ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ರಾಮನ ಸವಾರಿ” ಶೀಘ್ರದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕೆ ಶಿವರುದ್ರಯ್ಯ ನಿರ್ದೇಶನದ ಈ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಎರಡನೇ ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ಬಾಲನಟ ಪ್ರಶಸ್ತಿ ಗೆದ್ದುಕೊಂಡಿತ್ತು.
ಗ್ರಾಮೀಣ ಭಾಗದ ಸೊಗಡು ಹೊಂದಿರುವ ಈ ಚಿತ್ರ ರಾಮ ಎಂಬ ಯುವಕನ ಪಯಣವನ್ನು ಹೊಂದಿದೆ. ತಂದೆಯಿಂದ ದೂರವಾಗಿ ತನ್ನ ತಾಯಿ ಹಾಗೂ ಅಜ್ಜ ಅಜ್ಜಿಯರೊಂದಿಗೆ ನೆಲೆಸಿರುತ್ತಾನೆ. ರಾಮ ತನ್ನ ಬೇರ್ಪಟ್ಟಿರುವ ತಂದೆ ತಾಯಿಗಳಿಗೆ ಹೇಗೆ ಸೇತುವೆ ಆಗುತ್ತಾನೆ ಎಂಬುದೇ ಕಥೆಯ ಸಾರವಾಗಿದೆ. ಇದು ಕೆ. ಸದಾಶಿವ ಬರೆದ ಸಣ್ಣಕಥೆಯಾಗಿದ್ದು “ರಾಮನ ಸವಾರಿ ಸಂತೆಗೆ ಹೋದದ್ದು” ಎಂಬ ಶೀರ್ಷಿಕೆ ಹೊಂದಿದೆ.
ಕೆ ಶಿವರುದ್ರಯ್ಯ ನಿರ್ದೇಶನದ ಈ ಚಿತ್ರದಲ್ಲಿ ರಾಜೇಶ್ ನಟರಂಗ, ಸೋನು ಗೌಡ, ಸುಧಾ ಬೆಳವಾಡಿ ಹಾಗೂ ಮಾಸ್ಟರ್ ಆರೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ನಾರಾಯಣ್, ಶೃಂಗೇರಿ ರಾಮಣ್ಣ ಹಾಗೂ ಗುಂಡುರಾಜ್ ಮುರಳಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ರಾಜೇಶ್ ನಟರಂಗ ಸಿನಿಮಾದ ಬಗ್ಗೆ ಮಾತನಾಡಿದ್ದು ” ಅದಾಗಲೇ ಜನ ಮೆಚ್ಚಿರುವ ಸಣ್ಣ ಕಥೆಯನ್ನು ಸಿನಿಮಾ ಮಾಡಲು ಹೊರಟಾಗ ಅಭಿಮಾನಿಗಳ ನಿರೀಕ್ಷೆ ಈಡೇರಿಸಲು ತುಂಬಾ ಒತ್ತಡ ಇತ್ತು. ರಾಮನ ಸವಾರಿ ಸಿನಿಮಾದ ಭಾಗವಾಗಿರುವುದು ಉತ್ತಮ ಅನುಭವ ನೀಡಿದೆ. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಕಥೆ ತುಂಬಾ ಜನರನ್ನು ತಲುಪುತ್ತಿರುವುದಕ್ಕೆ ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ಸೋನು ಗೌಡ ಮಾತನಾಡಿ ” ರಾಮನ ಸವಾರಿ ನನ್ನ ಕೆರಿಯರ್ ನ ಮೆಟ್ಟಿಲು ಎಂದು ಸಾಬೀತು ಮಾಡಿದೆ. ನಟಿಯಾಗಿ ನಾನು ಸೆಟ್ ನಲ್ಲಿ ತುಂಬಾ ಕಲಿತಿದ್ದೇನೆ. ಇಂತಹ ಸಂಕೀರ್ಣ ಪಾತ್ರಕ್ಕೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಕೆ ಶಿವರುದ್ರಯ್ಯ ಸರ್ ಅವರಿಗೆ ಕೃತಜ್ಞತೆ ಹೇಳುತ್ತೇನೆ.ಸಿನಿಮಾ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂದು ಭರವಸೆ ಇದೆ” ಎಂದಿದ್ದಾರೆ.
ಈ ಸಿನಿಮಾದ ನಿರ್ದೇಶಕ ಕೆ ಶಿವರುದ್ರಯ್ಯ ” ಈ ಸಮಕಾಲೀನ ಸಂದರ್ಭದಲ್ಲಿ ಈ ಕಥೆ ತಾಜಾ ಗಾಳಿಯ ಉಸಿರಾಟದಂತಿದೆ. ಈ ಸಿನಿಮಾ ಹೃದಯ ಕಲಕುವ ಕ್ಷಣಗಳಿಂದ ಹೃದಯಕ್ಕೆ ಚಿವುಟುತ್ತದೆ ಆದರೆ ನಗುವನ್ನೂ ತರಿಸುತ್ತದೆ. ಈ ಸಿನಿಮಾದ ಕಥೆ ದೇಶದಲ್ಲಿ ನಡೆಯುತ್ತಿರುವ ಹಲವು ಕುಟುಂಬಗಳ ಕಥೆಯಾಗಿದ್ದು ವೀಕ್ಷಕರ ಮನ ಗೆಲ್ಲುತ್ತದೆ. ರಾಮನ ಸವಾರಿ ಸಂತೆಗೆ ಹೋದದ್ದು ಸಣ್ಣ ಕಥೆಯ ಅಭಿಮಾನಿ ನಾನು. ಇದನ್ನು ಸಿನಿಮಾ ಮಾಡಿರುವುದು ನನಗೆ ನಿಜವಾಗಿಯೂ ಗೌರವವಾಗಿದೆ” ಎಂದಿದ್ದಾರೆ.