Karnataka Bhagya

ಅಂಕಣ

ಪ್ರಾದೇಶಿಕ ಭಾಷೆ ಕಲಿಯುತ್ತಿರುವ ಕಿರುತೆರೆಯ ರಾಧಾ ಮಿಸ್

ರಾಧಾ ರಮಣ ಧಾರಾವಾಹಿಯಾದ ಮೇಲೆ ನಟಿ ಶ್ವೇತಾ ಪ್ರಸಾದ್ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನಟಿ. ಫೋಟೋಶೂಟ್ ಮಾಡಿಸಿ, ಒಳ್ಳೊಳ್ಳೆಯ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಾ, ಫ್ಯಾನ್ಸ್ ಗಳಿಂದ ಬರುವ ಕಮೆಂಟ್ ಗಳಿಗೆ ರಿಪ್ಲೈ ಮಾಡುತ್ತಾ, ಇನ್ನಷ್ಟು ಹತ್ತಿರವಾಗುತ್ತಿರುತ್ತಾರೆ. ಈಗಂತೂ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜೀರೋ ಸೈಜ್ ನ್ನೂ ಮೈಟೈಂನ್ ಮಾಡುತ್ತಿದ್ದಾರೆ. ಇನ್ನು ಶ್ವೇತಾ ಪ್ರಸಾದ್ ಅವರು ಅತಿ ಹೆಚ್ಚು ಟ್ರಾವೆಲ್ ಕೂಡ ಮಾಡುತ್ತಾರೆ. ಕಳೆದ ತಿಂಗಳು ಬ್ಯಾಂಕಾಕ್ ಗೆ ಹೋಗಿದ್ದ ನಟಿ ಅಲ್ಲಿನ ಬೀದಿ ಬೀದಿಯಲ್ಲಿ ಅಡ್ಡಾಡುತ್ತಾ, ಸ್ಪೆಷಲ್ ಫುಡ್ ಟೇಸ್ಟ್ ಮಾಡುತ್ತಾ, ಸ್ಟೇ ಆಗಿರುವ ರೂಮಿನಲ್ಲಿ ರೀಲ್ಸ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಇಡೀ ಭಾರತದ ಬಹುತೇಕ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿರುವ ಅವರು, ಪ್ರತೀ ಭಾಷೆಯನ್ನೂ ಕಲಿಯಲು ಬಯಸಿದ್ದಾರೆ. ಹೀಗಾಗಿ ಇತರೆ ಮಹಿಳೆಯರನ್ನು ಮಾತನಾಡಿಸಿ, ಅವರ ಭಾಷೆಯನ್ನು ಕಲಿಯುತ್ತಿದ್ದಾರೆ. ಇದರ ವೀಡಿಯೋಗಳನ್ನು ಶ್ವೇತಾ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬೆಂಗಾಲಿ, ತುಳು, ತಮಿಳು, ಕೊಂಕಣಿ, ಸಂಸ್ಕೃತ, ಹಿಮಾಚಲ ಪ್ರದೇಶದ ಮಹಾಸುಪಹಾರಿ, ನೇಪಾಳಿ ಹೀಗೆ ಹಲವು ಭಾಷೆಯ ಜನರೊಂದಿಗೆ ಮಾತನಾಡಿದ್ದಾರೆ. ಅವರ ಭಾಷೆಯನ್ನು ಕಲಿಯಲೂ ಪ್ರಯತ್ನಿಸಿದ್ದಾರೆ. ಶ್ವೇತಾ ಕಿರುತೆರೆಗೆ ಬಂದದ್ದು ಅಚಾನಕ್ಕಾಗಿಯಾದರೂ ಬೆಳೆದು ಗುರುತಿಸಿಕೊಂಡಿದ್ದು ಮಾತ್ರ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ. ಅವರು ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವವರು, ಬದುಕಿನ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಅರ್ಥೈಸಿಕೊಳ್ಳುವವರು.ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆಯಲು ಬೆಂಗಳೂರಿಗೆ ಬಂದ ಶ್ವೇತಾ ಬೆಂಗಳೂರಿನ ಆರ್ವಿ ಕಾಲೇಜ್‌ನಿಂದ ಆರ್ಕಿಟೆಕ್ಟ್ ಆಗಿ ಹೊರಬಂದು ಅದೇ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಆದರೆ ಅನಿರೀಕ್ಷಿತವಾಗಿ ಇವರಿಗೆ ಒಲಿದ ಕಿರುತೆರೆ ಸುಮಾರು 700 ಕಂತುಗಳಲ್ಲಿ ಬಂದ ಧಾರಾವಾಹಿಯಲ್ಲಿ ನಟಿಸುವಂತೆಯೂ ಮಾಡಿತು. ಅಭಿನಯದಿಂದಾಗಿ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ನಟಿ ಪ್ರಶಸ್ತಿಗೆ ಪಾತ್ರರಾದರು. ನಂತರ ರಾಧಾ ರಮಣ ಧಾರಾವಾಹಿ ಮೂಲಕ ಶ್ವೇತಾ ನಾಯಕಿಯ ಪಾತ್ರವಹಿಸಿದರು. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲೂ ಶ್ವೇತಾ ಭಾಗವಹಿಸಿದ್ದರು. ಬಳಿಕ ಶ್ವೇತಾ ಅವರು ಆರ್‌ಜೆ ಪ್ರದೀಪ್‌ ಅವರನ್ನು ಪ್ರೀತಿಸಿ ಮದುವೆಯಾದರು. ಆ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರವೇ ಉಳಿದಿದ್ದಾರೆ. ಒಂದೊಳ್ಳೆ ಪಾತ್ರಕ್ಕಾಗಿ ಕಾಯುತ್ತಿರುವ ಶ್ವೇತಾ ಪ್ರಸಾದ್, ಸದ್ಯ ಪ್ರದೀಪ್ ಮಾಡುತ್ತಿರುವ ವೆಬ್ ಸಿರೀಸ್ ನಲ್ಲೂ ಜೊತೆಯಾಗಿದ್ದಾರೆ.

ಪ್ರಾದೇಶಿಕ ಭಾಷೆ ಕಲಿಯುತ್ತಿರುವ ಕಿರುತೆರೆಯ ರಾಧಾ ಮಿಸ್ Read More »

‘ವಿಕ್ರಾಂತ್ ರೋಣ’ನ ಕಾರ್ಯಕ್ರಮದಲ್ಲಿ ಅಚ್ಚರಿ ಮೂಡಿಸಿದ ಸುದೀಪ್!!

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಜುಲೈ 28ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಸುದೀಪ್ ಅವರನ್ನು ಹೊಸ ರೀತಿಯ ಪಾತ್ರದಲ್ಲಿ ನೋಡಲು, ಅದರಲ್ಲೂ 3ಡಿ ಯಲ್ಲಿ ಕಾಣಲು ಎಲ್ಲೆಡೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸದ್ಯ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಗಳು ನಡೆಯುತ್ತಿದ್ದು, ಇಂತದ್ದೇ ಒಂದು ಕಾರ್ಯಕ್ರಮದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಹಾಡನ್ನು ಹಾಡಿದ್ದಾರೆ ಕಿಚ್ಚ. ‘ವಿಕ್ರಾಂತ್ ರೋಣ’ ಸಿನಿಮಾದಿಂದ ಬಿಡುಗಡೆಯಾಗಿರೋ ಟ್ರೈಲರ್ ಹಾಗು ಹಾಡುಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಅದರಲ್ಲೂ ‘ರಾ ರಾ ರಕ್ಕಮ್ಮ’ ಹಾಗು ‘ರಾಜಕುಮಾರಿಯೇ’ ಎಂಬ ಲಾಲಿ ಹಾಡು ಎಲ್ಲರ ಮನಸಿನಲ್ಲಿ ಉಳಿದು ಹೋಗಿವೆ. ಇದೇ ಲಾಲಿ ಹಾಡನ್ನ ಕಿಚ್ಚ ಸುದೀಪ್ ಅವರು ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಜುಲೈ 26ರಂದು ಬೆಂಗಳೂರಿನಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿತ್ತು. ಇದರಲ್ಲಿ ಸುದೀಪ್ ಅವರ ಪುತ್ರಿ ಕೂಡ ಉಪಸ್ಥಿತರಿದ್ದರು. ನಿರೂಪಕಿ ಅನುಶ್ರೀ ಅವರು ಸುದೀಪ್ ಅವರ ಬಳಿ, ತಮ್ಮ ಮಗಳಿಗಾಗಿ ಸಿನಿಮಾದ ಲಾಲಿ ಹಾಡು ಹಾಡಬಹುದಾ ಎಂದು ಕೇಳಿದ್ದಕ್ಕೆ ಮರುಮಾತಾಡದೆ ಹಾಡಲಾರಂಭಿಸಿದ್ದಾರೆ ಕಿಚ್ಚ. ತಮ್ಮ ಸುಮಧುರ ಕಂಠದಿಂದ ಹಾಡಿನ ಕೆಲ ಸಾಲುಗಳಿಗೆ ಧ್ವನಿಯಾಗುವ ಮೂಲಕ, ಮಗಳನ್ನೂ ಭಾವುಕರಾಗಿಸಿ, ಅಲ್ಲಿ ನೆರೆದಿದ್ದ ಅಭಿಮಾನಿಗಳಲ್ಲೂ ಸಂತಸ ತುಂಬಿಸಿದ್ದಾರೆ. ಸಿನಿಮಾದಲ್ಲಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿಯಿದ್ದು, ಅಜನೀಶ್ ಅವರ ಸಂಗೀತದಲ್ಲಿ ತಂದೆ ಮಗಳ ಪರಿಶುದ್ಧ ಪ್ರೇಮದ ಬಗ್ಗೆ ಸಾರುತ್ತದೆ. ಇದೇ ಜುಲೈ 28ಕ್ಕೆ ಪ್ರಪಂಚದಾದ್ಯಂತ ‘3ಡಿ’ ಯಲ್ಲಿ ಸಿನಿಮಾ ಬಿಡುಗಡೆಯಗುತ್ತಿದ್ದು, ಬೃಹತ್ ಯಶಸ್ಸಿನ ನಿರೀಕ್ಷೆಯಲ್ಲಿದೆ ಚಿತ್ರತಂಡ.

‘ವಿಕ್ರಾಂತ್ ರೋಣ’ನ ಕಾರ್ಯಕ್ರಮದಲ್ಲಿ ಅಚ್ಚರಿ ಮೂಡಿಸಿದ ಸುದೀಪ್!! Read More »

ಸ್ಯಾಂಡಲ್ ವುಡ್ ಮೂಲಕ ಮತ್ತೆ ನಟನೆಗೆ ಹಾಜರ್ ಭರತ್ ಬೋಪಣ್ಣ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯ ನಾಯಕ ಲಕ್ಕಿ ಆಲಿಯಾಸ್ ಲಕ್ಷ್ಮಣ್ ಆಗಿ ಅಭಿನಯಿಸುತ್ತಿದ್ದ ಭರತ್ ಬೋಪಣ್ಣ ಇದೀಗ ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಾದಂಬರಿ ಆಧಾರಿತ ಚಿತ್ರ ‘ಚಿಕ್ಕಿಯ ಮೂಗುತಿ” ಸಿನಿಮಾಗೆ ಭರತ್ ಬೋಪಣ್ಣ ಸಹಿ ಹಾಕಿದ್ದಾರೆ. ದೇವಿಕಾ ಜಾನಿತ್ರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಗ್ಗೆ ಮಾತನಾಡಿದ ಭರತ್ “ನಾನು ಸ್ಟೈಲಿಶ್ ಮತ್ತು ಭಾವೋದ್ರಿಕ್ತ ವನ್ಯಜೀವಿ ಛಾಯಾಗ್ರಾಹಕ ಜೋಸೆಫ್ ನ ಪಾತ್ರವನ್ನು ಮಾಡುತ್ತಿದ್ದೇನೆ. ತನ್ನ ಕೆಲಸಕ್ಕಾಗಿ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧನಾಗಿರುವ ಪಾತ್ರವದು‌. ಇನ್ನು ಮುಖ್ಯವಾಗಿ ಸಿನಿಮಾದಲ್ಲಿ ನನಗೆ ನೀಡಿದ ವೇಷಭೂಷಣಗಳಿಂದ ನಾನು ನಿಜವಾಗಿಯೂ ತುಂಬಾ ಪ್ರಭಾವಿತನಾಗಿದ್ದೇನೆ” ಎಂದಿದ್ದಾರೆ. ಆಕಾಂಕ್ಷಾ ಪಟ್ಟಮಕ್ಕಿಗೆ ಜೋಡಿಯಾಗಿ ನಟಿಸಲಿರುವ ಭರತ್ ಚಿತ್ರದ ಕುರಿತಂತೆ ಮಾತನಾಡಿ “ನಾನು ಮೊದಲ ಬಾರಿಗೆ ಕಾದಂಬರಿ ಆಧಾರಿತ ಚಲನಚಿತ್ರವನ್ನು ಮಾಡುತ್ತಿದ್ದೇನೆ. ಇದು ಸಾಹಿತ್ಯದ ಕೃತಿಯನ್ನು ಆಧರಿಸಿದೆಯಾದರೂ, ಇದು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವ ವಾಣಿಜ್ಯ ಸ್ಪರ್ಶವನ್ನು ಹೊಂದಿದೆ. ಪಾತ್ರಕ್ಕೆ ಹೊಂದಿಕೆಯಾಗುವಂತೆ ಕಾದಂಬರಿಯನ್ನು ಸಹ ಓದಿದ್ದೇನೆ” ಎಂದಿದ್ದಾರೆ. “ಚಿಕ್ಕಿಯ ಮುಗೂತಿಯು ಪ್ರೇಮವನ್ನು ಅದರ ಶುದ್ಧ ರೂಪದಲ್ಲಿ ಪ್ರದರ್ಶಿಸುವ ರೊಮ್ಯಾಂಟಿಕ್ ಕಥೆಯನ್ನು ಹೊಂದಿದೆ. ನಾವು ಪ್ರಮುಖ ಭಾಗಗಳನ್ನು ವಿದೇಶದಲ್ಲಿಯೂ ಶೂಟ್ ಮಾಡಲು ಯೋಜನೆ ನಡೆಸಿದ್ದೇವೆ. ಸಂದೇಶವನ್ನು ನೀಡುವ ಚಲನಚಿತ್ರವನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಖಂಡಿತವಾಗಿಯೂ ರಾಜಿ ಮಾಡಿಕೊಳ್ಳುತ್ತಿಲ್ಲ” ಎಂದಿದ್ದಾರೆ ಭರತ್ ಬೋಪಣ್ಣ

ಸ್ಯಾಂಡಲ್ ವುಡ್ ಮೂಲಕ ಮತ್ತೆ ನಟನೆಗೆ ಹಾಜರ್ ಭರತ್ ಬೋಪಣ್ಣ Read More »

ವಿವಿಧ ಪಾತ್ರಗಳ ಪರಿಚಯ ನೀಡಿದ ‘ವಿಕ್ರಾಂತ್ ರೋಣ’.

ಇಂದು(ಜುಲೈ 28) ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಮೇಲೆ ಪ್ರತಿಯೊಬ್ಬ ಸಿನಿಪ್ರೇಮಿಗೂ ಮುಗಿಲಿನೆತ್ತರದ ನಿರೀಕ್ಷೆಯಿದೆ. ಅನೂಪ್ ಭಂಡಾರಿ ಅವರ ಸೃಷ್ಟಿಯಾದ ಈ ‘ವರ್ಲ್ಡ್ ಆಫ್ ಫಾಂಟಮ್’ ಅನ್ನು ನೋಡಲು ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಾರೆ. ಹೀಗಿರುವಾಗ ‘ವಿಕ್ರಾಂತ್ ರೋಣ’ ತಂಡ ತನ್ನ ಕಥೆಯ ಪ್ರಮುಖ ಪಾತ್ರಗಳ ಪರಿಚಯ ನೀಡಿದೆ. ವಿಭಿನ್ನವಾಗಿ ವಿಶೇಷವಾಗಿರುವ ಹೆಸರು ಹಾಗು ಪ್ರಯತ್ನಗಳಿಂದ ಈಗಾಗಲೇ ಗಮನ ಸೆಳೆದಿರುವ ಚಿತ್ರ ಇದು. ಈಗ ಹೊರಬಿದ್ದಿರುವ ಪಾತ್ರಗಳ ಹೆಸರಿಗೂ ಅಷ್ಟೇ ತೂಕವಿರುವುದು ಗಮನಾರ್ಹ. ನಮಗೆಲ್ಲರಿಗೂ ತಿಳಿದಿರುವ ಹಾಗೇ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ‘ವಿಕ್ರಾಂತ್ ರೋಣ’ ಪಾತ್ರವನ್ನ ಜೀವಿಸಿದ್ದಾರೆ. ಇವರ ಜೊತೆಗೆ ನಿರೂಪ್ ಭಂಡಾರಿ ಅವರು ‘ಸಂಜು’ ಯಾನೆ ‘ಸಂಜೀವ್ ಗಂಭೀರ’ ಹಾಗು ನೀತಾ ಅಶೋಕ್ ಅವರು ‘ಪನ್ನ’ ಎಂಬ ಪಾತ್ರಗಳಾಗಿ ನಟಿಸಿದ್ದಾರೆ. ಇನ್ನೂ ಪ್ರಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಕೂಡ ಚಿತ್ರದಲ್ಲಿ ನಟಿಸಿದ್ದು, ‘ಬಾಲು’ ಯಾನೆ ‘ಬಾಲಕೃಷ್ಣ’ನಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಮಹಾಬಲ’ನಾಗಿ ರಾಮ್ ಬೊಗಡ, ‘ಮುನ್ನ’ ಯಾನೆ ‘ಮೋಹನ್ ಚಂದ್ರ ಬಲ್ಲಾಳ್’ ಆಗಿ ಸಿದ್ದು ಮೂಲಿಮನಿ, ‘ವಿಶ್ವನಾಥ್ ಬಲ್ಲಾಳ್’ ಆಗಿ ರವಿಶಂಕರ್ ಗೌಡ, ಪೊಲೀಸ್ ಕಾನ್ಸ್ಟೇಬಲ್ ‘ಮಂಚೇ ಗೌಡ’ನಾಗಿ ವಿಶ್ವನಾಥ ಕೆ ಸಿ ಹಾಗೆಯೇ ‘ಮೂಸೆ ಕುನ್ನಿ’ಯಾಗಿ ದುಷ್ಯಂತ್ ರೈ ನಟಿಸಿದ್ದಾರೆ. ಸಂಜುವಿನ ತಂದೆಯ ಪಾತ್ರದಲ್ಲಿ ‘ಜನಾರ್ಧನ್ ಗಂಭೀರ’ನಾಗಿ ಮಧುಸೂದನ್ ರಾವ್ ಅವರು ಬಣ್ಣ ಹಚ್ಚಿದ್ದಾರೆ. ಕನ್ನಡಕ್ಕೆ ‘ರಂಗಿತರಂಗ’ದಂತಹ ಸಿನಿಮಾ ನೀಡಿದ್ದ ಅನೂಪ್ ಭಂಡಾರಿ ಅವರ ಮೂರನೇ ನಿರ್ದೇಶನ ‘ವಿಕ್ರಾಂತ್ ರೋಣ’. ಹಿಂದಿಗಿಂತ ವಿಭಿನ್ನವಾದ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡಲು ಅಭಿಮಾನಿಗಳಂತು ಕಾತರರಾಗಿದ್ದಾರೆ. ಜುಲೈ 28ರಿಂದ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ.

ವಿವಿಧ ಪಾತ್ರಗಳ ಪರಿಚಯ ನೀಡಿದ ‘ವಿಕ್ರಾಂತ್ ರೋಣ’. Read More »

ನಿವೇದಿತಾ ಗೌಡ ಈಗ ಮಿಸಸ್ ಇಂಡಿಯಾ

ಸಿನಿಮಾದಲ್ಲಿ ನಟಿಸದ ನಿವೇದಿತಾ ಗೌಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ. ಇದರ ಜೊತೆಗೆ ಇತ್ತೀಚೆಗೆ ನಿವೇದಿತಾ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದರು.ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿವೇದಿತಾ ಮಿಸೆಸ್ ಇಂಡಿಯಾಗಾಗಿ ತಾನು ನಡೆಸುತ್ತಿರುವ ತಯಾರಿ ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ನಟಿ ಮಿಸಸ್ ಇಂಡಿಯಾ ಕಿರೀಟವನ್ನು ತನ್ನದಾಗಿಸುವುದರೊಂದಿಗೆ ಹೊಸ ದಾಖಲೆಯನ್ನು ತನಗಾಗಿ ಮಾಡಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಿವೇದಿತಾ ಅವರ ಅಭಿಮಾನಿ ಬಳಗವೂ ಅಷ್ಟೇ ದೊಡ್ಡದಿದೆ. ಆದ್ದರಿಂದ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಏನೇ ಮಾಡಿದರೂ ಬೇಗ ವೈರಲ್ ಆಗಿಬಿಡುತ್ತದೆ. ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿ ಆಗುವ ಬಗ್ಗೆಯೂ ಇವರು ಹೇಳಿಕೊಂಡಿದ್ದರು. ಜೊತೆಗೆ ಈ ಬಗ್ಗೆ ಪುಟ್ಟ ವಿಡಿಯೋ ಒಂದನ್ನೂ ಹಂಚಿಕೊಂಡಿದ್ದರು. ಇದೀಗ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ‘ವಿನ್ನರ್ ಆಫ್ ಪೀಪಲ್ಸ್ ಚಾಯ್ಸ್ 2022 ಆಫ್ Mrs.ಇಂಡಿಯಾ’ ಎನ್ನುವ ಬಿರುದನ್ನು ನಿವೇದಿತಾ ಮುಡಿಗೇರಿಸಿಕೊಂಡಿದ್ದು, ಜನರ ಆಯ್ಕೆಯ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. Mrs.ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಅಲ್ಲದೆ ‘ಕೊನೆಯದಾಗಿ, ಜನರ ಹೃದಯವನ್ನು ಗೆದ್ದು, ಯಾವುದಾದರೂ ಒಂದು ರೀತಿಯಲ್ಲಿ ನಾವು ಅವರ ಮನ ಮುಟ್ಟುವುದೇ ನಿಜವಾದ ಸಾಧನೆ ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್‌ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಅವರು ತಮ್ಮ ಉಪಸ್ಥಿತಿಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ’ ಎಂದು ಸಂಸ್ಥೆ ಕೂಡ ಸಂದೇಶ ಬರೆದುಕೊಂಡಿದೆ.ಕ್ಯಾಟ್ ವಾಕ್ ಮಾಡುವುದರಿಂದ ಹಿಡಿದು, ಸ್ಟೈಲಿಶ್ ಮ್ಯಾನರಿಸಂ ಸೇರಿದಂತೆ ಹಲವು ವಿಚಾರಗಳಲ್ಲಿ ಟ್ರೈನಿಂಗ್ ಪಡೆದುಕೊಂಡು ಮಿಸ್ಸೆಸ್ ಇಂಡಿಯಾ ಗಾಗಿ ಭರ್ಜರಿ ತಯಾರಿ ನಡೆಸಿದ ನಿವೇದಿತಾ ಗೌಡ ಇದಕ್ಕಾಗಿ ಹಲವು ಫೋಟೊಶೂಟ್ ಗಳನ್ನು ಕೂಡ ಮಾಡಿಸಿದ್ದರು. ಮಿಸಸ್ ಇಂಡಿಯಾ ಕಿರೀಟವನ್ನು ತನ್ನದಾಗಿಸಿಕೊಂಡಿರುವ ನಿವೇದಿತಾ ಗೌಡ ಅವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಲ್ಲಿದೆ.

ನಿವೇದಿತಾ ಗೌಡ ಈಗ ಮಿಸಸ್ ಇಂಡಿಯಾ Read More »

‘ಲಕ್ಕಿ ಮ್ಯಾನ್’ ಅಪ್ಪುವಿಗೆ ಇರಲಿದೆಯಾ ಅವರದೇ ಧ್ವನಿ!!

ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸಿರುವ ಮುಂದಿನ ಸಿನಿಮಾ ‘ಲಕ್ಕಿ ಮ್ಯಾನ್’. ‘ಜೇಮ್ಸ್’ ಸಿನಿಮಾದಲ್ಲಿ ಅವರು ಕೊನೆಯ ಬಾರಿ ನಾಯಕರಾಗಿ ನಟಿಸಿದ್ದರೆ, ‘ಲಕ್ಕಿ ಮ್ಯಾನ್’ನಲ್ಲಿ ವಿಶೇಷ ಪಾತ್ರವೊಂದಾಗಿ ದೇವರಾಗಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ನಿನ್ನೆ (ಜುಲೈ 25) ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಪ್ಪುವನ್ನು ಇನ್ನೊಮ್ಮೆ ತೆರೆಮೇಲೆ ಕಾಣಬಹುದು ಎಂಬ ಅಂಶವೇ ಅದೆಷ್ಟೋ ಕನ್ನಡಿಗರಿಗೆ ಸಂತಸ ನೀಡುತ್ತಿದೆ, ಇನ್ನೂ ಈ ಚಿತ್ರದ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಿರ್ದೇಶಕರಾದ ನಾಗೇಂದ್ರ ಪ್ರಸಾದ್ ಹೊರಬಿಟ್ಟಿದ್ದಾರೆ. ದಶಕಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ನಾಯಕನಟನಾಗಿ ಗುರುತುಸಿಕೊಂಡಿದ್ದ ನಾಗೇಂದ್ರ ಪ್ರಸಾದ್ ಅವರು ‘ಲಕ್ಕಿ ಮ್ಯಾನ್’ ಸಿನಿಮಾದ ನಿರ್ದೇಶಕರು. ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದಕ್ಕೆ ಇವರು ನೀಡಿದ್ದ ಸಂದರ್ಶನವೊಂದರಲ್ಲಿ ಸಿನಿಮಾದ ಚಿತ್ರೀಕರಣದ ಬಗೆಗೆ ಮಾತನಾಡಿದ ಇವರು, “ಅಪ್ಪು ಸರ್ ಆಶೀರ್ವಾದವೋ ಏನೋ ಎಂಬಂತೆ ತುಂಬಾ ಸರಾಗವಾಗಿ ಯಾವುದೇ ಸಮಸ್ಯೆಯಿಲ್ಲದೇ ನಮ್ಮ ಸಿನಿಮಾದ ಚಿತ್ರೀಕರಣ ನಡೆದುಹೋಯಿತು” ಎಂದಿದ್ದಾರೆ. “ಹಾಗಾದರೆ ನಿಮ್ಮ ಸಿನಿಮಾದಲ್ಲಿ ಅಪ್ಪು ಅವರ ಪಾತ್ರಕ್ಕೆ ಧ್ವನಿ ನೀಡಲು ಏನೂ ಮಾಡಿದಿರಿ, ಯಾರನ್ನು ಕೇಳಿದಿರಿ?” ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ “ನಾನು ಸಂತಸದಿಂದ ಹೇಳಿಕೊಳ್ಳುತ್ತೇನೆ. ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ಸರ್ ಪಾತ್ರಕ್ಕೆ ಅವರದೇ ಧ್ವನಿಯಿರುತ್ತದೆ. ಬೇರಾರದೋ ಧ್ವನಿಯಿಲ್ಲ. ಅಭಿಮಾನಿಗಳು ಅಪ್ಪು ಸರ್ ಧ್ವನಿಯಲ್ಲಿಯೇ ಸಿನಿಮಾ ನೋಡಬಹುದು ಎಂದಿದ್ದಾರೆ. ಸೆಪ್ಟೆಂಬರ್ ಗೆ ಸಿನಿಮಾ ಬಿಡುಗಡೆ ಮಾಡುವ ತಯಾರಿಯಲ್ಲಿದ್ದೇವೆ ” ಎಂದೂ ಹೇಳಿದ್ದಾರೆ.

‘ಲಕ್ಕಿ ಮ್ಯಾನ್’ ಅಪ್ಪುವಿಗೆ ಇರಲಿದೆಯಾ ಅವರದೇ ಧ್ವನಿ!! Read More »

ಮಿಲಿಯನ್ ವೀಕ್ಷಣೆಯನ್ನು ಕಂಡ ‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ

‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ ಥೀಮ್ ವಿಡಿಯೋ ಮಿಲಿಯನ್ ವೀಕ್ಷಣೆಯನ್ನು ಕಂಡಿದೆ. ಈ ಸಂಭ್ರಮಕ್ಕೆ ಚಿತ್ರತಂಡ ರಾಗ ಸುಧಾ‌ ಮೇಕಿಂಗ್ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಈ ಹಾಡಲ್ಲಿ ಬೈರಾಗಿ ಖ್ಯಾತಿಯ ಯಶಾ ಹಾಕಿರೋ ಸ್ಟೆಪ್ಸ್ ಈಗ ಸಖತ್ ಟ್ರೆಂಡಿಗಲ್ಲಿದೆ. ಜತೆಗೆ ಈ ಹಾಡಿನ ಕವರ್ ವರ್ಶನ್ಸ್ ಬರ್ತಿದ್ದು, ಹಾಡಿನಷ್ಟೇ ಕವರ್ ವರ್ಶನ್ಸ್ ಕೂಡ‌ ಸದ್ದು ಮಾಡುತ್ತಿದೆ. ವಿಖ್ಯಾತ್ ಅವರ ನಿರ್ಮಾಣ , ಪುಷ್ಪಕ ವಿಮಾನ ರವೀಂದ್ರನಾಥ್ ಅವರ ನಿರ್ದೇಶನ, ಡಾಲಿ ಧನಂಜಯ, ರಚಿತಾ ರಾಮ್ ಮುಖ್ಯಭೂಮಿಕೆಯ ಈ ಚಿತ್ರ ಈಗಾಗ್ಲೇ ಟೀಸರ್ ನಿಂದ ಕುತೂಹಲವನ್ನು ಹುಟ್ಟಿಸಿತ್ತು.ಆಗಸ್ಟ್‌17ಕ್ಕೆ ತೆರೆ ಕಾಣಲು ಸಜ್ಜಾಗಿರುವ ಮಾನ್ಸೂನ್ ರಾಗ ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕಟೌಟ್ಸ್ ಹಾಕಿ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ. ‘ರಚಿತಾ ರಾಮ್ ಅವರು ಕೂಡ ಇಲ್ಲಿಯವರೆಗೆ ಇಲ್ಲಿಯವರೆಗೆ ನಟಿಸದಂತಹ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ರಚಿತರಾಮ್ ಅವರ ನಟನೆಯ ಕುರಿತಂತೆ ಮಾತನಾಡಿದ ಚಿತ್ರತಂಡ ”ಬಹಳ ಟಫ್‌ ರೋಲ್‌ ಇದಾಗಿದೆ. ನಟನೆಯನ್ನು ಬೇಡುತ್ತೆ. ಪಾತ್ರದ ವಿನ್ಯಾಸವೇ ಬೇರೆ ರೀತಿ ಇದೆ. ರಚಿತಾ ಚಾಲೆಂಜಿಂಗ್‌ ಆಗಿ ತಗೊಂಡು ನಟಿಸಿದ್ದಾರೆ’ ಎನ್ನುತ್ತದೆ. ಮಾನ್ಸೂನ್ ರಾಗ ಸಿನಿಮಾದ ಲೇಟೇಸ್ಟ್ ಅಪ್ ಡೇಟ್ ಪ್ರಕಾರ, ಪದವಿ ಪೂರ್ವ ನಟಿ ಯಶ ಶಿವಕುಮಾರ್ ಚಿತ್ರತಂಡ ಸೇರಿದ್ದಾರೆ. ಮಾನ್ಸೂನ್ ರಾಗದ ಹೊರತಾಗಿ, ಯಶ ತನ್ನ ಕನ್ನಡದ ಚೊಚ್ಚಲ ಚಿತ್ರವಾದ ‘ಪದವಿ ಪೂರ್ವ’ದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರ ಜೊತೆಗೆ ಬೈರಾಗಿ, ರಾಜ್ ಸೌಂಡ್ಸ್ ಮತ್ತು ಲೈಟ್ಸ್, ವಸಿಷ್ಠ ಸಿಂಹ ಅವರ ‘ದಂತಕಥೆ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮಾನ್ಸೂನ್ ರಾಗದಲ್ಲಿ, ಯಶ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಯಶ ಅವರ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ಚಿತ್ರದ ಫರ್ಸ್ಟ್ ಲುಕ್ ಬಹಿರಂಗಪಡಿಸಲಾಗುತ್ತದೆ. ‘ಮಾನ್ಸೂನ್‌ ರಾಗ’ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದೆ. ಆ ಪಾತ್ರದ ಪರಿಚಯಕ್ಕೆ ಮ್ಯೂಸಿಕಲ್‌ ವಿಡಿಯೊ ಒಂದನ್ನು ಮಾಡಿ ರಿಲೀಸ್‌ ಮಾಡಲಾಗಿತ್ತು. ಈ ಮ್ಯೂಸಿಕಲ್‌ ವಿಡಿಯೋದಲ್ಲಿ ಯಶಾ ಅವರ ಡ್ಯಾನ್ಸ್‌, ಸಿನಿಮಾಟೊಗ್ರಫಿ, ಅನೂಪ್‌ ಸೀಳಿನ್‌ ಅವರ ಸಂಗೀತ ಎಲ್ಲರ ಗಮನ ಸೆಳೆಯುತ್ತಿದೆ. ಚೆಂಡೆ ಮತ್ತು ವಯಲಿನ್‌ ಜುಗಲ್ಬಂದಿಯನ್ನು ಅನೂಪ್‌ ಈ ಹಾಡಿನಲ್ಲಿ ಬಳಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮಿಲಿಯನ್ ವೀಕ್ಷಣೆಯನ್ನು ಕಂಡ ‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ Read More »

ಹೇಗಿರಲಿದ್ದಾನೆ ‘ಗಾಳಿಪಟ 2’ನ ಗಣೇಶ?

‘ಗಾಳಿಪಟ’, ಹಲವು ಕನ್ನಡಿಗರ ಮನದಲ್ಲಿ ಸದಾ ಉಳಿಯುವ ಸಿನಿಮಾ ಇದು. ದಶಕಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾ ಮೂರು ಸ್ನೇಹಿತರ ಕಥೆ ಹೇಳುತ್ತಾ, ಪರಿಶುದ್ಧ ಪ್ರೇಮವನ್ನ ಕನ್ನಡಿಗರಿಗೆ ತೋರಿಸಿತ್ತು. ಸದ್ಯ ‘ಗಾಳಿಪಟ’ದ ಪ್ರಮುಖ ರೂವಾರಿಗಳಾದ ಯೋಗರಾಜ್ ಭಟ್ ಹಾಗುD ಗಣೇಶ್ ಅವರು ಮತ್ತದೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಜೋಡಿಯ ‘ಗಾಳಿಪಟ 2 ಸಿನಿಮಾ ಸಿದ್ದವಾಗಿದ್ದು ಬಿಡುಗಡೆಗೂ ಸನ್ನಿಹಿತವಾಗುತ್ತಿದೆ. ಈ ನಡುವೆ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದೂ, ‘ಗಾಳಿಪಟ 2’ನಲ್ಲಿನ ಗಣೇಶ್ ಅವರ ಪಾತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ. ‘ಗಾಳಿಪಟ’ದಲ್ಲಿನ ಗಣೇಶ ಎಲ್ಲರಿಗೂ ಅಚ್ಚುಮೆಚ್ಚು. ಪಟಪಟ ಮಾತಾಡುವ ಪರಿಶುದ್ಧ ಮನಸ್ಸಿನ ಹುಡುಗನಾಗಿ, ಕೊನೆಗೆ ಪರಿಶುದ್ಧ ಪ್ರೇಮಿಯಾಗಿ ಎಲ್ಲರ ಮನದಲ್ಲಿ ಮನೆಮಾಡಿಕೊಂಡಿರುವ ಪಾತ್ರ. ಈ ಪಾತ್ರ ‘ಗಾಳಿಪಟ 2’ ಸಿನಿಮಾದಲ್ಲಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ‘ಗಾಳಿಪಟ 2’ದಲ್ಲಿನ ಗಣೇಶ ಪಾತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಜುಲೈ 26ರ ಸಂಜೆ 5:02ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯಿಂದ ಟೀಸರ್ ಅನ್ನು ಲಾಂಚ್ ಮಾಡುತ್ತಿದೆ ಚಿತ್ರತಂಡ. ಮೊದಲ ಭಾಗದ ಪಾತ್ರ ಅಷ್ಟು ಅದ್ಭುತವಾಗಿ ಕೆತ್ತಿದ ಭಟ್ರು ಈ ಬಾರಿ ಏನೂ ಮಾಡಲಿದ್ದಾರೆ ಎಂದು ನೋಡಲು ಕನ್ನಡಿಗರು ಕಾಯುತ್ತಿದ್ದಾರೆ. ‘ವಿಕಟಕವಿ’ ಯೋಗರಾಜ್ ಭಟ್ ಅವರು ಬರೆದು-ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಗಾಳಿಪಟ 2’ ಸಿನಿಮಾದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಂಡ್ರೆ ಮುಂತಾದ ನಟರು ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರದಲ್ಲಿದ್ದು, ಇದೇ ಆಗಸ್ಟ್ 12kke ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಹೇಗಿರಲಿದ್ದಾನೆ ‘ಗಾಳಿಪಟ 2’ನ ಗಣೇಶ? Read More »

