Karnataka Bhagya

ಕರ್ನಾಟಕ ಭಾಗ್ಯ ವಿಶೇಷ

ರವಿ ಬಸ್ರೂರ್ ಕೈಚಳಕದಲ್ಲಿ ಮೂಡಿಬಂತು ವೀರಭದ್ರ ದೇವರ ಬೆಳ್ಳಿ ಬಾಗಿಲು

ರವಿ ಬಸ್ರೂರು ಸಿನಿಮಾ ಮಂದಿಗೆ ತೀರಾ ಪರಿಚಿತ ಹೆಸರು. ಕೆಜಿಎಫ್ ಸಿನಿಮಾದ ಮೂಲಕ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರವಿ ಬಸ್ರೂರು ತಮ್ಮ ಸ್ವಂತ ಪರಿಶ್ರಮದ ಮೂಲಕವೇ ಗುರುತಿಸಿಕೊಂಡಿರುವ ಅತ್ಯದ್ಭುತ ಪ್ರತಿಭೆ. ಸಂಗೀತ ನಿರ್ದೇಶಕ ಆಗಿ ಸದ್ಯ ಗುರುತಿಸಿಕೊಂಡಿರುವ ರವಿ ಬಸ್ರೂರು ಅವರ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಪಟ್ಟಿರುವ ರವಿ ಅವರು ಇಂದು ಯಶಸ್ಸನ್ನು ಸಾಧಿಸಿದ ಸಂತಸದಲ್ಲಿದ್ದಾರೆ. ಇನ್ನು ಇದರ ಜೊತೆಗೆ ಅವರೊಬ್ಬರು ಶಿಲ್ಪಿ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ. ಹೌದು, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡಿರುವ ರವಿ ಬಸ್ರೂರು ಶಿಲ್ಪಿಯೂ ಹೌದು‌ ಮರ ಮಾತ್ರವಲ್ಲದೇ ಕಲ್ಲಿನ ಶಿಲ್ಪಗಳ ಕೆತ್ತನೆ ಕಾರ್ಯದಲ್ಲಿ ಪರಿಣಿತಿ ಪಡೆದಿರುವ ರವಿ ಅದಕ್ಕಾಗಿ ತರಬೇತಿಯನ್ನು ಕೂಡಾ ಪಡೆದುಕೊಂಡಿದ್ದರು. ಸಂಗೀತ ನಿರ್ದೇಶಕರಾಗಿ ಜಗತ್ತಿನಾದ್ಯಂತ ಗುರುತಿಸಿಕೊಂಡಿರುವ ರವಿ ಬಸ್ರೂರು ಅವರು ಕೆತ್ತನೆ ಕೆಲಸಕ್ಕೆ ವಿದಾಯ ಹೇಳದಿರುವುದು ಆಶ್ಚರ್ಯದ ಸಂಗತಿ‌. ಇಂದಿಗೂ ಸಮಯ ಸಿಕ್ಕಾಗಲೆಲ್ಲಾ ಕೆತ್ತನೆ ಕಾರ್ಯದಲ್ಲಿ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ರವಿ.ಅದಕ್ಕೆ ಇತ್ತೀಚೆಗೆ ಕೊಲ್ಲೂರು ವೀರಭದ್ರ ದೇವಸ್ಥಾನಕ್ಕೆ ಬೆಳ್ಳಿ ಬಾಗಿಲಿನ ಕುಸುರಿ ಕೆಲಸವನ್ನು ಕೂಡಾ ರವಿ ಬಸ್ರೂರು ಮಾಡಿಕೊಟ್ಟಿದ್ದೇ ಸಾಕ್ಷಿ. ಇನ್ನು ಕೆತ್ತನೆಯ ಕೆಲಸಗಳ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರವಿ ಅವರು ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದರು.ಪ್ರಶಾಂತ್ ನೀಲ್ ಅವರ ಉಗ್ರಂ ಸಿನಿಮಾ ರವಿ ಅವರಿಗೆ ಹೆಸರನ್ನು ಮಾತ್ರವಲ್ಲದೇ ಪ್ರಶಸ್ತಿಯನ್ನು ಕೂಡಾ ತಂದುಕೊಟ್ಟಿತ್ತು. ಮಾತ್ರವಲ್ಲ ರವಿ ಬಸ್ರೂರು ಎಂಬ ಸಂಗೀತಗಾರನನ್ನು ಚಂದನವನಕ್ಕೆ ಪರಿಚಯಿಸಿತು. ಮುಂದೆ ಕರ್ವ, ಅಂಜನೀಪುತ್ರ, 100, ಮದಗಜ ಜೊತೆಗೆ ಕೆಜಿಎಫ್ ಚಾಪ್ಟರ್ 1 ಹಾಗು ‘ಕೆಜಿಎಫ್ ಚಾಪ್ಟರ್ 2 ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದ ಪ್ರತಿಭಾವಂತ. ಇನ್ನು ಕೋಸ್ಟಲ್ ವುಡ್ ನಲ್ಲಿಯೂ ಕಮಾಲ್ ಮಾಡಿರುವ ರವಿ ಅವರು ಎಕ್ಕ ಸಕ, ಜಸ್ಟ್ ಮದುವೆಲ್ಲಿ ಚಿತ್ರಗಳಿಗರ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುತ್ತಿರುವ ಕುಂದಾಪುರದ ಪ್ರತಿಭೆ ಸಲ್ಮಾನ್ ಖಾನ್ ಅವರ ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

ರವಿ ಬಸ್ರೂರ್ ಕೈಚಳಕದಲ್ಲಿ ಮೂಡಿಬಂತು ವೀರಭದ್ರ ದೇವರ ಬೆಳ್ಳಿ ಬಾಗಿಲು Read More »

ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿರುವ ಇಬ್ಬನಿ ಶೆಟ್ಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಭಾಗವಹಿಸಿದ್ದ ಹಿರಿತೆರೆ ನಟ ಪ್ರಮೋದ್ ಶೆಟ್ಟಿ ಹಾಗೂ ಕಿರುತೆರೆ ನಟಿ ಸುಪ್ರೀತಾ ಶೆಟ್ಟಿ ಮಗಳು ಇಬ್ಬನಿ ಶೆಟ್ಟಿ ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚೆಗಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಪುಟ್ಟ ಹುಡುಗಿ ಇಬ್ಬನಿ ತನ್ನ ಕೂದಲನ್ನು ದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನು ದಾನ ಮಾಡಿರುವ ಈ ಪುಟಾಣಿ ಉಳಿದ ಹೆಣ್ಮಕ್ಕಳಿಗೂ ಮಾದರಿಯಾಗಿ ಬಿಟ್ಟಿದ್ದಾಳೆ. ಮಾತ್ರವಲ್ಲ ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಕೆ ಅಂತಹ ಆಲೋಚನೆ ಮಾಡಿರುವುದು ಖುಷಿ ತಂದಿದೆ. ಮಾತ್ರವಲ್ಲ ಅವಳ ಕಾರ್ಯಕ್ಕೆ ಮೆಚ್ಚುಗೆಯನ್ನು ಕೂಡಾ ವ್ಯಕ್ತಪಡಿಸುತ್ತಾರೆ. ಅಂದ ಹಾಗೇ ಇಬ್ಬನಿ ಶೆಟ್ಟಿ ಅವರಿಗೆ ನಟಿ, ನಿರೂಪಕಿ ಅನುಪಮಾ ಗೌಡ ಅವರೇ ಸ್ಫೂರ್ತಿ. ಇತ್ತೀಚೆಗೆ ಅನುಪಮಾ ಗೌಡ ಅವರು ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನು ದಾನ ನೀಡಿದ್ದರು. ಅದರಿಂದ ಪ್ರೇರಣೆ ಪಡೆದ ಇಬ್ಬನಿ ತನ್ನ ಕೂದಲನ್ನು ಕೂಡಾ ದಾನ ಮಾಡಿದ್ದಾಳೆ. ಇದರ ಬಗ್ಗೆ ಫೇಸ್ ಬುಕ್ ನಲ್ಲಿ ಸುಪ್ರೀತಾ ಶೆಟ್ಟಿ ಬರೆದುಕೊಂಡಿದ್ದಾರೆ‌. “ಇನ್‌ಸ್ಟಾಗ್ರಾಮ್‌ನಲ್ಲಿ ಅನುಪಮಾ ಗೌಡ ಪ್ರೊಫೈಲ್ ನೋಡ್ತಾ ಇಬ್ಬನಿ ಕೇಳಿದ್ಲು, ಅಮ್ಮಾ.. ಅನುಪಮಾ ಆಂಟಿ ಯಾಕೆ ಕೂದಲು ಕಟ್ ಮಾಡಿಸಿಕೊಂಡಿದ್ದಾರೆ ಅಂತ. ಕ್ಯಾನ್ಸರ್ ರೋಗಿಗೆ ಡೊನೇಟ್ ಮಾಡೋಕೆ ಅಂತ ನಾನು, ಅವಳಿಗೆ ಅರ್ಥ ಆಗೋಹಾಗೆ ಹೇಳಿ ಸುಮ್ಮನಾದೆ. ನನ್ನ ಮಾತ್ ಕೇಳಿ ಆಕೆ, ಅಮ್ಮಾ.. ಈ ಹುಟ್ಟು ಹಬ್ಬಕ್ಕೆ ನಾನು, ನನ್ನ ತಲೆಗೂದಲನ್ನು ಕ್ಯಾನ್ಸರ್ ರೋಗಿಗೆ ಡೊನೇಟ್ ಮಾಡ್ತೀನಿ ಅಂತ ವಿಶ್ವಾಸದಿಂದ ಹೇಳಿದ್ಲು. ಇಬ್ಬನಿಯ ಈ ಮಾತು ಕೇಳಿ ಒಂದ್ ಕ್ಷಣ ನಾನು ಅವಕ್ಕಾದೆ… ಆಕೆಯ ಇಚ್ಛೆಯಂತೆ ಈ ಸದುದ್ದೇಶಕ್ಕಾಗಿ ಆಕೆಯ ಕೂದಲನ್ನು ದಾನ ಮಾಡಿದ್ವಿ” ಎಂದು ಸುಪ್ರೀತಾ ಬರೆದುಕೊಂಡಿದ್ದಾರೆ‌. ಮಾತ್ರವಲ್ಲ ಇದರ ಜೊತೆಗೆ “ಚಿಕ್ಕ ಮಕ್ಕಳು ಅಂತ ನಾವು ಅನ್ಕೊಂಡರೆ ಆಲೋಚನೆಯಲ್ಲಿ ಅವರು ನಮಗಿಂತ ಎಷ್ಟು ದೊಡ್ಡವರು ಆಗಿರುತ್ತಾರೆ. ಇವತ್ತು ಇಬ್ಬನಿನಾ ನೋಡಿದ್ರೆ ಆಕೆಯಿಂದ ನಾನು ಕಲಿಯೋದು ಬಹಳಷ್ಟಿದೆ ಅನ್ನಿಸ್ತು, ಆಕೆಯ ಮೇಲಿನ ಪ್ರೀತಿ, ಗೌರವ ನೂರ್ಮಡಿಸಿತು. ಸದ್ದಿಲ್ಲದೆ ಪ್ರೇರಣೆ ನೀಡಿದ ಅನುಪಮಾ ಗೌಡಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲೇಬೇಕು” ಎಂದಿರುವ ಸುಪ್ರೀತಾ ಅನುಪಮಾ ಗೌಡ ಅವರಿಗೆ ಧನ್ಯವಾದ ಹೇಳಿದ್ದಾರೆ.

ಮಹತ್ಕಾರ್ಯದ ಮೂಲಕ ಸುದ್ದಿಯಲ್ಲಿರುವ ಇಬ್ಬನಿ ಶೆಟ್ಟಿ Read More »

