ನಮ್ಮೆಲ್ಲರ ನೆಚ್ಚಿನ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಸುಮಾರು ಆರು ತಿಂಗಳು ಕಳೆಯುತ್ತ ಬಂದಿದೆ. ಬದುಕಿದ್ದಾಗ ಅವರು ಮಾಡಿದ ಕಲಾಸೇವೆ ಕಾಣುತ್ತಿತ್ತೇ ಹೊರತು ಅವರಿಂದಾದ ಸಮಾಜ ಸೇವೆ ಅದೆಷ್ಟೋ ಕಂಗಳಿಗೆ ಕಾಣದೆ ಹೋಗಿತ್ತು. ಇದೀಗ ಪ್ರಪಂಚಕ್ಕೆ ಅವರ ಒಳ್ಳೆಯ ಕೆಲಸಗಳು ಗೊತ್ತಾದ ಮೇಲೆ ಸಾಲು ಸಾಲು ಪುರಸ್ಕಾರಗಳಿಂದ ಅವರನ್ನ ಗೌರವುಸಲಾಗುತ್ತಿದೆ. ‘ಕರ್ನಾಟಕ ರತ್ನ’, ‘ಸಹಕಾರ ರತ್ನ’, ಡಾಕ್ಟಾರೇಟ್ ಪದವಿ ಇದೀಗ ‘ಬಸವಶ್ರೀ ಪ್ರಶಸ್ತಿ’.
ಬಸವ ಜಯಂತಿಯ ಅಂಗವಾಗಿ ಮೇ 2ರಂದು ಹಮ್ಮಿಕೊಂಡಂತ ಸರ್ವಶರಣ, ಸಂತ ಹಾಗು ದಾರ್ಶನಿಕರ ಸ್ಮರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನವನ್ನು ಮಾಡಲಾಯಿತು. ಚಿತ್ರದುರ್ಗ ನಗರದ ಶ್ರೀ ಜಗದ್ಗುರು ಮುರುಘಾನಂದ ಬ್ರಹ್ಮನ್ಮಠದಲ್ಲಿ ಹಮ್ಮಿಕೊಂಡಂತ ಈ ಕಾರ್ಯಕ್ರಮದಲ್ಲಿ ಡಾ| ಶಿವಮೂರ್ತಿ ಮುರುಘ ಶರಣರು ಸಭೆಯ ಅಧ್ಯಕ್ಷತೆ ವಹಿಸಿ, ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಸಂದಿದ ಈ ಗೌರವವನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಒಪ್ಪಿಸಿದರು.”ಪುನೀತ್ ರಾಜಕುಮಾರ್ ಅವರು ಕನ್ನಡ ಸಿನಿಮಾರಂಗಕ್ಕೆ ಹಲವಾರು ಕೊಡುಗೆಗಳನ್ನ ನೀಡಿದ್ದಾರೆ. ಸ್ವತಃ ಅವರೇ ನಮ್ಮ ಸಿನಿರಂಗಕ್ಕೊಂದು ಕೊಡುಗೆ. ಅವರು ಸಾಂಸ್ಕೃತಿಕ ರಾಯಭಾರಿಯಾಗಿ ಸಮಾಜದಲ್ಲಿ ಅತ್ಯುನ್ನತ ಕೆಲಸಗಳನ್ನ ಮಾಡಿದ್ದಾರೆ. ಅವರಿಗೆ ನಮ್ಮ ಬಸವ ಸಂಸ್ಕೃತಿಯಿಂದ ಗೌರವಿಸುತ್ತಿರುವುದು ಸಂತಸದ ವಿಷಯ. ಅಶ್ವಿನಿ ಅವರಿಗೆ ‘ಬಸವಶ್ರೀ’ ಕೊಡುವ ಮೂಲಕ ಅವರ ಕುಟುಂಬಕ್ಕೆ ಗೌರವ ಸಲ್ಲಿಸಿದಂತೆ” ಎಂದಿದ್ದಾರೆ. ಈ ‘ಬಸವಶ್ರೀ ಪುರಸ್ಕಾರ’ ಐದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯೊಂದನ್ನ ಒಳಗೊಂಡಿದೆ.
ಡಾ| ಶಿವಮೂರ್ತಿ ಮುರುಘಾನಂದ ಶರಣರ ಜೊತೆಗೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಯು, ನಾಟಕಕಾರರು ಆದಂತಹ ಡಾ| ರಾಜಪ್ಪ ದಳವಾಯಿ ಅವರು, ಕೃಷಿ ಸಚಿವ ಬಿ ಸಿ ಪಾಟೀಲ್ ಅವರು, ಶಾಸಕರು ತಿಪ್ಪಯ್ಯ ಅವರು, ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಮಣ್ಣಿಗೇರಿ ಮುಂತಾದವರ ಜೊತೆಗೆ, ರಾಘವೇಂದ್ರ ರಾಜಕುಮಾರ್ ಅವರ ಧರ್ಮಪತ್ನಿ, ಶ್ರೀಮತಿ ಮಂಗಳ ರಾಘವೇಂದ್ರ ರಾಜಕುಮಾರ್ ಅವರು ಕೂಡ ಉಪಸ್ಥಿತರಿದ್ದರು. ಬಾಲನಟನಾಗಿಯೇ ನಟನೆಯಲ್ಲಿ ಮೋಡಿ ಮಾಡಿದ್ದಂತ ಪುನೀತ್ ರಾಜಕುಮಾರ್ ಅವರು ‘ಅಪ್ಪು’ ಚಿತ್ರದ ಮೂಲಕ ಮೊದಲ ಬಾರಿ ನಾಯಕರಾಗಿ ಇಂದಿಗೆ ಸುಮಾರು ಇಪ್ಪತ್ತು ವರುಷಗಳಾದವು. ಅವರ ಕಲಾ ಹಾಗು ಸಮಾಜ ಸೇವೆ ಅಪ್ಪುವಿನೊಂದಿಗೆಯೇ ಎಂದೆಂದಿಗೂ ಅಜರಾಮರ.