Karnataka Bhagya

ಕರ್ನಾಟಕ ಭಾಗ್ಯ ವಿಶೇಷ

ಅಭಿಮಾನಿಗಳಿಗೆ ವಿಭಿನ್ನ ಖುಷಿ ನೀಡಿದ ಕಿಚ್ಚ ಸುದೀಪ್

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಸಿನಿಮಾ ಕಲಾವಿದರು ರೀಲ್ಸ್ ಮಾಡುವುದು ಹಳೆಯ ವಿಷಯ. ನಟಿಮಣಿಯರಂತೂ ಹೇಳುವುದು ಬೇಡ, ಆಗಾಗ ತಮ್ಮ ನೆಚ್ಚಿನ ಹಾಡಿಗೋ, ಡೈಲಾಗ್ ಗೋ ರೀಲ್ಸ್ ಮಾಡುತ್ತಿರುತ್ತಾರೆ. ಆದರೆ ನಟರ ವಿಷಯಕ್ಕೆ ಬಂದರೆ ಅವರು ಇದರಲ್ಲಿ ಕಾಣಿಸಿಕೊಳ್ಳವುದು ಕಡಿಮೆಯೇ ಅರ್ಥಾತ್ ಬಹಳ ಅಪರೂಪ. ಇದೀಗ ನಿಮ್ಮ ನೆಚ್ಚಿನ ಕಿಚ್ಚ ಸುದೀಪ್ ಅವರು ರೀಲ್ಸ್ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸುದೀಪ್ ರೀಲ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ಸಕತ್ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣ ಚಿತ್ರದ ‘ಗಡಂಗ್ ರಕ್ಕಮ್ಮ’ ಹಾಡಿಗೆ ರೀಲ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಅಂದ ಹಾಗೇ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ರೀಲ್ಸ್ ಮಾಡಿದ್ದು ಅದಕ್ಕೆ ಕಾರಣ ಜಾಕ್ವೆಲಿನ್ ಫರ್ನಾಂಡಿಸ್. ನಟಿ ಜಾಕ್ವೆಲಿನ್ ಕನ್ನಡದಲ್ಲಿ ಮಾತನಾಡಿದ ಕಾರಣ ಸುದೀಪ್ ರೀಲ್ಸ್ ಮಾಡಿದ್ದಾರೆ. ಜಾಕ್ವೆಲಿನ್ ವಿಡಿಯೋ ಮೂಲಕ ಕಿಚ್ಚ ಸುದೀಪ್‌ ಬಳಿ ರೀಲ್ಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಅವರು ಹೇಳಿದ ಕೂಡಲೇ ಸುದೀಪ್ ರೀಲ್ಸ್ ಮಾಡಲಿಲ್ಲ. ಸುದೀಪ್ ಅವರು ಜಾಕ್ವೆಲಿನ್ ಗೆ ಕನ್ನಡ ಹೇಳಿಕೊಟ್ಟಿದ್ದು, ಆಕೆ ಕನ್ನಡದಲ್ಲಿ ಮಾತನಾಡಿದ ಬಳಿಕ ರೀಲ್ಸ್ ಮಾಡಿದ್ದು. ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟನ ಮೊದಲ ರೀಲ್ಸ್ ನೋಡಿ ನೆಟ್ಟಿಗರು ಮಾತ್ರವಲ್ಲ ಸಿನಿಪ್ರಿಯರು ಬೆರಗಾಗಿದ್ದಾರೆ.

ಅಭಿಮಾನಿಗಳಿಗೆ ವಿಭಿನ್ನ ಖುಷಿ ನೀಡಿದ ಕಿಚ್ಚ ಸುದೀಪ್ Read More »

ತೃಪ್ತಿ ನೀಡುವ ಪಾತ್ರದಲ್ಲಷ್ಟೇ ನಟಿಸುತ್ತೇನೆ – ಅನುಷಾ ರೈ

ಅನುಷ ರೈ ಸ್ಯಾಂಡಲ್ ವುಡ್ ನ ಲೇಟೆಸ್ಟ್ ನಾಯಕಿ. ಈಗ ನೆರೆಯ ತೆಲುಗು ಚಿತ್ರರಂಗದ ಪ್ರವೇಶ ಮಾಡುತ್ತಿದ್ದಾರೆ. ಸಾಯಿ ಸುನಿಲ್ ನಿಮ್ಮಲ ನಿರ್ದೇಶನದ ನೆಲ್ಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಜೂನ್ ನಲ್ಲಿ ಆರಂಭವಾಗಲಿದೆ. ತನ್ನ ಹೊಸ ಪಯಣದ ಕುರಿತು ಕಾತರರಾಗಿರುವ ಅನುಷಾ ಮಾತನಾಡಿದ್ದಾರೆ. ” ಒಬ್ಬ ನಟಿಯಾಗಿ ಯಾವುದೇ ಇಂಡಸ್ಟ್ರಿಯಲ್ಲಿಯೂ ನಟಿಸಲು ಮುಕ್ತವಾಗಿದ್ದೇನೆ. ನಾನು ನಟಿಸುವ ಪಾತ್ರ ಮೊದಲು ನನಗೆ ತೃಪ್ತಿ ನೀಡಬೇಕು. ನಂತರ ಅದು ಪ್ರೇಕ್ಷಕರನ್ನು ತಲುಪುತ್ತದೆ. ನೆಲ್ಸನ್ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ರೊಮ್ಯಾಂಟಿಕ್ ಅಂಶಗಳಿದ್ದು ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ನಡೆಯುತ್ತದೆ. ನಂತರ ಕಥೆ ನಗರದತ್ತ ಸಾಗುತ್ತದೆ. ಜಯಂತ್ ಅವರೊಂದಿಗೆ ಕೆಲಸ ಮಾಡಲು ಕಾಯುತ್ತಿದ್ದೇನೆ‌. ಈ ಮೊದಲು ತೆಲುಗಿನಲ್ಲಿ ಸಿನಿಮಾ ಮಾಡಿದ್ದಾರೆ” ಎಂದಿದ್ದಾರೆ. ಪಾತ್ರದ ಬಗ್ಗೆ ಮಾತನಾಡಿರುವ ಅನುಷಾ “ದಿನನಿತ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಸಾಂಪ್ರದಾಯಿಕ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುತ್ತಾಳೆ. ಅವಳು ಡ್ಯಾನ್ಸರ್ ಆಗಿರುತ್ತಾಳೆ. ಕಾಲೇಜಿನ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲು ಪ್ರದರ್ಶನ ನೀಡುತ್ತಾಳೆ. ಎಲ್ಲರೂ ಅವಳನ್ನು ಇಷ್ಟ ಪಡುವಂತೆ ಮಾಡುತ್ತಾಳೆ.”ಎಂದಿದ್ದಾರೆ. ಪ್ರಿಯಾಂಕಾ ಉಪೇಂದ್ರ ಜೊತೆ ದಿ ವೈರಸ್ ಚಿತ್ರದಲ್ಲಿ ನಟಿಸಿರುವ ಅನುಷಾ “ನನ್ನ ಪಾತ್ರ ನೆಗೆಟಿವ್ ಶೇಡ್ ಹೊಂದಿದೆ. ಮೆಡಿಕಲ್ ಕಂಪೆನಿ ಹಾಗೂ ಸರ್ಕಾರಿ ಅಧಿಕಾರಿಗಳು ದುರಂತ ಘಟನೆಗಳನ್ನು ಹಣ ಮಾಡಲು ಬಳಸುತ್ತಾರೆ ಎಂಬುದನ್ನು ಈ ಚಿತ್ರ ಹೇಳುತ್ತದೆ.”ಎಂದಿದ್ದಾರೆ. ಇದಲ್ಲದೇ ವೀರಪುತ್ರ ಹಾಗೂ ಖಡಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ತೃಪ್ತಿ ನೀಡುವ ಪಾತ್ರದಲ್ಲಷ್ಟೇ ನಟಿಸುತ್ತೇನೆ – ಅನುಷಾ ರೈ Read More »