ಮುಕ್ತಾಯಗೊಂಡ ಸೂಪರ್ ಹಿಟ್ ಸೀರಿಯಲ್…

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಘರ್ಷ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ವಿಭಿನ್ನ ಕಥಾಹಂದರದ ಸಂಘರ್ಷ ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ತನ್ನ ಪಯಣಕ್ಕೆ ವಿದಾಯ ಹೇಳಿದೆ. ಸಂಘರ್ಷದಲ್ಲಿ ನಾಯಕಿ ಜಿಲ್ಲಾಧಿಕಾರಿ ಇಂದಿರಾ ಆಗಿ ಅಭಿನಯಿಸಿರುವ ತೇಜಸ್ಬಿನಿ ಶೇಖರ್ ಅವರು ಧಾರಾವಾಹಿಯ ಕುರಿತು ಭಾವುಕ ಪತ್ರ ಹಂಚಿಕೊಂಡಿದ್ದಾರೆ. “ಸಂಘರ್ಷವು ಕೇವಲ ಒಂದು ಸ್ಮರಣೀಯ ಪ್ರಯಾಣ ಅಲ್ಲ ಅದು ಒಂದು ಉತ್ತಮವಾದ ಜೀವನಾನುಭವ. ಇಂತಹ ಸುಂದರ ಪ್ರಯಾಣವು ಕೊನೆಗೊಂಡಿದೆ ಎಂದು ಒಪ್ಪಿಕೊಳ್ಳುವುದು ಕಷ್ಟ ಸಾಧ್ಯ. ನಮ್ಮ ‘ಸಂಘರ್ಷ’ ಧಾರವಾಹಿ ತಂಡವು ಕೇವಲ ತಂಡವಾಗಿರಲಿಲ್ಲ, ಇಲ್ಲಿ ಉತ್ತಮ ವ್ಯಕ್ತಿತ್ವವುಳ್ಳ ಸ್ನೇಹಿತರನ್ನು ಕಂಡೆ, ನನ್ನ ಈ ಪ್ರಯಾಣವನ್ನು ಸುಂದರವಾಗಿಸಿದ ನಿಮ್ಮೆಲ್ಲರಿಗೂ ಪ್ರೀತಿಯ ಧನ್ಯವಾದಗಳು” ಎಂದು ತೇಜಸ್ವಿನಿ ಶೇಖರ್ ಬರೆದುಕೊಂಡಿದ್ದಾರೆ. ಇದರ ಜೊತೆಗೆ “ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯ ಬಗ್ಗೆ ಏನು ಹೇಳಲಿ? ಇದು ಈಗಾಗಲೇ ಜನರ ಮನಸ್ಸಲ್ಲಿ ಗುರುತು ಮೂಡಿಸಿ ಒಂದು ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ, ಹಾಗೂ ಈ ಸಂಸ್ಥೆಯಲ್ಲಿ ಎರಡನೇ ಬಾರಿಗೆ ಕಾರ್ಯನಿರ್ವಹಿಸಿದ್ದು ಖುಷಿಯ ವಿಷಯ ಮತ್ತು ಈ ಪಯಣ ಹೀಗೆ ಮುಂದುವರಿಯುತ್ತದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ ತೇಜಸ್ವಿನಿ. ಕೊನೆಯಲ್ಲಿ “ಹಾಗೆ ನನ್ನ ಎಲ್ಲಾ ಅಭಿಮಾನಿ ವರ್ಗದವರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಬೆಂಬಲಿಸುವ ಪ್ರತಿಯೊಬ್ಬರಿಗೂ ಪ್ರೀತಿಯ ಧನ್ಯವಾದಗಳು, ನಿಮ್ಮ ಪ್ರೀತಿ ಬೆಂಬಲ ಇರದೆ ನಾನಿಲ್ಲ, ನನ್ನ ಪ್ರತಿ ಹೆಜ್ಜೆಗೂ ನಿಮ್ಮ ಪ್ರೀತಿ ಬೆಂಬಲಕ್ಕೆ ನಾನು ಚಿರ ಋಣಿ “ಎಂದು ಪತ್ರ ಕೊನೆಗಾಣಿಸಿದ್ದಾರೆ.

ಮುಕ್ತಾಯಗೊಂಡ ಸೂಪರ್ ಹಿಟ್ ಸೀರಿಯಲ್… Read More »

ಹೇಗಿರಲಿದೆ ಶಿವಣ್ಣ-ಭಟ್ಟರ ಮುಂದಿನ ಸಿನಿಮಾ??

‘ವಿಕಟಕವಿ’ ಯೋಗರಾಜ್ ಭಟ್ ಅವರು ಕನ್ನಡದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಸುಮಾರು ಎರಡು ದಶಕಗಳಿಂದ ಕನ್ನಡಿಗರನ್ನ ರಂಜಿಸುತ್ತಾ ಬಂದಿರೋ ಭಟ್ರು, ಅಂದಿನಿಂದ ಇಂದಿನವರೆಗೂ ತಮ್ಮದೇ ವಿಶೇಷ ಶೈಲಿಯನ್ನೂ, ವಿಶೇಷ ಅಭಿಮಾನಿಗಳನ್ನೂ ಹೊಂದಿದ್ದಾರೆ. ಮಾತಿನಲ್ಲೇ ಮನೆ ಕಟ್ಟಿ, ಮಾತಿನಲ್ಲೇ ಪ್ರೀತಿ ಕಟ್ಟಿ, ಅದೇ ಮಾತಿನಲ್ಲೇ ಅತಿಸೂಕ್ಷ್ಮ ವಿಷಯಗಳನ್ನು ಹೇಳುವಂತಹ ಭಟ್ಟರ ಸಿನಿಮಾಗಳು ಮನಸ್ಸಿಗೆ ಮುದ ನೀಡುವಂತದ್ದು.ಇದೀಗ ಯೋಗರಾಜ್ ಭಟ್ ಅವರು ತಮ್ಮ ಶೈಲಿಗೂ ಭಿನ್ನವಾದ ಹೊಸ ಚಿತ್ರವೊಂದನ್ನು ಆರಂಭಿಸಲಿದ್ದಾರೆ. ಈ ಹೊಸ ಚಿತ್ರ ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆ ಮಾಡಲಿದ್ದಾರೆ. ವಿಶೇಷವೆಂದರೆ ಮೊದಲ ಬಾರಿಗೆ ಯೋಗರಾಜ್ ಭಟ್ ಅವರು ಆಕ್ಷನ್-ಡ್ರಾಮಾ ರೀತಿಯ ಕಥೆಯೊಂದನ್ನ ತೆರೆಮೇಲೆ ತರಲಿದ್ದಾರೆ. ಯೋಗರಾಜ್ ಭಟ್ಟರ ಖಾತೆಯಲ್ಲಿ ಸದ್ಯ ಎರಡು ಚಿತ್ರಗಳಿವೆ. ಭಟ್ರು ಹಾಗು ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ಬ್ಲಾಕ್ ಬಸ್ಟರ್ ಚಿತ್ರ ‘ಗಾಳಿಪಟ’ವನ್ನ ‘ಗಾಳಿಪಟ 2’ ಎಂಬ ಹೆಸರಿನಿಂದ ಮರಳಿ ತರಲು ಹೊರಟಿದ್ದಾರೆ ಭಟ್ಟರು. ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಅಭಿನಯದ ಈ ಸಿನಿಮಾ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ. ಎರಡನೆಯದಾಗಿ ಯಶಸ್ ಸೂರ್ಯ ಅಭಿನಯದಲ್ಲಿ ‘ಗರಡಿ’ ಎಂಬ ಚಿತ್ರವನ್ನು ಭಟ್ರು ಮಾಡುತ್ತಿದ್ದು, ಸದ್ಯ ಅದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಈ ಹೊಸ ಸಿನಿಮಾ ಸೆಟ್ಟೇರಲಿದೆ. ಶಿವಣ್ಣ ಜೊತೆ ಪ್ರಭುದೇವ!!ಈ ಮಾಸ್ ಆಕ್ಷನ್-ಡ್ರಾಮಾದಲ್ಲಿ ಶಿವಣ್ಣ ಜೊತೆಗೆ ಪ್ರಭುದೇವ ಕೂಡ ನಟಿಸಲಿದ್ದಾರಂತೆ. ಈಗಾಗಲೇ ಮಾತುಕತೆ ಮುಗಿದಿದ್ದು, ಚಿತ್ರೀಕರಣದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡುತ್ತಿರುವುದರಿಂದ, ತುಂಬಾ ದೊಡ್ಡ ಮಟ್ಟದಲ್ಲೇ ಮೂಡಿಬರಲಿದೆ. ಈ ಬಗ್ಗೆ ಭಟ್ಟರು ಬಿಚ್ಚಿಟ್ಟ ಒಂದಿಷ್ಟು ಗುಟ್ಟುಗಳು ಹೀಗಿವೆ. “ಶಿವರಾಜ್ ಕುಮಾರ್ ಅವರ ಜೊತೆಗೆ ಪ್ರಭುದೇವ ಅವರು ಸಿನಿಮಾದಲ್ಲಿ ನಟಿಸುವುದು ಖಾತ್ರಿಯಾಗಿದೆ. ‘ರಾಕ್ಲೈನ್ ಪ್ರೊಡಕ್ಷನ್ಸ್’ ಬ್ಯಾನರ್ ನಲ್ಲಿ ಚಿತ್ರ ಮೂಡಿಬರಲಿದ್ದು, ದೊಡ್ಡ ಮಟ್ಟದಲ್ಲೇ ನಿರ್ಮಾಣವಾಗಲಿದೆ. ಈಗಂತೂ ಯಾವುದೇ ದೊಡ್ಡ ಸಿನಿಮಾ ಸೇಟ್ಟೇರಿದರು ಪಾನ್-ಇಂಡಿಯಾ ಸಿನಿಮಾನ ಎಂದೇ ಜನ ಕೇಳೋದು. ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಆಗಿರುವ ಈ ಸಿನಿಮಾ ಕೂಡ ಪಾನ್-ಇಂಡಿಯಾ ಮಟ್ಟದಲ್ಲೇ ಬಿಡುಗಡೆಯಗುತ್ತದೆ. ಪಾತ್ರವರ್ಗ ಹಾಗು ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಸದ್ಯದಲ್ಲೇ ಹೇಳುತ್ತೇವೆ” ಎಂದಿದ್ದಾರೆ ಭಟ್ಟರು.

ಹೇಗಿರಲಿದೆ ಶಿವಣ್ಣ-ಭಟ್ಟರ ಮುಂದಿನ ಸಿನಿಮಾ?? Read More »

‘ಡಿ ಬಾಸ್’ಗಿನ್ನು ‘ಕದನ ವಿರಾಮ’!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದಲ್ಲಿ ಅತಿದೊಡ್ಡ ಅಭಿಮಾನಿ ಬಳಗದ ಒಡೆಯ. ಮಾಸ್ ಗು ಕ್ಲಾಸ್ ಗು ಬಾಸ್ ಎನಿಸಿಕೊಂಡು ಅಭಿಮಾನಿಗಳ ಎದೆಯಲ್ಲಿ ‘ಡಿ ಬಾಸ್’ ಎಂದೇ ಉಳಿದುಕೊಂಡಿರುವ ದರ್ಶನ ಅವರ ಅಭಿಮಾನಿಗಳ, ಅಭಿಮಾನದ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆಯಿಲ್ಲ. ಸದ್ಯ ‘ಡಿ ಬಾಸ್’ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸ ಸಿನಿಮಾವೊಂದು ಘೋಷಿತವಾಗೋ ಸುದ್ದಿ ಕೇಳಿಬರುತ್ತಿದೆ. ಈ ಸುದ್ದಿ ಸತ್ಯವಾಗಿದ್ದೇ ಆದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿವುದಂತೂ ಖಂಡಿತ. ಸದ್ಯ ದರ್ಶನ್ ಅವರು ‘ಕ್ರಾಂತಿ’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಾರಥ್ಯದಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ದರ್ಶನ್ ಹಾಗು ರಚಿತ ರಾಮ್ ಅವರು ಜೋಡಿಯಾಗಿ ನಟಿಸಲಿದ್ದಾರೆ. ಈಗ ಬರುತ್ತಿರೋ ಸುದ್ದಿಗಳ ಪ್ರಕಾರ ದರ್ಶನ್ ಅವರ ಮುಂದಿನ ಸಿನಿಮಾ ‘ದುನಿಯಾ’, ‘ಟಗರು’ ಸಿನಿಮಾಗಳ ಖ್ಯಾತಿಯ ಸೂರಿ ಅವರೊಂದಿಗೆ ಸೆಟ್ಟೇರಲಿದೆ. ಸದ್ಯ ಅಭಿಷೇಕ್ ಅಂಬರೀಷ್ ಅವರ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಬ್ಯುಸಿ ಆಗಿರುವ ಸುಕ್ಕ ಸೂರಿ ಜೊತೆಗೆ ಪಕ್ಕ ಮಾಸ್ ಪಾತ್ರದಲ್ಲಿ ಡಿ ಬಾಸ್ ಮಿಂಚಲಿದ್ದಾರೆ ಎನ್ನಲಾಗುತ್ತಿದೆ ಸ್ಯಾಂಡಲ್ವುಡ್ ನಲ್ಲಿ. ಈ ಸಿನಿಮಾಗೆ ‘ಕದನ ವಿರಾಮ’ ಎಂಬ ಹೆಸರನ್ನು ಕೂಡ ಫೈನಲ್ ಮಾಡಲಾಗಿದೆಯಂತೆ. ಪಾನ್ ಇಂಡಿಯನ್ ಚಿತ್ರ ಆಗಿರಲಿದೆ ಎಂಬ ಊಹೆಗಳು ಹರಿದಾಡುತ್ತಿದ್ದರು, ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿಗಳು ಸದ್ಯದಲ್ಲೇ ಲಭ್ಯವಾಗಲಿವೆ. ದರ್ಶನ್ ಹಾಗು ಸೂರಿ ಅವರ ಒಟ್ಟಾಗಿ ಸಿನಿಮಾ ಮಾಡುವರೆಂಬ ಸುದ್ದಿ ಬಹಳ ಹಿಂದೆಯೇ ಚಂದನವನದಲ್ಲಿ ಗುಲ್ಲೆಬ್ಬಿಸಿತ್ತು. ಇವರಿಬ್ಬರ ಜೋಡಿಯಲ್ಲಿ ಬರಲಿರೋ ಚಿತ್ರ ಎಂದಾಗ ಅಭಿಮಾನಿಗಳೆಲ್ಲರಲ್ಲಿ ನಿರೀಕ್ಷೆಯ ಪರ್ವತ ತಲೆಯೆತ್ತಿತ್ತು. ಸದ್ಯ ಈ ಚಿತ್ರಕ್ಕೊಂದು ಮುಹೂರ್ತ ಕೂಡಿಬಂದಂತೆ ಕಂಡಿದೆ. ಪಾನ್ ಇಂಡಿಯ ಮಟ್ಟದಲ್ಲಿ ಬಿಡುಗಡೆ ಕಾಣಲಿರುವ ‘ಕ್ರಾಂತಿ’ ದರ್ಶನ್ ಅವರ 55ನೇ ಸಿನಿಮಾ. ಇವರ 54ನೇ ಚಿತ್ರವಾದ ‘ರಾಜ ಮದಕರಿ ನಾಯಕ’ ಅರ್ಧ ಚಿತ್ರೀಕರಣ ಮುಗಿಸಿಕೊಂಡಿದ್ದು, ಸದ್ಯದಲ್ಲೇ ಸೆಟ್ಟೆರಲಿದೆ. ಇದಾದ ನಂತರ ‘ರಾಬರ್ಟ್’ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಅವರೊಂದಿಗೆ ತಮ್ಮ 56ನೇ ಚಿತ್ರವನ್ನ ಮಾಡಲಿದ್ದಾರೆ ದರ್ಶನ್. ಇಷ್ಟೆಲ್ಲಾ ಚಿತ್ರಗಳ ನಡುವೆ ‘ಕದನ ವಿರಾಮ’ ಯಾವಾಗ ಸೆಟ್ಟೆರಲಿದೆ, ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

