ಅನುಷ ರೈ ಸ್ಯಾಂಡಲ್ ವುಡ್ ನ ಲೇಟೆಸ್ಟ್ ನಾಯಕಿ. ಈಗ ನೆರೆಯ ತೆಲುಗು ಚಿತ್ರರಂಗದ ಪ್ರವೇಶ ಮಾಡುತ್ತಿದ್ದಾರೆ. ಸಾಯಿ ಸುನಿಲ್ ನಿಮ್ಮಲ ನಿರ್ದೇಶನದ ನೆಲ್ಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಜೂನ್ ನಲ್ಲಿ ಆರಂಭವಾಗಲಿದೆ.
ತನ್ನ ಹೊಸ ಪಯಣದ ಕುರಿತು ಕಾತರರಾಗಿರುವ ಅನುಷಾ ಮಾತನಾಡಿದ್ದಾರೆ. ” ಒಬ್ಬ ನಟಿಯಾಗಿ ಯಾವುದೇ ಇಂಡಸ್ಟ್ರಿಯಲ್ಲಿಯೂ ನಟಿಸಲು ಮುಕ್ತವಾಗಿದ್ದೇನೆ. ನಾನು ನಟಿಸುವ ಪಾತ್ರ ಮೊದಲು ನನಗೆ ತೃಪ್ತಿ ನೀಡಬೇಕು. ನಂತರ ಅದು ಪ್ರೇಕ್ಷಕರನ್ನು ತಲುಪುತ್ತದೆ. ನೆಲ್ಸನ್ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ರೊಮ್ಯಾಂಟಿಕ್ ಅಂಶಗಳಿದ್ದು ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ನಡೆಯುತ್ತದೆ. ನಂತರ ಕಥೆ ನಗರದತ್ತ ಸಾಗುತ್ತದೆ. ಜಯಂತ್ ಅವರೊಂದಿಗೆ ಕೆಲಸ ಮಾಡಲು ಕಾಯುತ್ತಿದ್ದೇನೆ. ಈ ಮೊದಲು ತೆಲುಗಿನಲ್ಲಿ ಸಿನಿಮಾ ಮಾಡಿದ್ದಾರೆ” ಎಂದಿದ್ದಾರೆ.
ಪಾತ್ರದ ಬಗ್ಗೆ ಮಾತನಾಡಿರುವ ಅನುಷಾ “ದಿನನಿತ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಸಾಂಪ್ರದಾಯಿಕ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುತ್ತಾಳೆ. ಅವಳು ಡ್ಯಾನ್ಸರ್ ಆಗಿರುತ್ತಾಳೆ. ಕಾಲೇಜಿನ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲು ಪ್ರದರ್ಶನ ನೀಡುತ್ತಾಳೆ. ಎಲ್ಲರೂ ಅವಳನ್ನು ಇಷ್ಟ ಪಡುವಂತೆ ಮಾಡುತ್ತಾಳೆ.”ಎಂದಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಜೊತೆ ದಿ ವೈರಸ್ ಚಿತ್ರದಲ್ಲಿ ನಟಿಸಿರುವ ಅನುಷಾ “ನನ್ನ ಪಾತ್ರ ನೆಗೆಟಿವ್ ಶೇಡ್ ಹೊಂದಿದೆ. ಮೆಡಿಕಲ್ ಕಂಪೆನಿ ಹಾಗೂ ಸರ್ಕಾರಿ ಅಧಿಕಾರಿಗಳು ದುರಂತ ಘಟನೆಗಳನ್ನು ಹಣ ಮಾಡಲು ಬಳಸುತ್ತಾರೆ ಎಂಬುದನ್ನು ಈ ಚಿತ್ರ ಹೇಳುತ್ತದೆ.”ಎಂದಿದ್ದಾರೆ. ಇದಲ್ಲದೇ ವೀರಪುತ್ರ ಹಾಗೂ ಖಡಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.