Karnataka Bhagya

Author name: Nikita Agrawal

ಮಕ್ಕಳ ಮನಸ್ಸಿಗೆ ಕನ್ನಡಿಯಾಗ ಬರುತ್ತಿದೆ ‘ರೂಬಿಕ್ಸ್’.

ಎಡೆಬಿಡದೆ ಓಡುತ್ತಿರುವ ಈ ಆಧುನಿಕ ಪ್ರಪಂಚದಲ್ಲಿ ತಮ್ಮದೇ ಒಂದು ಪುಟ್ಟ ಜಗತ್ತನ್ನು ಸೃಷ್ಟಿಸಿ ಬದುಕುವವರು ಮಕ್ಕಳು. ಅವರ ಕುತೂಹಲ, ಅವರ ಚುರುಕುತನ ವಿವರಿಸಲಸಾಧ್ಯ. ಅವರ ಬುದ್ದಿಗೆ ಹೊಳೆವ ಪ್ರಶ್ನೆಗಳೇಷ್ಟೋ, ಅದಕ್ಕೆ ಅವರಿಗೆ ಸಿಗುವ ಉತ್ತರಗಳೆಷ್ಟೋ! ಅದರಲ್ಲೂ ಈಗಿನ ಮಕ್ಕಳಂತು ಸದಾ ಕುತೂಹಲದ ಕೊನೆಯಂಚಿನಲ್ಲಿರುತ್ತಾರೆ. ಇಂತಹ ಮಕ್ಕಳ ಕುತೂಹಲಕಾರಿ ಜಗತ್ತನ್ನು ತೋರಿಸಲು ಬರುತ್ತಿರುವ ಹೊಸ ಸಿನಿಮಾವೇ ‘ರೂಬಿಕ್ಸ್’. ” ‘ರೂಬಿಕ್ಸ್’ ಎಂಬ ಹೆಸರೇ ಒಂದು ಒಗಟನ್ನು ಬಿಂಬಿಸುತ್ತದೆ. ಆದ್ದರಿಂದಲೇ ಚಿತ್ರಕ್ಕೆ ಈ ಹೆಸರಿಟ್ಟಿದ್ದೇವೆ. ಮಕ್ಕಳು ಬುದ್ದಿವಂತರಗಲಿ ಎಂದು ಪೋಷಕರು ಇಚ್ಚಿಸುತ್ತಾರೆ. ಅದೇ ಮಕ್ಕಳು ಅತ್ಯಂತ ಕುತೂಹಲಶಾಹಿಗಳಾದರೆ, ಅವರ ತಲೆಯಲ್ಲಿ ಎಂತೆಂತ ಪ್ರಶ್ನೆಗಳು ಬರಬಹುದು, ಅದನ್ನ ಪೋಷಕರು ಹೇಗೆ ಎದುರಿಸಬೇಕಾಗುತ್ತದೆ ಎಂಬ ಅಂಶಗಳನ್ನ ನಮ್ಮ ಸಿನಿಮಾದಲ್ಲಿ ಹೇಳಲು ಪ್ರಯತ್ನಿಸಿದ್ದೇವೆ” ಎನ್ನುತ್ತಾರೆ ನಿರ್ದೇಶಕರಾದ ರಂಜಿತ್ ಕುಮಾರ್ ಗೌಡ ಅವರು. ಈ ಹಿಂದೆ ‘ಮದರಂಗಿ’,’ವಾಸ್ಕೊಡಿಗಾಮ’ ಸಿನಿಮಾಗಳ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು ಮಾತ್ರವಲ್ಲದೆ ‘ಆಪಲ್ ಕೇಕ್’ ಎಂಬ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿರುವ ರಂಜಿತ್ ಕುಮಾರ್ ಅವರು ಈ ಸಿನಿಮಾದ ಚುಕ್ಕಾಣಿ ಹಿಡಿದಿದ್ದಾರೆ. ಮಕ್ಕಳ ಪ್ರಪಂಚದ ಬಗೆಗಿನ ಈ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ‘ಜನಸ್ನೇಹಿ ನಿರಾಶ್ರಿತರ ಆಶ್ರಮ’ದ ಮಕ್ಕಳ ಕೈಯಿಂದಲೇ ಬಿಡುಗಡೆ ಮಾಡಿದ್ದು ಇನ್ನೊಂದು ವಿಶೇಷ. ಶೈಲಜಾ ಪ್ರಕಾಶ್ ಅವರ ‘ಎಸ್ ಪಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಚಿತ್ರಕ್ಕೆ ‘ವೇದಿಕೆ ಕೊಸ್ಮೋಸ್’ ಸಂಸ್ಥೆಯೂ ಕೈ ಜೋಡಿಸಿದೆ. ಈಗಾಗಲೇ ಸಿನಿಮಾದ 70 ಶೇಕಡದಷ್ಟು ಚಿತ್ರೀಕರಣ ಮುಗಿದಿದ್ದು, ಆದಷ್ಟು ಬೇಗ ಸಂಪೂರ್ಣ ಕೆಲಸಗಳನ್ನು ಮುಗಿಸುವ ಭರದಲ್ಲಿದೆ ಚಿತ್ರತಂಡ. ಸಿನಿಮಾದ ಛಾಯಾಗ್ರಾಹಕರಾಗಿ ಅನಂದ್ ಇಳಯರಾಜ ಅವರು ಕೆಲಸ ಮಾಡಿದ್ದು, ದಿಲೀಪ್ ಕುಮಾರ್ ಅವರ ಸಾಹಿತ್ಯಕ್ಕೆ ಹರ್ಷ ಕೊಗೋಡ್ ಅವರು ಸಂಗೀತ ತುಂಬಿದ್ದಾರೆ. ಇನ್ನೂ ಎಡಿಟರ್ ಆಗಿ ವೇಧಿಕ್ ವೀರ ಹಾಗು ಕಲರಿಸ್ಟ್ ಆಗಿ ಕಮಲ್ ಗೊಯಲ್ ಅವರು ತಮ್ಮ ಕೈಚಳಕ ತೋರಿಸಲಿದ್ದಾರೆ. ಮಾಸ್ಟರ್ ಹರಿಕೃಷ್ಣ, ಶಂಕರ್ ಜಗನ್ನಾಥ್, ಅನಿಕಾ ರಮ್ಯಾ, ರಾಜು ಬೈ, ಮಾಣಿಕ್ಯ ಜಿ ಎನ್, ವಿಕ್ರಾಂತ್ ಅರಸ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ರಂಜಿತ್ ಕುಮಾರ್ ಗೌಡ ಈ ‘ರೂಬಿಕ್ಸ್’ ಸಿನಿಮಾದ ಜೊತೆಗೆ ಲೂಸ್ ಮಾದ ಯೋಗಿ ಅವರ ‘ಕಂಸ’ ಸಿನಿಮಾವನ್ನು ಕೂಡ ನಿರ್ದೇಶನ ಮಾಡಲಿದ್ದು, ಈ ಚಿತ್ರದ ಕೆಲಸಗಳ ಜೊತೆ-ಜೊತೆಗೆ ‘ಕಂಸ’ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲೂ ನಿರತರಾಗಿದ್ದಾರೆ. ಶೀಘ್ರದಲ್ಲೇ ‘ರೂಬಿಕ್ಸ್’ ಸಿನಿಮಾ ತನ್ನ ಚಿತ್ರೀಕರಣ ಪೂರ್ಣಗೊಳಿಸಲಿದೆ.

