖಿಲಾ ಪ್ರಕಾಶ್ ಗೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆ.