ಮಲೆಯಾಳಂ ನ ಜನಪ್ರಿಯ ನಟಿ ಭಾವನಾ ಮೆನನ್ ಕೆಲವು ವರ್ಷಗಳಿಂದ ಮಾಲಿವುಡ್ ನಿಂದ ದೂರವಿದ್ದರು. ಈಗ ಅವರು ಮತ್ತೆ ನಟನೆಯತ್ತ ಮರಳಿದ್ದು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಅಭಿನಯಿಸಲಿರುವ ಚಿತ್ರದ ಪೋಸ್ಟರ್ ನ್ನು ಕೂಡಾ ಹಂಚಿಕೊಂಡಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.
“ಎನ್ಟಿಕಕ್ಕಕ್ಕೋರು ಪ್ರೇಮಂರ್ಡನ್” ಎಂಬ ಸಿನಿಮಾದಲ್ಲಿ ಭಾವನಾ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ವಿಭಿನ್ನವಾಗಿದೆ. ಆದಿಲ್ ಅಶ್ರಫ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು ಸಿನಿಮಾದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಭಾವನಾ ಮೆನನ್ ಅವರ ಈ ಸಿನಿಮಾದ ಮೊದಲ ಪೋಸ್ಟರ್ ನ್ನು ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಬಿಡುಗಡೆ ಮಾಡಿರುವುದು ವಿಶೇಷ. ಜೊತೆಗೆ ಭಾವನಾ ಅವರಿಗೆ ಮಾಲಿವುಡ್ ಗೆ ವೆಲ್ಕಂ ಹೇಳಿದ್ದಾರೆ. ಮಮ್ಮುಟ್ಟಿ ಮಾತ್ರವಲ್ಲದೇ ಭಾವನಾ ಅವರ ಚಿತ್ರರಂಗದ ಸ್ನೇಹಿತರು, ಅಭಿಮಾನಿಗಳು, ಕುಟುಂಬ ಸದಸ್ಯರು ಭಾವನಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.
2017ರಲ್ಲಿ ಭಾವನಾ ಲೈಂಗಿಕ ದೌರ್ಜನ್ಯ ಎದುರಿಸಿದ್ದರು. ಹೀಗಾಗಿ ಮಲೆಯಾಳಂನಲ್ಲಿ ನಟಿಸಿರಲಿಲ್ಲ. ಸ್ನೇಹಿತರು, ಹಿತೈಷಿಗಳಿಂದ ಆಫರ್ಸ್ ಬಂದರೂ ನಟಿಸದೇ ಇರುವುದು ಅವರ ನಿರ್ಧಾರವಾಗಿತ್ತು ಎಂದು ಭಾವನಾ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.