Karnataka Bhagya

ಕರ್ನಾಟಕ ಭಾಗ್ಯ ವಿಶೇಷ

ಮನೆಮನೆಗೆ ರಾಮನ ಸವಾರಿ

ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ರಾಮನ ಸವಾರಿ” ಶೀಘ್ರದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕೆ ಶಿವರುದ್ರಯ್ಯ ನಿರ್ದೇಶನದ ಈ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಎರಡನೇ ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ಬಾಲನಟ ಪ್ರಶಸ್ತಿ ಗೆದ್ದುಕೊಂಡಿತ್ತು. ಗ್ರಾಮೀಣ ಭಾಗದ ಸೊಗಡು ಹೊಂದಿರುವ ಈ ಚಿತ್ರ ರಾಮ ಎಂಬ ಯುವಕನ ಪಯಣವನ್ನು ಹೊಂದಿದೆ. ತಂದೆಯಿಂದ ದೂರವಾಗಿ ತನ್ನ ತಾಯಿ ಹಾಗೂ ಅಜ್ಜ ಅಜ್ಜಿಯರೊಂದಿಗೆ ನೆಲೆಸಿರುತ್ತಾನೆ. ರಾಮ ತನ್ನ ಬೇರ್ಪಟ್ಟಿರುವ ತಂದೆ ತಾಯಿಗಳಿಗೆ ಹೇಗೆ ಸೇತುವೆ ಆಗುತ್ತಾನೆ ಎಂಬುದೇ ಕಥೆಯ ಸಾರವಾಗಿದೆ. ಇದು ಕೆ. ಸದಾಶಿವ ಬರೆದ ಸಣ್ಣಕಥೆಯಾಗಿದ್ದು “ರಾಮನ ಸವಾರಿ ಸಂತೆಗೆ ಹೋದದ್ದು” ಎಂಬ ಶೀರ್ಷಿಕೆ ಹೊಂದಿದೆ. ಕೆ ಶಿವರುದ್ರಯ್ಯ ನಿರ್ದೇಶನದ ಈ ಚಿತ್ರದಲ್ಲಿ ರಾಜೇಶ್ ನಟರಂಗ, ಸೋನು ಗೌಡ, ಸುಧಾ ಬೆಳವಾಡಿ ಹಾಗೂ ಮಾಸ್ಟರ್ ಆರೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ನಾರಾಯಣ್, ಶೃಂಗೇರಿ ರಾಮಣ್ಣ ಹಾಗೂ ಗುಂಡುರಾಜ್ ಮುರಳಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ರಾಜೇಶ್ ನಟರಂಗ ಸಿನಿಮಾದ ಬಗ್ಗೆ ಮಾತನಾಡಿದ್ದು ” ಅದಾಗಲೇ ಜನ ಮೆಚ್ಚಿರುವ ಸಣ್ಣ ಕಥೆಯನ್ನು ಸಿನಿಮಾ ಮಾಡಲು ಹೊರಟಾಗ ಅಭಿಮಾನಿಗಳ ನಿರೀಕ್ಷೆ ಈಡೇರಿಸಲು ತುಂಬಾ ಒತ್ತಡ ಇತ್ತು. ರಾಮನ ಸವಾರಿ ಸಿನಿಮಾದ ಭಾಗವಾಗಿರುವುದು ಉತ್ತಮ ಅನುಭವ ನೀಡಿದೆ. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಕಥೆ ತುಂಬಾ ಜನರನ್ನು ತಲುಪುತ್ತಿರುವುದಕ್ಕೆ ಉತ್ಸುಕನಾಗಿದ್ದೇನೆ” ಎಂದಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ಸೋನು ಗೌಡ ಮಾತನಾಡಿ ” ರಾಮನ ಸವಾರಿ ನನ್ನ ಕೆರಿಯರ್ ನ ಮೆಟ್ಟಿಲು ಎಂದು ಸಾಬೀತು ಮಾಡಿದೆ. ನಟಿಯಾಗಿ ನಾನು ಸೆಟ್ ನಲ್ಲಿ ತುಂಬಾ ಕಲಿತಿದ್ದೇನೆ. ಇಂತಹ ಸಂಕೀರ್ಣ ಪಾತ್ರಕ್ಕೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಕೆ ಶಿವರುದ್ರಯ್ಯ ಸರ್ ಅವರಿಗೆ ಕೃತಜ್ಞತೆ ಹೇಳುತ್ತೇನೆ.ಸಿನಿಮಾ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂದು ಭರವಸೆ ಇದೆ” ಎಂದಿದ್ದಾರೆ. ಈ ಸಿನಿಮಾದ ನಿರ್ದೇಶಕ ಕೆ ಶಿವರುದ್ರಯ್ಯ ” ಈ ಸಮಕಾಲೀನ ಸಂದರ್ಭದಲ್ಲಿ ಈ ಕಥೆ ತಾಜಾ ಗಾಳಿಯ ಉಸಿರಾಟದಂತಿದೆ. ಈ ಸಿನಿಮಾ ಹೃದಯ ಕಲಕುವ ಕ್ಷಣಗಳಿಂದ ಹೃದಯಕ್ಕೆ ಚಿವುಟುತ್ತದೆ ಆದರೆ ನಗುವನ್ನೂ ತರಿಸುತ್ತದೆ. ಈ ಸಿನಿಮಾದ ಕಥೆ ದೇಶದಲ್ಲಿ ನಡೆಯುತ್ತಿರುವ ಹಲವು ಕುಟುಂಬಗಳ ಕಥೆಯಾಗಿದ್ದು ವೀಕ್ಷಕರ ಮನ ಗೆಲ್ಲುತ್ತದೆ. ರಾಮನ ಸವಾರಿ ಸಂತೆಗೆ ಹೋದದ್ದು ಸಣ್ಣ ಕಥೆಯ ಅಭಿಮಾನಿ ನಾನು. ಇದನ್ನು ಸಿನಿಮಾ ಮಾಡಿರುವುದು ನನಗೆ ನಿಜವಾಗಿಯೂ ಗೌರವವಾಗಿದೆ” ಎಂದಿದ್ದಾರೆ.