‘ಡಿ ಬಾಸ್’ಗಿನ್ನು ‘ಕದನ ವಿರಾಮ’!! Read More »

ತಾಯ್ತನದ ಹೊಸ ಹಂತಕ್ಕೆ ಉತ್ಸಾಹುಕಳಾಗಿದ್ದೇನೆ – ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. “ನನ್ನ ಮಗು ದೊಡ್ಡದಾಗಿದೆ. ಹೀಗಾಗಿ ನಾರ್ಮಲ್ ಹೆರಿಗೆಗೆ ಹೋಗುವುದು ಅಪಾಯವಾಗಿದೆ ಎಂದು ಹೇಳಿದೆ. ಸಿಸೇರಿಯನ್ ಆಗಿತ್ತು ,ನನ್ನ ಕುಟುಂಬ ಸರಿಯಾದ ದಿನ ಹಾಗೂ ಸಮಯವನ್ನು ಆಯ್ಕೆ ಮಾಡಿದೆ. ಗುರುವಾರ ಮುಂಜಾನೆ ಅವನಿಗೆ ಜನ್ಮ ನೀಡಿದೆ. ತಾಯ್ತನದ ಹೊಸ ಹಂತಕ್ಕೆ ಉತ್ಸುಕಳಾಗಿದ್ದೇನೆ. ಮಗನನ್ನು ಉತ್ತಮವಾಗಿ ತಿಳಿಯಲು ಕಾಯಲು ಸಾಧ್ಯವಿಲ್ಲ” ಎಂದಿದ್ದಾರೆ. ಸಂಜನಾ ಅವರಿಗೆ ಅವರ ಸ್ನೇಹಿತರ ಹಾಗೂ ಹೈದರಾಬಾದ್ ನ ಗೈನಕಾಲಜಿಸ್ಟ್ ಡಾ. ಶಿಲ್ಪಿ ರೆಡ್ಡಿ ಬೆಂಬಲ ದೊರೆತಿದೆ ಎಂದು ಹೇಳುತ್ತಾರೆ.”ಅವರು ತುಂಬಾ ಬ್ಯುಸಿ ಇದ್ದರೂ ನನ್ನ ಜೀವನದ ದೊಡ್ಡ ದಿನದಂದು ನನ್ನ ಜೊತೆಗೆ ನಿಂತರು. ಆ ದಿನ ಹೈದರಾಬಾದಿಗೆ ತೆರಳುವ ಮುನ್ನ ನನ್ನ ಹೆರಿಗೆಗೆ ನನ್ನ ವೈದ್ಯರಿಗೆ ಸಹಾಯ ಮಾಡಿದರು” ಎಂದಿದ್ದಾರೆ. ಸಂಜನಾ ಅವರ ಹೆರಿಗೆ ದಿನವೇ ತಂಗಿ ನಿಕ್ಕಿ ಗಲ್ರಾನಿ ನಟ ಆದಿ ಜೊತೆ ಸಪ್ತಪದಿ ತುಳಿದರು‌. “ಆ ದಿನ ನನ್ನ ಕುಟುಂಬಕ್ಕೆ ವಿಶೇಷವಾದ ದಿನ. ಎರಡು ದೊಡ್ಡ ಘಟನೆಗಳು ನಡೆದವು.ನಾನು ಅಲ್ಲಿರಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ನಿಕ್ಕಿಯ ಮದುವೆ ದಿನಾಂಕ ಮುಹೂರ್ತದ ಆಧಾರದಲ್ಲಿ ಆಯ್ಕೆ ಮಾಡಲಾಗಿತ್ತು.“ಎಂದಿದ್ದಾರೆ.

ತಾಯ್ತನದ ಹೊಸ ಹಂತಕ್ಕೆ ಉತ್ಸಾಹುಕಳಾಗಿದ್ದೇನೆ – ಸಂಜನಾ ಗಲ್ರಾನಿ Read More »

ಪ್ರಶಾಂತ್ ನೀಲ್ ಅವರ ಸಿನಿಮಾ ಪ್ರಪಂಚ!!

ಪ್ರಶಾಂತ್ ನೀಲ್ ಸದ್ಯ ಭಾರತದ ಅತಿ ದೊಡ್ಡ ಸ್ಟಾರ್ ನಿರ್ದೇಶಕ ಎಂದರೆ ತಪ್ಪಾಗದು. ‘ಉಗ್ರಂ’ನಿಂದ ಆರಂಭಿಸಿ, ಇದೀಗ ಕೆಜಿಎಫ್ ಸರಣಿಯಿಂದ ಕನ್ನಡ, ಕರ್ನಾಟಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಎಲ್ಲ ಸಿನಿಪ್ರೇಕ್ಷಕರ ಅಭಿಮಾನ ಗಳಿಸಿದ್ದಾರೆ. ಇವರ ಮುಂದಿನ ಚಿತ್ರಗಳು ಯಾವುದು ಎಂಬುದು ಎಲ್ಲರಿಗೂ ತಿಳಿದಿದ್ದರೂ, ಈ ಚಿತ್ರಗಳ ಬಗೆಗೆ ಹೊಸದೇ ಕುತೂಹಲಗಳು ಕೆರಳುವಂತೆ ಮಾಡುತ್ತಿದ್ದಾರೆ ಪ್ರಶಾಂತ್. ಕೆಜಿಎಫ್ ಒಂದು ಸರಣಿ ಚಿತ್ರ. ಎರಡು ಅಧ್ಯಾಯಗಳಲ್ಲಿ, ಎರಡು ಭಾಗಗಳಾಗಿ ಬಿಡುಗಡೆಗೊಂಡು ಎಲ್ಲರ ಮನಸೆಳೆದಿದೆ. ನೀಲ್ ಸದ್ಯ ಪ್ರಭಾಸ್ ಅವರೊಂದಿಗೆ ತಮ್ಮ ಮುಂದಿನ ಚಿತ್ರ ‘ಸಲಾರ್’ನ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬಹುಪಾಲು ಕೆಲಸ ಮುಗಿಸಿದ್ದಾರೆ. ಇದರ ನಂತರ ಜೂನಿಯರ್ ಎನ್ಟಿಆರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಘೋಷಣೆ ಇತ್ತೀಚಿಗಷ್ಟೇ ಆಗಿದ್ದು, ‘ಎನ್ಟಿಆರ್31’ ಎಂಬ ಹೆಸರಿನಿಂದ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಲಾಗಿದೆ. ಈ ಎರಡೂ ಚಿತ್ರದ ಪೋಸ್ಟರ್ ಗಳನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟರ್ ಜೊತೆಗೆ ಸೇರಿಸಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವುದರ ಜನರ ಕುತೂಹಲವನ್ನ ಕೆರಳಿಸಿದ್ದಾರೆ. ಈಗಾಗಲೇ ಕೆಜಿಎಫ್ ಚಾಪ್ಟರ್ 3ರ ಬಗ್ಗೆ ಸುಳಿವು ನೀಡಿರೋ ನೀಲ್, ಈ ಎಲ್ಲ ಚಿತ್ರಗಳ ನಡುವೆ ಏನಾದರೂ ಕನೆಕ್ಷನ್ ಇಡಬಹುದಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತಿದೆ. ಅಲ್ಲದೇ ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರ್ ಅವರು ಇತ್ತೀಚಿಗಿನ ಸುದ್ದಿಗೋಷ್ಟಿಯಲ್ಲಿ “ಮೊದಲು ‘ಸಲಾರ್’ ಚಿತ್ರವನ್ನ ಮುಗಿಸಿಕೊಂಡು ನಂತರ ಕೆಜಿಎಫ್ ಚಾಪ್ಟರ್ 3ನ್ನು ಕೈಗೆತ್ತಿಕೊಳ್ಳಲಿದ್ದೇವೆ. ಕೆಜಿಎಫ್ ಚಾಪ್ಟರ್ 3 ಅನ್ನು ಖಂಡಿತವಾಗಿಯೂ ಮಾಡುತ್ತೇವೆ. ‘ಕೆಜಿಎಫ್’ ಹಾಗು ‘ಸಲಾರ್’ ಚಿತ್ರಗಳನ್ನ ಸೇರಿದಂತೆ ‘ಮಾರ್ವೆಲ್’ ರೀತಿಯ ಸಿನಿಮಾಟಿಕ್ ಯೂನಿವರ್ಸ್ ಒಂದನ್ನು ಮಾಡುವ ಹವಣಿಕೆಯಲ್ಲಿದ್ದೇವೆ ಎಂದಿದ್ದರು. ಹಾಗಾಗಿ ಈ ಮಾತನ್ನು, ಈ ಪೋಸ್ಟರ್ ಗಳನ್ನೂ ಕಂಡ ಅಭಿಮಾನಿಗಳಿಗೆ ಇದೆಲ್ಲ ಒಂದೇ ಕಥಾಹಂದರ ಎಂಬ ಅನುಮಾನ ಆರಂಭವಾಗಿದೆ. ಈ ಎಲ್ಲ ಚಿತ್ರಗಳಲ್ಲಿ ಒಂದೇ ಕಥಾಹಂದರದ, ಒಂದಕ್ಕೊಂದು ಸಂಬಂಧಪಡುವಂತ ಕಥರಗಳಿರಬಹುದು ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಈ ಎಲ್ಲ ಸಿನಿಮಾಗಳ ಪೋಸ್ಟರ್ ಗಳ ಶೈಲಿಯು ಒಂದೇ ರೀತಿಯಾಗಿದ್ದು, ಎಲ್ಲದರಲ್ಲೂ ಒಂದು ನೀಳ ಕಪ್ಪು ಬಣ್ಣದ ಛಾಯೆಯನ್ನ ನಾವು ಕಾಣಬಹುದು. ಇದರ ನಡುವೆ ಶ್ರೀಮುರುಳಿ ಅಭಿನಯದಲ್ಲಿ ಪ್ರಶಾಂತ್ ನೀಲ್ ಅವರು ಬರೆದ ಕಥೆಯೊಂದು ಕೂಡ ‘ಭಘೀರಾ’ ಎಂಬ ಹೆಸರಿನಲ್ಲಿ ಸಿನಿಮಾವಾಗಿ ಬರುತ್ತಿದ್ದು, ಆ ಚಿತ್ರದ ಪೋಸ್ಟರ್ ಕೂಡ ಇದೇ ಮಾದರಿಯಲ್ಲಿದೆ. ಆದರೆ ಇದನ್ನ ಪ್ರಶಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳದಿರುವುದು ಒಂದು ರೀತಿಯ ಗೊಂದಲವೇ. ಹಾಗಾಗಿ ಈ ಎಲ್ಲ ಚಿತ್ರಗಳ ಸಿನಿಮಾ ಪ್ರಪಂಚಾವೊಂದನ್ನು ನೀಲ್ ಸೃಷ್ಟಿಸಲಿದ್ದಾರೆ ಎಂಬ ಆಸೆ ಅಭಿಮಾನಿಗಳಲ್ಲಿದೆ. ‘ಮಾರ್ವೆಲ್ ಸಿನಿಮಾಟಿಕ್ ಯೂನಿವರ್ಸ್’ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಒಂದು ಕಥಾಪ್ರಪಂಚ. ಇದೇ ರೀತಿಯ ಒಂದು ಸರಣಿ ನಮ್ಮಲ್ಲಿ ಬರಲಿದೆ ಎಂಬ ಯೋಚನೆಯೇ ಸಂತಸ ನೀಡುತ್ತದೆ. ಇನ್ನು ಇದು ಸತ್ಯವಾದರೆ ಅದನ್ನ ಕಣ್ತುಂಬಿಕೊಂಡು ತೃಪ್ತರಾಗಲು ಭಾರತದಾದ್ಯಂತಪ್ರೇಕ್ಷಕರು ಕಾಯುವುದರಲ್ಲಿ ಸಂಶಯವಿಲ್ಲ.