ಅಬ್ಬರಿಸಲು ತಯಾರಾಗುತ್ತಿದ್ದಾರೆ ಪ್ರಜ್ವಲ್ ದೇವರಾಜ್

ನಟ ಪ್ರಜ್ವಲ್ ದೇವರಾಜ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ 29ನೇ ಸಿನಿಮಾ ‘ಅಬ್ಬರ’ ತೆರೆಗೆ ಬರಲು ರೆಡಿ ಆಗಿದೆ. ‘ಸಾಗರ್‌’ ಚಿತ್ರದ ನಂತರ ಮತ್ತೊಮ್ಮೆ ಮೂವರು ನಾಯಕಿಯರ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ ಪ್ರಜ್ವಲ್. ‘ಟೈಸನ್’, ‘ಕ್ರ‍್ಯಾಕ್’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಕೆ. ರಾಮ್‌ನಾರಾಯಣ್ ಇದೀಗ ಪ್ರಜ್ವಲ್ ದೇವರಾಜ್ ಜೊತೆ ಸೇರಿ ‘ಅಬ್ಬರ’ ಚಿತ್ರವನ್ನು ಮಾಡಿದ್ದಾರೆ. ಸಿ & ಎಂ ಮೂವೀಸ್ ಲಾಂಛನದಡಿಯಲ್ಲಿ ಬಸವರಾಜ್ ಮಂಚಯ್ಯ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ‘ಅಬ್ಬರ’ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಹೌದು, ‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯರಾಗಿ ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಹಾಗೂ ರಾಜಶ್ರೀ ಪೊನ್ನಪ್ಪ ನಟಿಸಿದ್ದಾರೆ. ಆಗಸ್ಟ್ 12ರಂದು ಈ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಮಾಪಕ ಬಸವರಾಜ ಮಂಚಯ್ಯ ಯೋಚಿಸಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿರುವ ಪ್ರಜ್ವಲ್, ‘ಇದು ನನ್ನ ನಟನೆಯ 29ನೇ ಸಿನಿಮಾ. ಬಹಳ ಅದ್ಭುತವಾದ ಟೈಟಲ್. ಕಥೆ ಕೇಳಿದಾಗಲೇ, ‘ನನಗೆ ತುಂಬಾ ಕೆಲಸ ಕೊಡ್ತೀರಾ’ ಅಂತ ನಿರ್ದೇಶಕರಿಗೆ ಹೇಳಿದ್ದೆ. ಚಿತ್ರದಲ್ಲಿ ನನಗೆ ಮೂರು ಪಾತ್ರಗಳಿವೆ. ಇದೊಂದು ಮಜವಾದ ಚಿತ್ರ. ಕಥೆ ಕೇಳುವಾಗಲೇ ಬಹಳ ಕುತೂಹಲಕರವಾಗಿತ್ತು. ಕೊನೆಯ ಶಾಟ್ ವರೆಗೂ ಆ ಕುತೂಹಲವನ್ನು ನಿರ್ದೇಶಕರು ಉಳಿಸಿಕೊಂಡಿದ್ದಾರೆ. ಒಂದೇ ದಿನ ಮೂರೂ ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಎಳೆ ಚಿತ್ರದಲ್ಲಿದೆ. ಅದು ಚಿತ್ರದ ಕೊನೆವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ಮೂವರು ನಾಯಕಿಯರ ಜೊತೆಗೂ 3 ಗೆಟಪ್‌ಗಳಿವೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ’ ಎಂದು ಹೇಳಿದರು. ಈ ಸಿನಿಮಾದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲು ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡ, ಸಿನಿಮಾದ ಕುರಿತು ತಿಳಿಸಲೆಂದೇ 7 ದಿನ ಕರ್ನಾಟಕದಾದ್ಯಂತ ರ‍್ಯಾಲಿ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಈ ಕುರಿತಂತೆ ಮಾತನಾಡಿದ ರಾಮ್ ನಾರಾಯಣ್ ”ಪ್ರಜ್ವಲ್‌ಗೆ ಬೇರೆ ಚಿತ್ರದ ಶೂಟಿಂಗ್ ಇದ್ದರೂ, ಅದನ್ನೆಲ್ಲ ಮುಂದೆ ಹಾಕಿ ಪ್ರಮೋಷನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕಮ್ಮಿ ಮಾಡಿಲ್ಲ. ರವಿಶಂಕರ್ ಅವರ ಹೀರೋ ಪಾತ್ರಕ್ಕೆ ಸರಿಸಮನಾದ ವಿಲನ್ ಕ್ಯಾರೆಕ್ಟರ್ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಲಿದೆ. ಇಲ್ಲಿ ಎಲ್ಲರ ಕೆಲಸಗಳಲ್ಲೂ ಅಬ್ಬರ ಇದೆ. 50 ದಿನಗಳವರೆಗೆ ಶೂಟಿಂಗ್ ನಡೆಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ” ಎಂದರು. ಅಲ್ಲದೆ ”ನಮ್ಮ ಸಿನಿಮಾದ ಕೆಲಸಗಳು ಮುಗಿದು ಎರಡು ತಿಂಗಳಾಗಿದೆ. ಆದರೆ, ಪ್ರತಿ ವಾರ ಎಂಟ್ಹತ್ತು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ, ನಾವು ಮುಂದೆ ಹೋಗುವ ಅನಿವಾರ್ಯತೆಯಿತ್ತು. ಇನ್ನೆಷ್ಟು ದಿನ ಮುಂದೂಡುವುದು? ನಾವು ಬೇರೆ ಚಿತ್ರಗಳಿಗೆ ಹೆದರಿ ಭಯಪಡುತ್ತಿದ್ದರೆ, ನಮ್ಮ ಚಿತ್ರದಲ್ಲಿ ಕಂಟೆಂಟ್ ಇಲ್ಲ ಅಂದುಕೊಳ್ಳುತ್ತಾರೆ. ನಮ್ಮ ಚಿತ್ರದಲ್ಲೂ ಒಳ್ಳೆಯ ಕಂಟೆಂಟ್ ಇದೆ. ಎಷ್ಟೇ ಸಿನಿಮಾಗಳಿದ್ದರೂ, ಜನರಿಗೆ ಇಷ್ಟವಾದರೆ ಬಂದು ನೋಡುತ್ತಾರೆ ಎಂಬ ನಂಬಿಕೆ ಇದೆ. ನಮ್ಮದು ಸಣ್ಣ ಸಿನಿಮಾ ಅಲ್ಲ, ದೊಡ್ಡ ಸಿನಿಮಾ’ ಎನ್ನುತ್ತಾರೆ ರಾಮ್ನಾರಾಯಣ್. ಪ್ರಜ್ವಲ್ ದೇವರಾಜ್, ರವಿಶಂಕರ್ ಅಲ್ಲದೆ ಶೋಭರಾಜ್‌, ಕೋಟೆ ಪ್ರಭಾಕರ್, ಶಂಕರ್ ಅಶ್ವತ್ಥ್‌, ವಿಕ್ಟರಿ ವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್, ಸಲ್ಮಾನ್, ಮಮತಾ ರಾಹುತ್ ಮುಂತಾದವರು ‘ಅಬ್ಬರ’ದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ರಾಮ್ ನಾರಾಯಣ್, ವಿಜಯ ಭರಮಸಾಗರ ಸಾಹಿತ್ಯ ಬರೆದಿದ್ದಾರೆ. ಜೆ.ಕೆ. ಗಣೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಅಬ್ಬರಿಸಲು ತಯಾರಾಗುತ್ತಿದ್ದಾರೆ ಪ್ರಜ್ವಲ್ ದೇವರಾಜ್ Read More »