ಮನೆಮನೆಗೆ ರಾಮನ ಸವಾರಿ Read More »

ಗ್ಯಾಂಗ್ ಸ್ಟರ್ ಆಗಿ ಬರಲಿದ್ದಾರೆ ಆದಿತ್ಯ

ತುಂಬಾ ದಿನಗಳ ನಂತರ ನಟ ಆದಿತ್ಯ ವೀರ ಕಂಬಳ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಆದಿತ್ಯ ಅವರ ತಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತುಳುನಾಡಿನ ಖ್ಯಾತ ಕಂಬಳದ ಕುರಿತು ಆಗಿದೆ.ಮಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿರುವ ಆದಿತ್ಯ ಪಾತ್ರದ ಬಗ್ಗೆ ಹೇಳಿದ್ದಾರೆ. “ನಾನು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸೆಕೆಂಡ್ ಹಾಫ್ ನಲ್ಲಿ ಈ ಪಾತ್ರಕ್ಕೆ ಮಹತ್ವ ದೊರೆಯಲಿದೆ. ಕಂಬಳ ತುಳುನಾಡಿನ ಪ್ರಮುಖ ಭಾಗವಾಗಿದೆ ಎಂದು ನಂಬಿರುವ ಕಂಬಳಕ್ಕೆ ಪ್ರೋತ್ಸಾಹ ನೀಡುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾನಿಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನ್ನ ಪಾತ್ರ ಹಲವು ಭಾವನೆಗಳನ್ನು ಹೊಂದಿದೆ. ನನ್ನ ಲುಕ್ ನ್ನು ಮೇ ತಿಂಗಳ ಮೊದಲ ವಾರದಲ್ಲಿ ನಿರ್ದೇಶಕರು ಬಹಿರಂಗ ಪಡಿಸಲಿದ್ದಾರೆ.” ಎಂದಿದ್ದಾರೆ. ಮಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿರುವುದಕ್ಕೆ ಉತ್ಸುಕರಾಗಿರುವ ಆದಿತ್ಯ “ಜನರು ನಮಗೆ ತುಂಬಾ ಪ್ರೀತಿ ತೋರುತ್ತಿದ್ದಾರೆ. ಅವರ ಹೃದಯಕ್ಕೆ ಹತ್ತಿರವಾದ ವಿಚಾರವನ್ನು ನಾವು ಮುಟ್ಟಿದ್ದೇವೆ ಎಂದು ಅವರಿಗೆ ತಿಳಿದಿದೆ” ಎಂದಿದ್ದಾರೆ. ತಂದೆಯ ನಿರ್ದೇಶನದಲ್ಲಿ ನಟಿಸುತ್ತಿರುವ ಆದಿತ್ಯ “ನಾವಿಬ್ಬರೂ ಸಂಪೂರ್ಣ ವೃತ್ತಿಪರರು. ಅವರು ಈ ನೌಕೆಯ ಕ್ಯಾಪ್ಟನ್. ನಟನಾಗಿ ನಾನು ಅವರು ಹೇಗೆ ನಿರೀಕ್ಷೆ ಮಾಡುತ್ತಾರೋ ಹಾಗೆ ಮಾಡುತ್ತೇನೆ” ಎಂದಿದ್ದಾರೆ. ಸದ್ಯ ಪಾತ್ರಗಳ ವಿಚಾರದಲ್ಲಿ ಚೂಸಿಯಾಗಿರುವ ಆದಿತ್ಯ “ಕೆಜಿಎಫ್ ನಂತಹ ಸಿನಿಮಾಗಳಿಂದ ಕನ್ನಡ ಸಿನಿಮಾ ಬಗ್ಗೆ ಪ್ಯಾರಾಮೀಟರ್ ಸೆಟ್ ಆಗಿದೆ. ಹೀಗಾಗಿ ಪಾತ್ರಗಳ ವಿಷಯದಲ್ಲಿ ಜಾಗರೂಕತೆ ವಹಿಸಬೇಕು.ನಾನು ಹೊಸ ನಿರ್ದೇಶಕರ ಬಳಿ ಹಲವು ಪ್ರಾಜೆಕ್ಟ್ ಗಳ ಬಗ್ಗೆ ಚರ್ಚಿಸುತ್ತಿದ್ದೇನೆ. ಹಿಂದಿ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದೇನೆ” ಎಂದಿದ್ದಾರೆ.

ಗ್ಯಾಂಗ್ ಸ್ಟರ್ ಆಗಿ ಬರಲಿದ್ದಾರೆ ಆದಿತ್ಯ Read More »

ತೆಲುಗು ಸ್ಟಾರ್ ನೊಂದಿಗೆ ಕೈಜೋಡಿಸಿದ ‘777 ಚಾರ್ಲಿ’

ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತನ್ನ ಬಿಡುಗಡೆಯ ದಿನಾಂಕವನ್ನು ಹೊರಹಾಕಿದೆ. ಇದೇ ಜೂನ್ 10ರಂದು ದೇಶದಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪಾನ್ ಇಂಡಿಯನ್ ಸಿನಿಮಾ ಇದಾಗಿರಲಿದ್ದು, ಎಲ್ಲ ಭಾಷೆಗಳಲ್ಲೂ ಒಂದೇ ದಿನದ ಬಿಡುಗಡೆಗೆ ಚಿತ್ರತಂಡದಿಂದ ಭರದ ಸಿದ್ಧತೆ ಸಾಗಿದೆ. ಈ ನಡುವೆ ‘777 ಚಾರ್ಲಿ’ ಚಿತ್ರತಂಡ ತೆಲುಗಿನ ಸ್ಟಾರ್ ನಟರಾದ ರಾಣ ದಗ್ಗುಬಾಟಿ ಅವರ ಜೊತೆ ಕೈಜೋಡಿಸಿದೆ. ‘ಬಾಹುಬಲಿ’ ಚಿತ್ರದ ಬಲ್ಲಾಳದೇವ ಖ್ಯಾತಿಯ ರಾಣ ದಗ್ಗುಬಾಟಿ ‘777 ಚಾರ್ಲಿ’ ಚಿತ್ರದ ತೆಲುಗು ಭಾಷಾಂತರದ ಬಿಡುಗಡೆಯ ಜವಾಬ್ದಾರಿಯನ್ನ ಹೊರಲಿದ್ದಾರೆ. ರಾಣ ದಗ್ಗುಬಾಟಿ ಹಾಗು ‘ಸುರೇಶ್ ಪ್ರೊಡಕ್ಷನ್ಸ್’ ಚಿತ್ರದ ತೆಲುಗು ಭಾಷೆಯ ವಿತರಕರು(Distributors) ಆಗಿರಲಿದ್ದಾರೆ. ರಾಣ ದಗ್ಗುಬಾಟಿಯವರ ತಂದೆಯಾದ ಸುರೇಶ ದಗ್ಗುಬಾಟಿ ಮಾಲೀಕತ್ವದ ‘ಸುರೇಶ್ ಪ್ರೊಡಕ್ಷನ್ಸ್’ ಸಂಸ್ಥೆಯ ಸಹಾಯದೊಂದಿಗೆ ರಾಣ ‘777 ಚಾರ್ಲಿ’ಯೊಂದಿಗಿನ ಕೆಲಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಚಿತ್ರದ ಉಳಿದ ಭಾಷೆಗಳ ವಿತರಕರ ಮಾಹಿತಿಯನ್ನ ಚಿತ್ರತಂಡ ಈಗಾಗಲೇ ಹೊರಹಾಕಿದೆ. ಕನ್ನಡದಲ್ಲಿ ‘ಕೆ ಆರ್ ಜಿ ಸ್ಟುಡಿಯೋಸ್’ ಮತ್ತು ‘ಕೆ ವಿ ಎನ್ ಪ್ರೊಡಕ್ಷನ್ಸ್’, ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ಅವರ ‘ಸ್ಟೋನ್ ಬೆಂಚ್ ಫಿಲಂಸ್’, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ‘ಪೃಥ್ವಿರಾಜ್ ಪ್ರೊಡಕ್ಷನ್ಸ್’ ಚಿತ್ರವನ್ನ ವಿತರಣೆ ಮಾಡಲಿದ್ದಾರೆ. ಈ ಸಾಲಿಗೆ ಇದೀಗ ದಗ್ಗುಬಾಟಿಯವರ ‘ಸುರೇಶ ಪ್ರೊಡಕ್ಷನ್ಸ್’ ಸೇರಿ, ತೆಲುಗಿನಲ್ಲಿ ವಿತರಣೆ ಮಾಡಲಿದ್ದಾರೆ. ಕಿರಣ್ ರಾಜ್ ಕೆ ಅವರು ರಚಿಸಿ ನಿರ್ದೇಶನ ಮಾಡಿರುವಂತ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಟ್ ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ರಕ್ಷಿತ್ ಶೆಟ್ಟಿ ಹಾಗು ಜಿ ಎಸ್ ಗುಪ್ತ ಅವರು ಸೇರಿ ‘ಪರಮ್ ವಾಹ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಚಿತ್ರವನ್ನ ನಿರ್ಮಾಣ ಮಾಡಿದ್ದು, ನೋಬಿನ್ ಪೌಲ್ ಅವರ ಸಂಗೀತ ಚಿತ್ರದಲ್ಲಿರಲಿದೆ. ಜೂನ್ 10ರಂದು ತೆರೆಕಾಣಲಿರೋ, ಈ ನಾಯಿಯೊಂದಿಗಿನ ಜೀವಗಾಥೆ, ‘ವೂಟ್’ ಹಾಗು ಕಲರ್ಸ್ ಕನ್ನಡ ವಾಹಿನಿಗೆ ತನ್ನ ಡಿಜಿಟಲ್ ಹಕ್ಕುಗಳನ್ನು ಒಪ್ಪಿಸಿದೆ.

ತೆಲುಗು ಸ್ಟಾರ್ ನೊಂದಿಗೆ ಕೈಜೋಡಿಸಿದ ‘777 ಚಾರ್ಲಿ’ Read More »

