ನಮ್ಮನೆ ಯುವರಾಣಿ ಧಾರಾವಾಹಿಯ ಮೀರಾ
ಆಲಿಯಾಸ್ ಕೋಳಿಮರಿಯಾಗಿ ಕರುನಾಡಿನಾದ್ಯಂತ ಮನೆ ಮಾತಾಗಿರುವ ಅಂಕಿತಾ ಅಮರ್ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಮತಿ ಶ್ರೀನಿವಾಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಅಂಕಿತಾ ಅಮರ್ ತನ್ನ ನಟನೆಯಿಂದ ಗಮನ ಸೆಳೆದವರು.
ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಅಂಕಿತಾ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಅಂಕಿತಾ ಅಮರ್ ತನ್ನ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಮನ ಸೋತಿದ್ದಾರೆ.
ಅಭಿಮಾನಿಗಳಿಗಾಗಿ ವಿಶೇಷ ಪತ್ರವನ್ನು ತನ್ನ ಇನ್ಸಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಧನ್ಯವಾದಗಳನ್ನು ಹೇಳಿದ್ದಾರೆ. “ನನ್ನನ್ನು ನಿರಂತರವಾಗಿ ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳು. ಅಭಿಮಾನಿಗಳು ನನಗಾಗಿ ಸೃಷ್ಟಿ ಮಾಡಿರುವಂತಹ ಅಭಿಮಾನಿಗಳ ಪುಟಗಳಿಗೆ ಧನ್ಯವಾದಗಳು. ನಾನಿಂದು ನಟಿಯಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ನಿಮ್ಮ ಪ್ರೋತ್ಸಾಹವೇ ಕಾರಣ” ಎನ್ನುತ್ತಾರೆ ಅಂಕಿತಾ ಅಮರ್.
“ನಿಮ್ಮ ನೀಡುತ್ತಿರುವ ಪ್ರೀತಿಯು ಅಕ್ಷರಶಃ ನನಗೆ ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡುತ್ತದೆ. ಅಭಿಮಾನಿ ಪುಟಗಳ ಮೂಲಕ ನನ್ನನ್ನು ಆಶೀರ್ವದಿಸುವುದಕ್ಕೆ ಧನ್ಯವಾದಗಳು. ಇದರ ಜೊತೆಗೆ ಕೆಲವು ವೈಯಕ್ತಿಕ ಖಾತೆಗಳಿಗೂ ಧನ್ಯವಾದಗಳು” ಎಂದಿದ್ದಾರೆ.
ನಟನೆ ಅಲ್ಲದೇ ಗಾಯಕಿ ಹಾಗೂ ನೃತ್ಯಗಾರ್ತಿಯಾಗಿರುವ ಅಂಕಿತಾ ಎದೆ ತುಂಬಿ ಹಾಡುವೆನು ಶೋ ಮೂಲಕ ನಿರೂಪಣೆಗೂ ಕಾಲಿಟ್ಟಿದ್ದರು. ಅಬಜದದಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೂ ಹಾರಿದ ಅಂಕಿತಾ ತಮ್ಮ ಪ್ರೀತಿಯ ಅಭಿಮಾನಿಗಳಿಂದ ಕಣ್ಮಣಿ ಎಂದು ಕರೆಸಿಕೊಳ್ಳುತ್ತಾರೆ. ಅದೇ ಕಾರಣದಿಂದ ಅಂಕಿತಾ ತಮ್ಮ ಪೋಸ್ಟ್ ನ ಕೆಳಗೆ ಕಣ್ಮಣಿ ಎಂದು ಬರೆದುಕೊಂಡಿದ್ದಾರೆ.