ಕನ್ನಡ ಚಿತ್ರರಂಗ ಪ್ರತೀ ವಾರಾಂತ್ಯಕ್ಕೂ ಸಾಲು ಸಾಲು ಸಿನಿಮಾಗಳನ್ನು ಬೆಳ್ಳಿತೆರೆಗೆ ಕಳಿಸುತ್ತಿದೆ. ಒಂದಷ್ಟು ಚಿತ್ರಗಳು ಭರ್ಜರಿ ಯಶಸ್ಸು ಕಂಡರೆ, ಇನ್ನು ಕೆಲವು ಚಿತ್ರಗಳು ಬಿಡುಗಡೆಯಾದದ್ದೇ ಯಾರಿಗೂ ತಿಳಿಯದೇ ಹೋಗುತ್ತದೆ. ಹೀಗಿರುವಾಗ ಮೂರೂ ಬಹುನಿರೀಕ್ಷಿತ ಹಾಗು ಸುದ್ದಿಯಲ್ಲಿರುವ ಸಿನಿಮಾಗಳು ಒಂದೇ ದಿನ ಬಿಡುಗಡೆಯಗುವುದೆಂದರೆ!! ಹೌದು ಈಗ ಅದೇ ಆಗುತ್ತಿದೆ. ಇದೇ ಬರುವ ಜುಲೈ 1ರಂದು ಎಲ್ಲೆಡೆ ಪರಿಚಿತವಾಗಿರುವ ಹಾಗು ತನ್ನದೇ ಆದ ನಿರೀಕ್ಷಕರನ್ನು ಹೊಂದಿರುವ ಮೂರು ಸಿನಿಮಾಗಳು ಬಿಡುಗಡೆಯಗುತ್ತಿವೆ. ಅದರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಸಿನಿಮಾ ಕೂಡ ಒಂದು.
ಹ್ಯಾಟ್ರಿಕ್ ಹೀರೋ ಶಿವಣ್ಣನವರ 123ನೇ ಸಿನಿಮಾ ‘ಬೈರಾಗಿ’ ಬಿಡುಗಡೆಗೆ ಎಂದೋ ಸಿದ್ದವಾಗಿದ್ದು, ಜುಲೈ 1ರಂದು ತೆರೆಮೇಲೆ ಮೂಡಿಬರಲಿದೆ. ಛಾಯಾಗ್ರಾಹಕರಾದ ವಿಜಯ್ ಮಿಲ್ಟನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತವಿದ್ದು, ಹಾಡು ಹಾಗು ಟ್ರೈಲರ್ ಗಳು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿವೆ. ಶಿವಣ್ಣನ ಜೊತೆಗೆ ಡಾಲಿ ಧನಂಜಯ ಹಾಗು ಪೃಥ್ವಿ ಅಂಬರ್ ಅವರು ನಟಿಸುತ್ತಿರುವುದು ಚಿತ್ರಕ್ಕೆ ಕಾಯುತ್ತಿರುವವರ ಸಂಖ್ಯೆಯನ್ನು ಹೆಚ್ಚಿಸಿದೆ.
ಜುಲೈ 1ರಂದು ಬಿಡುಗಡೆ ಕಾಣುತ್ತಿರುವ ಎರಡನೇ ಸಿನಿಮಾ ನಿರೂಪಕಿ-ನಟಿ, ಈಗ ನಿರ್ದೇಶಕಿ ಆಗಿರುವ ಶೀತಲ್ ಶೆಟ್ಟಿ ಅವರ ‘ವಿಂಡೋ ಸೀಟ್’ ಸಿನಿಮಾ. ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ನಾಯಕರಾಗಿ ಸಂಜನಾ ಆನಂದ್, ಅಮೃತ ಐಯೆಂಗಾರ್ ನಾಯಕಿಯರಾಗಿ ನಟಿಸುತ್ತಿರುವ ಈ ಸಿನಿಮಾ ಟ್ರೈಲರ್ ಹಾಗು ವಿಶಿಷ್ಟ ರೀತಿಯ ಹಾಡುಗಳಿಂದ ಜನರನ್ನ ತನ್ನತ್ತ ಆಕರ್ಷಸಿದೆ. ಥ್ರಿಲರ್-ಪ್ರೇಮಕತೆ ರೀತಿಯ ಸಿನಿಮಾ ಇದಾಗಿರುವ ಸಾಧ್ಯತೆಯಿದ್ದು ಸಿನಿರಸಿಕರು ಸಿನಿಮಾಗೆ ಕಾಯುತ್ತಿದ್ದಾರೆ.