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ

ಗಂಡ ಹೆಂಡತಿ ಸಿನಿಮಾದ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಸಂಜನಾ ಗಲ್ರಾನಿ ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುದ್ದು ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿರುವ ಸಂಜನಾ ಇತ್ತೀಚೆಗಷ್ಟೇ ಮೆಟರ್ನಿಟಿ ಫೋಟೋಶೂಟ್ ಕೂಡಾ ಮಾಡಿಸಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. “ನಾನು ಹದಿನೆಂಟು ವರ್ಷ ಆದಾಗಿನಿಂದ ನಗರಗಳ ನಡುವೆ ವಾಸಿಸುತ್ತಿದ್ದೇನೆ. ಐವತ್ತಕ್ಕೂ ಹೆಚ್ಚು ಸಿನಿಮಾ ಹಾಗೂ ಹಲವು ಟಿವಿ ಶೋಗಳು, ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಹಲವು ಇವೆಂಟ್ಸ್ ಹಾಗೂ ಉದ್ಘಾಟನೆ ಕಾರ್ಯಕ್ರಮಗಳು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನ ಇದು ನನಗೆ ರೂಢಿಯಾಗಿತ್ತು. 35ನೇ ವಯಸ್ಸಿನಲ್ಲಿ ಕೋವಿಡ್ ನಮ್ಮ ಬದುಕನ್ನು ಬದಲಾಯಿಸಿತು. ಫ್ಯಾಮಿಲಿ ಶುರು ಮಾಡಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ” ಎನ್ನುತ್ತಾರೆ ಸಂಜನಾ ಗಲ್ರಾನಿ. “ಮಾತೃತ್ವ ಅಳವಡಿಸಿಕೊಳ್ಳುವುದು ಎಂದರೆ ನನ್ನ ವೃತ್ತಿ, ದೇಹ, ದೈಹಿಕ ನೋಟವನ್ನು ಹಾಗೂ ಜೀವನವನ್ನು ಬದಿಗಿರಿಸುವುದು. ನಾನು 18 ಕೆಜಿ ತೂಕ ಹೆಚ್ಚಾಗಿದ್ದೇನೆ. ಕೆಲವೊಮ್ಮೆ ನನ್ನ ಮನಸು ಪ್ರಯಾಣ ಹಾಗೂ ಸಿನಿಮಾವನ್ನು ಬಯಸುತ್ತಿತ್ತು. ಆಗೆಲ್ಲಾ ಮನಸನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದೆ. ಪ್ಲಾಂಟಿಂಗ್ , ಕಾಂಪೋಸ್ಟಿಂಗ್ ಶುರು ಮಾಡಲು ನೆರೆಹೊರೆಯವರಿಗೆ ಪ್ರೋತ್ಸಾಹ ನೀಡುತ್ತಿದ್ದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದು ಈ ದಿನಗಳಲ್ಲಿ ಸಾಮಾನ್ಯವಾಗಿದೆ” ಎಂದು ಪ್ರೆಗ್ನಿನ್ಸಿ ದಿನಗಳ ಬಗ್ಗೆ ಹೇಳುತ್ತಾರೆ ಸಂಜನಾ. “ಈಗ ಒಂಭತ್ತು ತಿಂಗಳಿಗೆ ಪ್ರವೇಶಿಸಿದ್ದೇನೆ. ಎರಡು ಜಗತ್ತಿನ ಅತ್ಯುತ್ತಮವಾದದನ್ನು ಎಂಜಾಯ್ ಮಾಡುತ್ತಿದ್ದೇನೆ. ಹಿಂದೂ ಆಗಿ ಹುಟ್ಟಿ ಮುಸಲ್ಮಾನನನ್ನು ಮದುವೆಯಾಗಿದ್ದೇನೆ. ಸೀಮಂತವನ್ನು ಒಬ್ಬಟ್ಟು ಹಾಗೂ ಮಂಗಳೂರು ಸ್ಟೈಲ್ ನ ಸೀಫುಡ್ ನ ರೋಸ್ಟ್ ಹಾಗೂ ನನ್ನ ಇಷ್ಟದ ದಕ್ಷಿಣ ಭಾರತದ ಆಹಾರದ ಮೂಲಕ ಆಚರಿಸಿದ್ದೇನೆ. ರಂಜಾನ್ ನಂತರ ಪತಿಯ ಸಾಂಪ್ರದಾಯಿಕ ಮುಸ್ಲಿಂ ಶೈಲಿಯಲ್ಲಿ ಮಟನ್ ಬಿರಿಯಾನಿ ತಯಾರು ಮಾಡಲಿದ್ದೇವೆ” ಎಂದು ಖಾಸಗಿ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಸಂಜನಾ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ Read More »

ಮನೆಯಲ್ಲೇ ಕೂತು ನಮ್ಮ ಭಾಷೆಯಲ್ಲೇ ನೋಡಬಹುದು ‘ದಿ ಕಾಶ್ಮೀರ್ ಫೈಲ್ಸ್’