ಪ್ರಶಾಂತ್ ನೀಲ್ ಅವರ ಸಿನಿಮಾ ಪ್ರಪಂಚ!! Read More »

ವೈಲ್ಡ್ ಲೈಫ್ ಫೋಟೋಗ್ರಾಫರ್ ಆದ ರೀಷ್ಮಾ ನಾಣಯ್ಯ

ಪ್ರೀತಂ ಗುಬ್ಬಿ ನಿರ್ದೇಶನದ ಹೊಸ ಸಿನಿಮಾ ಬಾನದಾರಿಯಲಿ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸುತ್ತಿರುವ ವಿಚಾರ ಸಿನಿ ಪ್ರಿಯರಿಗೆ ತಿಳಿದೇ ಇದೆ. ಇದೀಗ ಚಿತ್ರ ತಂಡ ರೀಷ್ಮಾ ನಾಣಯ್ಯ ಅವರ ಫಸ್ಟ್ ಲುಕ್ ನ್ನು ರಿಲೀಸ್ ಮಾಡಿದೆ. ರೀಷ್ಮಾ ಈ ಸಿನಿಮಾದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತನ್ನ ಮೂರನೇ ಸಿನಿಮಾ ಕುರಿತು ಮಾತನಾಡಿರುವ ರೀಷ್ಮಾ “ವೈಲ್ಡ್ ಲೈಫ್ ಫೋಟೋಗ್ರಫರ್ ಕಾದಂಬರಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಸದಾ ನಗುನಗುತ್ತಾ ಧನಾತ್ಮಕ ಚಿಂತನೆಯ ಹುಡುಗಿಯಾಗಿರುತ್ತಾಳೆ. ನಾನು ಫೋಟೋಗ್ರಫಿ ಕೋರ್ಸ್ ಮಾಡಿರುವುದರಿಂದ ಈ ಪಾತ್ರ ಮಾಡಲು ಸುಲಭವಾಯಿತು. ಆಧುನಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿದೆ. ಗಣೇಶ್ ಜೊತೆ ಶೂಟಿಂಗ್ ಮಾಡಲು ಕಾಯುತ್ತಿದ್ದೇನೆ”ಎಂದಿದ್ದಾರೆ. “ರೀಷ್ಮಾ ಅವರ ಪಾತ್ರದ ಭಾಗವನ್ನು ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ಮಾಡಲಾಗಿದೆ‌. ಅವರ ಪಾತ್ರ ತುಂಬಾ ಮನರಂಜನೆಯ ಅಂಶಗಳನ್ನು ಹೊಂದಿದೆ”ಎಂದಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಒಟ್ಟಿನಲ್ಲಿ ಒಂದಾದ ಮೇಲೆ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನದಲ್ಲಿ ರೀಷ್ಮಾ ನಾಣಯ್ಯ ಮೋಡಿ ಮಾಡುವುದಂತೂ ನಿಜ.

ವೈಲ್ಡ್ ಲೈಫ್ ಫೋಟೋಗ್ರಾಫರ್ ಆದ ರೀಷ್ಮಾ ನಾಣಯ್ಯ Read More »

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅಶ್ವಿನಿ ಹೇಳಿದ್ದೇನು ಗೊತ್ತಾ?

ಸದ್ಯ ಚಿತ್ರ ರಂಗದಲ್ಲಿ ನಡೆಯುತ್ತಿರುವ ಬಾಡಿ ಶೇಮಿಂಗ್ ಹಾಗೂ ಲಿಂಗ ತಾರತಮ್ಯದ ಬಗ್ಗೆ ನಟಿಯರು ಧ್ವನಿ ಎತ್ತಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಕೂಡಾ ದನಿ ಎತ್ತಿದ್ದು ಇದಕ್ಕೆ ಹಲವು ನಟಿಮಣಿಯರು ಕೈ ಜೋಡಿಸಿದ್ದಾರೆ. ಇದೀಗ ಅಶ್ವಿನಿ ನಕ್ಷತ್ರ ಧಾರಾವಾಹಿಯ ಅಶ್ವಿನಿ ಪಾತ್ರಧಾರಿ ಮಯೂರಿ ಕೂಡ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ನಟಿ ಚೇತನಾ ರಾಜ್ ನಿಧನದ ನಂತರ ಸಮಾನತೆಯ ಕೂಗು ಜೋರಾಗಿದೆ. “ಸಿನಿಮಾರಂಗದಲ್ಲಿ ಎಲ್ಲಾ ನಟಿಯರಿಗೂ ಈ ಸವಾಲು ಎದುರಾಗಿರುತ್ತದೆ. ನಮ್ಮನ್ನು ನಾವು ಪ್ರೀತಿಸಬೇಕು. ನಾವು ಹೇಗಿದ್ದೇವೆ ಎನ್ನುವುದನ್ನು ನಾವು ಒಪ್ಪಿಕೊಂಡರೆ ಸಾಕು” ಎನ್ನುವ ನಟಿ ಮಯೂರಿ “ನಟಿಯರು ಮಾತ್ರ ಅಲ್ಲ, ಎಲ್ಲರೂ ಬಾಹ್ಯ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ತೆಳ್ಳಗೆ ಇದ್ದರೆ ಮಾತ್ರ ಸೌಂದರ್ಯ ಎಂದು ಈಗಿನ ಪೀಳಿಗೆಯ ಮಕ್ಕಳಲ್ಲಿ ಇದೆ‌. ಈ ರೀತಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು” ಎಂದಿದ್ದಾರೆ ಮಯೂರಿ. ಮಯೂರಿ ಚಿತ್ರ ರಂಗಕ್ಕೆ ಬಂದಾಗ ನಟಿ ಎಂದರೆ ಹೀಗಿರಬೇಕು ಎಂದು ಹಲವರು ಹೇಳಿದ್ದರಂತೆ. ಸದ್ಯ ಮಗುವಿನ ಪೋಷಣೆಯಲ್ಲಿ ತೊಡಗಿಸಿ ಕೊಂಡಿರುವ ಮಯೂರಿ ಫಿಟ್ ನೆಸ್ ಬಗ್ಗೆ ಗಮನ ನೀಡುತ್ತಿದ್ದಾರೆ.

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅಶ್ವಿನಿ ಹೇಳಿದ್ದೇನು ಗೊತ್ತಾ? Read More »

“ರಾ ರಾ ರಕ್ಕಮ್ಮ” ಎನ್ನಲಿದ್ದಾರೆ ‘ವಿಕ್ರಾಂತ್ ರೋಣ’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ ದಿನಕ್ಕೊಂದು ದೊಡ್ಡ ದೊಡ್ಡ ಸುದ್ದಿಗಳಿಂದ ಜನರನ್ನ ಸೆಳೆಯುತ್ತಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಒಂದೊಂದೇ ಹೊಸ ಹೊಸ ಅಪ್ಡೇಟ್ ಗಳ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಇದೀಗ ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆಗೊಳಿಸಲು ಹೊರಟಿದ್ದಾರೆ. ಅನೂಪ್ ಎಸ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ, ನಿರೂಪ್ ಭಂಡಾರಿ, ನೀತ ಅಶೋಕ್, ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ಇವರೆಲ್ಲರ ಜೊತೆಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ‘ರಾಕೆಲ್ ಡಿಕೊಸ್ಟ’ ಅಲಿಯಾಸ್ ‘ಗಡಂಗ್ ರಕ್ಕಮ್ಮ’ ಎಂಬ ಹೆಸರಿಂದ ಜಾಕ್ವೆಲಿನ್ ನಟಿಸಲಿದ್ದು, ಈ ಪಾತ್ರಕ್ಕೆ ಸಂಭಂಧಿಸಿದಂತಹ ‘ರಾ ರಾ ರಕ್ಕಮ್ಮ’ ಎಂಬ ಹಾಡನ್ನು ಬಿಡುಗಡೆಗೊಳಿಸಲು ಚಿತ್ರರಂಗ ಸಜ್ಜಾಗಿದೆ. ಪ್ರಾಯಷಃ ಐಟಂ ಸಾಂಗ್ ರೀತಿಯದ್ದಾಗಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಐದು ಭಾಷೆಗಳಲ್ಲಿ ಐದು ಐದು ಬೇರೆ ಬೇರೆ ದಿನಗಳಲ್ಲಿ ಬಿಡುಗಡೆಯಗುತ್ತಿರುವುದು ವಿಶೇಷ. ಕನ್ನಡದಲ್ಲಿ ಮೇ 23ರ ಮಧ್ಯಾಹ್ನ 3:05ಕ್ಕೆ, ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಕ್ರಮವಾಗಿ 24, 25, 26 ಹಾಗು 27ಕ್ಕೆ ಮಧ್ಯಾಹ್ನ 1:05ಕ್ಕೆ ಸರಿಯಾಗಿ ಬಿಡುಗಡೆಯಾಗಲಿದೆ. ಪ್ರತಿಯೊಂದು ಭಾಷೆಯ ಹಾಡುಗಳು ‘ಟಿ-ಸೀರೀಸ್’ ಹಾಗು ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಭಾಷೆಯಲ್ಲಿ ನಿರ್ದೇಶಕ ನಿರೂಪ್ ಭಂಡಾರಿ ಅವರು ಸಾಹಿತ್ಯ ಬರೆದಿದ್ದು, ತಮಿಳಿನಲ್ಲಿ ಪಳನಿ ಭಾರತಿ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರೀ, ಮಲಯಾಳಂ ನಲ್ಲಿ ಸಂತೋಷ್ ವರ್ಮಾ ಹಾಗು, ಹಿಂದಿಯಲ್ಲಿ ಶಬ್ಬೀರ್ ಅಹ್ಮದ್ ಹಾಡನ್ನ ಬರೆದಿದ್ದಾರೆ. ಕನ್ನಡ, ಹಿಂದಿ ಹಾಗು ತಮಿಳಿನಲ್ಲಿ ನಕಾಶ್ ಅಝೀಜ್ ಹಾಗು ಸುನಿಧಿ ಚೌಹಾಣ್ ದನಿಯಾಗಿದ್ದು, ತೆಲುಗಿನಲ್ಲಿ ನಕಾಶ್ ಅಝೀಜ್ ಜೊತೆಗೆ ಮಂಗಲಿ ಅವರು ಹಾಡಿದ್ದು, ಮಲಯಾಳಂ ಭಾಷೆಯಲ್ಲಿ ಟಿಪ್ಪು ಹಾಗು ಭದ್ರ ರಾಜಿನ್ ಅವರು ಹಾಡಿದ್ದಾರೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರೋ ಈ ಸಿನಿಮಾವನ್ನು, ಹಿಂದಿಯಲ್ಲಿ ‘ಸಲ್ಮಾನ್ ಖಾನ್ ಫಿಲಂಸ್’ ಡಿಸ್ಟ್ರಿಬ್ಯೂಟ್ ಮಾಡಲಿದೆ. ಹಾಗೆಯೇ ಚಿತ್ರದ 3ಡಿ ಅವತಾರಣಿಕೆಯನ್ನು ‘ಪಿವಿಆರ್’ ದೇಶದಾದ್ಯಂತ ವಿತರಣೆ ಮಾಡಲಿದೆ. ಜುಲೈ 28ಕ್ಕೆ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ‘ವಿಕ್ರಾಂತ್ ರೋಣ’ ತನ್ನ ಬಗೆಗಿನ ನಿರೀಕ್ಷೆಯನ್ನ ಮುಗಿಲಿನೆತ್ತರಕ್ಕೆ ಏರಿಸುತ್ತಿದೆ.

“ರಾ ರಾ ರಕ್ಕಮ್ಮ” ಎನ್ನಲಿದ್ದಾರೆ ‘ವಿಕ್ರಾಂತ್ ರೋಣ’ Read More »

Scroll to Top