Karnataka Bhagya

ಇತರೆ

ಬರ್ತ್ ಡೇ ದಿನ ಗೋಲ್ಡನ್ ಸ್ಟಾರ್ ಪಡೆದ ಉಡುಗೊರೆಗಳಿವು

ಕನ್ನಡಿಗರ ನೆಚ್ಚಿನ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು(ಜುಲೈ 2) 42ನೇ ಹುಟ್ಟುಹಬ್ಬದ ಸಂಭ್ರಮ. ಕಾರಣಾಂತರಗಳಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ಗಣೇಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಹಾಗಾಗಿ ಜನುಮದಿನದ ಸಡಗರ ಅಭಿಮಾನಿಗಳಲ್ಲಿ ಸ್ವಲ್ಪ ಕಡಿಮೆಯೇ ಇದ್ದರೂ ಸಹ, ಅವರ ನಟನೆಯಲ್ಲಿ ಮೂಡಿಬರುತ್ತಿರೋ ಹೊಸ ಸಿನಿಮಾಗಳು ಈ ಬಾರಿ ಹುಟ್ಟುಹಬ್ಬಕ್ಕೆ ಉಡುಗೊರೆಗಳನ್ನ ನೀಡುತ್ತಿವೆ. ಇದರಿಂದ ಅಭಿಮಾನಿಗಳು ಕೂಡ ಸಂತುಷ್ಟರಾಗಿದ್ದಾರೆ. ಹಲವಾರು ಸಿನಿಮಾಗಳನ್ನು ಕೈಗೆತ್ತಿಕೊಂಡಿರುವ ಗಣೇಶ್ ಅವರ ಕೆಲವು ಸಿನಿಮಾಗಳು ಬಿಡುಗಡೆಗೆ ಕೂಡ ಸಿದ್ದವಾಗಿ ಕೂತಿವೆ. ಯೋಗರಾಜ್ ಭಟ್ ಹಾಗು ಗಣೇಶ್ ಅವರ ಜೋಡಿಯಿಂದ ಮೂಡಿಬರುತ್ತಿರೋ ನಾಲ್ಕನೇ ಚಿತ್ರ ಬಹುನಿರೀಕ್ಷಿತ ‘ಗಾಳಿಪಟ 2’ ಚಿತ್ರತಂಡ ಈಗಾಗಲೇ ಹಾಡೊಂದನ್ನು ಬಿಡುಗಡೆಗೊಳಿಸಿದೆ. ‘ನಾನಾಡದ ಮಾತೆಲ್ಲವ’ ಎಂಬ ಈ ಹಾಡು ವರ್ಷದ ಪ್ರೇಮಗೀತೆ ಯಾಗುವಷ್ಟು ಇಂಪಾಗಿದೆ. ಇನ್ನು ಶ್ರೀ ಮಹೇಶ್ ಗೌಡ ಅವರ ನಿರ್ದೇಶನದ ‘ತ್ರಿಬಲ್ ರೈಡಿಂಗ್’ ಚಿತ್ರದಿಂದ ಪೋಸ್ಟರ್ ಒಂದರ ಮೂಲಕ ಹುಟ್ಟುಹಬ್ಬದ ಶುಭಾಶಯ ಹೇಳಲಾಗಿದೆ. ಹಾಗೆಯೇ ಪ್ರೀತಮ್ ಗುಬ್ಬಿ ಹಾಗು ಗಣೇಶ್ ಮತ್ತೊಮೆ ಜೊತೆಯಾಗುತ್ತಿರುವ ‘ಬಾನ ದಾರಿಯಲ್ಲಿ’ ಚಿತ್ರತಂಡ ಕೂಡ ಪೋಸ್ಟರ್ ಒಂದನ್ನು ಬಿಟ್ಟಿದ್ದು, ಗಣಿ ಕ್ರಿಕೆಟ್ ಆಡುವಂತಹ ಚಿತ್ರ ಅದರಲ್ಲಿದೆ. ಇವೆಲ್ಲದರ ಜೊತೆಗೆ ಸಿಂಪಲ್ ಸುನಿ ಹಾಗು ಗಣೇಶ್ ಅವರು ಎರಡನೇ ಬಾರಿ ಜೋಡಿಯಾಗಿ ಬರುತ್ತಿರುವ ಹೊಸ ಸಿನಿಮಾದ ಬಗೆಗಿನ ಹೊಸ ಸುದ್ದಿಯನ್ನು ನಿರ್ದೇಶಕ ಸುನಿ ಹೊರಬಿಟ್ಟಿದ್ದಾರೆ. ಪಕ್ಕ ಮಾಸ್ ಪೋಸ್ಟರ್ ಗಳಿಂದ ಈ ಹಿಂದೆ ಗಮನ ಸೆಳೆದಿದ್ದ ‘ದಿ ಸ್ಟೋರಿ ಒಫ್ ರಾಯಗಡ’ ಎಂಬ ಸಿನಿಮಾವನ್ನು ಸುನಿ ಹಾಗು ಗಣಿ ಸೇರಿ ಮಾಡುತ್ತಿದ್ದು, ಈ ವರ್ಷದ ನವೆಂಬರ್ ನಿಂದ ಚಿತ್ರೀಕರಣ ಆರಂಭಿಸಲಿದ್ದಾರೆ. ಜೂಡಾ ಸ್ಯಾಂಡಿ ಅವರು ಸಂಗೀತ ತುಂಬಲಿರೋ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಗೋಲ್ಡನ್ ಸ್ಟಾರ್ ಅವರ ‘ಗಾಳಿಪಟ 2’ ಚಿತ್ರ ಇದೇ ಆಗಸ್ಟ್ 12ರಿಂದ ಚಿತ್ರಮಂದಿರಗಳಿಗೆ ಬರಲಿದೆ.

ಬರ್ತ್ ಡೇ ದಿನ ಗೋಲ್ಡನ್ ಸ್ಟಾರ್ ಪಡೆದ ಉಡುಗೊರೆಗಳಿವು Read More »

‘777 ಚಾರ್ಲಿ’ಗೆ ಎಲ್ಲೆಡೆಯಿಂದ ಬಂತು ಬಹುಬೇಡಿಕೆ.

ಸದ್ಯ ಹಲವೆಡೆ ಚಿತ್ರಮಂದಿರಗಳನ್ನೂ, ಚಿತ್ರ ನೋಡಿದ ಪ್ರೇಕ್ಷಕರ ಮನಸ್ಸನ್ನು ತುಂಬುತ್ತಿರುವ ಸಿನಿಮಾ ‘777 ಚಾರ್ಲಿ’. ಮಾನವ ಹಾಗು ಶ್ವಾನದ ನಡುವಿನ ಕಥೆ ಹೇಳುವ ಈ ಸಿನಿಮಾವನ್ನು ಕಿರಣ್ ರಾಜ್ ಕೆ ಅವರು ರಚಿಸಿ ನಿರ್ದೇಶಸಿದ್ದು, ರಕ್ಷಿತ್ ಶೆಟ್ಟಿ ಅವರು ನಿರ್ಮಿಸಿ ನಟಿಸಿದ್ದಾರೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾಗೆ ಹಾಗು ಸಿನಿತಂಡದ ಸದಸ್ಯರಿಗೆ ಬೇರೆ ಬೇರೆ ಭಾಷೆಗಳ ಚಿತ್ರರಂಗದಿಂದ ಬೇಡಿಕೆಗಳು ಬರುತ್ತಿವೆ. ‘777 ಚಾರ್ಲಿ’ ಸಿನಿಮಾ ಪಂಚ ಭಾಷೆಗಳಲ್ಲೂ ದೇಶ ಮಾತ್ರವಲ್ಲದೆ ಪ್ರಪಂಚದ ವಿವಿಧ ಭಾಗಗಳಲ್ಲೂ ಬಿಡುಗಡೆಯಾಗಿರೋ ಸಿನಿಮಾ. ಹಿಂದಿಯಲ್ಲೂ ಸಹ ತೆರೆಕಂಡು ಮೆಚ್ಚುಗೆ ಪಡೆಯುತ್ತಿದ್ದರೂ ಸಹ ಚಿತ್ರದ ರಿಮೇಕ್ ರೈಟ್ಸ್ ಗೆ ಎಲ್ಲೆಡೆಯಿಂದ ಬೇಡಿಕೆ ಬರುತ್ತಿದೆಯಂತೆ. ಸಿನಿಮಾವನ್ನು ರಿಮೇಕ್ ಮಾಡುತ್ತೇವೆ ಎಂದು ಹಲವಾರು ಬಾಲಿವುಡ್ ನ ನಿರ್ಮಾಪಕರು ‘777 ಚಾರ್ಲಿ’ಯ ಒಡೆಯರನ್ನೂ ಭೇಟಿಯಾಗಿದ್ದಾರಂತೆ. ಸದ್ಯ ಈ ಬಗೆಗಿನ ಯಾವುದೇ ಅಧಿಕೃತ ಘೋಷಣೆ ಚಿತ್ರತಂಡದಿಂದ ಹೊರಬಂದಿಲ್ಲ. ಇದಷ್ಟೇ ಅಲ್ಲದೇ ಚಾರ್ಲಿ ಎಂಬ ಹೆಸರಿನಿಂದಲೇ ಪ್ರಪಂಚದಾದ್ಯಂತ ಮನೆಮಾತಾಗಿರೋ ನಾಯಿಗೂ ಕೂಡ ಎಲ್ಲೆಡೆಯಿಂದ ನಟನೆಗೆ ಅವಕಾಶಗಳು ಬರುತ್ತಿವೆ. ತನ್ನ ಮುಗ್ಧ ಕಣ್ಣುಗಳಿಂದಲೇ ಸಿನಿರಸಿಕರ ಮನಸ್ಸನ್ನು ಗೆದ್ದಿದ್ದ ಚಾರ್ಲಿಯನ್ನ ಪಳಗಿಸಿದವರು ಪ್ರಮೋದ್. ಸದ್ಯ ಚಾರ್ಲಿ ಅವರ ಅದೃಷ್ಟವನ್ನು ಬದಲಾಯಿಸುತ್ತಿದೆ. ಪ್ರಮೋದ್ ಅವರು ನಡೆಸುತ್ತಿರುವ ‘ಡಿಕೆ9 ವರ್ಕಿಂಗ್ ಡಾಗ್ ಟ್ರೈನಿಂಗ್ ಸ್ಕೂಲ್’ ಸುಮಾರು 22 ನಾಯಿಗಳನ್ನು ಹೊಂದಿದ್ದು, ಚಾರ್ಲಿ ಕೂಡ ಅಲ್ಲಿಯದೆ. ಮೈಸೂರಿನಲ್ಲಿ ನೆಲೆಯೂರಿರುವ ಈ ಸಂಸ್ಥೆಯ ನಾಯಿಗಳಿಗೆ ಇದೀಗ ಬೇರೆ ಚಿತ್ರರಂಗಗಳಿಂದಲೂ ಬೇಡಿಕೆ ಬರುತ್ತಿದೆ. ಡಾಲಿ ಧನಂಜಯ ಅವರ ನಟನೆಯ ‘ಹೊಯ್ಸಳ’ ಸಿನಿಮಗೂ ಕೂಡ ಸುಮಾರು ಐದು ನಾಯಿಗಳನ್ನು ಈ ‘ಡಿಕೆ9 ವರ್ಕ್ ಶಾಪ್’ ನಿಂದ ಆರಿಸಿಕೊಳ್ಳಲಾಗಿದೆ. ಹಾಗೆಯೇ ಶ್ವಾನಗಳ ಬಗೆಗೆ ಅಧ್ಯಯನ ನಡೆಸಿರುವ ಪ್ರಮೋದ್ ಅವರಿಗೂ ಕೂಡ ಬೇರೆ ಭಾಷೆಯ ಚಿತ್ರರಂಗಗಳಿಂದಲೂ ಅವಕಾಶಗಳ ಸಾಗರ ಹರಿದು ಬರುತ್ತಿದೆ. ಜೂನ್ 10ರಂದು ತೆರೆಕಂಡ ‘777 ಚಾರ್ಲಿ’ ಸಿನಿಮಾ ಸದ್ಯ ಎಲ್ಲೆಡೆ ಯಶಸ್ವಿ ಪ್ರದರ್ಶನ ಪಡೆಯುತ್ತಿರೋ ಸಂತಸದಲ್ಲಿದೆ. ಹಲವು ಭಾಗಗಳಲ್ಲಿ ಹಲವು ಚಿತ್ರಮಂದಿರಗಳಲ್ಲಿ ಹೌಸಫುಲ್ ಬೋರ್ಡ್ ಜೋತು ಹಾಕಿಕೊಂಡು ಪ್ರದರ್ಶಿತಗೊಳ್ಳುತ್ತಿರುವ ಈ ಸಿನಿಮಾ ಸಿನಿರಸಿಕರ ಅಚ್ಚುಮೆಚ್ಚಾಗಿದೆ.

‘777 ಚಾರ್ಲಿ’ಗೆ ಎಲ್ಲೆಡೆಯಿಂದ ಬಂತು ಬಹುಬೇಡಿಕೆ. Read More »

ಆತ್ಮವಿಶ್ವಾಸ ಹೆಚ್ಚಾಗಲು ಈ ಗೆಲುವೇ ಕಾರಣ ಎಂದ ಕಿರಣ್ ರಾಜ್… ಯಾವುದು ಗೊತ್ತಾ?

ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ಅಭಿನಯಿಸುತ್ತಿರುವ ಕಿರಣ್ ರಾಜ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಸಕ್ರಿಯರಾಗಿರುವ ಪ್ರತಿಭೆ. ಕಿರಣ್ ರಾಜ್ ಅಭಿನಯದ ಬಡ್ಡೀಸ್ ಸಿನಿಮಾ ಇದೇ ಜೂನ್ 24 ರಂದು ಬಿಡುಗಡೆಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಭಿನ್ನ ಕಥಾ ಹಂದರವುಳ್ಳ ಬಡ್ಡೀಸ್ ಸಿನಿಮಾವನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದಕ್ಕಾಗಿ ಕಿರಣ್ ರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. “ಬಡ್ಡೀಸ್ ಸಿನಿಮಾ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇನ್ನು ಐಎಂಡಿಬಿ ಹಾಗೂ ಬುಕ್ ಮೈ ಶೋಗಳಲ್ಲಿ ನಮ್ಮ ಸಿನಿಮಾಕ್ಕೆ ಉತ್ತಮ ರೇಟಿಂಗ್ ಕೂಡಾ ದೊರಕಿದೆ. ಈ ಸಿನಿಮಾದಲ್ಲಿನ ನನ್ನ ನಟನೆಯನ್ನು ಕೂಡಾ ಜನ ಮೆಚ್ಚಿಕೊಂಡಿದ್ದು ಅವರ ಪ್ರೀತಿ ನೋಡಿ ನಾನು ಫಿದಾ ಆಗಿದ್ದೇನೆ” ಎಂದು ಹೇಳುತ್ತಾರೆ ಕಿರಣ್ ರಾಜ್. ಬಡ್ಡೀಸ್ ಸಿನಿಮಾದ ಅರ್ಧ ಪ್ರಚಾರ ಮಾಡಿದ್ದೇ ಅಭಿಮಾನಿಗಳು. ಅವರಿಗೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎನ್ನುವ ಕಿರಣ್ ರಾಜ್ “ಶ್ರಮ ಹಾಕಿ ಕೆಲಸ ಮಾಡಿದರೆ ಪ್ರತಿಫಲ ಸಿಕ್ಕಿಯೇ ಸಿಕ್ಕುತ್ತದೆ. ಅದಕ್ಕೆ ನಾನೇ ಉದಾಹರಣೆ. ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನನಗೆ ಗೆಲುವು ಸಿಕ್ಕಿದ್ದು ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜ‌ನರು ಕೂಡಾ ನನ್ನನ್ನು ಇಷ್ಟಪಟ್ಟಿದ್ದು ಇದರಿಂದ ನನ್ನ ಜವಾಬ್ದಾರಿ ಕೂಡಾ ಹೆಚ್ಚಾಗಿದೆ” ಎನ್ನುತ್ತಾರೆ ಕಿರಣ್ ರಾಜ್. ಸಿನಿಮಾ ಹಾಗೂ ಸೀರಿಯಲ್ ಇವೆರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುವ ಕಿರಣ್ ರಾಜ್ “ರಾತ್ರಿ ಹಗಲು ಎನ್ನದೆ ನಾನು ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೆ. ತುಂಬಾ ಕಷ್ಟವಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಮಿಸ್ ಮಾಡಲು ನನಗಿಷ್ಟವಿಲ್ಲ” ಎನ್ನುವ ಕಿರಣ್ ರಾಜ್ ಇಂದು ನಟನಾ ಲೋಕದಲ್ಲಿ ಮನೆ ಮಾತಾಗಿದ್ದಾರೆ, ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕನ್ನಡತಿ ಧಾರಾವಾಹಿಯೇ ಕಾರಣ.

ಆತ್ಮವಿಶ್ವಾಸ ಹೆಚ್ಚಾಗಲು ಈ ಗೆಲುವೇ ಕಾರಣ ಎಂದ ಕಿರಣ್ ರಾಜ್… ಯಾವುದು ಗೊತ್ತಾ? Read More »

ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಮರಳಿದ ಸುಷ್ಮಾ ರಾವ್

ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನಾ ಆಗಿ ಅಭಿನಯಿಸಿದ್ದ ಸುಷ್ಮಾ ರಾವ್ ಮನೆ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದ ಚೆಲುವೆ. ಗುಪ್ತಗಾಮಿನಿ ಧಾರಾವಾಹಿಯ ನಂತರ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ನಾಯಕಿ ಆಗಿ ಅಭಿನಯಿಸಿರುವ ಸುಷ್ಮಾ ರಾವ್ ಇದೀಗ ದಶಕಗಳ ನಂತರ ಮತ್ತೆ ನಟನೆಯತ್ತ ಮರಳಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿರುವ ಬೆಟ್ಟದ ಹೂ ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ. ಬೆಟ್ಟದ ಹೂ ಧಾರಾವಾಹಿಯಲ್ಲಿ ಡಾ.ಭಾವನಾ ಆಗಿ ಮೋಡಿ ಮಾಡುತ್ತಿರುವ ಸುಷ್ಮಾ ರಾವ್ ತಮಗೆ ಹೆಸರು ತಂದುಕೊಟ್ಟ ಪಾತ್ರದ ಹೆಸರಿನಲ್ಲಿಯೇ ಕಿರುತೆರೆಯಲ್ಲಿ ನಟಿಸುತ್ತಿರುವುದು ವೀಕ್ಷಕರಿಗೆ ಸಂತಸ ನೀಡಿದೆ.ಎಸ್. ನಾರಾಯಣ್ ನಿರ್ದೇಶನದ ಭಾಗೀರಥಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸುಷ್ಮಾ ರಾವ್ ಮುಂದೆ ಸ್ವಾತಿಮುತ್ತು, ಬಿದಿಗೆ ಚಂದ್ರಮ,ಯಾವ ಜನ್ಮದ ಮೈತ್ರಿ ಧಾರಾವಾಹಿಯಲ್ಲಿ ಅಭಿನಯಿಸಿದರು. ಮುಂದೆ ಗುಪ್ತಗಾಮಿನಿಯ ಭಾವನಾ ಆಗಿ ಕಿರುತೆರೆಯಲ್ಲಿ ಮನೆ ಮಾತಾದ ಸುಷ್ಮಾ ಆ ಪಾತ್ರಕ್ಕೆ ಬೆಸ್ಟ್ ಟೆಲಿವಿಶನ್ ಅವಾರ್ಡ್ ಪ್ರಶಸ್ತಿ ಕೂಡಾ ಪಡೆದರು. ಮುಂದೆ ಜೀ ಕನ್ನಡ ವಾಹಿನಿಯ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ನಾಯಕಿ ಆಗಿ ಅಭಿನಯಿಸಿದ್ದ ಸುಷ್ಮಾ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ಮಗಳು ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದರು. ನಟನೆಯ ಹೊರತಾಗಿ ನಿರೂಪಕಿಯಾಗಿ ಗುರುತಿಸಿಕೊಂಡ ಇರುವ ಸುಷ್ಮಾ ರಾವ್ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆದವರು. ಸೀರಿಯಲ್ ಸಂತೆ, ಅವಾರ್ಡ್ ಕಾರ್ಯಕ್ರಮ, ಹಾಡು ಹರಟೆ, ಉದಯ ಉತ್ಸವ, ತರ್ಲೆ ನನ್ ಮಕ್ಳು, ಜೀನ್ಸ್ ಹಾಗೂ ಮನೆ ಮನೆ ಮಹಾಲಕ್ಷ್ಮಿ ಮುಂತಾದ ಶೋಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಸುಷ್ಮಾ ರಾವ್ ಅವರು ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದು ವೀಕ್ಷಕರಿಗೆ ಖುಷಿ ತಂದಿದೆ.

ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಮರಳಿದ ಸುಷ್ಮಾ ರಾವ್ Read More »

ಹುಟ್ಟುಹಬ್ಬ ಆಚರಣೆ ಇಲ್ಲ ಎಂದ ಡೈನಾಮಿಕ್ ಪ್ರಿನ್ಸ್… ಯಾಕೆ ಗೊತ್ತಾ?

ಡೈನಾಮಿಕ್ ಪ್ರಿನ್ಸ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಪ್ರಜ್ವಲ್ ದೇವರಾಜ್ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿದ್ದಾರೆ. ಇದೇ ಜುಲೈ 4 ರಂದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವಿದ್ದು ಈ ಬಾರಿ ಅವರು ಅದನ್ನು ಆಚರಿಸುತ್ತಿಲ್ಲ. ಅದಕ್ಕೆ ಕಾರಣ ಅಭಿಮಾನಿಯ ಮೇಲೆ ಪ್ರಜ್ವಲ್ ಅವರಿಗಿರುವ ಪ್ರೀತಿ. ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಪ್ರಜ್ವಲ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿಯಾದರೂ ಅವರು ತಮ್ಮ ಹುಟ್ಟುಹಬ್ಬ ಆಚರಿಸುತ್ತಾರೆ ಎಂಬ ಅಭಿಮಾನಿಗಳಿಗೆ ಇದೀಗ ನಿರಾಸೆ ಆಗಿದೆ. ಯಾಕೆಂದರೆ ಡೈನಾಮಿಕ್ ಪ್ರಿನ್ಸ್ ಈ ಬಾರಿಯೂ ಕೂಡಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಪ್ರಜ್ವಲ್ ದೇವರಾಜ್ ಅವರ ಅಪ್ಪಟ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದು ಆ ಕಾರಣದಿಂದಾಗಿ ಪ್ರಜ್ವಲ್ ಅವರು ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಕುರಿತು ವಿಡಿಯೋ ಹಂಚಿಕೊಂಡಿರುವ ಪ್ರಜ್ವಲ್ ದೇವರಾಜ್ ” ಈ ಸಲವೂ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ. ವರ್ಷಂಪ್ರತಿ ನನ್ನ ಹುಟ್ಟಿದ ದಿನವನ್ನು ಹಬ್ಬದಂತೆ ನೀವು ಆಚರಣೆ ಮಾಡುತ್ತಿದ್ದೀರಿ. ಮಾತ್ರವಲ್ಲ ನನಗೆ ನೀವು ಸಾಕಷ್ಟು ಪ್ರೀತಿಯನ್ನು ನೀಡಿದ್ದೀರಿ. ಇದೀಗ ಇದೇ ಪ್ರೀತಿ ನನ್ನ ಅಭಿಮಾನಿಗಳಿಗೂ ಸಿಗಬೇಕು. ನನ್ನ ಆಪ್ತ ಅಭಿಮಾನಿ ಸತೀಶ್ ಅವರು ನಿಧನರಾಗಿದ್ದು ಆ ಕಾರಣದಿಂದಾಗಿ ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ.‌ ಪ್ರಜ್ವಲ್ ದೇವರಾಜ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹುಟ್ಟುಹಬ್ಬ ಆಚರಣೆ ಇಲ್ಲ ಎಂದ ಡೈನಾಮಿಕ್ ಪ್ರಿನ್ಸ್… ಯಾಕೆ ಗೊತ್ತಾ? Read More »

ಒಟಿಟಿ ಪರದೆ ಏರಿದ ಮತ್ತೊಂದು ಸಿನಿಮಾ

ಕೃಷ್ಣ ಎಂದೇ ಕನ್ನಡ ನಾಡಿನಲ್ಲಿ ಪ್ರಸಿದ್ದರಾಗಿರುವ ಅಜಯ್ ರಾವ್ ಅವರು ನಟಿಸಿ ಇದೇ ಏಪ್ರಿಲ್ 29ರಂದು ಬಿಡುಗಡೆಯಾಗಿದ್ದ ಸಿನಿಮಾ ‘ಶೋಕಿವಾಲ’.ಚಿತ್ರಮಂದಿರಗಳಲ್ಲಿ ಕನ್ನಡಿಗರ ಮನಸೆಳೆಯುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದ ಈ ಸಿನಿಮಾ ಒಂದಷ್ಟರ ಮಟ್ಟಿಗೆ ಒಳ್ಳೆಯ ಓಟವನ್ನೇ ಪಡೆದಿತ್ತು. ಕೃಷ್ಣ ಅಜಯ್ ರಾವ್ ಅವರಿಗೆ ಸಂಜನಾ ಆನಂದ್ ಜೋಡಿಯಾಗಿ ನಟಿಸಿದ್ದ ಈ ಚಿತ್ರ ಇದೀಗ ಒಟಿಟಿ ಪರದೆ ಏರಲು ಸಿದ್ಧವಾಗಿದೆ. ಜಾಕಿ ಅವರು ನಿರ್ದೇಶಿಸಿ ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಟಿ ಆರ್ ಚಂದ್ರಶೇಖರ್ ಅವರು ನಿರ್ಮಾಣ ಮಾಡಿದ್ದ ಈ ಚಿತ್ರ ಗ್ರಾಮೀಣ ಹಿನ್ನೆಲೆ ಇರುವ ಕಥೆಯೊಂದನ್ನು ಹೊಂದಿತ್ತು. ಎಲ್ಲರೂ ಪ್ರೀತಿಸಲು ಇಷ್ಟ ಪಡೋ ಕೃಷ್ಣ ಅದೇ ಊರಿನ ರಾಧಾಳನ್ನ ಪ್ರೀತಿಸಿ, ಇವರ ಬದುಕಿನಲ್ಲಾಗುವ ಘಟನೆಗಳನ್ನ ಹೇಳುವಂತ ಒಂದು ರೋಮ್ಯಾಂಟಿಕ್ ಎಂಟರ್ಟೈನರ್ ವಿಷಯ ಹೊಂದಿರೋ ಸಿನಿಮಾ ಇದು. ಸದ್ಯ ‘ಸನ್ ನೆಕ್ಸ್ಟ್(SUN NXT) ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಈ ಹಾಸ್ಯಮಯ ರೋಮ್ಯಾಂಟಿಕ್ ಪ್ರೇಮಕಥೆಯನ್ನು ಮಿಸ್ ಮಾಡಿಕೊಂಡ ಸಿನಿಪ್ರೇಮಿಗಳು sun ನೆಕ್ಸ್ಟ್ ಆಪ್ ಮೂಲಕ ನೋಡಬಹುದಾಗಿದೆ. ಅಜಯ್ ರಾವ್ ಹಾಗು ಸಂಜನಾ ಅವರ ಜೊತೆಗೆ ಶರತ್ ಲೋಹಿತಾಶ್ವ, ತಬಲಾ ನಾನಿ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ಶ್ರೀಧರ್ ಸಂಭ್ರಮ್ ಅವರು ಚಿತ್ರಕ್ಕೆ ಸಂಗೀತ ತುಂಬಿದ್ದಾರೆ.

ಒಟಿಟಿ ಪರದೆ ಏರಿದ ಮತ್ತೊಂದು ಸಿನಿಮಾ Read More »

ಬಿಡುಗಡೆಗೆ ಮುಹೂರ್ತವಿಟ್ಟ ‘ತೋತಾಪುರಿ’

ವರುಷಗಳ ಹಿಂದೆ ತೆರೆಕಂಡಂತಹ ‘ನೀರ್ದೋಸೆ’ ಸಿನಿಮಾ ಒಂದು ಹೊಸ ವರ್ಗದ ಅಭಿಮಾನಿಗಳನ್ನು ಹುಟ್ಟುಹಾಕಿತ್ತು ಎಂದರೆ ತಪ್ಪಾಗದು. ಹಾಸ್ಯಮಾಯವಾಗಿಯೇ ಸೂಕ್ಷ್ಮ ವಿಚಾರಗಳನ್ನು ಜನರಿಗೆ ಮುಟ್ಟಿಸಿದ್ದ ee ಸಿನಿಮಾ ಜನಮನ್ನಣೆ ಪಡೆದಿತ್ತು. ಇದೀಗ ಬಹುಪಾಲು ಅದೇ ತಂಡದವರೇ ಮಾಡಿರುವ ಹೊಸ ಸಿನಿಮಾ ‘ತೋತಾಪುರಿ’. ವಿಜಯ್ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರ ಇದೀಗ ತನ್ನ ಬಿಡುಗಡೆ ದಿನಾಂಕವನ್ನು ಹೊರಹಾಕಿದೆ. ‘ತೋತಾಪುರಿ’ ಸಿನಿಮಾದ ಟ್ರೈಲರ್ ಹಾಗು ಹಾಡೊಂದು ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ‘ನೀರ್ದೋಸೆ’ಯಂತದ್ದೇ ಅಂಶಗಳು ಇದರಲ್ಲೂ ಇರುತ್ತವೆ ಎಂದು ಸಿನಿಪ್ರೇಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಅಲ್ಲದೇ ‘ನೀರ್ದೋಸೆ’ ಚಿತ್ರದ ಯಶಸ್ಸಿನ ಅವಿನಾಭವ ಅಂಗವಾಗಿರೋ ನವರಸ ನಾಯಕ ಜಗ್ಗೇಶ್ ಅವರೇ ಈ ಚಿತ್ರಕ್ಕೂ ನಾಯಕರು. ಅಲ್ಲದೆ ಅದಿತಿ ಪ್ರಭುದೇವ, ವೀಣಾ ಸುಂದರ್, ನಟರಾಕ್ಷಸ ಡಾಲಿ ಧನಂಜಯ ಮುಂತಾದ ಕನ್ನಡದ ಪ್ರಮುಖ ನಟ ನಟಿಯರು ಸಹ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅನೂಪ್ ಸೀಳಿನ ಸಂಗೀತ ಹಾಗು ಕೆ ಎ ಸುರೇಶ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರ ಇದೇ ಸೆಪ್ಟೆಂಬರ್ 30ರಂದು ತೆರೆಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಕುಳಿತುಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗಲು ಕಾಯುತ್ತಿರೋ ಪ್ರೇಕ್ಷಕರು ಸೆಪ್ಟೆಂಬರ್ 30ರಿಂದ ಈ ಹಾಸ್ಯಮಯ ಅನುಭವವನ್ನ ಪಡೆಯಬಹುದು. ಈ ಮೂಲಕ 2022ರಲ್ಲಿ ಬಿಡುಗಡೆಯಾಗುತ್ತಿರುವ ಡಾಲಿಯವರ ಐದನೇ ಸಿನಿಮಾ ಇದಾಗಿರಲಿದೆ.

ಬಿಡುಗಡೆಗೆ ಮುಹೂರ್ತವಿಟ್ಟ ‘ತೋತಾಪುರಿ’ Read More »

ಒಟಿಟಿ ಕಡೆಗೆ ಹೆಜ್ಜೆ ಹಾಕಿದ್ದಾರೆ ‘ಮೇಜರ್’

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕಥೆಯನ್ನ ಆಧಾರವಾಗಿಟ್ಟುಕೊಂಡು ಮಾಡಿದಂತಹ ಚಿತ್ರ ‘ಮೇಜರ್’. 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದಾಗ ವೀರಮರಣವನ್ನಪ್ಪಿ ’26/11ರ ಹೀರೋ’ ಎಂದೇ ಭಾರತೀಯರ ಮನದಲ್ಲಿ ಉಳಿದುಕೊಂಡವರು ಸಂದೀಪ್ ಉನ್ನಿಕೃಷ್ಣನ್. ಆ ದಿನದ ಘಟನೆಯನ್ನಷ್ಟೇ ಅಲ್ಲದೇ ಅವರ ಜೀವನದ ಮುಖ್ಯ ಅಂಶಗಳನ್ನೆಲ್ಲ ಸೇರಿಸಿಕೊಂಡು ಮಾಡಿದ ಈ ಸಿನಿಮಾ ಇದೇ ಜೂನ್ 3ರಂದು ಚಿತ್ರಮಂದಿರಗಳ ಮೆಟ್ಟಿಲೇರಿತ್ತು. ಭಾರತದಾದ್ಯಂತ ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ ಎಲ್ಲರ ಮನಸಲ್ಲೂ ಒಮ್ಮೆಗೆ ಹೆಮ್ಮೆಯ ಭಾವ ತುಂಬುವಲ್ಲಿ ಯಶಸ್ವಿಯಾಗಿತ್ತು.ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತ ಸಿನಿಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗಿದ್ದ ಈ ಸಿನಿಮಾ ಇದೀಗ ಒಟಿಟಿ ಕಡೆಗೆ ಹೆಜ್ಜೆ ಹಾಕುತ್ತಿದೆ. ತೆಲುಗಿನ ಹೆಸರಾಂತ ನಟ ಹಾಗು ಕಥೆಗಾರ ಅದಿವಿ ಸೇಶ್ ಅವರು ನಾಯಕನಟನಾಗಿ ನಟಿಸಿರುವ ಈ ಸಿನಿಮಾದ ಚಿತ್ರಕತೆ ಹೆಣೆಯುವಲ್ಲೂ ಸಹ ಅದಿವಿ ಸೇಶ್ ಅವರೇ ಮುಖ್ಯ ಪಾತ್ರ ವಹಿಸಿದ್ದಾರೆ. ಶಶಿ ಕಿರಣ್ ಟಿಕ್ಕ ಅವರು ನಿರ್ದೇಶಿಸಿರುವ ಈ ಸಿನಿಮಾವನ್ನು ಟೋಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರ ಇದೇ ಜುಲೈ 3ರಿಂದ ನೆಟ್ ಫ್ಲಿಕ್ಸ್(NETFLIX) ನಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿನ ಜೊತೆಯಲ್ಲೇ ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲೂ ಪ್ರದರ್ಶನ ಕಾಣಲಿರೋ ಈ ಚಿತ್ರವನ್ನ ಚಿತ್ರಮಂದಿರಗಳಲ್ಲಿ ನೋಡದಿರುವವರು NETFLIX ನಲ್ಲಿ ನೋಡಬಹುದಾಗಿದೆ.

