ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರತಿಯೊಬ್ಬ ಕನ್ನಡಿಗರ ಮನದ ಮಗ. ಅವರು ನಮ್ಮನ್ನಗಲಿ ವರುಷವೇ ಕಳೆದರೂ ಅವರ ವ್ಯಕ್ತಿತ್ವದ ಜೊತೆಗೆ ಅವರೇ ನಮ್ಮೆಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಹೀಗಿರುವಾಗ ಮಾಡಿದ್ದ ಒಂದು ಕೆಲಸದಿಂದ ಕನ್ನಡಿಗರ ಅಸಮಾಧಾನಕ್ಕೆ ‘ಟ್ವಿಟರ್’ ಸಂಸ್ಥೆ ಒಳಗಾಗಿತ್ತು. ಪುನೀತ್ ರಾಜಕುಮಾರ್ ಅವರ ಓಫೀಷಿಯಲ್ ಟ್ವಿಟರ್ ಖಾತೆಯಲ್ಲಿದ್ದ ‘ಪರಿಶೀಲನೆ’ಯ ಪ್ರತೀಕವಾದ ಬ್ಲೂ ಟಿಕ್ ಅನ್ನು ತೆಗೆದಿತ್ತು. ಸದ್ಯ ಈ ಬ್ಲೂ ಟಿಕ್ ಮರಳಿ ಬಂದಿದೆ.
ಟ್ವಿಟರ್ ನಲ್ಲಿ ಯಾವುದೇ ‘ವೆರಿಫೈಡ್’ ಯಾನೆ ‘ಬ್ಲೂ ಟಿಕ್’ ಹೊಂದಿರುವ ಖಾತೆ ತುಂಬಾ ಸಮಯದವರೆಗೆ ಕಾರ್ಯನಿರತವಾಗದೆ ಇದ್ದರೆ, ಆ ಖಾತೆ ಬಳಕೆಯಾಗದೆ ಇದ್ದರೆ, ಅದರಲ್ಲಿನ ಬ್ಲೂ ಟಿಕ್ ತೆಗೆಯಲಾಗುತ್ತದೆ. ಇದೇ ಮಾದರಿಯಲ್ಲಿ ಅಪ್ಪು ಖಾತೆಯ ಬ್ಲೂ ಟಿಕ್ ತೆಗೆಯಲಾಗಿತ್ತು. ಇದಕ್ಕೆ ಕನ್ನಡಿಗರು ಅಪಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲೆಡೆ ಟ್ವಿಟರ್ ಅನ್ನೆ ಉದ್ದೇಶಿಸಿ ಹಲವು ಪೋಸ್ಟ್ ಗಳನ್ನು ಮಾಡಲಾಗಿತ್ತು ಈ ಎಲ್ಲಾ ಪ್ರಯತ್ನಗಳ ಫಲವಾಗಿ ಪುನೀತ್ ರಾಜಕುಮಾರ್ ಅವರ ಖಾತೆಗೆ ಬ್ಲೂ ಟಿಕ್ ಅನ್ನು ಟ್ವಿಟರ್ ಮರಳಿ ಜೋಡಿಸಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಟ್ವಿಟರ್ ನಲ್ಲೆ ಹಂಚಿಕೊಂಡು, ಟ್ವಿಟರ್ ಗೂ ಹಾಗು ಪುನೀತ್ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ್ದಾರೆ. ಅಪ್ಪು ನಮ್ಮೆಲ್ಲರ ನಡುವೆ ಸದಾ ಜೀವಂತವಾಗಿರುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದೂ ಬರೆದುಕೊಂಡಿದ್ದಾರೆ.