ನಟನೆಯ ನಂತರ ಡ್ಯಾನ್ಸ್ ಮೂಲಕ ಗಮನ ಸೆಳೆದ ಚಂದನವನದ ಚೆಲುವೆ
‘ಗಾಳಿಪಟ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಭಾವನಾ ರಾವ್ ಎಲ್ಲರಿಗೂ ಚಿರಪರಿಚಿತರು. ಎಲ್ಲರ ನೆಚ್ಚಿನ ನಟಿಯಾದ ಇವರು ಅಭಿನಯಕ್ಕೂ ಮುಂಚೆ ನೃತ್ಯ ಕಲಾವಿದೆ ಎನ್ನುವುದನ್ನು ಮರೆಯುವಂತಿಲ್ಲ. ತನ್ನ ನೃತ್ಯ ವೈಖರಿಯನ್ನು’ಗಾಳಿಪಟ’ ಸಿನಿಮಾದಲ್ಲೂ ತೋರಿಸಿರುವ ಇವರು ಡ್ಯಾನ್ಸ್ ಮೂಲಕವೇ ಗಮನ ಸೆಳೆದಿದ್ದಾರೆ. ಸಿನಿಮಾ ಶೂಟಿಂಗ್ ನಲ್ಲಿ ಬಿಝಿಯಾಗಿದ್ದ ಭಾವನಾ ನೃತ್ಯದ ಕಡೆ ಅಷ್ಟು ಗಮನ ಹರಿಸಲಿಲ್ಲವಾದರೂ ಈಗ ಮತ್ತೊಮ್ಮೆ ಅದೇ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ‘ಚಂದ್ರಚೂಡ ಶಿವ ಶಂಕರ’ ಹಾಡು ಎಲ್ಲರ ಮೈನವಿರೇಳಿಸಿತ್ತು. ಇದೀಗ ಈ ಹಾಡಿಗೆ ಸ್ವತ: ಭಾವನಾ ರಾವ್ ಅವರೇ ಕೊರಿಯೋಗ್ರಾಫಿ ಮಾಡಿ ಹಾಡನ್ನು ಕಂಪೋಸ್ ಕೂಡ ಮಾಡಿದ್ದಾರೆ. ‘ಜಿಜಿವಿವಿ’ ಸಿನಿಮಾದ ಬಗ್ಗೆ ಮಾತನಾಡಿದ ಅವರು ‘ನನಗೆ ಸಿನಿಮಾ ತುಂಬಾನೇ ಇಷ್ಟ ಆಗಿತ್ತು. ನಾನು ಭರತನಾಟ್ಯಂ ಡ್ಯಾನ್ಸರ್ ಆಗಿರುವುದರಿಂದ ನನ್ನನ್ನು ಪೌರಾಣಿಕ ಕಥೆಗಳು, ದೇವರ ಹಾಡುಗಳು ತುಂಬಾ ಬೇಗ ಸೆಳೆಯುತ್ತವೆ. ಶಿವನೆಂದರೆ ತಾಂಡವ. ಇಂತಹ ಹಾಡಿನಲ್ಲಿ ಡ್ಯಾನ್ಸ್ ಮೂವ್ಮೆಂಟ್ಸ್ ಜಾಸ್ತಿಯಾಗಿಯೇ ಇರುತ್ತೆ. ಅದಕ್ಕೆ ಈ ಹಾಡನ್ನು ಕೇಳಿದಾಗಲೆಲ್ಲಾ ಏನಾದರೂ ಮಾಡಲೇ ಬೇಕು ಅಂತ ಅನಿಸುತ್ತಿತ್ತು. ಅದಕ್ಕೆ ಮನೆಯಲ್ಲಿ ನಾನೇ ಕೊರಿಯೋಗ್ರಫಿ ಮಾಡಿದೆ. ಮೊದಲು ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲು ಹೊರಟಿದ್ದ ನಾನು ರಾಜ್ ಶೆಟ್ಟಿ ಅವರಲ್ಲಿ ಕೇಳಿದಾಗ, ಅವರು ಗ್ರೀನ್ ಸಿಗ್ನಲ್ ಕೊಟ್ಟರು. ಆಮೇಲೆ ಸೀರಿಯಸ್ ಆಗಿ ಕೊರಿಯೋಗ್ರಫಿ ಮಾಡಿ ಶೂಟ್ ಮಾಡಿದ್ವಿ” ಎಂದರು. ಅಲ್ಲದೆ ‘ಸಿನಿಮಾ ಹಾಡಿನ ಸನ್ನಿವೇಶಕ್ಕೂ ಈ ಹಾಡಿನ ಕೊರಿಯೋಗ್ರಫಿಗೂ ಯಾವುದೇ ಸಂಬಂಧವಿಲ್ಲ. ನಾನು ಈ ಹಾಡಿನಲ್ಲಿ ಬರುವ ಅರ್ಥವನ್ನು ಮಾತ್ರ ತೆಗೆದುಕೊಂಡೆ. ಶಿವನ ಬಗ್ಗೆ ತಲೆಯಲ್ಲಿ ಇಟ್ಟುಕೊಂಡು ಕೊರಿಯೋಗ್ರಫಿ ಮಾಡಿದ್ದೇನೆ. ಸಿನಿಮಾದ ಹಾಡನ್ನು ಕೇಳಿದ ಬಳಿಕ ಈ ಹಾಡನ್ನು ಹೀಗೂ ಮಾಡಬಹುದಾ? ಅಂತ ಅನಿಸುತ್ತೆ. ಈ ಡ್ಯಾನ್ಸ್ ಕೊರಿಯೋಗ್ರಫಿ ಮಾಡುವುದಕ್ಕೆ ಮೂರು ದಿನಗಳು ಬೇಕಾಯ್ತು. ಮೂರು ನಿಮಿಷದ ಸಾಂಗ್ ನ್ನು ಯಾರು ಶೂಟ್ ಮಾಡುತ್ತಾರೆ, ಟೆಂಪಲ್ ಲೊಕೇಶನ್ ಎಲ್ಲಿ ಸಿಗುತ್ತೆ, ಹಸಿರಾದ ಹೊಂದುವ ಪರಿಸರ ಎಲ್ಲಿದೆ? ಇದೆಲ್ಲದರ ಗೊಂದಲದ ಮಧ್ಯೆ ಇವೆಲ್ಲವೂ ಸಿಕ್ಕಿತು. ಮುಂದಿನ ನಿಲ್ದಾಣ ಛಾಯಾಗ್ರಾಹಕ ಅಭಿಮನ್ಯು ಓಕೆ ಅಂದರು.ಹಾಗಾಗಿ ನಿರಂತರ ಮೂರು ಗಂಟೆ ಶೂಟ್ ಮಾಡಿ ಮುಗಿಸಿದ್ವಿ” ಎಂದು ಹಾಡಿನ ಚಿತ್ರೀಕರಣದ ಬಗ್ಗೆ ಮೆಲುಕು ಹಾಕಿದರು. ತಮ್ಮ ಗಾಳಿಪಟ ದಿನಗಳನ್ನು ನೆನೆದ ನಟಿ ‘ನದೀಮ್ ಧೀಮ್ ತನ ಹಾಡಿಗಾಗಿ ಮೂರು ದಿನ ಶೂಟಿಂಗ್ ಮಾಡಿದ್ದೆ. ಅದಾದ ನಂತರ ಮತ್ತೆ ಈ ತರ ಹಾಡಿಗಾಗಿ ಕುಣಿದದ್ದು ಈಗಲೇ’ ಎನ್ನುತ್ತಾರೆ. ‘ಎಲ್ಲೋ ಸಿನಿಮಾ ಶೂಟಿಂಗ್ ಎಂದು ಕಳೆದು ಹೋಗಿದ್ದ ನನಗೆ ಈ ಹಾಡು ಮತ್ತೆ ಡ್ಯಾನ್ಸ್ ಮಾಡಲು ಪ್ರೇರೇಪಿಸಿತು. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ನಾನು ಮತ್ತೆ ನನ್ನ ರೂಟ್‌ಗೆ ಬಂದಿದ್ದೇನೆ ಎಂದನಿಸುತ್ತೆ. ನಾನು ಇನ್ನೂ ಭರತನಾಟ್ಯಂ ಡ್ಯಾನ್ಸರ್ ಅಂತ ಈ ಹಾಡಿನ ಮೂಲಕ ಪ್ರೂವ್ ಮಾಡುತ್ತಿದ್ದೇನೆ ಎಂದುನಿಸುತ್ತಿದೆ.’ ಅಲ್ಲದೆ ‘ನಾನು ನಟಿಯಾದ ಮೇಲೆ ಭರತನಾಟ್ಯಂ ಪರ್ಫಾಮೆನ್ಸ್ ಕೊಡುವುದಕ್ಕೆ ನನಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ಒಳ್ಳೆ ವೇದಿಕೆ ಸಿಕ್ಕರೆ ಖಂಡಿತವಾಗಿಯೂ ನಾನು ಭರತನಾಟ್ಯಂ ಅನ್ನು ಮುಂದುವರೆಸಿಕೊಂಡು ಹೋಗುತ್ತೇನೆ’ ಎಂದು ನೃತ್ಯದ ಬಗೆಗಿನ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.
ನಟನೆಯ ನಂತರ ಡ್ಯಾನ್ಸ್ ಮೂಲಕ ಗಮನ ಸೆಳೆದ ಚಂದನವನದ ಚೆಲುವೆ Read More »