ಹತ್ತು ವರ್ಷದ ಬಳಿಕ ಸದ್ದು ಮಾಡುತ್ತಿರುವ ಲಕ್ಕಿ

ರಾಕಿಂಗ್ ಸ್ಟಾರ್ ಬಿರುದಾಕಿಂತ ಕನ್ನಡ ಸಿನಿಮಾರಂಗ ಹ್ಯಾಂಡ್ ಸಮ್ ನಟ ಯಶ್ ಅಭಿನಯದ ಲಕ್ಕಿ ಸಿನಿಮಾ ನೆನಪಿಲ್ಲದವರಾರು ಹೇಳಿ? ಸ್ಟೈಲಿಶ್ ಲುಕ್ ಮೂಲಕ ಲಕ್ಕಿಯಾಗಿ ಸಿನಿಪ್ರಿಯರ ಮನ ಗೆದ್ದ ಯಶ್ ಹೆಣ್ ಮಕ್ಕಳ ಮನ ಕದ್ದದ್ದು ಕೂಡಾ ಲಕ್ಕಿಯಾಗಿ! ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣದ, ಡಾ.ಸೂರಿ ನಿರ್ದೇಶನದ ಲಕ್ಕಿ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಹತ್ತು ವರ್ಷಗಳೇ ಕಳೆದಿದೆ. ಮೋಹಕ ತಾರೆ ರಮ್ಯಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೋಡಿಯ ಮೊದಲ ಸಿನಿಮಾ ಇದಾಗಿದ್ದು ನವಿರಾದ ಪ್ರೇಮಕತೆಯು ಸಿನಿಪ್ರಿಯರನ್ನು ರಂಜಿಸಿತ್ತು. ಮಾತ್ರವಲ್ಲ ಕೆಲವೊಂದು ಹಾಸ್ಯಮಯ ಸನ್ನಿವೇಶಗಳು ಕೂಡಾ ಇದರಲ್ಲಿದ್ದು ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡಿತ್ತು‌. ಅಂದ ಹಾಗೇ ಹತ್ತು ವರ್ಷದ ಹಿಂದೆ ರಿಲೀಸ್ ಆಗಿರುವ ಸಿನಿಮಾದ ಬಗ್ಗೆ ಈಗ್ಯಾಕೆ ಮಾತು ಎಂಬ ಕುತೂಹಲ ನಿಮ್ಮನ್ನು ಕಾಡುತ್ತಿರುವುದು ಸಹಜ. ಲಕ್ಕಿ ಸಿನಿಮಾ ಇದೀಗ ತೆಲುಗಿಗೆ ಡಬ್ ಆಗಲಿದೆ. ಅದು ಹತ್ತು ವರ್ಷದ ಬಳಿಕ! ಈಗಾಗಲೇ ಸಿನಿಮಾ ಡಬ್ ಆಗಿದ್ದು ರಿಲೀಸ್ ಗೆ ತಯಾರಾಗುತ್ತಿದೆ. ಇನ್ನು ಲಕ್ಕಿ ಸಿನಿಮಾ ತೆಲುಗುವಿನಲ್ಲಿ ಯಾವಾಗ ರಿಲೀಸ್ ಆಗುವ ದಿನಾಂಕ ಇನ್ನು ಕೂಡಾ ಬಹಿರಂಗವಾಗಿಲ್ಲ. ಕೆಜಿಎಫ್ ಚಾಪ್ಟರ್ 1 ಹಾಗೂ 2 ರ ಮೂಲಕ ಜಗತ್ತಿನಾದ್ಯಂತ ಮನೆ ಮಾತಾಗಿರುವ ರಾಕಿಂಗ್ ಸ್ಟಾರ್ ಅವರ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಯಶ್ ಅಭಿನಯದ ಚಿತ್ರಗಳು ಡಬ್ ಆದರೆ ಆಶ್ಚರ್ಯವೇನಿಲ್ಲ.

ಹತ್ತು ವರ್ಷದ ಬಳಿಕ ಸದ್ದು ಮಾಡುತ್ತಿರುವ ಲಕ್ಕಿ Read More »

