Karnataka Bhagya

ಇತರೆ

ಕನ್ನಡದ ಹೆಮ್ಮೆಯ ಕೆಜಿಎಫ್ ಗೆ 100ದಿನಗಳ ಸಂಭ್ರಮ.

ಕನ್ನಡ ಚಿತ್ರರಂಗಕ್ಕೇ ಸದ್ಯ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಲ್ಲಿಂದ ಹೊರಹೋಮ್ಮೋ ಸಿನಿಮಾಗಳಿಗೆ ಈಗ ಕೇವಲ ಕನ್ನಡಿಗರಷ್ಟೇ ಅಲ್ಲದೇ, ಭಾಷೆಯ ಭೇದಭಾವವಿಲ್ಲದೆ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ‘ಪಾನ್-ಇಂಡಿಯಾ’ ಎಂಬ ವ್ಯವಸ್ಥೆ ಎಂದರೆ ತಪ್ಪಾಗದು. ‘ಪಾನ್-ಇಂಡಿಯಾ’ ಮಟ್ಟದಲ್ಲಿ ಸ್ಯಾಂಡಲ್ವುಡ್ ನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆದಿರುವ ಬಹುಪಾಲು ಕೀರ್ತಿ ‘ಕೆಜಿಎಫ್’ ಚಿತ್ರಗಳದ್ದು ಎಂದರೆ ಅಲ್ಲಗಳೆಯುವಂತಿಲ್ಲ. ‘ಕೆಜಿಎಫ್ ಚಾಪ್ಟರ್ 1’, ಹಾಗು ‘ಕೆಜಿಎಫ್ ಚಾಪ್ಟರ್ 2’ ಎರಡೂ ಸಿನಿಮಾಗಳು ಸಹ ಸದ್ಯ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿವೆ. ಇದರ ಎರಡನೇ ಅಧ್ಯಾಯ ಸದ್ಯ ತನ್ನ 100 ದಿನಗಳ ಸಂಭ್ರಮದಲ್ಲಿದೆ. 2018ರ ಡಿಸೆಂಬರ್ 21ರಂದು ಬಿಡುಗಡೆಯಾದ ಕೆಜಿಎಫ್ ಕಥೆಯ ಮೊದಲನೇ ಅಧ್ಯಾಯ ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನೇ ಬರೆಯಿತು. ಅಸಂಖ್ಯ ಪ್ರೇಕ್ಷಕರ ಅಭಿಮಾನಕ್ಕೆ ಒಳಗಾದ ಈ ಸಿನಿಮಾ, ಎರಡನೇ ಭಾಗಕ್ಕೆ ಬೇಡಿಕೆ ಹೆಚ್ಚಿಸಿತ್ತು. ಅಂತೆಯೇ ಕೊರೋನ ನಿರ್ಭಂಧಗಳನ್ನೆಲ್ಲ ಮುಗಿಸಿಕೊಂಡು 2022ರ ಏಪ್ರಿಲ್ 14ರಂದು ‘ಕೆಜಿಎಫ್ ಚಾಪ್ಟರ್ 2’ ಬೆಳ್ಳಿತೆರೆ ಮೇಲೆ ಬಿಡುಗಡೆಯಾಯಿತು. ಮುಗಿಲಿನೆತ್ತರದ ನಿರೀಕ್ಷೆ ಇದ್ದ ಈ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಕೂಡ ಅಷ್ಟೇ ದೊಡ್ಡದಾಗಿತ್ತು. ಎಲ್ಲೆಲ್ಲೂ ಹೌಸ್ ಫುಲ್ ಬೋರ್ಡ್ ಹಾಕಿಕೊಂಡು ದೇಶ-ವಿದೇಶ ಎನ್ನದೇ ಎಲ್ಲೆಡೆ ಯಶಸ್ವಿ ಪ್ರದರ್ಶನ ಪಡೆಯುತ್ತಾ, ಸುಮಾರು ಒಂದು ಸಾವಿರದ ಮುನ್ನೂರು ಕೋಟಿಗಳ ಗಳಿಕೆಯೊಂದಿಗೆ ತನ್ನ ಥಿಯೇಟರ್ ಓಟವನ್ನು ಮುಗಿಸಿತ್ತು ಚಿತ್ರ. ಸದ್ಯ ಚಾಪ್ಟರ್ 2 ಬಿಡುಗಡೆಯಾಗಿ ನೂರು ದಿನಗಳು ಕಳೆದಿವೆ. ಚಿತ್ರಮಂದಿರಗಳ ನಂತರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾ ಇನ್ನು ಕೂಡ ಸದ್ದು ಕಡಿಮೆ ಮಾಡಿಲ್ಲ. ನೂರು ದಿನಗಳ ಸಂಭ್ರಮದಲ್ಲಿ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲಂಸ್’ ವಿಡಿಯೋ ಒಂದರ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರಶಾಂಗ್ ನೀಲ್ ಅವರ ಸೃಷ್ಟಿಯಲ್ಲಿ ಮೂಡಿಬಂದ ಈ ಸಿನಿಮಾ, ಅವರ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ರಾಕಿ ಭಾಯ್ ಆಗಿ ಪ್ರಪಂಚಕ್ಕೆ ಪರಿಚಯಿಸಿತ್ತು. ರವಿ ಬಸ್ರುರ್ ಅವರ ಮೈ ನವೀರೇಳಿಸುವ ಸಂಗೀತ, ಶಿವಕುಮಾರ್ ಅವರ ಸೆಟ್ ಗಳು, ಅನ್ಬರಿವು ಅವರ ಸಾಹಸಕಲೆ ಸಿನಿಮಾದಲ್ಲಿತ್ತು. ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮುಂತಾದ ಮೇರು ನಟರು ಸಿನಿಮಾದಲ್ಲಿದ್ದರು. ಬಿಡುಗಡೆಯಾಗಿ ನೂರು ದಿನಗಳು ಕಳೆದ ಮೇಲು ಸಹ ಒಟಿಟಿ ಪರದೆ ಮೇಲೆ ಸತತ ಪ್ರದರ್ಶನ ಕಾಣುತ್ತಿದೆ ನಮ್ಮ ಕನ್ನಡದ ಹೆಮ್ಮೆಯ ‘ಕೆಜಿಎಫ್ ಚಾಪ್ಟರ್ 2’.