ಒಟಿಟಿ ಕಡೆಗೆ ಹೆಜ್ಜೆ ಹಾಕಿದ್ದಾರೆ ‘ಮೇಜರ್’ Read More »

ಲಾಲಿ ಹಾಡಲಿದ್ದಾರೆ ‘ವಿಕ್ರಾಂತ್ ರೋಣ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’.’ರಂಗಿತರಂಗ’ ಎಂಬ ಅದ್ಭುತ ಚಿತ್ರವೊಂದನ್ನು ಕನ್ನಡಿಗರಿಗೆ ನೀಡಿದ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾಗೆ ಪ್ರಪಂಚದಾದ್ಯಂತ ಅಸಂಖ್ಯ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರತಂಡ ಹಲವು ಟೀಸರ್ ವಿಡಿಯೋಗಳನ್ನೂ, ಒಂದು ಹಾಡನ್ನು ಜೊತೆಗೆ ಇತ್ತೀಚಿಗಷ್ಟೇ ಟ್ರೈಲರ್ ಅನ್ನು ಕೂಡ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಪ್ರತಿಯೊಂದು ‘ವಿಕ್ರಾಂತ್ ರೋಣ’ನ ಅಂಶಕ್ಕೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಚಿತ್ರದ ಬಿಡುಗಡೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ತನ್ನ ಇನ್ನೊಂದು ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ. ಅನೂಪ್ ಭಂಡಾರಿ ಅವರು ನಿರ್ದೇಶನವಷ್ಟೇ ಅಲ್ಲದೇ ಕಥೆ, ಚಿತ್ರಕತೆ, ಸಂಭಾಷಣೆ ಹಾಗು ಸಾಹಿತ್ಯಗಳೆಲ್ಲದರಲ್ಲೂ ಕೈ ಹಾಕುತ್ತಾರೆ. ಇದಕ್ಕಿಂತ ಮೊದಲು ಬಿಡುಗಡೆಯಾದ ಜನಮೆಚ್ಚಿದ ‘ರಾ ರಾ ರಕ್ಕಮ್ಮ’ ಹಾಡನ್ನು ಸಹ ಅವರೇ ಬರೆದಿದ್ದು ಇದೀಗ ಚಿತ್ರದಿಂದ ಬಿಡುಗಡೆ ಪಡೆಯುತ್ತಿರೋ ಹೊಸ ‘ಲಾಲಿ ಹಾಡಿ’ನ ಕನ್ನಡ ಆವೃತ್ತಿಯನ್ನು ಕೂಡ ಅವರ ಸಾಹಿತ್ಯದಿಂದಲೇ ರಚಿಸಲಾಗಿದೆ. ಈ ಲಾಲಿ ಹಾಡಿಗೆ ‘ರಾಜಕುಮಾರಿ’ ಎಂದು ಹೆಸರಿಡಲಾಗಿದ್ದು, ಐದು ಭಾಷೆಗಳಲ್ಲಿ ಐದು ಬೇರೆ ಬೇರೆ ದಿನಗಳಂದು ಬಿಡುಗಡೆ ಕಾಣುತ್ತಿದೆ. ಜೂನ್ 2ರಂದು ಕನ್ನಡದಲ್ಲಿ, ಜೂನ್ 3ರಂದು ಮಲಯಾಳಂನಲ್ಲಿ, ಜೂನ್ 4ರಂದು ತೆಲುಗಿನಲ್ಲಿ , ಜೂನ್ 5ರಂದು ಹಿಂದಿಯಲ್ಲಿ ಹಾಗು ಜೂನ್ 6ರಂದು ತಮಿಳು ಭಾಷೆಗಯಲ್ಲಿ ಪ್ರತಿದಿನವೂ ಸಂಜೆ 5:02ಕ್ಕೆ ಬಿಡುಗಡೆಗೊಳ್ಳುತ್ತಿದೆ ಈ ಹೊಸ ಹಾಡು. ‘ಟಿ-ಸೀರೀಸ್’ ಹಾಗು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಹಾಡಿಗೆ ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ವಿಜಯ್ ಪ್ರಕಾಶ್ ಅವರು ದನಿಯಾಗಿದ್ದಾರೆ ವಿಶೇಷವೆಂದರೆ ಈ ಹಾಡಿನ ಕನ್ನಡ ಆವೃತ್ತಿಯ ಸಾಹಿತ್ಯವನ್ನು ಈಗಾಗಲೇ ಚಿತ್ರತಂಡ ಹೊರಬಿಟ್ಟಿದೆ. ಸೀದಾ ಮನಸ್ಸಿನಿಂದ ಹೊರಟು ಮನಸ್ಸನ್ನೇ ಸೆಳೆಯುವಂತಿರರೊ ee ಮಧುರ ಸಾಲುಗಳಿಗೆ ಕನ್ನಡಿಗರು ಮನಸೋತಿದ್ದಾರೆ. ಇದೇ ಜುಲೈ 28ರಂದು ಪ್ರಪಂಚದಾದ್ಯಂತ ಬಿಡುಗಡೆಯಗುತ್ತಿರೋ ‘ವಿಕ್ರಾಂತ್ ರೋಣ’ನನ್ನು 3ಡಿ ಯಲ್ಲಿ ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾಯುತ್ತಿದ್ದಾರೆ.