ಮಕ್ಕಳ ಮನಸ್ಸಿಗೆ ಕನ್ನಡಿಯಾಗ ಬರುತ್ತಿದೆ ‘ರೂಬಿಕ್ಸ್’. Read More »

Flat ನಂ.9 ರಲ್ಲಿ ಮರ್ಡರ್, ಕೊಲೆಗಾರ ಯಾರು..?

ನಮ್ಮ ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಹೊರಬರುತ್ತಿರುವ ಹೊಸ ಬಗೆಯ ಚಿತ್ರಗಳು ಸದ್ದು ಮಾಡುತ್ತಲೇ ಇದ್ದಾವೆ. ಸದ್ಯ ಈ ಸಾಲಿಗೆ ಸೇರಿಕೊಳ್ಳುತ್ತಿರುವ ಹೊಸ ಸಿನಿಮಾ ‘ಫ್ಲಾಟ್ ನಂಬರ್ 9’. ಯುವ ನಿರ್ದೇಶಕರಾದ ಕಿಶೋರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಒಬ್ಬ ಸೈಕೋಕಿಲ್ಲರ್ ನ ಕುತೂಹಲಕಾರಿ ಮರ್ಡರ್ ಮಿಸ್ಟರಿ ಕಥೆಯಾಗಿರಲಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮವಾಗಿದ್ದು, ಇತ್ತೀಚಿಗಷ್ಟೇ ಬಿಡುಗಡೆಯಾದ ‘ಇಂಗ್ಲೀಷ್ ಮಂಜ’ ಸಿನಿಮಾ ಖ್ಯಾತಿಯ ತೇಜಸ್ವಿನಿ ಶರ್ಮ ಅವರು ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಕಥೆಯಲ್ಲಿ ಎರಡು ನಾಯಕರಿದ್ದು, ‘ಚಾರುಲತಾ’, ‘ಯು ಟರ್ನ್’ ಮುಂತಾದ ಹಿಟ್ ಸಿನಿಮಾಗಳಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ, ‘ರಾಧಾ ರಮಣ’ ಧಾರವಾಹಿಯ ಮೂಲಕ ಕನ್ನಡಿಗರ ಮನೆ ಮಗನಾದ ಸ್ಕಂದ ಅವರು ಒಬ್ಬ ನಾಯಕರಾದರೆ, ಕನ್ನಡ ಕಿರುತೆರೆಯ ಹೆಸರಾಂತ ಧಾರವಾಹಿ ‘ಲಕ್ಷ್ಮೀ ಬಾರಮ್ಮ’ದಲ್ಲಿನ ‘ಚಂದನ್’ ಪಾತ್ರದಲ್ಲೇ ಪ್ರಖ್ಯಾತಾರಾಗಿ, ನಂತರ ‘ರಾಬರ್ಟ್’, ‘ಫ್ಯಾಮಿಲಿ ಪ್ಯಾಕ್’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚಂದು ಗೌಡ ಅವರು ಇನ್ನೊಬ್ಬ ನಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ಧವಾಗಿದ್ದು, ಈ ಹೊಸಬಗೆಯ ಸಿನಿಮಾದ ಝಲಕ್ ಇದೇ ಆಗಸ್ಟ್ 29ರ ಬೆಳಿಗ್ಗೆ 11:20ಕ್ಕೆ ‘ಎ2 ಮ್ಯೂಸಿಕ್(A2 MUSIC)’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.ದಿನೇಶ್ ಕುಮಾರ್ ಅವರ ಸಂಗೀತ ಹಾಗೂ ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಾಹಣ ಚಿತ್ರದಲ್ಲಿದ್ದು, ‘ಕೆಜಿಎಫ್’ ಹಾಗು ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಳಲ್ಲಿನ ತಮ್ಮ ಕೆಲಸಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾದ ಕಿಶೋರ್ ಅವರು ಹಾಗು ಸಂತೋಷ್ ಕುಮಾರ್ (ಟಿ ಕಟ್ಟೆ) ಸಂತೋಷ್ ಜಿ ಎನ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ.

Flat ನಂ.9 ರಲ್ಲಿ ಮರ್ಡರ್, ಕೊಲೆಗಾರ ಯಾರು..? Read More »

ಸೆಟ್ಟೇರುತ್ತಿದೆ ಚಾಲೆಂಜಿಂಗ್ ಸ್ಟಾರ್ ನ ಮುಂದಿನ ಸಿನಿಮಾ.