ಕನ್ನಡದ ಹೆಮ್ಮೆಯ ಕೆಜಿಎಫ್ ಗೆ 100ದಿನಗಳ ಸಂಭ್ರಮ. Read More »

‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದಿಂದ ಬರುತ್ತಿವೆ ಹೊಸ-ಹೊಸ ಸುದ್ದಿಗಳು.

‘ನಟರಾಕ್ಷಸ’ ಡಾಲಿ ಧನಂಜಯ ಅವರು ಸದ್ಯ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವುದರ ಜೊತೆಗೆ ಈಗಾಗಲೇ ನಟಿಸಿ ಮುಗಿಸಿರುವ ಹಲವು ಸಿನಿಮಾಗಳ ಬಿಡುಗಡೆಗೂ ಕಾಯುತ್ತಿದ್ದಾರೆ. ಅವುಗಳಲ್ಲಿ ಒಂದು ಕುಶಾಲ್ ಗೌಡ ಅವರ ನಿರ್ದೇಶನದ ‘ಒನ್ಸ್ ಅಪಾನ್ ಟೈಮ್ ಇನ್ ಜಮಾಲಿಗುಡ್ಡ’ ಕೂಡ ಒಂದು. ಇದೇ ಸೆಪ್ಟೆಂಬರ್ 9ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ, ತನ್ನ ಕಥೆಯ ಪಾತ್ರಗಳನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಿರುವುದು ಒಂದು ಕಡೆಯಾದರೆ, ಇದರ ಜೊತೆಗೆ ತನ್ನ ಮೊದಲ ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ತನ್ನ ವಿಭಿನ್ನ ಶೀರ್ಷಿಕೆ ಹಾಗು ಪಾತ್ರಗಳ ಮೂಲಕ ಈಗಾಗಲೇ ಜನರ ಮನಸೆಳೆದಿರೊ ಈ ಸಿನಿಮಾ ಸದ್ಯ ‘ಸಾಗಿದೆ’ ಎಂಬ ಹೊಸ ಹಾಡಿನ ಮೂಲಕ ಕನ್ನಡಿಗರನ್ನು ಮತ್ತಷ್ಟು ತನ್ನತ್ತ ಆಕರ್ಷಿಸಲು ಸಿದ್ಧವಾಗಿದೆ. ಧನಂಜಯ ಹಾಗು ಪುಟ್ಟ ಹುಡುಗಿಯ ಪಾತ್ರವಿರುವ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಘೋಷಣೆ ಮಾಡಿದ್ದು, ಈ ಎರಡು ಜೀವಗಳ ಜೀವನದ ಪಯಣ ಹೇಳುವ ಹಾಡು ಇದಾಗಿರಲಿದೆ. ಅರ್ಜುನ್ ಜನ್ಯ ಅವರ ಸಂಗೀತ ಹಾಗು ವಿಜಯ್ ಪ್ರಕಾಶ್ ಅವರು ಧ್ವನಿಯಾಗಿರುವ ಈ ಹಾಡು ಇದೇ ಜುಲೈ 22ರಂದು ಸಂಜೆ 6:03ಕ್ಕೆ ಬಿಡುಗಡೆಯಾಗುತ್ತಿದೆ. ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಸಿನಿಮಾದ ಆಡಿಯೋ ಹಕ್ಕುಗಳನ್ನು ಪ್ರಖ್ಯಾತ ‘ಸರಿಗಮ’ ಸಂಸ್ಥೆ ಕೊಂಡುಕೊಂಡಿದ್ದು, ‘ಸರಿಗಮ ಕನ್ನಡ’ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗುತ್ತಿದೆ. ‘ಹೀರೋಶಿಮಾ’ ಎಂಬ ಪಾತ್ರದಲ್ಲಿ ಡಾಲಿ ಅವರು ನಾಯಕರಾದರೆ, ನಾಯಕಿಯಾಗಿ ಅದಿತಿ ಪ್ರಭುದೇವ ಅವರು ‘ರುಕ್ಮಿಣಿ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ‘ನಾಗಸಾಕಿ’ ಪಾತ್ರದಲ್ಲಿ ಇತ್ತೀಚಿನ ಖ್ಯಾತ ನಟ ಯಶ್ ಶೆಟ್ಟಿ ಅವರು ನಟಿಸಿದ್ದಾರೆ. ಅವಳಿ ನಗರಗಳಾದ ‘ಹೀರೋಶಿಮಾ-ನಾಗಸಕಿ’ ಹೆಸರಿನಲ್ಲಿ ಅವಳಿ ಖೈದಿಗಳಾಗಿ ಡಾಲಿ ಹಾಗು ಯಶ್ ಶೆಟ್ಟಿಯವರ ಪಾತ್ರಗಲಿರುತ್ತವೆ. ಇನ್ನು ‘ಚುಕ್ಕಿ’ಎಂಬ ಪುಟ್ಟ ಹುಡುಗಿಯಾಗಿ ಪ್ರಾಣ್ಯ ಪಿ ರಾವ್, ‘ಮೊಹಮ್ಮದ್ ಶಕೀಲ್’ ಆಗಿ ಪ್ರಕಾಶ್ ಬೆಳವಾಡಿ ಅವರು, ‘ಪಾಯಲ್’ ಆಗಿ ಭಾವನ ರಾಮಣ್ಣ ಅವರು, ‘ಬಾಳೆ ಗೌಡ’ನಾಗಿ ನಂದ ಗೋಪಾಲ್ ಹಾಗು ‘ಪುಟ್ಲಿಂಗ’ನಾಗಿ ಸಂತೋಷ್ ತೆರೆಮೇಲೆ ಬರಲಿದ್ದಾರೆ. ತನ್ನ ವಿಭಿನ್ನ ಶೀರ್ಷಿಕೆ, ಹಾಗು ವಿಭಿನ್ನ ಪಾತ್ರಗಳಿಂದಾಗಿ ಎಲ್ಲರ ಗಮನ ಸೆಳೆದಿರೋ ಈ ಸಿನಿಮಾ ಸೆಪ್ಟೆಂಬರ್ 9ರಿಂದ ಬೆಳ್ಳಿತೆರೆ ಏರುತ್ತಿದೆ.

‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದಿಂದ ಬರುತ್ತಿವೆ ಹೊಸ-ಹೊಸ ಸುದ್ದಿಗಳು. Read More »

ನೆರೆರಾಜ್ಯದಲ್ಲೂ ಆರಂಭವಾಯ್ತು ಅಪ್ಪು ಹೆಸರಿನ ಅವಾರ್ಡ್.

ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಮನ ಹಾಗು ಮನೆಗಳlli ದೇವರಾಗಿ ಉಳಿದುಕೊಂಡಿದ್ದಾರೆ. ಅವರ ಜೀವ ನಮ್ಮನ್ನಗಲಿ ಹೋದರು, ಎಂದೂ ಮಾಸದ ಅವರ ನಗು, ಶಿಖರದೆತ್ತರದ ಅವರ ವ್ಯಕ್ತಿತ್ವ ಎಂದೆಂದಿಗೂ ಅಜರಾಮರ. ಸದ್ಯ ಇದಕ್ಕೆ ಸಾಕ್ಷಿಯಾಗಿ ನಮ್ಮ ನೆರೆರಾಜ್ಯದಲ್ಲಿ ಅಪ್ಪು ಹೆಸರಿನ ಪ್ರಶಸ್ತಿಯೊಂದನ್ನು ನೀಡಲಾಗುತ್ತಿದೆ. ಅಪ್ಪು ಅವರ ಕೀರ್ತಿ ನಮ್ಮಲ್ಲಷ್ಟೇ ಅಲ್ಲದೇ ಹೊರರಾಜ್ಯಗಳಲ್ಲೂ ಜೀವಂತ ಎಂಬುದನ್ನು ಈ ಘಟನೆ ಸಾರಿ ಹೇಳುತ್ತಿದೆ. ತಮಿಳುನಾಡಿನ ಚಿತ್ರರಂಗದ ಉನ್ನತ ಪ್ರಶಸ್ತಿಯಾದ ‘ದಿ ಗಲ್ಲಾಟ ಕ್ರೌನ್-2022’ ರ ಪ್ರಧಾನ ಸಮಾರಂಭ ಇತ್ತೀಚಿಗಷ್ಟೇ ನಡೆದಿದೆ. ಈ ಪ್ರತಿಷ್ಟಿತ ಪ್ರಶಸ್ತಿಯಲ್ಲಿ ಅಪ್ಪು ಹೆಸರಿನ ಅವಾರ್ಡ್ ಒಂದನ್ನು ನೀಡಲು ಈ ಬಾರಿಯಿಂದ ಸಂಸ್ಥೆ ಆರಂಭ ಮಾಡಿದೆ. ‘ಪುನೀತ್ ರಾಜಕುಮಾರ್ ಸ್ಪೆಷಲ್ ಅಚೀವ್ಮೆಂಟ್’ ಎಂಬ ಹೆಸರಿನಲ್ಲಿ ಹೊಸ ಪ್ರಶಸ್ತಿಯೊಂದನ್ನು ನೀಡಲು ಶುರು ಮಾಡಿದ್ದು, ಮೊದಲ ಪ್ರಶಸ್ತಿಯನ್ನ ತಮಿಳಿನ ಖ್ಯಾತ ನಟ ಆರ್ಯ ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸ್ವತಃ ಅವರೇ ಪ್ರಶಸ್ತಿಯನ್ನು ಆರ್ಯ ಅವರಿಗೆ ಹಸ್ತಾಂತರಿಸಿದರು. ‘ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ, ಅಶ್ವಿನಿ ಅವರ ಕೈಯಲ್ಲಿ ಪ್ರಶsti ಪಡೆದದ್ದಕ್ಕೆ ಆರ್ಯ ಅವರು ಸಂತಸ ವ್ಯಕ್ತಪಡಿಸಿ, ಅಪ್ಪು ಅವರ ವ್ಯಕ್ತಿತ್ವವನ್ನು ಹಾಡಿಹೊಗಳಿದರು. “ಪುನೀತ್ ಅವರ ಸಾಧನೆ, ಅವರ ನಟನೆ, ನೃತ್ಯ, ಆಕ್ಷನ್ ಎನರ್ಜಿಗಳ ಲೆಕ್ಕದಲ್ಲಿ ನಾವು 5% ಕೂಡ ಇಲ್ಲ. ಇಡೀ ಚಿತ್ರರಂಗಕ್ಕೇ ಸಾಕಾಗುವಷ್ಟು ಶಕ್ತಿ ಅವರಲ್ಲಿತ್ತು. ಅವರ ಹೆಸರಿನ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಆರ್ಯ ಅವರು ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ, ಅದೇ ಸಮಾರಂಭದಲ್ಲಿ ಅಪ್ಪು ಅವರಿಗೂ ಒಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಯುವರತ್ನ’ ಸಿನಿಮಾದ ನಟನೆಗಾಗಿ ಅಪ್ಪು ಅವರಿಗೆ ಪ್ರಶಸ್ತಿ ನೀಡಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅವಾರ್ಡ್ ಅನ್ನು ಸ್ವೀಕರಿಸಿದರು.

ನೆರೆರಾಜ್ಯದಲ್ಲೂ ಆರಂಭವಾಯ್ತು ಅಪ್ಪು ಹೆಸರಿನ ಅವಾರ್ಡ್. Read More »

ಒಟಿಟಿಯಲ್ಲಿ ಪಾಠ ಹೇಳಲಿದ್ದಾರೆ ‘ಫಿಸಿಕ್ಸ್ ಟೀಚರ್’.