ಅಗಲಿದ ಅಜ್ಜಿಯ ನೆನಪಿನಲ್ಲಿ ಭಾವುಕ ಪತ್ರ ಹಂಚಿಕೊಂಡ ಮೇಘನಾ ರಾಜ್

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ. ಶಕ್ತಿ ಪ್ರಸಾದ್‌ ಪತ್ನಿ ಲಕ್ಷ್ಮಿ ದೇವಿ ಅವರು ವಯೋಸಹಜ ಕಾಯಿಲೆಯಿಂದ 22 ದಿನಗಳ ಕಾಲ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಕಾರಣ ನಿನ್ನೆ ಕೊನೆ ಉಸಿರೆಳೆದಿದ್ದಾರೆ.ಲಕ್ಷ್ಮಿ ದೇವಿ ಅವರ ಜೊತೆ ಸರ್ಜಾ ಕುಟುಂಬದ ಪ್ರತಿ ಸದಸ್ಯರು ಎಮೋಷನಲ್ ಬಾಂಡ್ ಹೊಂದಿದ್ದಾರೆ. ಕುಟುಂಬಸ್ಥರು ಮಾತ್ರವಲ್ಲದೆ ಮಾಧ್ಯಮ ಮಿತ್ರರನ್ನೂ ಕೂಡ ಲಕ್ಷ್ಮಿ ದೇವಿ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅಗಲಿದ ಅಜ್ಜಿಯನ್ನು ನೆನೆದು ಮೇಘನಾ ರಾಜ್‌ ಭಾವುಕ ಪೋಸ್ಟ್‌ ಬರೆದಿದ್ದಾರೆ. ಚಿರಂಜೀವಿ ಸರ್ಜಾರ ಕೈ ಹಿಡಿದ ಮೇಲೆ ಮೇಘನಾ ರಾಜ್‌ ಮತ್ತು ಲಕ್ಷ್ಮಿ ದೇವಿ ಅವರ ಸಂಬಂಧ ಗಟ್ಟಿಯಾಗಿತ್ತು. ಮೇಘನಾ ಹೆರಿಗೆಗೆಂದು ಆಸ್ಪತ್ರೆಗೆ ಹೋದಾಗ ಲಕ್ಷ್ಮಿ ದೇವಿ ಅವರು ಒಂದು ಕ್ಷಣವೂ ಎಲ್ಲಿಯೂ ಹೋಗದೆ ಮೇಘನಾರನ್ನು ನೋಡಿಕೊಂಡಿದ್ದರಂತೆ. ಈ ಸ್ಪೆಷಲ್ ಬಾಂಧವ್ಯದ ಬಗ್ಗೆ ಮೇಘನಾ ಬರೆದುಕೊಂಡಿದ್ದಾರೆ. ”Iron lady for a reason! ನನ್ನ ಅಜ್ಜಿ ಸಂಬಂಧ ಅದ್ಭುತಾಗಿತ್ತು, ಚಿರು ಹೊರತು ಪಡಿಸಿ ನಾವು ಅನೇಕ ವಿಚಾರಗಳನ್ನು ಒಪ್ಪಿಕೊಂಡಿದ್ದೀವಿ ಹಾಗೇ ವಿರೋಧಿಸಿದ್ದೀವಿ. ಚಿರು ವಿಚಾರದಲ್ಲಿ ನಾನು ಮತ್ತು ಅಜ್ಜಿ ಏನೇ ಇದ್ದರೂ ಒಳ್ಳೆಯ ನಿರ್ಧಾರಗಳು ಮತ್ತು ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳುವುದು. ಹೀಗಾಗಿ ಚಿರು ಅಜ್ಜಿ ಅವರನ್ನು ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುತ್ತಾರೆ. ಕೆಲವೊಂದು ಕ್ಷಣಗಳಲ್ಲಿ ಅಜ್ಜಿ ಮತ್ತು ನಾನು ತುಂಬಾನೇ stubborn ಆಗಿ ಅನೇಕ ವಿಚಾರಗಳಿಗೆ ಜಗಳ ಮಾಡಿದ್ದೀವಿ. ಆದರೆ ಅವರು ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರು, ನನಗೆ ಬೇಕಾದ ರೀತಿಯಲ್ಲಿಯೇ ನನಗೆ ಪ್ರೀತಿ ಕೊಟ್ಟಿದ್ದಾರೆ. ನೀವು ಇಲ್ಲದಿದ್ದರೆ ಈ ಕುಟುಂಬದ ಫೌಂಡೇಷನ್‌ ಗಟ್ಟಿಯಾಗಿರುತ್ತಿರಲಿಲ್ಲ. ನನ್ನ ದೃಷ್ಠಿಯಲ್ಲಿ ನಿಮ್ಮನ ಯಾರೂ ಅಲುಗಾಡಿಸಲು ಸಾಧ್ಯವೇ ಇಲ್ಲ.. ನೀವು ಅಷ್ಟು ಸ್ಟ್ರಾಂಗ್. ನಾನು ಕಂಡಿರುವ ಸ್ಟ್ರಾಂಗ್ ವ್ಯಕ್ತಿ ನೀವು. ದಿನ ಬೆಳಗ್ಗೆ ನಿಮಗೆ ಕರೆ ಮಾಡುವುದನ್ನು ನಾನು ಮಿಸ್ ಮಾಡಿಕೊಳ್ಳುವೆ, ಮನೆಯಲ್ಲಿ ನಾವಿಬ್ಬರೂ ತಪ್ಪದೆ ಕುಳಿತುಕೊಂಡು ಕಾಫಿ ಕುಡಿಯುತ್ತಿದ್ದ ಕ್ಷಣವನ್ನು ಮಿಸ್ ಮಾಡಿಕೊಳ್ಳುವೆ, ನೀವು ಸಸ್ಯಹಾರಿ ಆಗಿದ್ದರೂ ಚಿರುಗಾಗಿ ಮಟನ್ ಚಾಪ್ಸ್‌ ಮಾಡಿಕೊಡುತ್ತಿದ್ದಿರಿ. ರುಚಿ ಸೂಪರ್ ಆಗಿರುತ್ತಿತ್ತು. ನನಗೆ ಖಂಡಿತ ಗೊತ್ತು ಈಗ ನೀವು ಚಿರು ಜೊತೆ ಸೇರಿಕೊಂಡು ರುಚಿ ರುಚಿಯಾಗಿರುವ ಮಟನ್ ತಿನ್ನುತ್ತಿರುತ್ತೀರಿ. ಲವ್ ಯು ಅಜ್ಜಿ. ನಾನು ಜೀವನದಲ್ಲಿ ಮರೆಯಲಾಗ ಕ್ಷಣ ಅಂದ್ರೆ ಆಸ್ಪತ್ರೆಯಲ್ಲಿ ನೀವು ಒಂದು ಕ್ಷಣವೂ ನನ್ನನ್ನು ಬಿಡದೆ ಜೊತೆಗಿದ್ದದ್ದು” ಎಂದು ಮೇಘನಾ ಬರೆದುಕೊಂಡಿದ್ದಾರೆ.  ನಟ ಶಕ್ತಿ ಪ್ರಸಾದ್ ಮತ್ತು ಲಕ್ಷ್ಮಿ ದೇವಿ ಅವರಿಗೆ ಮೂವರು ಮಕ್ಕಳು. ಮೊದಲ ಮಗ ಕಿಶೋರ್‌ ಕುಮಾರ್, ಎರಡನೆಯವರು ಅರ್ಜುನ್ ಸರ್ಜಾ ಮತ್ತು ಮೂರನೆಯವರು ಅಮ್ಮಾಜಿ. ಲಕ್ಷ್ಮಿ ದೇವಿ ಅವರು ವೃತ್ತಿಯಲ್ಲಿ ಆರ್ಟ್‌ ಟೀಚರ್ ಆಗಿದ್ದರು. ಶಕ್ತಿ ಪ್ರಸಾದ್ ಅಗಲಿದ ನಂತರ ಬೆಂಗಳೂರಿನಲ್ಲಿರುವ ಪುತ್ರಿ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಿದ್ದರು. ಚಿರಂಜೀವಿ ಎರಡನೇ ವರ್ಷದ ಪುಣ್ಯಸ್ಮರಣೆಯಲ್ಲಿ ಕೊನೆಯದಾಗಿ ಲಕ್ಷ್ಮಿ ದೇವಿ ಅವರು ಕಾಣಿಸಿಕೊಂಡಿದ್ದರು. ಆಗ ಚಿರು ಪುತ್ರ ರಾಯನ್ ರಾಜ್‌ ಸರ್ಜಾ ಜೊತೆಗಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಅಗಲಿದ ಅಜ್ಜಿಯ ನೆನಪಿನಲ್ಲಿ ಭಾವುಕ ಪತ್ರ ಹಂಚಿಕೊಂಡ ಮೇಘನಾ ರಾಜ್ Read More »

Scroll to Top