ಭಾರತ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’. ಪ್ರತಿಯೊಬ್ಬ ಪ್ರೇಕ್ಷಕನಲ್ಲಿದ್ದ ದೇಶಭಕ್ತಿಯನ್ನು ಹೊರಗೆಳೆದಿಟ್ಟ ಚಿತ್ರವಿದು. ಈ ಚಿತ್ರವನ್ನ ನೋಡುವವರಿಗೆ, ಟಿಕೆಟ್ ದರದಲ್ಲಿನ ಟ್ಯಾಕ್ಸ್ ಅನ್ನು ತೆಗೆದುಹಾಕಲಾಗಿತ್ತು. ಬಿಡುಗಡೆಯಾದ ಕೆಲವು ದಿನಗಳ ಕಾಲ ‘ಐ ಎಂ ಡಿ ಬಿ (IMDB)ಯಲ್ಲಿ ಹತ್ತಕ್ಕೆ ಹತ್ತು ಅಂಕಗಳನ್ನು ಪಡೆದು ಮೆರೆದಿದ್ದ ಚಿತ್ರ ಇದು. ಕರ್ನಾಟಕದ ಸಚಿವರಿಗೆ ಈ ಚಿತ್ರದ ವಿಶೇಷ ಶೋ ಒಂದನ್ನು ಏರ್ಪಡಿಸಲಾಗಿತ್ತು. ಪ್ರತಿಯೊಬ್ಬ ಭಾರತೀಯನ ಮನದೊಳಗು ಒಂದು ವಿಶೇಷ ಸ್ಥಾನವನ್ನ ಪಡೆದ ಈ ಚಿತ್ರ ಸದ್ಯ ಒಟಿಟಿ ಮೆಟ್ಟಿಲೇರಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರ ಬೆಂಬಲವನ್ನು ಮಾತ್ರವಲ್ಲ ಬಾಕ್ಸ್ ಆಫೀಸ್ ನಲ್ಲಿ ಅತ್ಯುತ್ತಮ ಗಳಿಕೆಯನ್ನು ಕಂಡಿತ್ತು. ಸದ್ಯ ಈ ಚಿತ್ರ ಜೀ5(zee5)ನಲ್ಲಿ ಪ್ರದರ್ಶನಕ್ಕೆ ಸಿಗಲು ಸಿದ್ಧವಾಗಿದೆ. ಕೇವಲ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದಂತ ಈ ಸಿನಿಮಾ ಇದೀಗ ಕನ್ನಡ ಸೇರಿದಂತೆ ಒಟ್ಟು ನಾಲ್ಕು ಭಾಷೆಗಳಲ್ಲಿ ಜೀ5ನಲ್ಲಿ ನೋಡಲು ಸಿಗಲಿದೆ. ಇದೇ ಮೇ 13ಕ್ಕೆ ಜೀ5 ನಲ್ಲಿ ಕನ್ನಡ, ಹಿಂದಿ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್ ಫೈಲ್ಸ್’. ನಮ್ಮ ಭಾರತದ ಮುಕುಟಪ್ರಾಯವಾದ ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ನಡೆದಂತ ಬ್ರಾಹ್ಮಣರ ಸರಣಿ ಹತ್ಯಾಕಾಂಡದ ಸುತ್ತ ಹೆಣಿದುಕೊಂಡಿರುವ ಒಂದು ನೈಜಕತೆಯನ್ನ ತೆರೆಮೇಲೆ ಈ ಚಿತ್ರದ ಮೂಲಕ ತಂದಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಅನುಪಮ್ ಖೇರ್, ಮಿಥುನ್ ಚಕ್ರಬೋರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಮುಂತಾದವರು ನಟಿಸಿರುವ ಈ ಸಿನೆಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಬಿಡುಗಡೆಗೂ ಮುನ್ನವೇ ತನ್ನ ಟ್ರೈಲರ್ ಹಾಗು ಪ್ರೀಮಿಯರ್ ಶೋಗಳಿಂದ ಸಂಚಲನ ಮೂಡಿಸಿದ್ದ ಈ ಸಿನಿಮಾ ಇದೀಗ ಮೇ 13ರಿಂದ ಜೀ5ನಲ್ಲಿ ನೋಡಲು ಸಿಗಲಿದೆ.

ಮನೆಯಲ್ಲೇ ಕೂತು ನಮ್ಮ ಭಾಷೆಯಲ್ಲೇ ನೋಡಬಹುದು ‘ದಿ ಕಾಶ್ಮೀರ್ ಫೈಲ್ಸ್’ Read More »

ಬಿಡುಗಡೆಗೂ ಮುಂಚೆಯೇ ಗೆದ್ದಿರುವ ಚಾರ್ಲಿ

ನಟನೆ ನಿರ್ದೇಶನದಲ್ಲಿ ಸೈ ಎನಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಹ್ಯಾಂಡ್ ಸಮ್ ಹುಡುಗ. ವಿಭಿನ್ನ ಮ್ಯಾನರಿಸಂ , ಕಿಕ್ ನೀಡುವ ಡೈಲಾಗ್ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಅವರ ಹೊಸ ಸಿನಿಮಾ “ಚಾರ್ಲಿ 777” ಹೊಸ ನಿರೀಕ್ಷೆ ಮೂಡಿಸಿದ್ದು ಜೂನ್ 10ಕ್ಕೆ ರಿಲೀಸ್ ಆಗಲಿದೆ. ರಕ್ಷಿತ್ ಶೆಟ್ಟಿ ನಟಿಸಿರುವ ಕಿರಣ್ ರಾಜ್ ಕೆ ನಿರ್ದೇಶನದ ಈ ಚಿತ್ರದ ಕನ್ನಡ ಭಾಷೆಯ ಹಕ್ಕುಗಳು 21 ಕೋಟಿಗೆ ಕಲರ್ಸ್ ಕನ್ನಡದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಇದರ ಹೊರತಾಗಿ ಡಿಜಿಟಲ್ ಹಕ್ಕು ಕಲರ್ಸ್ ಸಂಸ್ಥೆಯ ಒಡೆತನದ ವೂಟ್ ಒಟಿಟಿಗೆ ದೊರಕಿದೆ. ಕನ್ನಡದ ಜೊತೆಗೆ ಹಿಂದಿ, ಮಲೆಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಈ ಸಿನಿಮಾ ಹಕ್ಕನ್ನು ಆಯಾ ಭಾಷೆಗಳ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ. ಚಾರ್ಲಿ 777 ಚಿತ್ರದ ಟ್ರೇಲರ್ ಮೇ 10ರಂದು ಬಿಡುಗಡೆ ಆಗಲಿದ್ದು ಈ ಸಿನಿಮಾದ ಹಾಡುಗಳು ಆಗಲೇ ಜನರ ಮನ ಗೆದ್ದಿದೆ. ನಾಯಿ ಹಾಗೂ ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಈ ಸಿನಿಮಾ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್ನು ಇದೆಲ್ಲದರ ನಡುವೆ ಕಲರ್ಸ್ ಕನ್ನಡ ವಾಹಿನಿಯ ಹೆಡ್ ಪರಮೇಶ್ವರ್ ಗುಂಡ್ಕಲ್ ಆಗಲೇ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳನ್ನು ಕೂಡಾ ಹಂಚಿಕೊಂಡಿದ್ದರು. ಶೀಘ್ರದಲ್ಲಿ ತೆರೆ ಮೇಲೆ ಬರಲಿರುವ ಚಾರ್ಲಿ 777 ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಬಿಡುಗಡೆಗೂ ಮುಂಚೆಯೇ ಗೆದ್ದಿರುವ ಚಾರ್ಲಿ Read More »

