‘ಪ್ರೇಮ ಬರಹ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತಳಾದ ನಟಿ ಐಶ್ವರ್ಯ ಅರ್ಜುನ್ ಇದೀಗ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಭಾರತೀಯ ಸಿನಿಮಾರಂಗದ ಖ್ಯಾತ ನಟ ಹಾಗೂ ತಮ್ಮ ತಂದೆ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಐಶ್ವರ್ಯ ನಟಿಸುತ್ತಿರುವುದು ವಿಶೇಷ.
ನಟ ವಿಶ್ವಾಕ್ ಸೇನ್ ಅಭಿನಯದ ಸಿನಿಮಾ ಇದಾಗಿದ್ದು ಬರೋಬ್ಬರಿ ನಾಲ್ಕು ವರ್ಷಗಳ ಗ್ಯಾಪ್ ನ ನಂತರ ಐಶ್ವರ್ಯ ಮತ್ತೆ ಬಣ್ಣ ಹಚ್ಚಲಿದ್ದಾರೆ. ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ‘ನಾನು ಯಾವುದನ್ನೂ ಹೆಚ್ಚಾಗಿ ಪ್ಲಾನ್ ಮಾಡುವುದಿಲ್ಲ. ಕೋವಿಡ್ ಅವಧಿಯಲ್ಲಿ ಹಲವಾರು ಪ್ರಾಜೆಕ್ಟ್ ಗಳ ಬಗ್ಗೆ ಚರ್ಚೆ ನಡೆಸಿದ್ದೆ. ಆದುದೆಲ್ಲವೂ ಒಳ್ಳೆಯದಕ್ಕೆಂದು ಭಾವಿಸುವವಳು ನಾನು. ನಡೆದು ಹೋದ ಘಟನೆಗಳ ಕುರಿತು ತಲೆ ಕೆಡಿಸಿಕೊಳ್ಳುವುದು ತೀರಾ ಕಮ್ಮಿ. ಕೊನೆಗೂ ಹೊಸ ಸಿನಿಮಾ ಮಾಡಲು ಹೊರಟಿರುವುದು ಖುಷಿ ಕೊಟ್ಟಿದೆ. ಇಲ್ಲಿಯವರೆಗೆ ಕಾದಿರುವುದಕ್ಕೂ ತೃಪ್ತಿ ಸಿಕ್ಕಂತಾಗಿದೆ ‘ ಎಂದು ಹೇಳುತ್ತಾರೆ
ತಮ್ಮ ತೆಲುಗು ಚಿತ್ರದ ಬಗ್ಗೆ ಹೇಳಿದ ಐಶ್ವರ್ಯ ‘ ನಾನು ಹಿಂದೆಂದೂ ಈ ರೀತಿಯ ಪಾತ್ರ ಮಾಡಿಲ್ಲ. ಸಿನಿಮಾದ ಟೈಟಲ್ ಇನ್ನೇನು ಬಿಡುಗಡೆಯಾಗಲಿದೆ. ಈಗ ಪಾತ್ರದ ಕುರಿತಂತೆ ಹೆಚ್ಚಿನದಾಗಿ ಏನೂ ಹೇಳಲಾರೆ. ಒಂದು ಪ್ರಯಾಣದ ಮೇಲೆ ಈ ಕಥೆ ನಿಂತಿದೆ. ತೆಲುಗು ಅರ್ಥವಾಗುವುದರೊಂದಿಗೆ ಮಾತನಾಡಲು ಬರುವುದರಿಂದ ಚಿತ್ರತಂಡದೊಂದಿಗೆ ವ್ಯವಹರಿಸಲು ಮತ್ತು ಪಾತ್ರದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಕಷ್ಟವೇನಿಲ್ಲ. ಆಗಸ್ಟ್ ಅಂತ್ಯದಲ್ಲಿ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ’ ಎಂದಿದ್ದಾರೆ
ಇನ್ನು ಎರಡನೇ ಬಾರಿಗೆ ತಂದೆಯೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ‘ ನಮ್ಮಂತ ಹೊಸ ಕಲಾವಿದರ ಮೇಲೆ ಅವರು ಇಟ್ಟಿರುವ ನಂಬಿಕೆ ನಮ್ಮ ಸಾಮರ್ಥ್ಯವನ್ನು ಇನ್ನೂ ಪ್ರೋತ್ಸಾಹಿಸಿದಂತೆ. ಅವರು ನನಗೆ ನಿರ್ದೇಶಕ ಹಾಗೂ ಗುರು. ನಾನು ಅವರ ಮಾರ್ಗದರ್ಶನದಲ್ಲಿ ಅಭಿನಯಿಸುವ ನಟಿಯಷ್ಟೇ’ ಎಂದರು.
ಕನ್ನಡ ಸಿನಿಮಾದಲ್ಲಿ ನಟಿಸುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದ ನಟಿ ಐಶ್ವರ್ಯ ‘ ನಾನು ನನ್ನ ಮಾತೃಭಾಷೆಯಲ್ಲಿ ಸಿನಿಮಾಗಳನ್ನು ಮಾಡಲು ತುಂಬಾ ಉತ್ಸುಕಳಾಗಿದ್ದೇನೆ. ನನ್ನನ್ನು ಈಗಲೂ ಜನರು ಪ್ರೇಮ ಬರಹದಿಂದ ಗುರುತಿಸುತ್ತಾರೆ. ಮುಂದೆ ಉತ್ತಮ ಅವಕಾಶಗಳು ಬಂದಲ್ಲಿ ಒಪ್ಪಿಕೊಳ್ಳುತ್ತೇನೆ’ ಎಂದರು.