‘ನಮ್ಮನೆ ಯುವರಾಣಿ’ ಧಾರವಾಹಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಕನ್ನಡಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿ ಅದು. ಆರಂಭದಿಂದ ಇಲ್ಲಿಯವರೆಗೂ ಹಲವಾರು ಅಭಿಮಾನಿಗಳನ್ನು ಈ ಧಾರಾವಾಹಿ ಪಡೆದಿದೆ. ಇದರಲ್ಲಿನ ನಟರು ಸಹ ಎಲ್ಲರಿಗೂ ಚಿರಪರಿಚಿತ. ಅದರಲ್ಲೂ ನಾಯಕಿ ಮೀರಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಅಮರ್ ಅವರು ಕನ್ನಡ ಕಿರುತೆರೆಯ ಅಚ್ಚುಮೆಚ್ಚು. ಸದ್ಯ ಅವರು ಹಿರಿತೆರೆಯಲ್ಲಿ ದೊಡ್ಡ ಹೆಜ್ಜೆಗಳನ್ನು ಇಡುವತ್ತ ಸಾಗುತ್ತಿದ್ದಾರೆ.
ಕನ್ನಡಿಗರ ಕಣ್ಮಣಿಯಾಗಿರುವ ಅಂಕಿತಾ, ಸದ್ಯ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಸಂಸ್ಥೆಯಾದ ‘ಪರಮ್ ವಾಹ್ ಸ್ಟುಡಿಯೋಸ್’ ಜೊತೆಗೆ ಕೈಜೋಡಿಸಲು ಸಜ್ಜಾಗಿದ್ದಾರೆ. ಇವರ ಜನುಮದಿನವಾದ ಮೇ 29ರಂದು ಶುಭಾಶಯ ತಿಳಿಸುತ್ತಾ, ತಮ್ಮ ತಂಡಕ್ಕೆ ಆದರದಿಂದ ಸ್ವಾಗತಿಸಿಕೊಂಡಿದೆ ಪರಮ್ ವಾಹ್ ಸ್ಟುಡಿಯೋಸ್. ಇನ್ನು ಹೆಸರಿಡದ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಂಕಿತಾ ಮಿಂಚಲಿದ್ದಾರೆ. ರಕ್ಷಿತ್ ಶೆಟ್ಟಿಯವರ ‘ದಿ ಸೆವೆನ್ ಓಡ್ಸ್’ ಎಂಬ ಸಿನಿ ಬರವಣಿಗೆ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ, ಚಂದ್ರಜಿತ್ ಬೆಳ್ಳಿಯಪ್ಪ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಲಿರುವ ಈ ಸಿನಿಮಾ ಜೂನ್ ತಿಂಗಳ ಅಂತ್ಯದ ಹೊತ್ತಿಗೆ ಅಧಿಕೃತವಾಗಿ ಘೋಷಣೆಯಾಗಲಿದೆ.
ಧಾರವಾಹಿಯ ನಟನೆಯ ಜೊತೆ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದರು ಅಂಕಿತಾ. ಸ್ವತಃ ಹವ್ಯಾಸಿ ಹಾಡುಗಾರ್ತಿಯಾಗಿರುವ ಇವರು, ‘ಎದೆ ತುಂಬಿ ಹಾಡಿದೆನು’ ರಿಯಾಲಿಟಿ ಶೋ ಅನ್ನು ಸರಾಗವಾಗಿ ನಡೆಸಿಕೊಟ್ಟವರು. ಕಿರುತೆರೆಯ ಜೊತೆಗೆ ಹಿರಿತೆರೆಯನ್ನೂ ಸೇರಿರುವ ಇವರು ‘ಅಬ ಜಬ ದಬ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಖ್ಯಾತಿಯ ನಿರ್ದೇಶಕ ಮಯೂರ ರಾಘವೇಂದ್ರ ಅವರ ಮುಂದಿನ ಚಿತ್ರವಾದ ‘ಅಬ ಜಬ ದಬ’ದಲ್ಲಿ ಪೃಥ್ವಿ ಅಂಬರ್ ಅವರಿಗೆ ನಾಯಕಿಯಾಗಿ ಅಂಕಿತಾ ಅಮರ್ ನಟಿಸಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದರ ನಂತರ ಅಂಕಿತಾ ಪರಮ್ ವಾಹ್ ಕೈಸೇರಲಿದ್ದಾರೆ.
ಬಣ್ಣ ಹಚ್ಚುತಾ ನಟಿಸುವ ಜೊತೆಗೆ, ಬಣ್ಣ ಬಣ್ಣದ ಭಾವನೆಗಳನ್ನು ಸಾಲುಗಳ ಮೂಲಕ ಹೊರಹಾಕುವ ಹವ್ಯಾಸವೂ ಇದೇ ಇವರಿಗೆ. ಮಧುರ ಗೀತೆಗಳನ್ನು ಹಾಡುವುದು, ಹಳೆ ನೆನಪುಗಳ ಮೆಲುಕು ಹಾಕುತ್ತಾ ಕವಿತೆ ಸಾಲುಗಳನ್ನು ಬರೆಯುವುದು ಇವರ ನೆಚ್ಚಿನ ಕೆಲಸಗಳಲ್ಲಿ ಒಂದಂತೆ. ಚಂದ್ರಜಿತ್ ಅವರ ಸಿನಿಮಾದಲ್ಲಿ ಅಂಕಿತಾ ಅವರು ನಿರ್ವಹಿಸುವ ಪಾತ್ರವು ಸಹ ಇದೇ ರೀತಿಯದಂತೆ. ತನ್ನ ಪುಟ್ಟ ಲೋಕದಲ್ಲಿ, ಹಳೆಯ ಖುಷಿಯ ಕ್ಷಣಗಳ ಜೊತೆಗೆ ಸದಾ ಸಂತಸವಾಗಿರುವಂತಹ ಪಾತ್ರ. “ನಾನು ಪ್ರತಿನಿತ್ಯ ಇರುವುದಕ್ಕೂ, ಈ ಪಾತ್ರಕ್ಕೂ ಅಪಾರ ಹೋಲಿಕೆಯಿದೆ. ಒಂದು ರೀತಿ ನನ್ನನ್ನೇ ಪಾತ್ರವಾಗಿ ನಟಿಸುವಂತಾಗುತ್ತದೆ. ಸಿನಿಮಾ ನೋಡುವಾಗ ಖಂಡಿತ ಇದು ತಿಳಿಯುತ್ತದೆ” ಎಂದು ಹೇಳುತ್ತಾ ಸಂತಸ ವ್ಯಕ್ತಪಡಿಸುತ್ತಾರೆ ಅಂಕಿತಾ ಅಮರ್.