ಲಾಲಿ ಹಾಡಲಿದ್ದಾರೆ ‘ವಿಕ್ರಾಂತ್ ರೋಣ’ Read More »

ಅರ್ಜುನ್ ಸರ್ಜಾ ತಂದೆ ಮಾತ್ರವಲ್ಲ, ನನ್ನ ನಿರ್ದೇಶಕ ಹಾಗೂ ಗುರು – ಐಶ್ವರ್ಯ

‘ಪ್ರೇಮ ಬರಹ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತಳಾದ ನಟಿ ಐಶ್ವರ್ಯ ಅರ್ಜುನ್ ಇದೀಗ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಭಾರತೀಯ ಸಿನಿಮಾರಂಗದ ಖ್ಯಾತ ನಟ ಹಾಗೂ ತಮ್ಮ ತಂದೆ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಐಶ್ವರ್ಯ ನಟಿಸುತ್ತಿರುವುದು ವಿಶೇಷ. ನಟ ವಿಶ್ವಾಕ್ ಸೇನ್ ಅಭಿನಯದ ಸಿನಿಮಾ ಇದಾಗಿದ್ದು ಬರೋಬ್ಬರಿ ನಾಲ್ಕು ವರ್ಷಗಳ ಗ್ಯಾಪ್ ನ ನಂತರ ಐಶ್ವರ್ಯ ಮತ್ತೆ ಬಣ್ಣ ಹಚ್ಚಲಿದ್ದಾರೆ. ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ‘ನಾನು ಯಾವುದನ್ನೂ ಹೆಚ್ಚಾಗಿ ಪ್ಲಾನ್ ಮಾಡುವುದಿಲ್ಲ. ಕೋವಿಡ್ ಅವಧಿಯಲ್ಲಿ ಹಲವಾರು ಪ್ರಾಜೆಕ್ಟ್ ಗಳ ಬಗ್ಗೆ ಚರ್ಚೆ ನಡೆಸಿದ್ದೆ. ಆದುದೆಲ್ಲವೂ ಒಳ್ಳೆಯದಕ್ಕೆಂದು ಭಾವಿಸುವವಳು ನಾನು. ನಡೆದು ಹೋದ ಘಟನೆಗಳ ಕುರಿತು ತಲೆ ಕೆಡಿಸಿಕೊಳ್ಳುವುದು ತೀರಾ ಕಮ್ಮಿ. ಕೊನೆಗೂ ಹೊಸ ಸಿನಿಮಾ ಮಾಡಲು ಹೊರಟಿರುವುದು ಖುಷಿ ಕೊಟ್ಟಿದೆ. ಇಲ್ಲಿಯವರೆಗೆ ಕಾದಿರುವುದಕ್ಕೂ ತೃಪ್ತಿ ಸಿಕ್ಕಂತಾಗಿದೆ ‘ ಎಂದು ಹೇಳುತ್ತಾರೆ ತಮ್ಮ ತೆಲುಗು ಚಿತ್ರದ ಬಗ್ಗೆ ಹೇಳಿದ ಐಶ್ವರ್ಯ ‘ ನಾನು ಹಿಂದೆಂದೂ ಈ ರೀತಿಯ ಪಾತ್ರ ಮಾಡಿಲ್ಲ. ಸಿನಿಮಾದ ಟೈಟಲ್ ಇನ್ನೇನು ಬಿಡುಗಡೆಯಾಗಲಿದೆ. ಈಗ ಪಾತ್ರದ ಕುರಿತಂತೆ ಹೆಚ್ಚಿನದಾಗಿ ಏನೂ ಹೇಳಲಾರೆ. ಒಂದು ಪ್ರಯಾಣದ ಮೇಲೆ ಈ ಕಥೆ ನಿಂತಿದೆ. ತೆಲುಗು ಅರ್ಥವಾಗುವುದರೊಂದಿಗೆ ಮಾತನಾಡಲು ಬರುವುದರಿಂದ ಚಿತ್ರತಂಡದೊಂದಿಗೆ ವ್ಯವಹರಿಸಲು ಮತ್ತು ಪಾತ್ರದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಕಷ್ಟವೇನಿಲ್ಲ. ಆಗಸ್ಟ್ ಅಂತ್ಯದಲ್ಲಿ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ’ ಎಂದಿದ್ದಾರೆ ಇನ್ನು ಎರಡನೇ ಬಾರಿಗೆ ತಂದೆಯೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ‘ ನಮ್ಮಂತ ಹೊಸ ಕಲಾವಿದರ ಮೇಲೆ ಅವರು ಇಟ್ಟಿರುವ ನಂಬಿಕೆ ನಮ್ಮ ಸಾಮರ್ಥ್ಯವನ್ನು ಇನ್ನೂ ಪ್ರೋತ್ಸಾಹಿಸಿದಂತೆ. ಅವರು ನನಗೆ ನಿರ್ದೇಶಕ ಹಾಗೂ ಗುರು. ನಾನು ಅವರ ಮಾರ್ಗದರ್ಶನದಲ್ಲಿ ಅಭಿನಯಿಸುವ ನಟಿಯಷ್ಟೇ’ ಎಂದರು. ಕನ್ನಡ ಸಿನಿಮಾದಲ್ಲಿ ನಟಿಸುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದ ನಟಿ ಐಶ್ವರ್ಯ ‘ ನಾನು ನನ್ನ ಮಾತೃಭಾಷೆಯಲ್ಲಿ ಸಿನಿಮಾಗಳನ್ನು ಮಾಡಲು ತುಂಬಾ ಉತ್ಸುಕಳಾಗಿದ್ದೇನೆ. ನನ್ನನ್ನು ಈಗಲೂ ಜನರು ಪ್ರೇಮ ಬರಹದಿಂದ ಗುರುತಿಸುತ್ತಾರೆ. ಮುಂದೆ ಉತ್ತಮ ಅವಕಾಶಗಳು ಬಂದಲ್ಲಿ ಒಪ್ಪಿಕೊಳ್ಳುತ್ತೇನೆ’ ಎಂದರು.

ಅರ್ಜುನ್ ಸರ್ಜಾ ತಂದೆ ಮಾತ್ರವಲ್ಲ, ನನ್ನ ನಿರ್ದೇಶಕ ಹಾಗೂ ಗುರು – ಐಶ್ವರ್ಯ Read More »

Scroll to Top