ದೃಷ್ಟಿ ವಿಕಲಚೇತನ ವೇಶ್ಯೆಯ ಪಾತ್ರದಲ್ಲಿ ಮಯೂರಿ ಕ್ಯಾತರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿ ಆಗೊ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಯೂರಿ ಕ್ಯಾತರಿ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು. ಕೃಷ್ಣಲೀಲಾ ಸಿನಿಮಾದಲ್ಲಿ ಲೀಲಾ ಆಗಿ ನಟಿಸುವ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಹಾರಿದ ಮಯೂರಿ ಅಲ್ಲಿಯೂ ಸೈ ಎನಿಸಿಕೊಂಡ ಬೆಡಗಿ. ಮುಂದೆ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯ 2, 8MM ಬುಲೆಟ್, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಮಯೂರಿ ಮದುವೆ, ಮಗ ಹೀಗೆ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದರು. ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಮಯೂರಿ ಮತ್ತೆ ಮರಳಿ ಬಂದಿದ್ದಾರೆ. ಅವರು ನಾಯಕಿಯಾಗಿ ನಟಿಸಿರುವ ವ್ಹೀಲ್ ಚೇರ್ ರೋಮಿಯೋ ಸಿನಿಮಾ ಇಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಆಕೆ ದೃಷ್ಟಿ ವಿಕಲಚೇತನ ವೇಶ್ಯೆಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. “ವ್ಹೀಲ್ ಚೇರ್ ರೋಮಿಯೋ ನನ್ನ ಸಿನಿ ಬದುಕಿನಲ್ಲಿ ಭಿನ್ನವಾದ ಸಿನಿಮಾ ಹೌದು. ಸರಳವಾಗಿ ಹೇಳಬೇಕೆಂದರೆ ಇದೊಂದು ಪ್ರಯೋಗಾತ್ಮಕ ಸಿನಿಮಾ‌. ನಾನು ಇದರಲ್ಲಿ ವೇಶ್ಯೆಯಾಗಿ ನಟಿಸುತ್ತಿದ್ದೇನೆ. ಈಗಾಗಲೇ ಸುಮಾರು ಜನ ನೀವು ಯಾಕೆ ವೇಶ್ಯೆಯಾಗಿ ಅಭಿನಯಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರಿಗೆಲ್ಲಾ ಸಿನಿಮಾವೇ ಉತ್ತರ ನೀಡಲಿದೆ” ಎನ್ನುತ್ತಾರೆ ಮಯೂರಿ. “ಈ ಪಾತ್ರ ನಿಜವಾಗಿಯೂ ತುಂಬಾ ಚಾಲೆಂಜಿಗ್ ಆಗಿತ್ತು. ಕಣ್ಣಿಲ್ಲದ ಕುರುಡಿಯಂತೆ ನಟಿಸಬೇಕಾಗಿತ್ತು. ಅದು ಸವಾಲೇ ಸರಿ” ಎನ್ನುವ ಮಯೂರಿ “ನಮ್ಮ ಸಮಾಜದಲ್ಲಿ ವೇಶ್ಯೆ ಎಂಬ ಪದಕ್ಕೆ ಬೇರೆಯೇ ಆದ ಅರ್ಥವಿದೆ. ಯಾರೇ ಆಗಲಿ, ಇಷ್ಟಪಟ್ಟು ಈ ವೃತ್ತಿ ಖಂಡಿತಾ ಆಯ್ಕೆ ಮಾಡುವುದಿಲ್ಲ. ಅವರ ಆಯ್ಕೆಗೂ ಒಂದು ಕಾರಣ ಇದ್ದೇ ಇರುತ್ತದೆ. ಆ ಕಾರಣ ತಿಳಿದಾಗ ಅವರ ಮೇಲಿನ ನಮ್ಮ ಅಭಿಪ್ರಾಯ ಬದಲಾಗಬಹುದು” ಎಂಬುದು ಅವರ ಅಂಬೋಣ‌. ಮದುವೆ, ಮಗ ಎಂದು ಸಂಸಾರ ಸಾಗರದಲ್ಲಿ ಮುಳುಗಿ ಹೋಗಿದ್ದ ಮಯೂರಿ ಮತ್ತೆ ಬಣ್ಣದ ಲೋಕದತ್ತ ಮರಳುವ ನಿರ್ಧಾರ ಮಾಡಿದ್ದರು. ಕಾಕಾತಾಳೀಯ ಎಂಬಂತೆ ಆ ಸಮಯದಲ್ಲಿಯೇ ವ್ಹೀಲ್ ಚೇರ್ ರೊಮಿಯೋ ಬಿಡುಗಡೆಯಾಗುತ್ತಿದೆ.‌ ಒಟ್ಟಿನಲ್ಲಿ ಮಯೂರಿ ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಬ್ಯುಸಿಯಾಗುತ್ತಾರಾ ಅಲ್ಲ ಕಿರುತೆರೆಗೂ ಕಾಲಿಡುತ್ತಾರಾ ಎಂದು ಕಾದುನೋಡಬೇಕಾಗಿದೆ‌

ದೃಷ್ಟಿ ವಿಕಲಚೇತನ ವೇಶ್ಯೆಯ ಪಾತ್ರದಲ್ಲಿ ಮಯೂರಿ ಕ್ಯಾತರಿ Read More »

ಹರ್ಷಿಕಾ ಪೂಣಚ್ಚಗೆ ಅಭಿನಂದನೆ ಸಲ್ಲಿಸಿದ ಜೂಹಿ ಚಾವ್ಲಾ… ಯಾಕೆ ಗೊತ್ತಾ?

ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಸಿನಿಮಾಗಳ ಪೈಕಿ ಪ್ರೇಮಲೋಕವೂ ಒಂದು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಜೋಡಿಯಾಗಿ ಅಭಿನಯಿಸಿದ್ದ ಪ್ರೇಮಲೋಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿದ್ದು ಇದೀಗ ಇತಿಹಾಸ. ಸಿನಿಮಾ ಒಂದು ರೀತಿಯಲ್ಲಿ ಹಿಟ್ ಆದರೆ ಅದರ ಹಾಡುಗಳಂತೂ ಎವರ್ ಗ್ರೀನ್. ಈಗಲೂ ಪ್ರೇಮಲೋಕದ ಹಾಡುಗಳನ್ನು ಸಂಗೀತ ಪ್ರಿಯರು ಗುನುಗುನಿಸದೇ ಇರುವುದಿಲ್ಲ. ಅಷ್ಟರ ಮಟ್ಟಿಗೆ ಆ ಸಿನಿಮಾ, ಅದರ ಹಾಡುಗಳು ಜನಪ್ರಿಯತೆ ಪಡೆದಿತ್ತು. ಅಂದ ಹಾಗೇ ಈಗ್ಯಾಕೆ ಪ್ರೇಮಲೋಕದ ವಿಷಯ ಬಂತು ಅಂಥ ಅಂದುಕೊಂಡಿದ್ದೀರಾ? ಪ್ರೇಮಲೋಕದ ಹಾಡುಗಳ ಪೈಕಿ ಒಂದಾಗಿರುವ ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ ಎನ್ನುವ ಹಾಡನ್ನು ಮತ್ತೊಮ್ಮೆ ರಿಕ್ರಿಯೇಟ್ ಮಾಡಲಾಗುತ್ತಿದೆ. ಹೌದು, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಅವರ ನಟನೆಯ ಹೊಚ್ಚ ಹೊಸ ಸಿನಿಮಾ ತಾಯ್ತದಲ್ಲಿ ಪ್ರೇಮಲೋಕದ ನೋಡಮ್ಮ ಹುಡುಗಿ ಹಾಡನ್ನು ರಿಕ್ರಿಯೇಟ್ ಮಾಡಲಾಗುತ್ತಿದೆ. ಈಗಾಗಲೇ ಶೂಟಿಂಗ್ ಕೂಡಾ ಮಾಡಲಾಗುತ್ತಿದ್ದು ಅದರ ಚಿಕ್ಕ ತುಣುಕೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ ಮಂಜಿನ ನಗರಿ ಚೆಲುವೆ. ಮೇಕಿಂಗ್ ವಿಡಿಯೋವನ್ನು ಹಂಚಿಕೊಂಡಿರುವ ಹರ್ಷಿಕಾ ಪೂಣಚ್ಚ “ಪ್ರೇಮಲೋಕ ಮತ್ತೆ ಬರುತ್ತಿದೆ.. ತಾಯ್ತ ಸಿನಿಮಾದ ಮೂಲಕ. ಈ ಹಾಡಿನಲ್ಲಿ ನನಗೆ ಜೂಹಿ ಚಾವ್ಲಾ ಕಂಡರೆ ತುಂಬಾ ಇಷ್ಟ” ಎಂದು ಬರೆದುಕೊಂಡಿದ್ದಾರೆ. ಹರ್ಷಿಕಾ ಪೂಣಚ್ಚ ಅವರ ಪೋಸ್ಟ್ ಗೆ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಇಮೋಜಿ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೂಹಿ ಚಾವ್ಲಾ ಕಮೆಂಟ್ ಕಂಡ ಫಿದಾ ಆಗಿರುವ ಹರ್ಷಿಕಾ ಪೂಣಚ್ಚ “ನನ್ನ ದಿನವನ್ನು ನೀವು ಸಂತೋಷಗೊಳಿಸಿದ್ದೀರಿ” ಎಂದು ಮರುಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಪ್ರೇಮಲೋಕದ ರಿಕ್ರಿಯೇಟ್ ಹಾಡನ್ನು ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ‌