ಹಲವಾರು ಕನ್ನಡಿಗರ ನೆಚ್ಚಿನ ನಟ, ಆರಾಧ್ಯದೈವದಂತಿರುವ, ಅಪಾರ ಅಭಿಮಾನಿಗಳ ಸರದಾರ ‘ಡಿ ಬಾಸ್’ ದರ್ಶನ್ ಅವರು. ಇವರ ಸಿನಿಮಾ ಎಂದರೆ ಕನ್ನಡ ನಾಡಿನಲ್ಲೆಲ್ಲ ಹಬ್ಬದಂತೆ. ಇಂತಹ ನಾಯಕನಟರ ಮುಂದಿನ ಸಿನಿಮಾ ಸೆಟ್ಟೇರಲು ಸಿದ್ದವಾಗಿ ನಿಂತಿದೆ. ಸದ್ಯ ‘ಕ್ರಾಂತಿ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಡಿ ಬಾಸ್ ಅವರ ಮುಂದಿನ ಸಿನಿಮಾದ ಮುಹೂರ್ತಕ್ಕೆ ದಿನಾಂಕ ಗೊತ್ತಾಗಿದೆ. ಸದ್ಯ ಸುದ್ದಿಯಲ್ಲಿರುವ ಈ ಸಿನಿಮಾ ಬೇರಾವುದು ಅಲ್ಲದೇ ಎಲ್ಲೆಡೆ ಬಹುನಿರೀಕ್ಷೆ ಹುಟ್ಟಿಸಿರುವ ತರುಣ್ ಸುಧೀರ್ ಹಾಗು ದರ್ಶನ್ ಮತ್ತೊಮ್ಮೆ ಜೊತೆಯಾಗುತ್ತಿರುವ ಸಿನಿಮಾ. ಈಗಾಗಲೇ ‘ರಾಬರ್ಟ್’ ಸಿನಿಮಾದಿಂದ ಅತೀವ ಯಶಸ್ಸು ಕಂಡಿರುವ ಈ ಇಬ್ಬರು ಮತ್ತೊಮ್ಮೆ ಜೊತೆಯಾಗಿ ಸಿನಿಮಾ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿರುವುದೇ. ದರ್ಶನ್ ಅವರ 56ನೇ ಚಿತ್ರ ಇದಾಗಿದ್ದು, ತಾತ್ಕಾಲಿಕವಾಗಿ ‘ಡಿ56(D56)’ ಎಂದು ಚಿತ್ರವನ್ನ ಕರೆಯಲಾಗುತ್ತಿದೆ. ಇದೇ ಆಗಸ್ಟ್ 5ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ದಿನದಂದು ಇನ್ನೂ ಹೆಸರಿಡದ ‘D56’ ಚಿತ್ರದ ಮುಹೂರ್ತ ನಡೆಸುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ತರುಣ್ ಸುಧೀರ್ ಅವರು ಈಗಾಗಲೇ ದರ್ಶನ್ ಅವರಿಗೆ ‘ರಾಬರ್ಟ್’ ಸಿನಿಮಾ ನಿರ್ದೇಶನ ಮಾಡಿದ್ದರಿಂದ, ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚೇ ಇದೆ. ಚಿತ್ರದ ‘ಕಾನ್ಸೆಪ್ಟ್ ಪೋಸ್ಟರ್’ ಒಂದನ್ನು ಬಹಳ ಹಿಂದೆಯೇ ಬಿಡುಗಡೆ ಮಾಡಿದ್ದು, ಅದರಲ್ಲಿ “ಹಿಂದಿರೋವ್ರಿಗೆ ದಾರಿ, ಮುಂದಿರೋನದ್ದು ಜವಾಬ್ದಾರಿ” ಹಾಗೆಯೇ ಕೆಳಗೆ ‘ನೈಜ ಘಟನೆ ಆಧರಿತ’ ಎಂದು ಬರೆಯಲಾಗಿತ್ತು. ಹಾಗಾಗಿ ಸಿನಿಮಾ ಕೊಂಚ ವಿಭಿನ್ನವಾಗಿರುವ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸದ್ಯ ದರ್ಶನ್ ಅವರು ‘ಕ್ರಾಂತಿ’ ಚಿತ್ರದ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದ್ದು ಆದಷ್ಟು ಬೇಗನೆ ‘D56’ನ ಚಿತ್ರೀಕರಣ ಆರಂಭವಾಗಲಿದೆ.

ಸೆಟ್ಟೇರುತ್ತಿದೆ ಚಾಲೆಂಜಿಂಗ್ ಸ್ಟಾರ್ ನ ಮುಂದಿನ ಸಿನಿಮಾ. Read More »

ಚಿತ್ರೀಕರಣ ಮುಗಿಸಿದ ಅಪ್ಪು ನಟಿಸಬೇಕಿದ್ದ ಮುಂದಿನ ಸಿನಿಮಾ ‘ರಂಗಸಮುದ್ರ’