ಕನ್ನಡ ಚಿತ್ರರಂಗ ಮುಂದುವರಿಯುತ್ತಿದೆ. ವಿಭಿನ್ನ ರೀತಿಯ ಸಿನಿಮಾಗಳಿಗೆ ತವರಾಗುತ್ತಿದೆ. ದೊಡ್ಡ ಬಜೆಟ್ ನ ಪಾನ್-ಇಂಡಿಯನ್ ಸಿನಿಮಾಗಳಿಂದ ಹಿಡಿದು, ಸಣ್ಣ ಮಟ್ಟದ ಹೊಸ ವಿಚಾರಗಳನ್ನೊಳಗೊಂಡ ಸಿನಿಮಾಗಳ ವರೆಗೆ ಎಲ್ಲವೂ ನಮ್ಮಲ್ಲಿದೆ. ಇದೇ ರೀತಿಯ ಹೊಸ ರೀತಿಯ ಸಿನಿಮಾಗಳಲ್ಲಿ ಒಂದು ‘ಫಿಸಿಕ್ಸ್ ಟೀಚರ್’. ಚಿತ್ರಮಂದಿರಗಳಲ್ಲಿ ದೊಡ್ಡ ಯಶಸ್ಸನ್ನು ಕಾಣದೆ ಇದ್ದರೂ ಸಹ, ಸಿನಿವಿಮರ್ಶಕರ ಮೆಚ್ಚುಗೆ ಪಡೆದ ಈ ಸಿನಿಮಾ ಇದೀಗ ಒಟಿಟಿ ಪರದೆ ಕಡೆಗೆ ಹೊರಟಿದೆ. ಸುಮುಖ ಎಂಬ ಹೊಸ ಯುವಪ್ರತಿಭೆ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ವಿಜ್ಞಾನ ಹಾಗು ನಂಬಿಕೆಗಳ ನಡುವಿನ ಕಥೆಯನ್ನ ಹೇಳುವಂತದ್ದು. ಒಬ್ಬ ಫಿಸಿಕ್ಸ್ ಪಾಠ ಹೇಳುವ ಶಿಕ್ಷಕನ ಬದುಕಿನಲ್ಲಾಗುವ ಗೊಂದಲಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದೊಂದು ಸೈಕಾಲಜಿಕಲ್ ಥ್ರಿಲರ್ ಕಥೆ. ಇದೇ ಜುಲೈ 22ರಿಂದ ‘ಫಿಸಿಕ್ಸ್ ಟೀಚರ್’ ಸಿನಿಮಾ ‘ವೂಟ್ ಸೆಲೆಕ್ಟ್’ ಆಪ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಸುಮುಖ ಅವರು ನಾಯಕರಾದರೆ, ಪ್ರೇರಣಾ ಕಂಬಮ್ ಅವರು ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಜೊತೆಗೆ, ರಾಜೇಶ್ ನಟರಂಗ, ಮಂಡ್ಯ ರಮೇಶ್ ಮತ್ತು ಮುಂತಾದವರು ಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಲ್ಲೆಡೆ ಹೊಸತನವುಳ್ಳ ಸಿನಿಮಾ ಎಂದೂ ಪ್ರಶಂಸೆ ಪಡೆದ ಈ ಸಿನಿಮಾ ಇದೇ ಜುಲೈ 22ರಿಂದ ಕಿರುತೆರೆಯಲ್ಲಿ ತೆರೆಕಾಣಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು, ‘ವೂಟ್ ಸೆಲೆಕ್ಟ್’ ಆಪ್ ಮೂಲಕ ನೋಡಬಹುದಾಗಿದೆ.

ಒಟಿಟಿಯಲ್ಲಿ ಪಾಠ ಹೇಳಲಿದ್ದಾರೆ ‘ಫಿಸಿಕ್ಸ್ ಟೀಚರ್’. Read More »

‘ಜೇಮ್ಸ್’ ನಿರ್ದೇಶಕರ ಮುಂದಿನ ಸಿನಿಮಾ.

ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ಸೂಪರ್ ಹಿಟ್ ಆಗಿತ್ತು. ಅದರ ನಿರ್ಮಾಪಕರಾದ ಕಿಶೋರ್ ಪತಿಕೊಂಡ ಅವರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸುದ್ದಿ ನೀಡಿದ್ದರು. ರಾಜ್ ಕುಟುಂಬದ ಇನ್ನೊಂದು ಕುಡಿ ಧೀರನ್ ರಾಮಕುಮಾರ್ ಅವರ ಜೊತೆಗೆ ‘ಕಿಶೋರ್ ಸಿನಿಮಾಸ್’ ಮುಂದಿನ ಸಿನಿಮಾ ಮಾಡಲಿದೆ ಎಂದೂ ಘೋಷಣೆ ಮಾಡಿದ್ದರು. ಅಂತೆಯೇ ನಿರ್ದೇಶಕ ಚೇತನ್ ಕುಮಾರ್ ಅವರು ಮುಂದೆ ಯಾವ ಚಿತ್ರ, ಯಾರ ಜೊತೆ ಮಾಡಲಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಇತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚಂದನವನದಲ್ಲಿ ಸದ್ದು ಮಾಡುತ್ತಿರುವ ಹೊಸ ಯುವನಟ ಇಶಾನ್ ಅವರ ಜೊತೆಗೆ ಚೇತನ್ ಅವರು ಮುಂದಿನ ಸಿನಿಮಾ ಮಾಡಲಿದ್ದೇನೆ ಎಂದು ಘೋಷಿಸಿದ್ದಾರೆ. ಚೇತನ್ ಕುಮಾರ್ ಅವರು ಧ್ರುವ ಸರ್ಜ ನಟನೆಯ ‘ಬಹದ್ದೂರ್’ ಸಿನಿಮಾದ ಮೂಲಕ ಮೊದಲು ನಿರ್ದೇಶಕರಾದವರು. ಇಲ್ಲಿವರೆಗೆ ಅವರ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಕಮರ್ಷಿಯಲ್ ಆಕ್ಷನ್ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಇವರು, ಇದೀಗ ಮತ್ತದೇ ರೀತಿಯ ಸಿನಿಮಾ ಮಾಡುವ ಸಾಧ್ಯತೆಗಳಿವೆ. ‘ರೋಗ್’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಇಶಾನ್ ಅವರು, ಪವನ್ ಒಡೆಯರ್ ಅವರ ‘ರೇಮೋ’ ಸಿನಿಮಾದಲ್ಲೂ ನಾಯಕರಾಗಿ ನಟಿಸಿದ್ದಾರೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರೋ ‘ರೇಮೋ’ ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗೋ ಸಾಧ್ಯತೆಗಳಿವೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ. ಇದಷ್ಟೇ ಅಲ್ಲದೇ ತೆಲುಗಿನ ‘ಪರಂಪರ’ ಎಂಬ ವೆಬ್ ಸೀರೀಸ್ ನಲ್ಲೂ ಬಣ್ಣ ಹಚ್ಚಿದ್ದಾರೆ ಇಶಾನ್. ಸದ್ಯ ಇವರಿಬ್ಬರು ಒಂದುಗೂಡುತ್ತಿರುವುದು ನಿರೀಕ್ಷೆ ಹುಟ್ಟಿಸುವ ವಿಷಯವಾಗಿದೆ. “ಇಶಾನ್ ಅವರ ನಟನೆಯನ್ನು ‘ರೋಗ್’ ಸಿನಿಮಾದಲ್ಲಿ ಕಂಡೇ ಇಷ್ಟ ಪಟ್ಟಿದ್ದೆ. ಅವರೊಡನೆ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಈಗ ಅದು ಕಾರ್ಯೋನ್ಮುಖವಾಗುತ್ತಿದೆ. ಇಶಾನ್ ಗೆ ಒಬ್ಬ ಒಳ್ಳೆ ಆಕ್ಷನ್ ಹೀರೋ ಆಗೋ ಎಲ್ಲಾ ಸಾಧ್ಯತೆಗಳಿವೆ. ನಾವು ಮಾಡುತ್ತಿರೋ ಮುಂದಿನ ಸಿನಿಮಾ ಕೂಡ ಒಂದು ರೋಮ್ಯಾಂಟಿಕ್ ಆಕ್ಷನ್ ರೀತಿಯ ಕಥೆಯಾಗಿರಲಿದೆ. ‘ರೇಮೋ’ ಸಿನಿಮಾದ ಬಿಡುಗಡೆಯ ನಂತರ ಈ ಚಿತ್ರದ ಕೆಲಸಗಳು ಆರಂಭವಾಗಲಿವೆ. ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ” ಎನ್ನುತ್ತಾರೆ ಚೇತನ್ ಕುಮಾರ್.

‘ಜೇಮ್ಸ್’ ನಿರ್ದೇಶಕರ ಮುಂದಿನ ಸಿನಿಮಾ. Read More »

ಕನ್ನಡದಲ್ಲೂ ಬರುತ್ತಿದೆ ಆರ್ ಮಾಧವನ್ ಅವರ ‘ರಾಕೆಟ್ರಿ’.

ಭಾರತ ಚಿತ್ರರಂಗದ ಪ್ರಖ್ಯಾತ ನಟ, ಭಾಷೆಗಳ ಭೇದಭಾವವಿಲ್ಲದ ಅನೇಕ ಅಭಿಮಾನಿಗಳನ್ನು ಪಡೆದಿರುವ ನಟರಾದ ಆರ್ ಮಾಧವನ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಿನಿಮಾ ‘ರಾಕೆಟ್ರಿ’. ಭಾರತದ ಬಾಹ್ಯಕಾಶ ಸಂಸ್ಥೆ ‘ಇಸ್ರೋ’ನ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದಂತಹ ನಂಬಿ ನಾರಾಯಣ್ ಅವರ ಜೀವನದಾರಿತ ಈ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾದ ಒಟಿಟಿ ಬಿಡುಗಡೆಯ ದಿನಾಂಕ ಹೊರಬಿದ್ದಿದ್ದು, ಕಿರುತೆರೆಯ ಮೇಲೆ ಕನ್ನಡದಲ್ಲೂ ಬರುತ್ತಿದೆ ‘ರಾಕೆಟ್ರಿ’. ಸ್ವತಃ ಆರ್ ಮಾಧವನ್ ಅವರೇ ಬರೆದು, ನಿರ್ದೇಶಿಸಿ, ನಟಿಸಿರುವ ಈ ಸಿನಿಮಾವನ್ನು ನಿರ್ಮಾಣ ಮಾಡಿದವರು ಕೂಡ ಅವರೇ. ಮಾಧವನ್ ಅವರಿಗೆ ನಾಯಕಿಯಾಗಿ ಸಿಮ್ರಾನ್ ಬಣ್ಣ ಹಚ್ಚಿದ್ದಾರೆ. ಜುಲೈ 1ರಂದು ತೆರೆಕಂಡಂತಹ ಈ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮೂಲವಾಗಿ ತಮಿಳಿನಲ್ಲಿ ಸಿದ್ದವಾದ ಈ ಸಿನಿಮಾ ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಲ್ಲೂ ಬೆಳ್ಳಿಪರದೆಯೇರಿತ್ತು. ಇದೀಗ ಒಟಿಟಿ ಗೆ ಬರಲು ಸಿನಿಮಾ ಸಿದ್ದವಾಗಿದ್ದು, ಇದೇ ಜುಲೈ 26ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಲು ಸಿಗಲಿದೆ. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗು ಕನ್ನಡ ಭಾಷೆಗಳಲ್ಲೂ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ‘ರಾಕೆಟ್ರಿ’ ಸಿನಿಮಾವನ್ನು ನೋಡಲಾಗದೆ ಇದ್ದವರು, ಜುಲೈ 26ರಿಂದ ‘ಅಮೆಜಾನ್ ಪ್ರೈಮ್ ವಿಡಿಯೋ’ದಲ್ಲಿ ಅವರದೇ ಭಾಷೆಗಳಲ್ಲಿ ನೋಡಬಹುದಾಗಿದೆ.

ಕನ್ನಡದಲ್ಲೂ ಬರುತ್ತಿದೆ ಆರ್ ಮಾಧವನ್ ಅವರ ‘ರಾಕೆಟ್ರಿ’. Read More »

ರಾಷ್ಟ್ರಪ್ರಶಸ್ತಿ ಪ್ರಕಟ: ಕನ್ನಡದ ಎರಡು ಸಿನಿಮಾಗಳಿಗೆ ಪುರಸ್ಕಾರ.