ಹರ್ಷಿಕಾ ಪೂಣಚ್ಚಗೆ ಅಭಿನಂದನೆ ಸಲ್ಲಿಸಿದ ಜೂಹಿ ಚಾವ್ಲಾ… ಯಾಕೆ ಗೊತ್ತಾ? Read More »

ಮದುವೆ ಪೋಟೋಗಳ ಮೂಲಕ ಸದ್ದು ಮಾಡಿದ ನಿನಾದ್ ಹರಿತ್ಸ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಯಕ ತ್ರಿಶೂಲ್ ಆಗಿ ಅಭಿನಯಿಸುತ್ತಿರುವ ನಿನಾದ್ ಹರಿತ್ಸ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳತಿ ರಮ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯ ನಂತರ ಈ ಜೋಡಿ ಬಹಳ ಸುಂದರವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಮುದ್ದು ಜೋಡಿಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಗುರು ಹಿರಿಯರ, ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಿನಾದ್ ಹಾಗೂ ರಮ್ಯಾ ಸದ್ದಿಲ್ಲದೆಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೇ ಮೇ 20ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇದೀಗ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ನಿನಾದ್ ಅವರು ಹಂಚಿಕೊಂಡಿರುವ ಪೋಟೋಶೂಟ್‌ ನಲ್ಲಿ ನಿನಾದ್ ಅವರು ಬಿಳಿ ಬಣ್ಣದ ಶೆರ್ವಾಜಿಯಲ್ಲಿ ಮಿಂಚಿದರೆ, ಮಡದಿ ರಮ್ಯಾ ತಿಳಿನೀಲಿ ಬಣ್ಣದ ಸೀರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಮದುವೆಯ ನಂತರ ಈ ಜೋಡಿ ಮಾಡಿಸಿಕೊಂಡಿರುವ ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನಾದ್ ಅವರು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದರೆ ಅವರ ಪತ್ನಿ ರಮ್ಯಾ ಸಿಎ ಆಗಿದ್ದಾರೆ. ಒಟ್ಟಿನಲ್ಲಿ ನವಜೀವನ ಶುರು ಮಾಡಿರುವ ಈ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮದುವೆ ಪೋಟೋಗಳ ಮೂಲಕ ಸದ್ದು ಮಾಡಿದ ನಿನಾದ್ ಹರಿತ್ಸ Read More »

ಹೊಸ ಜರ್ನಿ ಶುರು ಮಾಡಿದ ನಟ ರಕ್ಷ್

ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ ವಸಿಷ್ಠ ಆಗಿ ನಟಿಸುತ್ತಿರುವ ರಕ್ಷ್ ಅವರು ಪ್ರೊಡಕ್ಷನ್ ಹೌಸ್ ಶುರು ಮಾಡಿ ಒಂದು ವರುಷ ಕಳೆದಿದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ರಕ್ಷ್ ಸ್ಟುಡಿಯೋವೊಂದನ್ನು ಕೂಡಾ ಓಪನ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹೊಸ ಸ್ಟುಡಿಯೋವನ್ನು ಶಾಸ್ತ್ರೋಕ್ತವಾಗಿ ರಕ್ಷ್ ದಂಪತಿ ಉದ್ಘಾಟನೆ ಮಾಡಿದ್ದಾರೆ. ಗಟ್ಟಿ ಮೇಳ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿರುವ ರಕ್ಷ್ ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕರಾಗಿದ್ದರು. ಸದ್ಯ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಎನಿಸಿಕೊಂಡಿರುವ ಈ ಧಾರಾವಾಹಿಯ ಪ್ರತಿ ಸಂಚಿಕೆಯೂ ಕುತೂಹಲಕಾರಿಯಾಗಿ ಸಾಗುತ್ತಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಇನ್ನು ರಕ್ಷ್ ಅವರ ಸ್ಟುಡಿಯೋ ಉದ್ಘಾಟನೆ ಸಮಾರಂಭದಲ್ಲಿ ಕಿರುತೆರೆಯ ಹಲವು ಕಲಾವಿದರು ಹಾಗೂ ಸ್ನೇಹಿತರು ಭಾಗಿಯಾಗಿದ್ದಾರೆ. ಸ್ಟುಡಿಯೋ ಸಖತ್ ರಾಯಲ್ ಆಗಿದ್ದು ಗೋಲ್ಡನ್ ಮರೂನ್ ಕಲರ್ ನಲ್ಲಿ ಕಂಗೊಳಿಸುತ್ತಿದೆ. ಒಟ್ಟಿನಲ್ಲಿ ಬಣ್ಣದ ಬದುಕಿನಲ್ಲಿ ಬದುಕು ರೂಪಿಸಿಕೊಂಡಿರುವ ರಕ್ಷ್ ಅವರ ನೂತನ ಪ್ರಯತ್ನಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಹೊಸ ಜರ್ನಿ ಶುರು ಮಾಡಿದ ನಟ ರಕ್ಷ್ Read More »

‘ಕೆಜಿಎಫ್ ಚಾಪ್ಟರ್ 3’ಯಲ್ಲಿ ರಾಣ, ಹೃತಿಕ್ ರೋಷನ್!!!