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ನೆಚ್ಚಿನ ನಟ. ಅಕಾಲದಲ್ಲಿ ನಮ್ಮನ್ನೆಲ್ಲ ಅಗಲಿದ್ದರೂ ಸಹ , ಅವರು ಹಾಗು ಅವರ ನೆನಪು ಎಂದಿಗೂ ಅಜರಾಮರ. ನಾಯಕನಟನಾಗಿ ಮಾತ್ರವಲ್ಲದೆ, ಅತಿಥಿ ಪಾತ್ರಗಳಲ್ಲಿ ವಿಶೇಷತೆಯಿಂದ ಬಂದು ಅಪ್ಪು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಾಲಿಗೆ ಹಲವು ಹೊಸಬರ ಸಿನಿಮಾ ಕೂಡ ಸೇರುತ್ತದೆ. ಸದ್ಯ ಅವರು ನಟಿಸಬೇಕಿದ್ದ, ನಟಿಸಲಾಗದ ಹೊಸ ಸಿನಿಮಾ, ಭಾರವಾದ ಹೃದಯದಿಂದಲೇ ತನ್ನ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರ ಬೇರಾವುದು ಅಲ್ಲದೇ, ಚಂದನವನದ ದಿಗ್ಗಜ ನಟರಾದ ರಂಗಾಯಣ ರಘು ಅವರ ನಟನೆಯ ‘ರಂಗಸಮುದ್ರ’. ರಂಗಾಯಣ ರಘು ಅವರು ಕನ್ನಡಿಗರು ಕಂಡಂತಹ ಧೀಮಂತ ನಟರುಗಳಲ್ಲಿ ಒಬ್ಬರು. ದಶಕಗಳಿಂದ ಸಿನಿರಂಗದಲ್ಲಿ ಕೆಲಸ ಮಾಡುತ್ತಿರುವ ಇವರು ಮಾಡದೆ ಇರುವ ಪಾತ್ರವೇ ಇಲ್ಲ ಎಂದರೂ ಪ್ರಾಯಷಃ ತಪ್ಪಾಗದು ಎನ್ನಬಹುದು. ಪೋಷಕ ನಟ, ಹಾಸ್ಯ, ವಿಲನ್, ಒಂದ ಎರಡಾ. ಎಲ್ಲದರಲ್ಲೂ ರಘು ಅವರದ್ದು ಎತ್ತಿದ ಕೈ. ಸದ್ಯ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಹೊಸ ಸಿನಿಮಾ, ‘ರಂಗಸಮುದ್ರ’. ಇದೊಂದು ಗ್ರಾಮೀಣ ಕಥೆಯಾಗಿದ್ದು, ರಘು ಅವರು ಊರಿನ ಮುಖ್ಯಸ್ಥರಾಗಿ ನಟಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಸದ್ಯ ತನ್ನ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದೆ. ರಘು ಅವರ ಜೊತೆಗೆ, ಬಹುಭಾಷಾ ನಟ ಸಂಪತ್, ಕರಾವಳಿಯ ಕೆ ವಿ ಆರ್, ಮೋಹನ್ ಜುನೇಜ, ದಿವ್ಯ ಗೌಡ, ಉಗ್ರಂ ಮಂಜು, ಗುರುರಾಜ್ ಹೊಸಕೋಟೆ ಮುಂತಾದ ನಟರು ಬಣ್ಣ ಹಚ್ಚಿರುವ ಈ ಸಿನಿಮಾದಲ್ಲಿನ ವಿಶೇಷ ಪಾತ್ರವೊಂದರಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಬೇಕಿತ್ತಂತೆ. ಅಪ್ಪು ಅವರೊಂದಿಗೆ ಮಾತುಕತೆ ಕೂಡ ನಡೆಸಿ ಅಕ್ಟೋಬರ್ ತಿಂಗಳಿನಲ್ಲಿ ಚಿತ್ರೀಕರಿಸುವುದು ಎಂದೂ ಕೂಡ ನಿರ್ಧರಿಸಲಾಗಿತ್ತು. ಆದರೆ ಆಗಿದ್ದೆ ಬೇರೆ. ಈ ಹೊತ್ತಿಗೂ ಮುಂಚೆಯೇ ಅಪ್ಪು ನಮ್ಮನ್ನ ಅಗಲಿದ್ದರು. ಸಿನಿಮಾದ ವಿಶೇಷ ಪಾತ್ರದಲ್ಲಿ ಅಪ್ಪು ನಟಿಸುತ್ತಿದ್ದಾರೆ ಎಂಬ ವಿಚಾರವೇ ಚಿತ್ರತಂಡಕ್ಕೆ ಸಂತಸ ನೀಡಿತ್ತು. ಆದರೆ ಅದಾಗಲೇ ಇಲ್ಲ. ಸದ್ಯ ಈ ಪಾತ್ರಕ್ಕೆ ಇನ್ನೊಬ್ಬ ಸ್ಟಾರ್ ನಟರನ್ನು ಕೇಳಿ, ನಟಿಸಿದ್ದಾರಂತೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಚಿತ್ರೀಕರಣ ಮುಗಿಸಿದ ಅಪ್ಪು ನಟಿಸಬೇಕಿದ್ದ ಮುಂದಿನ ಸಿನಿಮಾ ‘ರಂಗಸಮುದ್ರ’ Read More »

ಕಿರುತೆರೆಗೆ ಬರುತ್ತಿದ್ದಾನೆ ‘ತ್ರಿವಿಕ್ರಮ’.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸಿನಿಮಾ ಮಾಡಿದವರು, ಮಾಡುತ್ತಲಿದ್ದಾರೆ ಕೂಡ. ಸದ್ಯ ಅವರ ಇಬ್ಬರೂ ಪುತ್ರರು ಚಂದನವನಕ್ಕೆ ಕಾಲಿಟ್ಟಿದ್ದಾರೆ. ಯಶಸ್ಸಿನ ಆರಂಭ ಕೂಡ ಪಡೆಯುತ್ತಿದ್ದಾರೆ. ಈಗ ಸುದ್ದಿಯಲ್ಲಿರುವುದು ರವಿಮಾಮನ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್. ಇತ್ತೀಚಿಗಷ್ಟೇ ತೆರೆಕಂಡ ಅವರ ಮೊದಲ ಸಿನಿಮಾ ‘ತ್ರಿವಿಕ್ರಮ’ ಇದೀಗ ಕಿರುತೆರೆಗೆ ಬರಲು ಸಜ್ಜಾಗಿ ನಿಂತಿದೆ. ಇದೇ ಜೂನ್ 24ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದ ‘ತ್ರಿವಿಕ್ರಮ’ ಚಿತ್ರ, ತನ್ನ ಹಾಡುಗಳು ಹಾಗು ಪ್ರೀ-ರಿಲೀಸ್ ಕಾರ್ಯಕ್ರಮಗಳಿಂದ ಎಲ್ಲೆಡೆ ಸುದ್ದಿಯಲ್ಲಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆದ ಈ ಸಿನಿಮಾ ಇದೀಗ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಇದೇ ಆಗಸ್ಟ್ 7ನೇ ತಾರೀಕಿನ ಸಂಜೆ 5:30ಕ್ಕೆ ‘ತ್ರಿವಿಕ್ರಮ’ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಹನಾ ಹೆಚ್ ಎಸ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ವಿಕ್ರಮ್ ರವಿಚಂದ್ರನ್, ಆಕಾಂಕ್ಷ ಶರ್ಮ, ಜಯಪ್ರಕಾಶ್, ಅಕ್ಷರ ಗೌಡ ಮುಂತಾದವರು ಬಣ್ಣ ಹಚ್ಚಿದ್ದಾರೆ. ಎಲ್ಲೆಡೆ ಗುಲ್ಲೆಬ್ಬಿಸಿದ್ದ ‘ತ್ರಿವಿಕ್ರಮ’ನನ್ನ ಥೀಯೇಟರ್ ನಲ್ಲಿ ನೋಡಲಾಗದೆ ಇದ್ದವರು, ಇದೇ ಆಗಸ್ಟ್ ಏಳನೇ ತಾರೀಕಿನಂದು ಟಿವಿ ಪರದೆ ಮೇಲೆ ಸುವರ್ಣ ವಾಹಿನಿಯಲ್ಲಿ ನೋಡಬಹುದಾಗಿದೆ.