ಭಾರತ ಚಿತ್ರರಂಗದ ಸಿನಿಮಾಗಳಿಗೆ ನಮ್ಮ ದೇಶದ ಮಟ್ಟದಲ್ಲಿ ದಕ್ಕುವಂತಹ ಅತೀ ಶ್ರೇಷ್ಠ ಪ್ರಶಸ್ತಿಯೆಂದರೆ ಅದು ‘ರಾಷ್ಟ್ರ ಪ್ರಶಸ್ತಿ’. ಸದ್ಯ 68ನೇ ರಾಷ್ಟ್ರಪ್ರಶಸ್ತಿಯ ವಿಜೇತರ ಪಟ್ಟಿ ಹೊರಬಿದ್ದಿದ್ದು, ಕನ್ನಡದ ಎರಡು ಸಿನಿಮಾಗಳು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ. ಸೂರ್ಯ ಅವರ ನಟನೆಯ ತಮಿಳಿನ ಪ್ರಖ್ಯಾತ ಸಿನಿಮಾ ‘ಸೂರರೈ ಪೋಟ್ರು’ ಈ ಬಾರಿ ಅತೀ ಹೆಚ್ಚು ಅವಾರ್ಡ್ ಗಳನ್ನು ತಮ್ಮದಾಗಿಸಿಕೊಂಡಿದೆ. ಸುಮಾರು ಮೂವತ್ತು ಭಾಷೆಗಳಿಂದ ಒಟ್ಟು, 305 ಸಿನಿಮಾಗಳನ್ನು ಪ್ರಶಸ್ತಿಯ ಪೈಪೋಟಿಗೆ ಪರಿಗಣಿಸಲಾಗಿತ್ತು. ಇದರಲ್ಲಿ ಅತ್ಯುತ್ತಮ ಪರಿಸರದ ಬಗೆಗಿನ ಚಿತ್ರ ಎಂದು ಸಂಚಾರಿ ವಿಜಯ್ ಅವರು ನಟಿಸಿರುವ ‘ತಲೆದಂಡ’ ಸಿನಿಮಾಗೆ ಪ್ರಶಸ್ತಿ ಘೋಷಿಸಲಾಗಿದೆ. ಅಲ್ಲದೇ ಕನ್ನಡದ ಅತ್ಯುತ್ತಮ ಚಿತ್ರ ಹಾಗು ಅತ್ಯುತ್ತಮ ಆತ್ಮಕತೆ ಎಂದು ‘ಡೊಳ್ಳು’ ಸಿನಿಮಾವನ್ನು ಪುರಸ್ಕರಿಸಿದ್ದಾರೆ. ಇನ್ನು 68ನೇ ಸಾಲಿನ ರಾಷ್ಟ್ರ ಪ್ರಶಸ್ತಿಗಳಲ್ಲಿ, ‘ಅತ್ಯುತ್ತಮ ನಟ’ ಎಂಬ ಬಿರುದನ್ನು ಇಬ್ಬರು ಹಚ್ಚಿಕೊಂಡಿದ್ದಾರೆ. ‘ಸೂರರೈ ಪೋಟ್ರು’ ಸಿನಿಮಾಗಾಗಿ ಸೂರ್ಯ ಹಾಗು ‘ತನ್ಹಾಜಿ’ ಸಿನಿಮಾಗಾಗಿ ಅಜಯ್ ದೇವಗನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇನ್ನು ಅತ್ತ್ಯುತ್ತಮ ನಿರ್ದೇಶಕರಾಗಿ ‘ಅಯ್ಯಪ್ಪನುಮ್ ಕೊಶಿಯುಮ್’ ಚಿತ್ರದ ಸಚ್ಚಿದಾನಂದ ಕೆ ಆರ್ ಅವರನ್ನು ಆರಿಸಲಾಯಿತು. ಇದಲ್ಲದೆ ಪ್ರಶಸ್ತಿಗೆ ಘೋಷಿತವಾದವರ ಪಟ್ಟಿ ಈ ಕೆಳಗಿನಂತಿದೆ: ಅತ್ಯುತ್ತಮ ಚಲನ ಚಿತ್ರ: ಸೂರರೈ ಪೋಟ್ರು (ತಮಿಳು) ಅತ್ಯುತ್ತಮ ಮನರಂಜನಾ ಚಿತ್ರ: ತಾನಾಜಿ: ದಿ ಅನ್‌ಸಂಗ್ ವಾರಿಯರ್ (ಹಿಂದಿ)3.ಅತ್ಯುತ್ತಮ ನಟ: ಸೂರ್ಯ( ಸೂರರೈ ಪೋಟ್ರು) (ತಮಿಳು), ಅಜಯ್ ದೇವಗನ್(ತಾನಾಜಿ: ದಿ ಅನ್‌ಸಂಗ್ ವಾರಿಯರ್) (ಹಿಂದಿ) ಅತ್ಯುತ್ತಮ ನಟಿ: ಅಪರ್ಣ ಬಾಲಮುರಳಿ ( ಸೂರರೈ ಪೋಟ್ರು) (ತಮಿಳು) ಅತ್ಯುತ್ತಮ ಚಿತ್ರಕಥೆ: ಸೂರರೈ ಪೋಟ್ರು (ತಮಿಳು) ಅತ್ಯುತ್ತಮ ಪರಿಸರ ಸಂರಕ್ಷಣಾ ಸಿನಿಮಾ: ತಲೆದಂಡ (ಕನ್ನಡ) ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು (ಕನ್ನಡ)8.ಅತ್ಯುತ್ತಮ ಆತ್ಮಚರಿತ್ರೆ: ಡೊಳ್ಳು (ಕನ್ನಡ) ಅತ್ಯುತ್ತಮ ನಿರ್ದೇಶನ: ಸಚ್ಚಿದಾನಂದನ್ ಕೆಆರ್ (ಅಯ್ಯಪ್ಪನುಂ ಕೋಶಿಯುಂ) (ಮಲಯಾಳಂ) ಅತ್ಯುತ್ತಮ ಡೈಲಾಗ್: ಮಂಡೇಲಾ(ತಮಿಳು)

ರಾಷ್ಟ್ರಪ್ರಶಸ್ತಿ ಪ್ರಕಟ: ಕನ್ನಡದ ಎರಡು ಸಿನಿಮಾಗಳಿಗೆ ಪುರಸ್ಕಾರ. Read More »