‘ಕೆಜಿಎಫ್ ಚಾಪ್ಟರ್ 2’ ಸದ್ಯ ಪ್ರಪಂಚದ ಹಲವೆಡೆ ಚಿತ್ರಮಂದಿರಗಳನ್ನು ಆಳುತ್ತಿದೆ. ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತ, ಯಶಸ್ವಿಯಾಗಿ 50ನೇ ದಿನದ ಕಡೆಗೆ ಹೊರಟಿದೆ. ಚಾಪ್ಟರ್ 2 ನಂತರ ಚಾಪ್ಟರ್ 3 ಬರಲಿದೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿ ಅಭಿಮಾನಿಗಳಲ್ಲಿ ಸಂತಸ ಉಂಟುಮಾಡಿತ್ತು. ಈ ಮೂರನೇ ಅಧ್ಯಾಯದ ಬಗೆಗಿನ ಉತ್ಸಾಹ ಎಲ್ಲಿವರೆಗಿತ್ತೆಂದರೆ, ಅಭಿಮಾನಿಗಳು ಹೊಸ ಹೊಸ ಪೋಸ್ಟರ್, ಟೀಸರ್ ಹಾಗು ಟ್ರೈಲರ್ ಗಳನ್ನೂ ತಾವೇ ಎಡಿಟ್ ಮಾಡಿ ಬಿಡುಗಡೆಗೊಳಿಸುವಷ್ಟು. ಈ ಬಗೆಯ ‘ಫ್ಯಾನ್-ಮೇಡ್’ ವಿಡಿಯೋಗಳು ಸದ್ಯ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿವೆ. ಇದೀಗ ಕೆಜಿಎಫ್ ಚಾಪ್ಟರ್ 3 ಬಗೆಗಿನ ಹೊಸ ವಿಷಯಗಳು ಹೊರಬಿದ್ದಿವೆ. ಈ ಹಿಂದೆ ‘ಕೆಜಿಎಫ್ ಚಾಪ್ಟರ್ 3’ರಲ್ಲಿ ತೆಲುಗಿನ ಖ್ಯಾತ ನಟ ರಾಣ ದಗ್ಗುಬಾಟಿ ನಟಿಸಲಿದ್ದಾರೆ. ರಾಕಿಗೆ ವಿಲನ್ ಆಗಿರಲಿದ್ದಾರೆ ರಾಣ ದಗ್ಗುಬಾಟಿ ಎಂಬ ಸುದ್ದಿಗಳು ಕೇಳಿಬಂದಿದ್ದವು. ಈಗ ಬಾಲಿವುಡ್ ನ ಹೆಸರಾಂತ ನಟ ಹೃತಿಕ್ ರೋಷನ್ ಅವರು ಚಿತ್ರದ ತಾರಾಗಣವನ್ನ ಸೇರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಎಲ್ಲ ವಿಷಯಗಳಿಗೆ ‘ಹೊಂಬಾಳೆ ಫಿಲಂಸ್’ ಸಂಸ್ಥೆಯ ಸಂಸ್ಥಾಪಕ ಹಾಗು ಕೆಜಿಎಫ್ ಚಿತ್ರಗಳ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೇ ಖಾಸಗಿ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಜಿಎಫ್ ಚಾಪ್ಟರ್ 3 ಹಾಗು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ ನಿರ್ಮಾಪಕರು. “ನಾವು ಕೆಜಿಎಫ್ ಚಾಪ್ಟರ್ 3 ಚಿತ್ರದ ಕಾಸ್ಟಿಂಗ್ ಬಗ್ಗೆ ಇನ್ನು ಯಾವುದೇ ರೀತಿಯ ಯೋಚನೆಯಾಗಲಿ, ನಿರ್ಧಾರವಾಗಲಿ ಮಾಡಿಲ್ಲ. ಚಿತ್ರದ ಚಿತ್ರೀಕರಣದ ಬಗ್ಗೆಯೂ ಸದ್ಯ ಯಾವುದೇ ಚರ್ಚೆಯಾಗಿಲ್ಲ. ಪ್ರಶಾಂತ್ ನೀಲ್ ಅವರು ಈಗ ‘ಸಲಾರ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅವರು ಸಹ ತಮ್ಮ ಮುಂದಿನ ಚಿತ್ರವನ್ನು ಸದ್ಯದಲ್ಲೇ ಘೋಷಿಸಿ, ಅದರ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಹಾಗಾಗಿ ಸದ್ಯ ಕೆಜಿಎಫ್ ಚಾಪ್ಟರ್ 3 ಬಗೆಗಿನ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ” ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಹಾಗಾಗಿ ಕೆಜಿಎಫ್ ಚಾಪ್ಟರ್ 3ರ ರಹಸ್ಯಗಳು ಸದ್ಯಕ್ಕೆ ರಹಸ್ಯವಾಗಿಯಯೇ ಉಳಿದುಹೋಗಿವೆ. ಸದ್ಯ ಸುಳಿಯುತ್ತಿರುವಂತಹ ರಾಣ ದಗ್ಗುಬಾಟಿ ಹಾಗು ಹೃತಿಕ್ ರೋಷನ್ ಅವರ ವಿಷಯಗಳು ಸದ್ಯಕ್ಕೆ ಸುಳ್ಳಾಗಿಯೇ ಉಳಿದುಕೊಳ್ಳಲಿವೆ. ಚಿತ್ರತಂಡದ ಪ್ಲಾನಿಂಗ್ ನಂತೆ, ಈಗಾಗಲೇ ಎರಡನೇ ವೇಳಾಪಟ್ಟಿಯ ಚಿತ್ರೀಕರಣ ಆರಂಭಿಸಿರೋ ‘ಸಲಾರ್’ ಸಿನಿಮಾವನ್ನು, ಈ ವರ್ಷದಂತ್ಯದೊಳಗೆ ಮುಗಿಸಿಕೊಂಡು, 2023ರ ಆರಂಭಕ್ಕೆ ಸಿನಿಮಾವನ್ನು ಬಿಡುಗಡೆಗೋಳಿಸೋ ತಯಾರಿ ಮಾಡಿಕೊಳ್ಳಲಿದ್ದಾರೆ. ತದನಂತರವೆ ಕೆಜಿಎಫ್ ಚಾಪ್ಟರ್ 3ರ ಕೆಲಸಗಳು ಆರಂಭವಾಗಲಿವೆ.

‘ಕೆಜಿಎಫ್ ಚಾಪ್ಟರ್ 3’ಯಲ್ಲಿ ರಾಣ, ಹೃತಿಕ್ ರೋಷನ್!!! Read More »

ಹುಟ್ಟುಹಬ್ಬಕ್ಕೆ ಹಲವು ಚಿತ್ರಗಳ ಹೆಸರು ಸೇರಿಸಿದ ನವೀನ್ ಶಂಕರ್.

2018ರ ‘ಗುಲ್ಟೂ’ ಚಿತ್ರ ಕನ್ನಡಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸೈಬರ್ ಕ್ರೈಂ ಗೆ ಸಂಭಂದಿಸಿದ ಈ ಚಿತ್ರ ಚಿತ್ರರಂಗದಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಜನಾರ್ಧನ್ ಚಿಕ್ಕಣ್ಣ ಅವರ ಮೊದಲ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ನವೀನ್ ಶಂಕರ್, ಸೋನು ಗೌಡ, ರಂಗಾಯಣ ರಘು, ಅವಿನಾಶ್, ಪವನ್ ಕುಮಾರ್ ಮುಂತಾದ ನಟರು ಬಣ್ಣ ಹಚ್ಚಿದ್ದರು. ನಾಯಕನಟನ ಪಾತ್ರವಹಿಸಿದ್ದ ನವೀನ್ ಶಂಕರ್ ಅವರು ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಮೊದಲ ಚಿತ್ರದಿಂದಲೇ ಗುರುತಿಸುವಂತೆ ಮಾಡಿದ್ದರು. ‘ಗುಲ್ಟೂ’ ಚಿತ್ರದ ನಂತರ ಸಾಲು ಸಾಲು ಆಫರ್ ಗಳನ್ನ ಪಡೆದ ಇವರಿಗೆ ಇಂದು ಹುಟ್ಟುಹಬ್ಬದ ಸಡಗರ. ಈ ಸಂಧರ್ಭದಲ್ಲಿ ಅವರ ಮುಂದಿನ ಚಿತ್ರಗಳ ಬಗೆಗಿನ ಮಾಹಿತಿ ನೀಡಿದ್ದಾರೆ ನವೀನ್ ಶಂಕರ್. ಜನುಮದಿನದ ಸಲುವಾಗಿ ನವೀನ್ ಶಂಕರ್ ಅವರ ಮುಂದಿನ ಚಿತ್ರಗಳ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಶ್ರೀಧರ್ ಶಿಕಾರಿಪುರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ಕ್ರೈಂ ಥ್ರಿಲರ್ ಚಿತ್ರದಲ್ಲಿ ನಾಯಕ ‘ಆದಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ ನವೀನ್. ಈ ಚಿತ್ರತಂಡದಿಂದ ಪೋಸ್ಟರ್ ರಿಲೀಸ್ ಆಗಿದ್ದು, ತುಂಬಾ ರಗಡ್ ಲುಕ್ ನಲ್ಲಿ ನವೀನ್ ಕಾಣಿಸಿಕೊಳ್ಳುವ ಸೂಚನೆ ನೀಡುತ್ತಿದೆ. ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿರುವ ನವೀನ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಮುಂತಾದವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಮೇನಹಳ್ಳಿ ಜಗನ್ನಾಥ್ ಅವರು ನಿರ್ದೇಶಸುತ್ತಿರುವ ‘ಹೊಂದಿಸಿ ಬರೆಯಿರಿ’ ಎಂಬ ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗು ಶ್ರೀ ಮಹದೇವ್ ಅವರ ಜೊತೆಗೆ ಮೂರನೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ನವೀನ್ ಶಂಕರ್. ಸಿನಿಮಾದಲ್ಲಿ ಅರ್ಚನಾ ಜೋಯಿಸ್ ಹಾಗು ಭಾವನಾ ಅವರು ಕೂಡ ನಟಿಸುತ್ತಿದ್ದಾರೆ. ಕಾಲೇಜ್ ಜೀವನದ ಬಗ್ಗೆ ಇರುವ ಸಿನಿಮಾ ಇದಾಗಿರಲಿದೆ. ಮೂರನೇಯದಾಗಿ ಕುಲದೀಪ್ ಕರಿಯಪ್ಪ ಅವರ ರಚನೆಯ ‘ನೋಡಿದವರು ಏನಂತಾರೆ’ ಎಂಬ ಸಿನಿಮಾದಲ್ಲಿಯೂ ಸಹ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ನವೀನ್. ಚಿತ್ರೀಕಾರಣವನ್ನು ಮುಗಿಸಿಕೊಂಡಿರುವ ಈ ಚಿತ್ರ ಒಂದು ‘ಟ್ರಾವೆಲ್ ಡ್ರಾಮಾ’ ಆಗಿರಲಿದೆಯಂತೆ. ಅಪೂರ್ವ ಭಾರಧ್ವಜ್ ಅವರು ನಾಯಕಿಯಾಗಿ ನಟಿಸಲಿದ್ದು, ಇಬ್ಬರ ನಡುವಿನ ಪಯಣದ ಬಗ್ಗೆ ಕಥೆ ಹೆಣೆಯಲಾಗಿದೆ. ಬೆಂಗಳೂರು, ಮಡಿಕೇರಿ, ಗೋಕರ್ಣ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸದ್ಯದಲ್ಲೇ ಬಿಡುಗಡೆ ಕಾಣುವ ಸಾಧ್ಯತೆಯಿದೆ. ಇವೆಲ್ಲದರ ನಡುವೆ ಒಂದು ಸಾಮಾಜಿಕ ಕಥೆಯಲ್ಲಿಯೂ ನಟಿಸಲಿದ್ದಾರೆ ನವೀನ್. ಶ್ರೀಕಾಂತ್ ಕಟಗಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಕ್ಷೇತ್ರಪತಿ’ ಎಂಬ ಚಿತ್ರದಲ್ಲಿ ರೈತರ ಹಕ್ಕುಗಳ ಬಗೆಗಿನ ಹೋರಾಟದ ಬಗ್ಗೆ ಚಿತ್ರೀಕರಿಸಲಾಗಿದೆ. ಸುಮಾರು ಐದು ವರ್ಷಗಳ ಕಾಲ ಸಂಶೋಧನೆ ನಡೆಸಿ ರೈತಪರ ಹೋರಾಟಗಳ ಬಗ್ಗೆ ಮಾಹಿತಿ ಕಲೆಹಾಕಿ ಸಿನಿಮಾ ಮಾಡಲು ಮುಂದಾಗಿದ್ದಾರೆ ನಿರ್ದೇಶಕ ಶ್ರೀಕಾಂತ್ ಕಟಗಿ ಅವರು. ಮೂಲತಃ ಉತ್ತರ ಕರ್ನಾಟಕದವರಾಗಿರುವ ನವೀನ್ ಅವರಿಗೆ ಗದಗ ಶೈಲಿಯಲ್ಲಿರುವ ಈ ಸಿನಿಮಾದಲ್ಲಿನ ನಟನೆ ಮನಸ್ಸಿಗೆ ಹತ್ತಿರವಾಗಿದೆಯಂತೆ. ರವಿ ಬಸ್ರುರ್ ಅವರ ಸಂಗೀತ ಈ ಚಿತ್ರದಲ್ಲಿರಲಿದ್ದು ಇಂದು(ಮೇ 26) ಚಿತ್ರದ ಪೋಸ್ಟರ್ ಅನ್ನು ಧನಂಜಯ್ ಅವರು ಬಿಡುಗಡೆಗೊಳಿಸಿದ್ದಾರೆ. ವಿಶೇಷವೆಂದರೆ, ಈ ಎಲ್ಲ ಚಿತ್ರಗಳಲ್ಲಿಯೂ ನವೀನ್ ಅವರು ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬೇರೆ ಬೇರೆ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಇವರ ಪಯಣ ಬೆಳೆಯುತ್ತಾ ಸಾಗಲಿ ಎಂದು ಆಶಿಸುತ್ತೇವೆ.