ಕಿರುತೆರೆಗೆ ಬರುತ್ತಿದ್ದಾನೆ ‘ತ್ರಿವಿಕ್ರಮ’. Read More »

ಮಹೇಶ್ ಬಾಬು ಜೊತೆ ನಟಿಸಲಿದ್ದಾರ ಶ್ರೀಲೀಲಾ??

ಕನ್ನಡದ ನಟಿಮಣಿಯರು ಬೇರೆ ಭಾಷೆಯ ಚಿತ್ರರಂಗದಲ್ಲಿ ಹೋಗಿ ಮಿಂಚುವುದು ನಮಗೇನು ಹೊಸತಲ್ಲ. ಹಲವು ಕನ್ನಡದ ಹೀರೋಯಿನ್ ಗಳು ತಮಿಳು, ತೆಲುಗು ಜೊತೆಗೆ ಬಾಲಿವುಡ್ ನಲ್ಲೂ ಮೂಡಿ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಸದ್ಯ ಈ ಸಾಲಿಗೆ ಕನ್ನಡದ ಯುವನಟಿ ಶ್ರೀಲೀಲಾ ಸೇರಿಕೊಂಡಿದ್ದಾರೆ. ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಇವರು, ‘ಪೆಳ್ಳಿ ಸಂದ ಡಿ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿ, ಇದೀಗ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ. ಸದ್ಯ ಕೇಳಿಬರುತ್ತಿರುವ ಹೊಸ ಸುದ್ದಿಯೆಂದರೆ ಕನ್ನಡತಿ ಶ್ರೀಲೀಲಾ ಅವರು ತೆಲುಗಿನ ಸೂಪರ್ ಸ್ಟಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಮಹೇಶ್ ಬಾಬು ಅವರ ನೇ ಸಿನಿಮಾ, ತಾತ್ಕಾಲಿಕವಾಗಿ ‘ಎಸ್ ಎಸ್ ಎಂ ಬಿ 28(SSMB28)’ ಎಂದು ಕರೆಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಇದಷ್ಟೇ ಅಲ್ಲದೇ ಇನ್ನೂ ಸುಮಾರು ಐದು ತೆಲುಗು ಚಿತ್ರಗಳ ಜೊತೆಗೆ ಶ್ರೀಲೀಲಾ ಹೆಸರು ಕೇಳಿಬರುತ್ತಿದೆ. ‘ಮಾಸ್ ಮಹಾರಾಜ’ ರವಿತೇಜ ಅವರ ಜೊತೆ ‘ಧಮಾಕಾ’ ಎಂಬ ಚಿತ್ರದಲ್ಲಿಯೂ ಸಹ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ. ಇನ್ನೂ ಪ್ರಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಚಲನ ಚಿತ್ರಮ್’ ಅಡಿಯಲ್ಲಿ, ಕಿರೀಟಿ ರೆಡ್ಡಿ ಅವರ ಜೊತೆಗೆ ಕನ್ನಡ ಹಾಗು ತೆಲುಗು ದ್ವಿಭಾಷ ಸಿನಿಮಾದಲ್ಲಿಯೂ ಸಹ ಶ್ರೀಲೀಲಾ ನಾಯಕಿ. ಇನ್ನು ಇತ್ತೀಚಿಗಷ್ಟೇ ಮುಹೂರ್ತ ಮುಗಿಸಿಕೊಂಡ ನಿತಿನ್ ಅವರ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ‘ಪ್ರೊಡಕ್ಷನ್ ನಂಬರ್ 9’ ಎಂದು ಕರೆಯಲಾಗುತ್ತಿದೆ. ಅಷ್ಟೇ ಅಲ್ಲದೇ ದಿಗ್ಗಜ ಬಾಲಯ್ಯನವರ ಜೊತೆಗೆ, ಅವರ ಮಗಳ ಪಾತ್ರದಲ್ಲೂ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಶ್ರೀಲೀಲಾ ನಟಿಸುವುದು ಖಾತ್ರಿಯಾಗಿದೆ. ಹಾಗೆಯೇ ‘ಸಿತಾರ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ವೈಷ್ಣವ್ ತೇಜ್ ಅವರ ಜೊತೆಗೂ ಸಹ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಒಟ್ಟಿನಲ್ಲಿ ಕನ್ನಡದಿಂದ ಆರಂಭಿಸಿ ಸದ್ಯ ತೆಲುಗಿನಲ್ಲೂ ಸಹ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ಶ್ರೀಲೀಲಾ. ಒಟ್ಟು ಸುಮಾರು ಏಳು ತೆಲುಗು ಸಿನಿಮಾಗಳಲ್ಲಿ ಇವರು ನಟಿಸುತ್ತಿರುವುದು ಖಾತ್ರಿಯಾಗಿದ್ದು, ಯಾವಾಗ ಬರಲಿದೆ ಎಂದು ಕಾದುನೋಡಬೇಕಿದೆ.

