ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಆಯನ ಇದೀಗ ಮಗದೊಂದು ಕಮರ್ಷಿಯಲ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಪೃಥ್ವಿ ಅಂಬರ್ ನಾಯಕ ನಟರಾಗಿ ನಟಿಸಲಿರುವ 80ರ ಕಾಲಘಟ್ಟದ ಕಥೆಯನ್ನೊಳಗೊಂಡ ದೂರದರ್ಶನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಆಯನ.
ದೂರದರ್ಶನ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಆಯನ ” ನಾನು ಈ ಸಿನಿಮಾದಲ್ಲಿ ಡಿ ಗ್ಲಾಮರಸ್ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದೇನೆ. ಹಳ್ಳಿಯ ವಿದ್ಯಾವಂತ ಹುಡುಗಿ ಮೈತ್ರಿಯಾಗಿ ನಾನು ಕಾಣಿಸಿಕೊಳ್ಳಲಿದ್ದೇನೆ. ಟೈಲರಿಂಗ್ ಕಲಿಯುತ್ತಿರುತ್ತೇನೆ” ಎಂದು ಹೇಳುತ್ತಾರೆ.
“ಮೊದಲ ಬಾರಿಗೆ ಹಳ್ಳಿಗೆ ಟಿವಿ ಬಂದಾಗ ಜನರಿಗೆ ಯಾವ ರೀತಿ ಸಂತಸವಾಗುತ್ತದೆ ಎಂಬುದೇ ದೂರದರ್ಶನ ಸಿನಿಮಾದ ಕಥಾ ಹಂದರ. 80ರ ದಶಕದಲ್ಲಿ ಟಿವಿಗಳ ಸಂಖ್ಯೆಯು ಕಡಿಮೆಯಿದ್ದ ಕಾರಣ ಎಲ್ಲರೂ ಜೊತೆಯಾಗಿ ಕುಳಿತು ಟಿವಿ ನೋಡಿ ಸಂತಸ ಪಡುತ್ತಿದ್ದರು. ಇದೆಲ್ಲವನ್ನು ಬಹಳ ಸುಂದರವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮಾತ್ರವಲ್ಲ ಮತ್ತೆ ವೀಕ್ಷಕರಿಗೆ ಹಳೆಯ ನೆನಪುಗಳು ಮರುಕಳಿಸುವಂತೆ ಈ ಸಿನಿಮಾ ಮಾಡುವುದರಲ್ಲಿ ಎರಡು ಮಾತಿಲ್ಲ” ಎಂದು ಸಿನಿಮಾದ ಬಗ್ಗೆ ಹೇಳುತ್ತಾರೆ ಆಯನ.
ಇನ್ನು ನಾಯಕ ಪೃಥ್ವಿ ಅಂಬರ್ ಬಗ್ಗೆ ಮಾತನಾಡಿರುವ ಆಯನ “ಅವರೊಬ್ಬ ಅತ್ಯದ್ಭುತ ಸಹನಟ. ಪೃಥ್ವಿ ಅವರ ಜೊತೆಗೆ ನಟಿಸಲು ಸಿಕ್ಕಿರುವುದು ನನ್ನ ಪಾಲಿನ ಭಾಗ್ಯವೇ ಸರಿ. ಈ ಸಿನಿಮಾಕ್ಕಾಗಿ ನಾವು ಬರೋಬ್ಬರಿ 40 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಶೂಟಿಂಗ್ ಸಮಯದಲ್ಲಿ ಸಾಕಷ್ಟು ಎಂಜಾಯ್ ಮಾಡಿದ್ದೇವೆ” ಎಂದು ಹೇಳಿದ್ದಾರೆ ಆಯನ.