ಹಿಂದಿ ಇಂಗ್ಲೀಷ್ ಅಧಿಕೃತ ಭಾಷೆ ಹೊರತು ರಾಷ್ಟ್ರೀಯ ಭಾಷೆಯಲ್ಲ – ಸಿಂಪಲ್ ಸುಂದರಿ

ರಾಷ್ಟ್ರೀಯ ಭಾಷೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ನಟಿ ಶ್ವೇತಾ ಶ್ರೀವಾತ್ಸವ್ ಕನ್ನಡ ಭಾಷೆಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಕಲಾವಿದರಾಗಿ ನಮ್ಮ ಬ್ರಾಂಡ್, ಕೆಲಸದ ಮೂಲಕ ನಮ್ಮ ಭಾಷೆ, ರಾಷ್ಟ್ರೀಯತೆ , ಮಾನವೀಯತೆಯನ್ನು ಪ್ರತಿನಿಧಿಸುವ ಜವಾಬ್ದಾರಿಯಿದೆ. ಪ್ರತಿಯೊಂದು ಭಾಷೆಗೂ ಅವರ ಜನರು ಹೆಮ್ಮೆ ಪಡಲು ಅದರದ್ದೇ ಆದ ಶ್ರೀಮಂತ ಇತಿಹಾಸವಿದೆ. ನನ್ನ ಅಭಿಪ್ರಾಯದಂತೆ ನಮ್ಮ ವಿಚಾರಗಳು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ನಂಬುತ್ತೇನೆ” ಎನ್ನುತ್ತಾರೆ ಸಿಂಪಲ್ ಸುಂದರಿ. “ದೇಶದ ಎಲ್ಲಾ ಕಲಾವಿದರ ಮೇಲೆ ಗೌರವದ ಜೊತೆಗೆ ನಾನು ಸುದೀಪ್ ಸರ್ ಮಾತನ್ನು ಒಪ್ಪುತ್ತೇನೆ. ಭಾರತದಲ್ಲಿ ತಯಾರಾದ ಎಲ್ಲಾ ಸಿನಿಮಾಗಳನ್ನು ನಾವು ಭಾಷೆಯ ಹೊರತಾಗಿ ಮೆಚ್ಚುತ್ತೇವೆ. ಕೊನೆಗೆ ಇದು ಭಾರತದ ಸಿನಿಮಾ. ನಾವು ಎಲ್ಲಾ ಭಾಷೆಯನ್ನು ಹಾಗೂ ಸಂಸ್ಕೃತಿಯನ್ನು ಗೌರವಿಸುತ್ತೇವೆ. ಹಿಂದಿ ಹಾಗೂ ಇಂಗ್ಲೀಷ್ ನಮ್ಮ ದೇಶದ ಅಧಿಕೃತ ಭಾಷೆಗಳೇ ಹೊರತು ರಾಷ್ಟ್ರೀಯ ಭಾಷೆಗಳಲ್ಲ ಎಂಬುದನ್ನು ಒಪ್ಪಿಕೊಳ್ಳಲು ಇದು ಉತ್ತಮ ಸಮಯ” ಎಂದಿದ್ದಾರೆ.

ಹಿಂದಿ ಇಂಗ್ಲೀಷ್ ಅಧಿಕೃತ ಭಾಷೆ ಹೊರತು ರಾಷ್ಟ್ರೀಯ ಭಾಷೆಯಲ್ಲ – ಸಿಂಪಲ್ ಸುಂದರಿ Read More »

ಕಾಫಿ ವಿತ್ ಕರಣ್ ಶೋ ಮತ್ತೆ ಬರಲಿದ್ಯಾ???

ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಾಕ್ ಶೋ ಮತ್ತೊಮ್ಮೆ ಆರಂಭವಾಗಲಿದೆ. ಹಾಸ್ಯ, ತಮಾಷೆ, ವಿವಾದಗಳಿಗೆ ಹೆಸರಾಗಿದ್ದ ಈ ಶೋ ಬಗ್ಗೆ ವೀಕ್ಷಕರಿಗೆ ಮಿಶ್ರ ಭಾವವಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಈ ಶೋ ನಲ್ಲಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ಗಳು ಭಾಗವಹಿಸಲಿದ್ದಾರೆ. ಇದುವರೆಗೂ ಕಾಫಿ ವಿತ್ ಕರಣ್ ಶೋನ ಆರು ಸೀಸನ್ ಗಳು ಪ್ರಸಾರವಾಗಿದೆ. 2020ರಲ್ಲಿ ಈ ಶೋ ಅನ್ನು ಮುಂದೆ ನಿಲ್ಲಿಸಲಾಗುತ್ತದೆ ಎನ್ನಲಾಗಿತ್ತು. ಮುಂದೆ ತಾತ್ಕಾಲಿಕವಾಗಿ ಈ ಶೋ ನಿಂತಿದ್ದು ಆದಷ್ಟು ಶೀಘ್ರದಲ್ಲಿ ಹೊಸ ಸೀಸನ್ ಆರಂಭವಾಗುತ್ತಿದೆ. ಈ ಬಾರಿ ಹಲವು ಅತಿಥಿಗಳು ಬರಲಿದ್ದು ಕನ್ನಡತಿ ರಶ್ಮಿಕಾ ಮಂದಣ್ಣ ಅದರಲ್ಲಿ ಒಬ್ಬರಾಗಿರುವುದು ವಿಶೇಷ.ಇನ್ನು ಉಳಿದಂತೆ ಅಲಿಯಾ ಭಟ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಕತ್ರೀನಾ ಕೈಫ್, ಕಿಯಾರಾ ಅಡ್ವಾಣಿ ಮುಂತಾದವರು ಆಗಮಿಸಲಿದ್ದಾರೆ. ಇವರಲ್ಲದೇ ಬೇರೆ ಕಲಾವಿದರುಗಳು ಕೂಡಾ ಬರಲಿದ್ದು ಒಟ್ಟಿನಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವೇ ಸಿಗಲಿದೆ.