ಮಹೇಶ್ ಬಾಬು ಜೊತೆ ನಟಿಸಲಿದ್ದಾರ ಶ್ರೀಲೀಲಾ?? Read More »

‘ವಿಕ್ರಾಂತ್ ರೋಣ’ನ ಜೊತೆ ಬರಲಿದ್ದಾನೆ ‘ಗಾಳಿಪಟ’ದ ಗಣೇಶ.

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಸದ್ಯ ಬೆಳ್ಳಿತೆರೆಯ ಮೇಲೆ ರಾರಾಜಿಸುತ್ತಿದೆ. ಅದ್ಭುತ ಓಪನಿಂಗ್ ಕಂಡಂತಹ ಈ ಸಿನಿಮಾ ಎಲ್ಲಾ ಕಡೆಯಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕನ್ನಡ ಮಾತ್ರವಲ್ಲದೆ, ಪಂಚ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ ನಲ್ಲೂ ಕೂಡ ಸಿನಿಮಾ ಬಿಡುಗಡೆಯಾಗಿದ್ದು, 3ಡಿಯಲ್ಲಿಯೂ ತೆರೆಕಂಡಿರುವುದು ಚಿತ್ರದ ಇನ್ನೊಂದು ವಿಶೇಷ. ಸದ್ಯ ಈ ಸಿನಿಮಾದ ಜೊತೆ ಕನ್ನಡದ ಇನ್ನೊಂದು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗಾಳಿಪಟ 2’ ಕೈ ಜೋಡಿಸಿದೆ. ಆಗಸ್ಟ್ 12ರಂದು ಬಿಡುಗಡೆಯಾಗುತ್ತಿರುವ ಯೋಗರಾಜ್ ಭಟ್ ಅವರ ನಿರ್ದೇಶನದ ಕನ್ನಡಿಗರ ಮನಸ್ಸುಗಳು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ‘ಗಾಳಿಪಟ 2’. ಗಣೇಶ ಹಾಗು ಭಟ್ಟರ ಜೋಡಿಯಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ ಇದಾದ್ದರಿಂದ ಚಿತ್ರದ ಬಗೆಗೆ ಹೆಚ್ಚಿನ ನಿರೀಕ್ಷೆಗಳಿವೆ. ಇತ್ತೀಚಿಗಷ್ಟೇ ಚಿತ್ರದ ನಾಯಕನ ಪಾತ್ರವಾದ ‘ಗಣೇಶ’ನ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆದಿತ್ತು ಂ ಸದ್ಯ ಅದೇ ಟೀಸರ್ ಅನ್ನು ಎಲ್ಲೆಡೆ ಉತ್ತಮ ಪ್ರದರ್ಶನ ಪಡೆಯುತ್ತಿರೋ ‘ವಿಕ್ರಾಂತ್ ರೋಣ’ ಸಿನಿಮಾದ ಜೊತೆಗೆ ಜೋಡಿಸಲಾಗಿದೆ. ‘ವಿಕ್ರಾಂತ್ ರೋಣ’ ಸಿನಿಮಾದ 2ಡಿ ಆವೃತ್ತಿಯ ಜೊತೆಗೆ ಈ ಟೀಸರ್ ಪ್ರದರ್ಶನ ಕಾಣುತ್ತಿದೆ. ಇದೇ ಜುಲೈ 31ಕ್ಕೆ ‘ಗಾಳಿಪಟ 2’ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗುತ್ತಿದೆ.

‘ವಿಕ್ರಾಂತ್ ರೋಣ’ನ ಜೊತೆ ಬರಲಿದ್ದಾನೆ ‘ಗಾಳಿಪಟ’ದ ಗಣೇಶ. Read More »

ಬರುತ್ತಿದೆ ‘ಗಾಳಿಪಟ 2 ‘ಚಿತ್ರದ ಟ್ರೈಲರ್.

ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗಾಳಿಪಟ 2’ ತನ್ನ ಬಿಡುಗಡೆಯ ದಿನಾಂಕಕ್ಕೆ ಸನಿಹವಾಗುತ್ತಾ ಸಾಗುತ್ತಿದೆ. ನಿನ್ನೆಯಷ್ಟೇ(ಜುಲೈ 26) ಸಿನಿಮಾದ ಟೀಸರ್ ಒಂದು ಬಿಡುಗಡೆಯಾಗಿದ್ದು, ಹೊಟ್ಟೆಹುಣ್ಣಾಗಿಸುವಷ್ಟು ಈ ಸಿನಿಮಾ ನಗಿಸುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ‘ವಿಕಟಕವಿ’ ಯೋಗರಾಜ್ ಭಟ್ ಅವರಿಗೆ ಮರಳಿ ತಮ್ಮ ಯಶಸ್ಸು ಸಿಗಬಹುದೇನೋ ಎಂಬ ಆಸೆಯೂ ಒಂದಷ್ಟು ಜನರಲ್ಲಿದೆ. ಚುಟುಕಾಗಿ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರೋ ಚಿತ್ರತಂಡ, ತನ್ನ ಟ್ರೈಲರ್ ಬಿಡುಗಡೆಯ ದಿನಾಂಕ ಹೊರಹಾಕಿದೆ. ‘ಗಾಳಿಪಟ’ ಯೋಗರಾಜ್ ಭಟ್ ಹಾಗು ಗಣೇಶ್ ಅವರ ಜೋಡಿಯಲ್ಲಿ ಮೂಡಿಬಂದಂತಹ ಒಂದು ಮರೆಯಲಾಗದ ಚಿತ್ರ. ಬಿಡುಗಡೆಯಾಗಿ ದಶಕಗಳೇ ಕಳೆದರೂ, ಇನ್ನೂ ಕೂಡ ಕನ್ನಡಿಗರ ಮನಗಳಲ್ಲಿ ವಿಶೇಷ ಸ್ಥಾನ ಪಡೆದಿದೆ ಈ ಸಿನಿಮಾ. ಸದ್ಯ ಅದೇ ಹೆಸರಿನಲ್ಲಿ ಯೋಗರಾಜ್ ಭಟ್ ಅವರೇ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮೂವರು ಸ್ನೇಹಿತರಾಗಿ, ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಅವರು ನಟಿಸಿದ್ದಾರೆ. ಜೊತೆಗೆ ಶರ್ಮಿಳಾ ಮಂಡ್ರೆ, ವೈಭವಿ ಶಾಂಡಿಲ್ಯ, ಅನಂತ್ ನಾಗ್, ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೇ ಆಗಸ್ಟ್ 12ಕ್ಕೆ ಸಿನಿಮಾ ತೆರೆಕಾಣುತ್ತಿದ್ದು, ಇದೇ ಜುಲೈ 31ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸದ್ಯ ಬಿಡುಗಡೆಯಾಗಿರೋ ಟೀಸರ್ ಒಂದು ಗಣೇಶ್ ಅವರ ಪಾತ್ರಪರಿಚಯ ನೀಡಿದ್ದು, ‘ಗಣೇಶ’ ಎಂಬ ಹೆಸರನ್ನೇ ಈ ಪಾತ್ರಕ್ಕೂ ಇಟ್ಟಿದ್ದು, ಹಳೆ ‘ಗಾಳಿಪಟ’ವನ್ನೇ ನೆನಪಿಸಿದಂತಿದೆ. ಇದೊಂದು ಕಾಲೇಜ್ ಲವ್ ಸ್ಟೋರಿ ಆಗಿರಲಿದ್ದು, ಅನಂತ್ ನಾಗ್ ಅವರು ಶಿಕ್ಷಕನ ಪಾತ್ರವಹಿಸಲಿದ್ದಾರೆ. ಇನ್ನೂ ಗಣೇಶನ ತಂದೆ ತಾಯಿಯಾಗಿ ಮೊದಲಿನಂತೆಯೇ ರಂಗಾಯಣ ರಘು ಹಾಗು ಸುಧಾ ಬೆಳವಾಡಿ ಅವರು ನಟಿಸಿದ್ದಾರೆ. ಗಣೇಶನ ಪ್ರೇಮಕಥೆಯ ನಾಯಕಿಯಾಗಿ ವೈಭವಿ ಶಾಂಡಿಲ್ಯಾ ಬಣ್ಣ ಹಚ್ಚಿದ್ದಾರೆ. ಒಂದಷ್ಟು ಭಾಗ ಪ್ರೇಕ್ಷಕರು ಮನತುಂಬಿ ನಗಲು ಈ ಚಿತ್ರಕ್ಕಾಗಿ ಕಾಯುತ್ತಿದ್ದು, ಸಿನಿಮಾ ಹೇಗಿರಲಿದೆ ಎಂದು ತೇರಮೇಲೆಯೇ ನೋಡಬೇಕಿದೆ.

ಬರುತ್ತಿದೆ ‘ಗಾಳಿಪಟ 2 ‘ಚಿತ್ರದ ಟ್ರೈಲರ್. Read More »