ಎವೆರಿಥಿಂಗ್ ಈಸ್ ಪಾಸಿಬಲ್ ಅಂಥ ಹೇಳ್ತಿದ್ದಾರೆ ಖುಷಿ

ದಿಯಾ ಸಿನಿಮಾ ನೋಡಿದ ಪ್ರೇಕ್ಷಕರು ಅದರಲ್ಲಿ ಬರುವ ದಿಯಾ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ದಿಯಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಖುಷಿ ರವಿಗೆ ಆನಂತರ ಸಾಲು, ಸಾಲು ಆಫರ್ ಗಳು ಬರಲಾರಂಬಿಸಿದವು. ದಿಯಾ ಸಿನಿಮಾದಿಂದ ಖ್ಯಾತಿ ಪಡೆದ ಖುಷಿ ರವಿ ಈಗ ಕಿರು ಚಿತ್ರದಲ್ಲೂ ನಟಿಸಿದ್ದಾರೆ. ಎಂ.ಕೆ ಮಠ ನಟನೆಯ ‘ಎವೆರಿಥಿಂಗ್ ಈಸ್ ಪಾಸಿಬಲ್ ‘ ಎನ್ನುವ ಕಿರುಚಿತ್ರವನ್ನು ಮಾಡಿದ್ದಾರೆ. ರಂಗಭೂಮಿ ಕಲಾವಿದರು ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಜೀವನದಿ ಸೀರಿಯಲ್ ನಟ ಇಕ್ಷ್ವಾಕು ರಾಮ್ ಸಾರಥ್ಯದಲ್ಲಿ ಮತ್ತೊಂದು ಕಿರುಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ ರಹಸ್ತ ಎಂಬ ಕಿರುಚಿತ್ರ ಮಾಡಿದ್ದ ಇಕ್ಷ್ವಾಕು ರಾಮ್ ಈಗ ‘ಎವೆರಿಥಿಂಗ್ ಈಸ್ ಪಾಸಿಬಲ್’ ಎಂಬ ಕ್ಯಾಚಿ ಟೈಟಲ್ ನಡಿ ಸೈನ್ಸ್ ಫಿಕ್ಷನ್ ಕಿರುಚಿತ್ರವೊಂದನ್ನು ಮಾಡಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗೂ ಎಂಕೆ ಮಠ ನಟನೆಯ ‘ಎವೆರಿಥಿಂಗ್ ಈಸ್ ಪಾಸಿಬಲ್’ ಒಂದು ಸೈನ್ಸ್ ಫಿಕ್ಷನ್ ಕಿರುಚಿತ್ರ. ಈ ರೀತಿಯ ಪ್ರಯೋಗ ಹೊಸದಿನಿಸುವಂತಿರುವ ಇದರಲ್ಲಿ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಂದ ಹಾಗೆ ಈ ಕಿರುಚಿತ್ರದ ಲಾಂಚಿಂಗ್ ಕಾರ್ಯಕ್ರಮ ನೆರವೇರಿದೆ. ಲಾಂಚಿಂಗ್ನಲ್ಲಿ ಮಾತನಾಡಿದ ನಾಯಕಿ ಖುಷಿ ರವಿ ”ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾವಿದು. ಸೆಕೆಂಡ್ ಲಾಕ್ ಡೌನ್ ಟೈಮ್‌ನಲ್ಲಿ ಬಂದು ನಿರ್ದೇಶಕರು ಕಥೆ ಹೇಳಿದರು. ಇದೊಂದು ಶಾರ್ಟ್ ಮೂವೀ. ತುಂಬಾ ಅದ್ಭುತ ಕಾನ್ಸೆಪ್ಟ್ ಇದು. ಇವತ್ತಿನಿಂದ ನಮ್ಮ ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋದಲ್ಲಿ ಶಾರ್ಟ್ ಮೂವೀ ಸ್ಟ್ರೀಮ್ ಆಗ್ತಿದೆ. ಪ್ರತಿಯೊಬ್ಬರು ನೋಡಿ ಬೆಂಬಲ ಕೊಡಿ” ಎಂದರು. ಪಿಎಂಕೆ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿರುವ ಈ ಕಿರುಚಿತ್ರಕ್ಕೆ ಪೂರ್ಣಿಮಾ ಮನೋಜ್ ಹಾಗೂ ಯಶ್ವಿಕ್ ನಿರ್ಮಾಣ ಮಾಡಿದ್ದಾರೆ. ಎರಿಕ್ ವಿಜೆ ಛಾಯಾಗ್ರಾಹಣ ಹಾಗೂ ಸಂಕಲನ ಕಿರು ಚಿತ್ರಕ್ಕಿದೆ. ಸ್ವಾಮಿನಾಥನ್ ಆರ್ ಕೆ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಸಿನಿಮಾಕ್ಕಿದ್ದು ನಮ್ಮ ಫ್ಲಿಕ್ಸ್, ಅಮೇಜಾನ್, ಒಟಿಟಿಯಲ್ಲಿ ಈ ಕಿರುಚಿತ್ರ ರಿಲೀಸ್ ಆಗಿದೆ.

ಎವೆರಿಥಿಂಗ್ ಈಸ್ ಪಾಸಿಬಲ್ ಅಂಥ ಹೇಳ್ತಿದ್ದಾರೆ ಖುಷಿ Read More »

ಹೊಸ ನಟರನ್ನ ಸ್ವಾಗತಿಸಿದ ‘ಪರಮ್ ವಾಹ್’ ಕುಟುಂಬ.

ರಕ್ಷಿತ್ ಶೆಟ್ಟಿ ಅವರ ನೇತೃತ್ವದ ‘ಪರಮ್ ವಾಹ್ ಸ್ಟುಡಿಯೋಸ್’ ಕನ್ನಡಕ್ಕೆ ವಿಭಿನ್ನ ಸಿನಿಮಾಗಳನ್ನ ನೀಡಿರುವಂತಹ ಸಿನಿಮಾ ನಿರ್ಮಾಣ ಸಂಸ್ಥೆ. ಹಲವು ಹೊಸ ಪ್ರತಿಭೆಗಳಿಗೆ ಮೆಟ್ಟಿಲಾಗಿ, ಹೊಸ ರೀತಿಯ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ ಹೊಸದೊಂದು ಚಿತ್ರಕ್ಕೆ ‘ಪರಮ್ ವಾಹ್ ಸ್ಟುಡಿಯೋಸ್’ ಕೈ ಹಾಕಿದ್ದು ಚಿತ್ರದ ನಾಯಕ ಹಾಗು ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಬರವಣಿಗೆ ತಂಡವಾದ ‘ಸೆವೆನ್ ಓಡ್ಸ್’ ಹಲವು ಉತ್ತಮ ಕಥೆಗಳಿಗೆ ಕಾರಣವಾಗಿದ್ದಾರೆ. ಸದ್ಯ ಅದೇ ತಂಡದ ಸದಸ್ಯರು ಸಿನಿಮಾ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ಅದು ಕೂಡ ‘ಪರಮ್ ವಾಹ್ ಸ್ಟುಡಿಯೋಸ್’ ನಿರ್ಮಾಣದಲ್ಲೇ. ಇವರಲ್ಲೇ ಒಬ್ಬರಾದ ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮುಂದಿನ ಸಿನಿಮಾದ ನಾಯಕ-ನಾಯಕಿಯ ಅಧಿಕೃತ ಘೋಷಣೆಯನ್ನು ಇಂದು(ಜುಲೈ 17) ಚಿತ್ರತಂಡ ಮಾಡಿದೆ. ಯೋಗರಾಜ್ ಭಟ್ ಅವರ ನಿರ್ದೇಶನದ ‘ಪಂಚತಂತ್ರ’ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಟ ವಿಹಾನ್ ಅವರು ನಾಯಕರಾದರೆ, ‘ನಮ್ಮನೆ ಯುವರಾಣಿ’ ಧಾರವಾಹಿ ಮೂಲಕ ಕನ್ನಡಿಗರ ಮನೆಮಗಳಾಗಿರುವ ಅಂಕಿತಾ ಅಮರ್ ಅವರು ನಾಯಕಿಯಾಗಿ ಈ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಮುಂತಾದ ಅದ್ಭುತ ಕಥೆಗಳನ್ನು ಕೆತ್ತಿದ ‘ದಿ ಸೆವೆನ್ ಓಡ್ಸ್’ ತಂಡದ ಸದಸ್ಯರಲ್ಲೊಬ್ಬರಾದ ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದಲ್ಲಿ ಈ ಹೊಸ ಚಿತ್ರ ಮೂಡಿಬರಲಿದ್ದು, ‘ಪರಮ್ ವಾಹ್ ಸ್ಟುಡಿಯೋಸ್’ ನಿರ್ಮಾಣ ಮಾಡಲಿದೆ. ತಮ್ಮೆಲ್ಲ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೀರೋ-ಹೀರೋಯಿನ್ ಫೋಟೋ ಹಂಚಿಕೊಂಡು ‘ಪರಮ್ ವಾಹ್’ ಕುಟುಂಬಕ್ಕೆ ಸೇರಿಕೊಳ್ಳುತ್ತಿರುವ ಹೊಸ ನಟ-ನಟಿಯನ್ನು ಸ್ವಾಗತಿಸಿದ್ದಾರೆ ಚಿತ್ರತಂಡ.

ಹೊಸ ನಟರನ್ನ ಸ್ವಾಗತಿಸಿದ ‘ಪರಮ್ ವಾಹ್’ ಕುಟುಂಬ. Read More »

ಇಸ್ಮಾರ್ಟ್ ಜೋಡಿಯಾಗಿ ತೆರೆ ಮೇಲೆ ಬರಲಿರುವ ಅಂಬಾರಿ ಹೀರೋ

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಧಾರಾವಾಹಿ ಕೀರ್ತಿ ಕುಮಾರ ಹಾಡುಗಾರದ ಮೂಲಕ ಕಿರುತೆರೆಗೆ ಪುನರಾಗಮನ ಮಾಡುವ ಮೊದಲೇ, ಕನ್ನಡ ನಟ ವಿನಯ್ ಗೌಡ ಅವರು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಮುಂಬರುವ ರಿಯಾಲಿಟಿ ಶೋ ಇಸ್ಮಾರ್ಟ್ ಜೋಡಿಯಲ್ಲಿ ನಟ ಮತ್ತೊಮ್ಮೆ ತಮ್ಮ ಪತ್ನಿ ಅಕ್ಷತಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇಸ್ಮಾರ್ಟ್ ಜೋಡಿಯನ್ನು ಪ್ರಸ್ತುತಪಡಿಸಲಿರುವ ಸುವರ್ಣ ವಾಹಿನಿಯು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನ ಮೂಲಕ ಇದನ್ನು ಖಚಿತಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ದಂಪತಿಗೆ ಶುಭಾಶಯಗಳ ಪೂರವೇ ಹರಿದು ಬಂದಿದೆ. ತಮ್ಮ ಪ್ರೀತಿಯ ನಿಜ ಜೀವನದ ಜೋಡಿಯನ್ನು ನೋಡಲು ಅಭಿಮಾನಿಗಳೂ ಉತ್ಸುಕರಾಗಿದ್ದಾರೆ. ಅಂದಹಾಗೆ ಈ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು ವಿಜಯಶಾಲಿಗಳೂ ಆಗಿದ್ದರು. ಟಾಸ್ಕ್ ಸಮಯದಲ್ಲಿ ಇವರಿಬ್ಬರ ಕೆಮೆಸ್ಟ್ರಿ ಎಲ್ಲೆಡೆ ಮನೆಮಾತಾಗಿತ್ತು. ವೈಯಕ್ತಿಕ ಜೀವನದಲ್ಲಿ ವಿನಯ್ ಗೌಡ ಮತ್ತು ಅಕ್ಷತಾ ರಿಷಿ ಎಂಬ ಹುಡುಗನ ಹೆತ್ತವರೂ ಹೌದು. ಹೊಸ ಜೋಡಿ ಆಧಾರಿತ ರಿಯಾಲಿಟಿ ಶೋ ಇದೇ ಶನಿವಾರದಿಂದ ಶುರುವಾಗಿದ್ದು ಹಲವು ವಿವಿಧತೆಯಿಂದ ಕೂಡಿರಲಿದೆ. ರಿಯಾಲಿಟಿ ಶೋ ಗಾಗಿ ಕನ್ನಡ ಮನರಂಜನಾ ಉದ್ಯಮದ ಹಲವು ಸೆಲೆಬ್ರಿಟಿಗಳನ್ನು ಸಂಪರ್ಕಿಸಲಾಗಿದೆ. ಅಂದ ಹಾಗೆ ರಿಯಾಲಿಟಿ ಶೋನಲ್ಲಿ ನಟ ಗಣೇಶ್ ನಿರೂಪಕನಾಗಿರಲಿದ್ದಾರೆ. ಇದರಿಂದ ಕನ್ನಡ ಚಿತ್ರರಂಗದ ಎಲ್ಲರ ನೆಚ್ಚಿನ ಗೋಲ್ಡನ್ ಸ್ಟಾರ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇಸ್ಮಾರ್ಟ್ ಜೋಡಿಯಾಗಿ ತೆರೆ ಮೇಲೆ ಬರಲಿರುವ ಅಂಬಾರಿ ಹೀರೋ Read More »

Scroll to Top