‘ಆಟಗಾರ’ ಸಿನಿಮಾದಿಂದ ಯಶಸ್ಸು ಕಂಡ ನಿರ್ದೇಶಕರಾದ ಕೆ ಎಂ ಚೈತನ್ಯ ಅವರ ಮುಂದಿನ ಸಿನಿಮಾ ‘ಅಬ್ಬಬ್ಬಾ’. ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಕಂಡು ಜನಮನ್ನಣೆ ಪಡೆದಿದ್ದ ‘ಫ್ಯಾಮಿಲಿ ಪ್ಯಾಕ್’ ಸಿನಿಮಾ ಖ್ಯಾತಿಯ ಹಿಟ್ ಜೋಡಿ ಲಿಖಿತ್ ಶೆಟ್ಟಿ ಹಾಗು ಅಮೃತ ಐಯೆಂಗರ್ ಅವರು ಮತ್ತೊಮ್ಮೆ ಜೋಡಿಯಾಗಿ ನಟಿಸುತ್ತಿರುವ ಈ ಸಿನಿಮಾ ಒಂದು ರೋಮ್ಯಾಂಟಿಕ್ ಕಾಮಿಡಿ ಆಗಿರಲಿದೆ. ನಾಯಕನ ಸ್ನೇಹಿತರ ಪಾತ್ರದಲ್ಲಿ ತಾಂಡವ್, ಅಜಯ್ ರಾಜ್,ಧನರಾಜ್ ನಟಿಸುತ್ತಿದ್ದು ಸಿನಿಮಾ ಎಲ್ಲರ ಮುಖದಲ್ಲೂ ನಗು ತರಿಸುವುದು ಖಾತ್ರಿಯಾಗಿದೆ. ಈ ಸಿನಿಮಾ ಕೂಡ ಇದೇ ಜುಲೈ 1ರಂದು ಬಿಡುಗಡೆಯಾಗುತ್ತಿದ್ದು, ಇಂದು(ಜೂನ್ 9) ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದೆ.
ಜುಲೈ 1ರಂದು ಬಿಡುಗಡೆಯಾಗುತ್ತಿರುವ ಮೂರೂ ಸಿನಿಮಾಗಳು ಚಿತ್ರಮಂದಿರಗಳಿಗೆ ಹೊಸ ಕಳೆ ಕೊಡುವುದು ಖಚಿತ. ಶಿವಣ್ಣ-ಡಾಲಿಯ ಅಭಿಮಾನಿಗಳು ‘ಬೈರಾಗಿ’ಯನ್ನ ಸಂಭ್ರಮಿಸಿದರೆ, ಹಾಸ್ಯಪ್ರೇಮಿಗಳು ‘ಅಬ್ಬಬ್ಬಾ’ ಹಾಗು ಥ್ರಿಲರ್ ಕಥೆಯ ಪ್ರೇಕ್ಷಕರು ‘ವಿಂಡೋ ಸೀಟ್’ ಸಿನಿಮಾಗಳನ್ನು ಕಣ್ತುಂಬಿಕೊಳ್ಳಲು ಸಿನಿಮಂದಿರಗಳ ಕಡೆಗೆ ಹೋಗಲಿದ್ದಾರೆ. ಒಟ್ಟಿನಲ್ಲಿ ಎಲ್ಲೆಡೆ ಕನ್ನಡ ಸಿನಿಮಾಗಳಿಂದಲೇ ಚಿತ್ರಮಂದಿರ ತುಂಬಿತುಳುಕುವ ಸಾಧ್ಯತೆಗಳಿವೆ.