ಅಲಿಬಾಬನ ಅವತಾರದಲ್ಲಿ ಮೋಡಿ ಮಾಡಲಿದ್ದಾರೆ ಜೆಕೆ

ಕನ್ನಡ ಕಿರುತೆರೆಯಲ್ಲಿ ಜೆಕೆ ಅಭಿನಯದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಅಂದಿನ ಸಮಯಕ್ಕೆ ಭರ್ಜರಿಯಾಗಿ ಪ್ರಸಾರ ಕಂಡು ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಸಿಕ್ಕಾಪಟ್ಟೆ ಫೇಮಸ್ ಆದರು. ನಂತರದಲ್ಲಿ ಸ್ಯಾಂಡಲ್ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಹಿಂದಿ ಕಿರುತೆರೆ ಕಡೆ ಮುಖ ಮಾಡಿದ ಜೆಕೆ, ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದರು. ಇದೀಗ ಮತ್ತೆ ಹಿಂದಿ ಸೀರಿಯಲ್ ನತ್ತ ಮತ್ತೆ ಮುಖ ಮಾಡಿದ್ದಾರೆ. ಹೌದು, ಹೊಸ ಸೀರಿಯಲ್ ನಲ್ಲಿ ಆಲಿಬಾಬನಾಗಿ ಜೆಕೆ ಕಾಣಿಸಿಕೊಳ್ಳಲಿದ್ದಾರೆ.ಇದೀಗ 5 ವರ್ಷಗಳ ನಂತರ ಹಿಂದಿ ಕಿರುತೆರೆಗೆ ಮತ್ತೆ ಕಾಲಿಟ್ಟಿದ್ದಾರೆ. ಹಿಂದಿಯ ಪ್ರಸಿದ್ಧ ನಿರ್ದೇಶಕ ಮಾನ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ ‘ಆಲಿಬಾಬಾ ದಸ್ತಾನ್-ಎ-ಕಾಬೂಲ್‘ ಎಂಬ ಸೀರಿಯಲ್ ನಲ್ಲಿ ಜೆಕೆ ನಟಿಸಲಿದ್ದಾರೆ. ಈ ಸೀರಿಯಲ್ನ ಫಸ್ಟ್ ಲುಕ್ ರಿಲೀಸ್ ಆಗಿದೆ. ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫಸ್ಟ್ ಲುಕ್ ಫೋಟೋವನ್ನು ಹಂಚಿಕೊಂಡಿದ್ದು, ‘‘ಕಾಯುವಿಕೆ ಮುಗಿದಿದೆ! ಇಲ್ಲಿ ಕಾಲ್ಪನಿಕ ಪ್ರಪಂಚದ ಇತಿಹಾಸದಲ್ಲಿ ಭಯಾನಕ ದುಷ್ಟ ರಾಕ್ಷಸ ಬರುತ್ತಾನೆ. ಸೋನಿ ಸಬ್ ನಲ್ಲಿ ಆಲಿ ಬಾಬಾ ದಾಸ್ತಾನ್-ಎ-ಕಾಬೂಲ್ ಸೀರಿಯಲ್ ಬರಲಿದೆ. ಅಲಿಬಾಬಾ ಮತ್ತು 40 ಕಳ್ಳರು ಕಥೆಯಿಂದ ಸಣ್ಣ ಎಳೆಯನ್ನು ತೆಗೆದುಕೊಂಡು ಈ ಸೀರಿಯಲ್ ಅನ್ನು ರೂಪಿಸಲಾಗಿದೆ. ಸೀರಿಯಲ್ ಶೂಟಿಂಗ್ ಅನ್ನು ಲಡಾಖ್‌ನಲ್ಲಿ ಪ್ರಾರಂಭಿಸುತ್ತೇವೆ. ಅಲ್ಲದೇ ಈ ಸೀರಿಯಲ್ ಮೂಲಕ ನಾನು ಜನರ ನಿರೀಕ್ಷೆಯ ಮಟ್ಟವನ್ನು ತಲುಪುತ್ತೇನೆ ಎಂಬ ನಂಬಿಕೆ ಇದೆ‘’ ಎಂದು ಹೇಳಿದ್ದಾರೆ. ಇನ್ನು, ಕೆಲ ತಿಂಗಳುಗಳ ಹಿಂದೆ ಜೆಕೆ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅದಲ್ಲದೇ ಜೆಕೆ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ‘ಈ ಸುದ್ದಿ ಸುಳ್ಳು, ಅದೆಷ್ಟು ಬಾರಿ ನನಗೆ ವಿವಾಹ ಮಾಡಿಸುತ್ತಾರೋ ಗೊತ್ತಿಲ್ಲ’ ಎನ್ನುವ ಮೂಲಕ ಸುಳ್ಳು ಸುದ್ದಿಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೆಕೆ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಹೀಗಾಗಿ ಇವರಿಬ್ಬರ ವಿವಾಹವಾಗಲಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಜೆಕೆ ಧಾರಾವಾಹಿ ಮಾತ್ರವಲ್ಲದೆ ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ರನ್ನರ್ ಅಪ್ ಆಗಿ ವಿಜೇತರಾದರು. ಇವುಗಳ ಮದ್ಯೆ ಸ್ಯಾಂಡಲ್ ವುಡ್ ನಲ್ಲಿ ಕೆಂಪೇಗೌಡ, ವರದನಾಯಕ, ಜರಾಸಂಧ, ಆ ಕರಾಳ ರಾತ್ರಿ, ವಿಷ್ಣುವರ್ಧನ, ವಿಸ್ಮಯ, ಜಸ್ಟ್ ಲವ್, ಮೇ 1, ಬೆಂಗಳೂರು 560023 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಸಿದ್ದು, ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಇವರೂ ಒಬ್ಬರು.

ಅಲಿಬಾಬನ ಅವತಾರದಲ್ಲಿ ಮೋಡಿ ಮಾಡಲಿದ್ದಾರೆ ಜೆಕೆ Read More »

‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ಯ ಒಟಿಟಿ ಪ್ರವೇಶ.

ಕನ್ನಡ ಚಿತ್ರರಂಗದಲ್ಲಿ ಹಲವು ಹೊಸ ಬಗೆಯ ಸಿನಿಮಾಗಳು ಬರುತ್ತಿವೆ. ಹೊಸತನ ಕೇವಲ ಚಿತ್ರದ ಮೇಕಿಂಗ್ ನಲ್ಲಿರದೆ, ಕಥೆಗಳಲ್ಲೂ ಕಾಣುತ್ತಿರುವುದು ಸಂತೋಷ. ಹಲವು ಸಮಾಜಸ್ನೇಹಿ ವಿಚಾರಗಳನ್ನು ಕೂಡ ನಮ್ಮ ಕನ್ನಡದ ಸಿನಿಮಾಗಳು ಹೊತ್ತು ತಂದಿರೋ ಉದಾಹರಣೆಗಳಿವೆ. ಅದರಲ್ಲೊಂದು ಇತ್ತೀಚೆಗೆ ಬಂದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’. ಸದ್ಯ ಈ ಸಿನಿಮಾ ಒಟಿಟಿ ಪರದೆ ಏರಿದೆ. ಮಧು ಚಂದ್ರ ಅವರು ಬರೆದು ನಿರ್ದೇಶಿಸಿರೋ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾದಲ್ಲಿ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್ ಹಾಗು ಮೇಘನಾ ರಾಜ್ ಅವರು ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಮೇ 13ರಂದು ಹಿರಿತೆರೆಮೇಲೆ ಬಿಡುಗಡೆಯಾಗಿದ್ದ ಈ ಸಿನಿಮಾ ಈಗಿನ ಮಕ್ಕಳ ಮೇಲೆ ಮೊಬೈಲ್ ಉಂಟುಮಾಡುತ್ತಿರುವ ದುಷ್ಪರಿಣಾಮಗಳ ಬಗ್ಗೆ ಹೇಳುತ್ತದೆ. ಶಾಲೆಗೆ ಹೋಗುವ ಮಕ್ಕಳು ಮೊಬೈಲ್ ಫೋನ್ ಗೆ ಅತಿಯಾಗಿ ಹೊಂದಿಕೊಂಡು, ಅದರಿಂದ ಅನುಭವಿಸುವ ತೊಂದರೆಗಳನ್ನು ಹಾಸ್ಯಭರಿತವಾಗಿ ತೆರೆಮೇಲೆ ತೋರಿಸಲಾಗಿದೆ. ಸದ್ಯ ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು, ಪ್ರೈಮ್ ವಿಡಿಯೋ ಮೂಲಕ ಈ ಸಿನಿಮಾವನ್ನ ಸದ್ಯ ನೋಡಬಹುದಾಗಿದೆ.

‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ಯ ಒಟಿಟಿ ಪ್ರವೇಶ. Read More »

Scroll to Top