ಕಾಫಿ ವಿತ್ ಕರಣ್ ಶೋ ಮತ್ತೆ ಬರಲಿದ್ಯಾ??? Read More »

ಆ ಸಿನಿಮಾದಿಂದ ಕಾಜಲ್ ಔಟ್…ಕಾರಣ ಏನು ಗೊತ್ತಾ?

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಕಳೆದ 18 ವರ್ಷಗಳಿಂದ ಸಿನಿಮಾ ಮಾಡುತ್ತಿದ್ದಾರೆ. ಇಂತಿಪ್ಪ ಕಾಜಲ್ ಚಿರಂಜೀವಿ ಅವರ ಬಹು ನಿರೀಕ್ಷಿತ ಆಚಾರ್ಯ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಆದರೆ ಇದೀಗ ಅವರು ನಟಿಸಿರುವ ಪಾತ್ರವನ್ನು ಸಿನಿಮಾದಿಂದ ತೆಗೆಯಲಾಗಿದೆ. ಇದರ ಬಗ್ಗೆ ಮಾತನಾಡಿರುವ ನಿರ್ದೇಶಕ ಕೊರಟಾಲ ಶಿವ “ಕಮರ್ಷಿಯಲ್ ಸಿನಿಮಾ ಎಂದಾಗ ನಾಯಕನ ಜೊತೆ ನಾಯಕಿ ಇರುತ್ತಾರೆ. ಈ ಸಿನಿಮಾಗಾಗಿ ತಮಾಷೆಯಾದ ನಾಯಕಿ ಪಾತ್ರ ಬರೆದಿದ್ದೆ. ಹೀಗಾಗಿ ಕಾಜಲ್ ಅವರನ್ನು ಕರೆಸಿ ಮೂರ್ನಾಲ್ಕು ದಿನ ಶೂಟಿಂಗ್ ಮಾಡಿದ್ದೆವು. ಆದರೆ ಸಿನಿಮಾದ ಕಥೆಗೂ ನಾಯಕಿಯ ಪಾತ್ರಕ್ಕೂ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ ಕಾಜಲ್ ಪಾತ್ರ ತೆಗೆದುಬಿಟ್ಟೆ. ಕಾಜಲ್ ಅಗರವಾಲ್ ದೊಡ್ಡ ನಾಯಕಿ‌ ಅವರನ್ನು ಸುಮ್ಮನೆ ಯಾವುದೋ ಒಂದೆರಡು ದೃಶ್ಯಗಳಲ್ಲಿ ಬಳಸಿಕೊಳ್ಳುವುದು ಸರಿಯಲ್ಲ. ಕಥೆಯಲ್ಲಿ ಸರಿಯಾದ ತೂಕ ಇದ್ದಾಗ ಮಾತ್ರ ಅವರಂತಹ ನಾಯಕಿಯನ್ನು ಬಳಸಿಕೊಳ್ಳಬೇಕು” ಎಂದಿದ್ದಾರೆ. “ಈ ಸಿನಿಮಾದಲ್ಲಿ ಕಮರ್ಷಿಯಲ್ ಕಾರಣಕ್ಕೆ ಮಾತ್ರ ನಾಯಕಿ ಪಾತ್ರ ಸೃಷ್ಟಿಸಲಾಗಿತ್ತು. ಹೀಗಾಗಿ ನಾಯಕಿ ಪಾತ್ರ ಬೇಡ ಎಂದುಕೊಂಡೆವು. ಕಾಜಲ್ ಅವರನ್ನು ಸಿನಿಮಾದಿಂದ ಹೊರತೆಗೆಯುವ ಬಗ್ಗೆ ನಿರ್ಮಾಪಕರ ಬಳಿ ಚರ್ಚಿಸಿದೆ. ಅವರು ನಿಮಗೆ ಸೂಕ್ತ ಎನಿಸಿದರೆ ಎಲ್ಲರಿಗೂ ತಿಳಿಸಿ ಮುಂದುವರೆಯುವಂತೆ ಹೇಳಿದರು. ಸ್ವತಃ ಕಾಜಲ್ ಅವರಿಗೆ ವಿಷಯ ವಿವರಿಸಿದೆ. ನಿಮ್ಮನ್ನು ಕಾಮಿಡಿ ಪಾತ್ರದಲ್ಲಿ ತೋರಿಸಲು ಇಷ್ಟವಿಲ್ಲ ಎಂದೆ. ಕಾಜಲ್ ಕೂಡಾ ನನ್ನ ನಿರ್ಧಾರವನ್ನು ಒಪ್ಪಿಕೊಂಡು ಮುಂದೆ ಒಟ್ಟಿಗೆ ಕೆಲಸ ಮಾಡೋಣ ಎಂದರು” ಎಂದಿದ್ದಾರೆ ಕೊರಟಾಲ ಶಿವ. ಆದರೆ ಕೆಲ ಮೂಲಗಳ ಪ್ರಕಾರ ಕಾಜಲ್ ನಟಿಸಬೇಕಿದ್ದ ದೃಶ್ಯಗಳು ಹಾಗೆಯೆ ಉಳಿದಿದೆ. ಅದೇ ವೇಳೆ ಕಾಜಲ್ ಗರ್ಭಿಣಿಯಾದ ಕಾರಣ ಸಿನಿಮಾದಿಂದ ದೂರ ಉಳಿಯುವುದಾಗಿ ಹೇಳಿದ್ದರುಮ ಇಲ್ಲವಾದರೆ ಎರಡು ತಿಂಗಳು ಕಾಯಬೇಕು ಎಂದಿದ್ದರು. ಎರಡಕ್ಕೂ ಒಪ್ಪದ ಚಿತ್ರ ತಂಡ ಅವರನ್ನು ಸಿನಿಮಾದಿಂದ ಅವರ ಪಾತ್ರವನ್ನು ತೆಗೆದಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.

ಆ ಸಿನಿಮಾದಿಂದ ಕಾಜಲ್ ಔಟ್…ಕಾರಣ ಏನು ಗೊತ್ತಾ? Read More »

ಒಟಿಟಿಗೆ ಅಪ್ಪು ಅಪ್ಪಿದ ‘ಮ್ಯಾನ್ ಆಫ್ ದಿ ಮ್ಯಾಚ್’

‘ಪಿ ಆರ್ ಕೆ ಪ್ರೊಡಕ್ಷನ್ಸ್’ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಿದ್ದಂತೆ. ಹೊಸ ಪ್ರತಿಭೆಗಳ ಕಲೆಗೆ ಓಗೊಟ್ಟು, ಹೊಸ ರೀತಿಯ ಸಿನಿಮಾಗಳಿಗೆ ನಾಂದಿಯಾಗಬೇಕೆಂಬ ಗುರಿಯಿಂದ ಹುಟ್ಟಿಕೊಂಡ ಸಂಸ್ಥೆ ಈ ‘ಪಿ ಆರ್ ಕೆ ಪ್ರೊಡಕ್ಷನ್ಸ್’. ಅದರಂತೆಯೇ ಹಲವಾರು ಅದ್ಭುತ ಪ್ರತಿಭೆಗಳಿಂದ ಉತ್ತಮ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿದೆ ಈ ಸಂಸ್ಥೆ. ಇದೀಗ ಹೊಸ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋಗು ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಅವರಿಗೂ ಅಭೂತಪೂರ್ವ ಸಂಬಂಧವೊಂದಿದೆ. ಇದುವರೆಗೆ ಇವರಿಂದ ನಿರ್ಮಿತವಾದ ಚಿತ್ರಗಳಲ್ಲಿ ನಾಲ್ಕು ಚಿತ್ರಗಳು ನೇರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಕಂಡಿವೆ. ಇದೀಗ ಐದನೇ ಚಿತ್ರವೊಂದು ಇದೇ ದಾರಿಯಲ್ಲಿ ಸಾಗಲು ಸಿದ್ಧವಾಗಿದೆ. ‘ರಾಮ ರಾಮ ರೇ’, ಹಾಗು ‘ಒಂದಲ್ಲ ಎರಡಲ್ಲ’ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ಮುಂದಿನ ಚಿತ್ರ ‘ಮ್ಯಾನ್ ಒಫ್ ದಿ ಮ್ಯಾಚ್’ ‘ಪಿ ಆರ್ ಕೆ’ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಿದೆ. ಇದೇ ಮೇ 5ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೇರವಾಗಿ ಬಿಡುಗಡೆಯಾಗಲಿದೆ ಚಿತ್ರ. ಪುನೀತ್ ರಾಜಕುಮಾರ್ ಅವರು ಮೆಚ್ಚಿದಂತ ಯುವ ನಿರ್ದೇಶಕರಲ್ಲಿ ಸತ್ಯಪ್ರಕಾಶ್ ಅವರು ಕೂಡ ಒಬ್ಬರು. ಅವರ ‘ರಾಮ ರಾಮ ರೇ’, ‘ಒಂದಲ್ಲ ಎರಡಲ್ಲ’ ಚಿತ್ರಗಳನ್ನು ನೋಡಿ ಇಷ್ಟಪಟ್ಟ ಅಪ್ಪು, ತಮ್ಮ ಸಂಸ್ಥೆಯಡಿ ಸಿನೆಮಾ ಮಾಡುವಂತೆ ಸತ್ಯಪ್ರಕಾಶ್ ಗೆ ಅವಕಾಶ ನೀಡಿದ್ದರು. ಅದರಂತೆ ಸತ್ಯಪ್ರಕಾಶ್ ಮಾಡಿಕೊಂಡ ಕಥೆಯೇ ‘ಮ್ಯಾನ್ ಒಫ್ ದಿ ಮ್ಯಾಚ್’. ಕಥೆಯನ್ನ ಬಹುವಾಗಿ ಮೆಚ್ಚಿದ ಅಪ್ಪು ತಂಡಕ್ಕೆ ಶುಭಹಾರೈಸಿದ್ದರು. ‘ಮ್ಯಾನ್ ಒಫ್ ದಿ ಮ್ಯಾಚ್’ ಎಂಬ ತನ್ನ ಚೊಚ್ಚಲ ಚಿತ್ರ ನಿರ್ದೇಶಿಸಲು ಹೆಣಗಾಡುತ್ತಿರೋ ಯುವ ನಿರ್ದೇಶಕನೊಬ್ಬನ ಕಥೆ ಇದಾಗಿರಲಿದ್ದು, ಮೊದಲ ಬಾರಿ ಸತ್ಯ ಪ್ರಕಾಶ್ ಕಾಮಿಡಿಯನ್ನ ಪ್ರಯತ್ನಿಸಿದ್ದಾರೆ. ನಟರಾಜ್ ಎಸ್ ಭಟ್, ಧರ್ಮಣ್ಣ ಕಡೂರ್, ವೀಣಾ ಸುಂದರ್ ಹಾಗು ವಾಸುಕಿ ವೈಭವ್ ಚಿತ್ರದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ಒಟಿಟಿಗೆ ಅಪ್ಪು ಅಪ್ಪಿದ ‘ಮ್ಯಾನ್ ಆಫ್ ದಿ ಮ್ಯಾಚ್’ Read More »

Scroll to Top