ಹುಟ್ಟುಹಬ್ಬಕ್ಕೆ ಹಲವು ಚಿತ್ರಗಳ ಹೆಸರು ಸೇರಿಸಿದ ನವೀನ್ ಶಂಕರ್. Read More »

ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟ ಮಾತುಗಳ ಹರಿಬಿಟ್ಟ ತೆಲುಗು ನಿರ್ದೇಶಕನಿಗೆ ತಿರುಗೇಟು!!

ಭಾರತ ಚಿತ್ರರಂಗಕ್ಕೆ ಭಾಷೆಯ ಭೇದವಿಲ್ಲ. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಳಿಂದ ಅದ್ಭುತ ಚಿತ್ರಗಳು ಬರುತ್ತಿವೆ. ದಕ್ಷಿಣದ ಎಲ್ಲ ಚಿತ್ರರಂಗಗಳು ಒಂದೇ ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಪ್ರಪಂಚವೇ ತಿರುಗಿ ನೋಡುವಂತ ಸಿನಿಮಾಗಳು ಬರಬಹುದು, ಈ ರೀತಿಯ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ ಸಿನಿ ಒಗ್ಗಟ್ಟು ಕೇವಲ ಮಾತುಗಳಿಗಷ್ಟೇ ಸೀಮಿತವೇ? ಎಂಬ ಪ್ರಶ್ನೆ ಹುಟ್ಟುವಂತ ಕೆಲಸಗಳು ಆಗಾಗ ಆಗುತ್ತಲೇ ಇರುತ್ತವೆ. ಇಂತದ್ದೇ ಒಂದು ಘಟನೆ ಈಗ ನಡೆದಿದೆ. ಕನ್ನಡ ಚಿತ್ರರಂಗ ಹಾಗು ಅಲ್ಲಿನ ಜನರ ಬಗ್ಗೆ ತೆಲುಗು ನಿರ್ದೇಶಕರೊಬ್ಬರು ಕೆಟ್ಟದಾಗಿ ಮಾತನಾಡಿದ್ದಾರೆ.  • ಆಗಿದ್ದೇನು? 1987ರಿಂದ ಇಲ್ಲಿವರೆಗಿನ ತಮ್ಮ ಸಿನಿಪಯಣದಲ್ಲಿ ಕೇವಲ ಎಂಟು ಸಿನಿಮಾಗಳನ್ನು ನಿರ್ದೇಶನ ಮಾಡಿರುವಂತ ಗೀತ ಕೃಷ್ಣ ಎಂಬ ನಿರ್ದೇಶಕರೊಬ್ಬರು ಈ ಘಟನೆಯ ರೂವಾರಿ. ತೆಲುಗಿನ ‘ಸೋಶಿಯಲ್ ಪೋಸ್ಟ್ ಮೀಡಿಯಾ’ ಎಂಬ ಯೂಟ್ಯೂಬ್ ಚಾನೆಲ್ ಒಂದು ಮಾಡಿದಂತ ಸಂದರ್ಶನದಲ್ಲಿ ಭಾಗಿಯಾಗಿದ್ದ ಇವರು, ಅಲ್ಲಿ ಈ ಮಾತನ್ನು ಹೇಳಿದ್ದಾರೆ. ಸದ್ಯ ಎಲ್ಲೆಡೆ ಕುಖ್ಯಾತವಾಗಿರುವ ‘ಕಾಸ್ಟಿಂಗ್ ಕೌಚ್’ ವಿಷಯದ ಬಗ್ಗೆ ಹೇಳುತ್ತಾ, ‘ತಮಿಳು ಚಿತ್ರರಂಗದಲ್ಲಿ ಹೀಗಿಲ್ಲವಂತಲ್ಲ, ಅಲ್ಲಿ ನಿಜವಾದ ಪ್ರತಿಭೆಗೆ ಅವಕಾಶವಂತೆ, ಏನನ್ನುತ್ತೀರಿ?’ ಎಂದು ಸಂದರ್ಶಕಿ ಒಬ್ಬಳು ಕೇಳಿದ ಪ್ರಶ್ನೆಗೆ ಕೃಷ್ಣ ಅವರು “ನಿಮಗೆಲ್ಲೊ ಭ್ರಮೆ, ಈ ಕೆಟ್ಟ ‘ಚಾಳಿ’ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ಅಲ್ಲಿನವರು ಈ ನಿಮ್ಮ ಮಾತನ್ನು ಕೇಳಿದರೆ ಹುಡುಕಿಕೊಂಡು ಬಂದು ನಿಮ್ಮನ್ನು ಸನ್ಮಾನಿಸುತ್ತಾರೇನೋ. ಈ ‘ಕಾಸ್ಟಿಂಗ್ ಕೌಚ್’ ಆರಂಭವಾಗಿದ್ದೆ ಅಲ್ಲಿಂದ. ತಮಿಳುನವರು ಅಸಹ್ಯದ ಜನ. ಕನ್ನಡದವರಂತೂ ಇನ್ನು ಕೊಳಕು ಮನುಷ್ಯರು” ಎಂದಿದ್ದಾರೆ. ಮುಂದುವರಿಸುತ್ತ, “ಒಮ್ಮೆ ಚಿತ್ರೀಕರಣದ ಸಲುವಾಗಿ ಕರ್ನಾಟಕಕ್ಕೆ ಹೋಗಿದ್ದೆ. ಅಲ್ಲಿ ಶೂಟಿಂಗ್ ವೇಳೆ ಸಿಕ್ಕಿದ ಹುಡುಗಿಯೊಬ್ಬಳನ್ನು ಕರೆದು,”ನೀನು ಹೈದೆರಾಬಾದ್ ಗೆ ಬಾ. ಅಸಿಸ್ಟಂಟ್ ಡೈರೆಕ್ಟರ್ ಮಾಡಿಕೊಳ್ಳುತ್ತೇನೆ” ಎಂದೆ. ಅದಕ್ಕೆ ಆಕೆ ನನ್ನನ್ನೇ ಬುಟ್ಟಿಗೆ ಹಾಕಿಕೊಳ್ಳೋ ಪ್ರಯತ್ನ ಮಾಡಿದಳು. ನಾನು ತಕ್ಷಣ ಭಯಪಟ್ಟು, ಫ್ಲೈಟ್ ಹತ್ತಿ ಹೈದೆರಾಬಾದ್ ಗೆ ಓಡಿಬಂದೆ. ಕನ್ನಡ ಚಿತ್ರರಂಗದ ಸಹವಾಸವೇ ಬೇಡ ಎಂದು ಬಿಟ್ಟುಬಂದವನು ನಾನು. ಅಲ್ಲಿ ಬಹುಪಾಲು ಎಲ್ಲ ಹೀಗಿನವರೇ” ಎಂದಿದ್ದಾರೆ ಕೃಷ್ಣ. ಕನ್ನಡದ ಜೊತೆ ತಮಿಳು ಚಿತ್ರರಂಗದ ಬಗ್ಗೆಯೂ ಅವಹೇಳನ ಮಾಡುತ್ತಾ, “ತಮಿಳು ಚಿತ್ರರಂಗದವರು ಸಹ ಅತಿ ಅಸಹ್ಯದ ಜನ. ಅಲ್ಲಿನ ದೊಡ್ಡ ದೊಡ್ಡ ಸ್ಟಾರ್ ಗಳಿಗೆಲ್ಲ ಆ ‘ಚಾಳಿ’ ಇದೆ. ಅವರದೇ ಗಾಯಕಿಯೊಬ್ಬಳು ದೊಡ್ಡ ದೊಡ್ಡವರ ಬಣ್ಣ ಬಯಲು ಮಾಡಿದ್ದಳಲ್ಲವೇ. ಅಲ್ಲಿನವರೆಲ್ಲರು ‘ಲೈಂಗಿಕ ಸೇವೆ’ಯನ್ನೇ ಕೇಳುತ್ತಾರೆ.” ಎಂದಿದ್ದಾರೆ ಕೃಷ್ಣ.  • ಪ್ರತಿಕ್ರಿಯೆ? ಈ ಬಗ್ಗೆ ಕನ್ನಡದ ಹಿರಿಯ ನಟರಾದ ರಾಘವೇಂದ್ರ ರಾಜಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. “ಕನ್ನಡ ಭಾಷೆ, ಕನ್ನಡ ಚಿತ್ರರಂಗದ ಬಗ್ಗೆ ಇಡೀ ಪ್ರಪಂಚಕ್ಕೆ ತಿಳಿದಿದೆ. ಎಲ್ಲ ಚಿತ್ರರಂಗದವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಆದರೆ ಈ ರೀತಿಯ ಮಾತುಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಮಾತನಾಡುವವರು ಮಾತನಾಡುತ್ತ ಇರಲಿ, ನಾವು ನಮ್ಮ ಕೆಲಸದಿಂದ ಮಾಡಿ ತೋರಿಸೋಣ ಎಂದಿದ್ದರು. ಈಗ ವಿಷಯ ತಾರಕಕ್ಕೇರುವ ಸುಳಿವು ಸಿಕ್ಕಾಗ ಗೀತ ಕೃಷ್ಣ ಯು-ಟರ್ನ್ ಹೊಡೆದಿದ್ದಾರೆ. “ನನ್ನ ಮಾತಿನ ಅರ್ಥ ಹಾಗಿರಲಿಲ್ಲ. ‘ಕಾಸ್ಟಿಂಗ್ ಕೌಚ್’ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಇದೆ. ತೆಲುಗು, ತಮಿಳು ಕನ್ನಡ, ಹಿಂದಿ ಹೀಗೆ ಎಲ್ಲ ಸಿನಿಮಾವರ್ಗದಲ್ಲೂ ಈ ಚಾಳಿ ಇದೆ. ನಾನು ಯಾವುದೋ ಒಂದು ಚಿತ್ರರಂಗಕ್ಕೆ ಅಪಮಾನ ಮಾಡಿ ಹೇಳಿದ್ದಲ್ಲ. ನನ್ನ ಅನುಭವವನ್ನು ಹಂಚಿಕೊಂಡದ್ದಷ್ಟೇ. ನನ್ನ ಮಾತನ್ನು ತಿರುಚಲಾಗಿದೆ” ಎಂದು ಹೇಳುವ ಮೂಲಕ ತಮ್ಮ ಮಾತನ್ನ ತಾವೇ ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದಾರೆ. ‘ಕಾಸ್ಟಿಂಗ್ ಕೌಚ್’ ಎನ್ನುವುದು ಸಿನಿಮಾ ರಂಗಕ್ಕೆ ಹಿಡಿದುಕೊಂಡಿರುವ ಒಂದು ಕೆಟ್ಟ ಚಾಳಿ. ಈ ಬಗ್ಗೆ ಹಲವು ಪ್ರಕರಣಗಳು ಎಲ್ಲ ಕಡೆಯು ಕೇಳಿಬಂದಿದ್ದವು. ಆದರೆ ಎಷ್ಟೋ ಜನರಿಗೆ ಪರಿಚಯವೇ ಇಲ್ಲದ ನಿರ್ದೇಶಕನೊಬ್ಬ ಒಂದಿಡೀ ಚಿತ್ರರಂಗಗಳ ಬಗ್ಗೆಯೇ ಅವಹೇಳನಕಾರಿ ಹೇಳಿಕೆ ನೀಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. 1987ರಲ್ಲಿ ‘ಸಂಕೀರ್ತನ’ ಎಂಬ ತೆಲುಗು ಸಿನಿಮಾದಿಂದ ನಿರ್ದೇಶನಕ್ಕಿಳಿದ ಈತ, 2013ರ ‘ನಿಮಿದಂಗಲ್’ ಎಂಬ ತಮಿಳು ಸಿನಿಮಾವನ್ನ ನಿರ್ದೇಶಿಸುವ ಮೂಲಕ ತನ್ನ ಸಿನಿಪಯಣದಲ್ಲಿ ಕೇವಲ 8 ಚಿತ್ರಗಳನ್ನು ನಿರ್ದೇಶಿಸೋ ಅವಕಾಶ ಪಡೆದವರು. ಇದೀಗ ತಮ್ಮ ಕೊನೆಯ ಚಿತ್ರ ಮಾಡಿದ ಸುಮಾರು 9 ವರ್ಷಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆಯೂ ತೆಲುಗಿನ ಪೋಷಕ ನಟನೊಬ್ಬ ನಮ್ಮ ಕರುನಾಡ ‘ಯಜಮಾನ’ರಾದ ಡಾ| ವಿಷ್ಣುವರ್ಧನ್ ಅವರ ಬಗ್ಗೆ ಅಪಮಾನದ ಮಾತುಗಳನ್ನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದನು. ನಂತರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿ ಕ್ಷಮೆ ಕೂಡ ಕೇಳುವಂತಾಗಿತ್ತು. ಈಗ ಈ ಹೊಸ ಪ್ರಕರಣ. ಇನ್ನು ಎಷ್ಟು ಕಾಲ ಹೀಗೆ ಇರುತ್ತದೋ ಕಾದುನೋಡಬೇಕು.

ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟ ಮಾತುಗಳ ಹರಿಬಿಟ್ಟ ತೆಲುಗು ನಿರ್ದೇಶಕನಿಗೆ ತಿರುಗೇಟು!! Read More »

Scroll to Top