ಕನ್ನಡದಲ್ಲಿ ಬಲುಬೇಡಿಕೆಯ ನಟಿಯಾಗಿರುವ ಆಶಿಕಾ ರಂಗನಾಥ್ ಸುನಿ ನಿರ್ದೇಶನದ
“ಗತವೈಭವ” ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇನ್ನೂ ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿಲ್ಲ. ಈ ಸಿನಿಮಾದಲ್ಲಿ ದುಷ್ಯಂತ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೇ ತಿಂಗಳಲ್ಲಿ ಆರಂಭವಾಗಲಿದೆ.
ಆಶಿಕಾ ರಂಗನಾಥ್ ಹಾಗೂ ಶರಣ್ ನಟನೆಯ ಅವತಾರ ಪುರುಷ ಮೇ 6 ರಂದು ರಿಲೀಸ್ ಆಗಲಿದೆ. ಪವನ್ ಒಡೆಯರ್ ನಿರ್ದೇಶನದ ಇಶಾನ್ ನಾಯಕನಾಗಿ ನಟಿಸಿರುವ ರೆಮೋ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿರುವ 02 ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ನಟ ಅಥರ್ವ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತೆಲುಗು ಪ್ರಾಜೆಕ್ಟ್ ನಲ್ಲಿಯೂ ನಟಿಸಲು ಮಾತುಕತೆ ನಡೆಸುತ್ತಿದ್ದಾರೆ.
ಸುನಿ ನಿರ್ದೇಶನದ ಗತವೈಭವ ಚಿತ್ರ ಫ್ಯಾಂಟಸಿ ಕಥೆಯಾಗಿದ್ದು ದುಷ್ಯಂತ್ ವಿಎಫ್ಎಕ್ಸ್ ಕಲಾವಿದನಾಗಿ ನಟಿಸುತ್ತಿದ್ದಾರೆ. ದೀಪಕ್ ತಿಮ್ಮಪ್ಪ ಹಾಗೂ ಸುನಿ ಸಹಯೋಗದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ ಭರತ್ ಬಿಜೆ ಹಾಗೂ ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನವಿದೆ.