Karnataka Bhagya

ಕರ್ನಾಟಕ

ಸುದೀಪ್ ಗೆ ಬ್ಯಾಟ್ ನೀಡಿದ ಜೋಸ್ ಬಟ್ಲರ್

ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ ಮ್ಯಾನ್ ಹಾಗೂ ಇಂಗ್ಲೆಂಡ್ ತಂಡದ ಕ್ರಿಕೆಟಿಗ ಜೋಸ್ ಬಟ್ಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವರ್ಷದ ಅಂದರೆ 2022 ರ 15ನೇ ಐಪಿಎಲ್ ಆವೃತ್ತಿಯಲ್ಲಿ ತಾನು ಆಡಿದ್ದ ಬ್ಯಾಟ್ ಮೇಲೆ ತಮ್ಮ ಸಹಿ ಹಾಕಿರುವ ಜೋಸ್ ಬಟ್ಲರ್ ಆ ಬ್ಯಾಟ್ ನಲ್ಲಿ ಕಿಚ್ಚನಿಗೆ ಉಡುಗೊರೆಯ ರೂಪದಲ್ಲಿ ಕೊಟ್ಟಿದ್ದಾರೆ. ಇದನ್ನು ಸ್ವತಃ ಕಿಚ್ಚ ಅವರೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಟನೆಯ ಹೊರತಾಗಿ ಕ್ರಿಕೆಟ್ ಆಟಗಾರನಾಗಿಯೂ ಕಿಚ್ಚ ಸುದೀಪ್ ಗುರುತಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಸುದೀಪ್ ಆಟ ಆಡಿದ್ದು ಇದೀಗ ಆ ಫೋಟೊವೊಂದನ್ನು ರಾಜಾಸ್ಥಾನ್ ರಾಯಲ್ಸ್ ತಂಡವು ಟ್ವೀಟ್ಟರ್ ನಲ್ಲಿ ಹಂಚಿಕೊಂಡಿದೆ. ಜೋಸ್ ಬಟ್ಲರ್ ಅವರಿಂದ ಬ್ಯಾಟ್ ಪಡೆದುಕೊಂಡಿರುವ ಸುದೀಪ್ ವಿಡಿಯೋ ಮೂಲಕ ಧನ್ಯವಾದ ಹೇಳಿದ್ದಾರೆ‌. “ನಾನು ಇದನ್ನು ಎಂದಿಗೂ ನಿರೀಕ್ಷೆ ಮಾಡಲಿಲ್ಲ. ನನಗೆ ನಿಜವಾಗಿಯೂ ತುಂಬಾ ಆಶ್ಚರ್ಯವಾಯಿತು. ಇದೆಲ್ಲಾ ಸಾಧ್ಯವಾದುದು ರಾಜಸ್ಥಾನ್ ರಾಯಲ್ಸ್ ತಂಡದಿಂದ. ಆ ತಂಡಕ್ಕೆ ನನ್ನ ಪರವಾಗಿ ಧನ್ಯವಾದಗಳು. ಸ್ನೇಹಿತ ಕೆಸಿ ಕಾರ್ಯಪ್ಪಗೂ ಕೂಡಾ ಧನ್ಯವಾದಗಳು” ಎಂದಿದ್ದಾರೆ. “ಜೋಸ್ ಬಟ್ಲರ್ ಅವರು ತಮ್ಮ ಸಹಿ ಮಾಡಿರುವಂತಹ ಬ್ಯಾಟ್ ಅನ್ನು ನನಗೆ ನೀಡಿದ್ದಾರೆ. ಅದಕ್ಕೆ ತುಂಬಾ ಥ್ಯಾಂಕ್ಸ್. ಇದು ನನ್ನ ಪಾಲಿಗೆ ವಿಶೇಷವಾದ ಉಡುಗೊರೆ. ಇದನ್ನು ನಾನು ಸ್ವೀಕರಿಸಿದ್ದೇನ” ಎಂದು ಹೇಳಿದ್ದಾರೆ ಸುದೀಪ್.

ಸುದೀಪ್ ಗೆ ಬ್ಯಾಟ್ ನೀಡಿದ ಜೋಸ್ ಬಟ್ಲರ್ Read More »

ತನ್ನ ನೆಚ್ಚಿನ ‘ಸೆಲೆಬ್ರಿಟಿ’ಗಳಿಗೆ ಧನ್ಯವಾದ ಹೇಳಿದ ‘ಡಿ ಬಾಸ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ನಟರುಗಳಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರೋ ನಟರುಗಳಲ್ಲಿ ಒಬ್ಬರು. ಅಭಿಮಾನಿಗಳಿಂದ ಪ್ರೀತಿ ಹಾಗು ಗೌರವದಲ್ಲಿ ‘ಡಿ ಬಾಸ್’ ಎಂದೇ ಕರೆಸಿಕೊಳ್ಳುವ ಇವರು, ತನ್ನ ಅಭಿಮಾನಿಗಳನ್ನು ‘ಸೆಲೆಬ್ರಿಟಿ’ಗಳು ಎಂದು ಕರೆವವರು. ಇವರ ಅಭಿಮಾನಿಗಳು ಇವರ ಮೇಲಿಟ್ಟಿರುವ ಅಭಿಮಾನಕ್ಕೆ ಅವರುಗಳೇ ಸಾಟಿ. ಈ ವಿಷಯವನ್ನು ನಿದರ್ಶಸಲು ಇದೀಗ ಡಿ ಬಾಸ್ ಅಭಿಮಾನಿಗಳು ಮತ್ತೊಂದು ಉದಾಹರಣೆಯನ್ನು ಎದುರಿಡುತ್ತಿದ್ದಾರೆ. ದರ್ಶನ್ ಅವರು ತಮ್ಮ ನೆರನುಡಿಗೆ ಹೆಸರಾದವರು. ಇದೇ ಕಾರಣಕ್ಕೆ ಹಲವರಿಗೆ ಡಿ ಬಾಸ್ ಮೇಲೆ ಮುನಿಸಾಗಿರುವುದು ಉಂಟು. ಸದ್ಯ ಕನ್ನಡ ಮಾಧ್ಯಮಗಳು ದರ್ಶನ್ ಅವರ ಮೇಲೆ ವೈಮನಸ್ಸು ಇಟ್ಟುಕೊಂಡಿದೆ. ದರ್ಶನ್ ಅವರ ಸಿನಿಮಾಗಳ ಬಗೆಗಿನ ಯಾವ ವಿಷಯಗಳನ್ನೂ ಪ್ರದರ್ಶಿಸುವುದಿಲ್ಲ ಎಂದು ಕನ್ನಡ ಮಾಧ್ಯಮಗಳು ನಿರ್ಬಂಧ ಹಾಕಿಕೊಂಡಿವೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗಾಗಿ ಡಿ ಬಾಸ್ ಅಭಿಮಾನಿಗಳು ಹೊಸ ಯೋಜನೆ ಹಾಕಿಕೊಂಡಿದ್ದಾರೆ. “ಮಾಧ್ಯಮಗಳು ಬಾಸ್ ಸಿನಿಮಾಗಳನ್ನು ಪ್ರಚಾರ ಮಾಡುವುದಿಲ್ಲ. ಹಾಗಾಗಿ ‘ಕ್ರಾಂತಿ’ ಸಿನಿಮಾವನ್ನು ಅವರ ಅಭಿಮಾನಿಗಳಾಗಿ ನಾವುಗಳೇ ಪ್ರಚಾರ ಮಾಡೋಣ. ಪ್ರಾರಂಭದಿಂದ ಬಾಸ್ ಜೊತೆಗೆ ನಿಂತಿದ್ದೇವೆ. ಮುಂದೆಯೂ ಕೂಡ ನಿಲ್ಲೋಣ. ಮಾಧ್ಯಮಗಳ ಪ್ರಚಾರವಿಲ್ಲದೆ ‘ಕ್ರಾಂತಿ’ ಸಿನಿಮಾವನ್ನು ಯಶಸ್ವಿಯಾಗಿಸೋಣ” ಎನ್ನುವ ಯೋಜನೆಯನ್ನು ಡಿ ಬಾಸ್ ಅಭಿಮಾನಿಗಳು ಹಾಕಿಕೊಂಡಿದ್ದು, ಸದ್ಯ ಟ್ವಿಟರ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಟ್ರೆಂಡ್ ಆಗುತ್ತಿದೆ. ರಾಜ್ಯದಾದ್ಯಂತ ದರ್ಶನ್ ಅವರ ಅಭಿಮಾನಿಗಳಿಂದ ಅಪಾರ ಬೆಂಬಲ ಬರುತ್ತಿದೆ. ಸದ್ಯ ಈ ರೀತಿ ಅಭಿಮಾನಿಗಳು ಬರೆದುಕೊಂಡಿರುವ ಫೋಟೋ ಒಂದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟರ್, ಫೇಸ್ಬುಕ್ ಹಾಗು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಅಂದಿನಿಂದ ಇಂದಿನವರೆಗೂ ನನ್ನ ಜೊತೆಗೆ ನಿಂತಂತಹ ನನ್ನ ‘ಸೆಲೆಬ್ರಿಟಿ’ಗಳಿಗೆ ನಾನು ಚಿರಋಣಿ. ನಿಮ್ಮ ಅಭಿಮಾನವನ್ನು ವರ್ಣಿಸಲು ಪದಗಳೇ ಸಾಲದು” ಎಂದು ಬರೆದುಕೊಂಡಿದ್ದಾರೆ. ‘ಕ್ರಾಂತಿ’ ದರ್ಶನ್ ಅವರ ಮುಂದಿನ ಸಿನಿಮಾ. ವಿ ಹರಿಕೃಷ್ಣ ನಿರ್ದೇಶಸುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ರಚಿತ ರಾಮ್ ಬಣ್ಣ ಹಚ್ಚಿದ್ದಾರೆ. ಶೈಲಜ ನಾಗ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಕನ್ನಡ ಶಾಲೆಯ ಬೆಳವಣಿಗೆಗಳ ಬಗೆಗಿನ ಕಥೆ ಹೊಂದಿದೆಯಂತೆ. ‘ಡಿ ಬಾಸ್’ ಎಲ್ಲ ಸಿನಿಮಾಗಳು ಸದಾ ಸುದ್ದಿಯಲ್ಲಿದ್ದೆ ಇರುತ್ತವೆ. ಸದ್ಯ ಅಭಿಮಾನಿಗಳ ಈ ಯೋಜನೆ ಸಿನಿಮಾ ಪ್ರಚಾರಕ್ಕೆ ಇನ್ನಷ್ಟು ಪುಷ್ಟಿ ಕೊಡಲಿದೆ.

ತನ್ನ ನೆಚ್ಚಿನ ‘ಸೆಲೆಬ್ರಿಟಿ’ಗಳಿಗೆ ಧನ್ಯವಾದ ಹೇಳಿದ ‘ಡಿ ಬಾಸ್’ Read More »

ಕನ್ನಡಗರಿಗೆ ಧನ್ಯವಾದ ಹೇಳಿದ ಕಮಲ್ ಹಾಸನ್… ಯಾಕೆ ಗೊತ್ತಾ?

ಕಮಲ್ ಹಾಸನ್ ಇದೀಗ ಸಂಭ್ರಮದಲ್ಲಿದ್ದಾರೆ. ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ವಿಕ್ರಮ್ ಸಿನಿಮಾ ಕರ್ನಾಟಕದಲ್ಲಿಯೂ ಸಾಕಷ್ಟು ಗಳಿಕೆ ಮಾಡಿದ್ದು ಇದೀಗ ಕನ್ನಡಿಗರಿಗೆ ಧನ್ಯವಾದ ಹೇಳಿದ್ದಾರೆ.ಅದು ಕೂಡಾ ಕನ್ನಡದಲ್ಲಿ. ಹೌದು, ಕನ್ನಡದಲ್ಲಿ ವಿಡಿಯೋ ಮಾಡುವ ಮೂಲಕ ತಮ್ಮ ಸಿನಿಮಾ ಗೆಲ್ಲಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ ಕಮಲ್ ಹಾಸನ್.“ಕನ್ನಡ ಸಿನಿಮಾ ವೀಕ್ಷಕರು ಒಂದು ಉತ್ತಮ ಸಿನಿಮಾವನ್ನು ಯಾವಾಗಲೂ ಬೆಂಬಲಿಸುತ್ತಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಉತ್ತಮ ನಟರನ್ನು ಕೂಡಾ ಅವರು ಬೆಂಬಲಿಸುತ್ತಾರೆ. ಇದೀಗ ವಿಕ್ರಮ್ ಸಿನಿಮಾವನ್ನು, ನನ್ನನ್ನು ಬೆಂಬಲಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ” ಎಂದು ಹೇಳುತ್ತಾರೆ ಕಮಲ್ ಹಾಸನ್. ಗೆಲುವಿನ ಸಂಭ್ರಮದಲ್ಲಿರುವ ಕಮಲ್ ಹಾಸನ್ ಸಿನಿಮಾದ ಸಹ ಕಲಾವಿದರುಗಳು ಹಾಗೂ ತಂತ್ರಜ್ಞರನ್ನು ನೆನೆಪಿಸಿಕೊಳ್ಳಲು ಮರೆಯಲಿಲ್ಲ.” ಸಂಗೀತ ನಿರ್ದೇಶಕ ಶ್ರೀ ಅನಿರುದ್ಧ್, ಛಾಯಾಗ್ರಾಹಕ ಶ್ರೀ ಗಿರೀಶ್, ಸಂಕಲನಕಾರ ಶ್ರೀ ಫಿಲೋಮಿನ್ ರಾಜ್, ಸಾಹಸ ನಿರ್ದೇಶಕ ಶ್ರೀ ಅನ್ಬು ಅರಿವ್, ಶ್ರೀ ಸತೀಶ್ ಕುಮಾರ್‌ ಇವರನ್ನು ಈ ಸಮಯದಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. ಇನ್ನು ಇದರ ಜೊತೆಗೆ ಇವರುಗಳಿಗೆ ಬೆನ್ನೆಲುಬಾಗಿ ಸುಮಾರು ಜನ ಕೆಲಸ ಮಾಡಿದ್ದಾರೆ. ಎಲೆ ಮರೆಯ ಕಾಯಿಯಂತಿರುವ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ಕಮಲ್ ಹಾಸನ್. “ಶ್ರೀ ವಿಜಯ್ ಸೇತುಪತಿ, ಶ್ರೀ ಫಹಾದ್ ಫಾಸಿಲ್, ಶ್ರೀ ನರೇನ್, ಶ್ರೀ ಚಂಬಲ್ ವಿನೋದ್ ಅವರು ಕೂಡಾ ಈ ಗೆಲುವಿನ ಹಿಂದಿದ್ದಾರೆ” ಎನ್ನುವ ಕಮಲ್ ಹಾಸನ್ ನಟ ಸೂರ್ಯ ಅವರಿಗೂ ಧನ್ಯವಾದ ಹೇಳಿದ್ದಾರೆ.

ಕನ್ನಡಗರಿಗೆ ಧನ್ಯವಾದ ಹೇಳಿದ ಕಮಲ್ ಹಾಸನ್… ಯಾಕೆ ಗೊತ್ತಾ? Read More »

ಒಟಿಟಿ ಕಡೆಗೆ ಹೊರಟ ‘ಅವತಾರ ಪುರುಷ’

‘ಸ್ಯಾಂಡಲ್ವುಡ್ ಅಧ್ಯಕ್ಷ’ ಶರಣ್ ಹಾಗು ತಮ್ಮದೇ ವಿಶೇಷ ಅಭಿಮಾನಿ ಬಳಗ ಹೊಂದಿರೋ ನಿರ್ದೇಶಕ ಸಿಂಪಲ್ ಸುನಿ ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದ ಮೊದಲ ಸಿನಿಮಾ ‘ಅವತಾರ ಪುರುಷ’. ಬಿಡುಗಡೆಗೂ ಮುನ್ನವೇ ತನ್ನ ವಿಭಿನ್ನ ರೀತಿಯ ಹಾಡುಗಳು ಹಾಗು ಟ್ರೈಲರ್ ನಿಂದ ಜನಪ್ರಿಯವಾಗಿದ್ದ ಸಿನಿಮಾ ಮೇ 6ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿತ್ತು. ಸುನಿ ಅವರ ಹಾಸ್ಯದ ಎಳೆಯಲ್ಲೇ ವಾಮಾಚಾರದ ಬಗೆಗಿನ ಕಥೆ ಹೇಳಿದ್ದ ಸಿನಿಮಾ ಜನರ ಮುಖದಲ್ಲಿ ನಗು ತರಿಸುತ್ತ ಜನಮನ್ನಣೆ ಪಡೆದಿತ್ತು. ಚಿತ್ರಮಂದಿರಗಳಲ್ಲಿ ಭರ್ಜರಿ 25ದಿನಗಳನ್ನ ಪೂರೈಸಿದ ಸಿನಿಮಾ ಇದೀಗ ಒಟಿಟಿ ಕಡೆಗೆ ಲಗ್ಗೆ ಇಡುತ್ತಿದೆ. ಚಿತ್ರರಂಗದ ಪರದೆ ಮೇಲೆ ಈಗಲೂ ಕೂಡ ಪ್ರದರ್ಶನ ನೀಡುತ್ತಿರೋ ‘ಅವತಾರ ಪುರುಷ’ ಇದೀಗ ಅಮೆಜಾನ್ ಪ್ರೈಮ್ ವಿಡಿಯೋಗೆ ಬಂದು ಸೇರಲಿದೆ. 25ದಿನಗಳ ಯಶಸ್ವಿ ಪ್ರದರ್ಶನ ಪಡೆದು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ ಈ ಸಿನಿಮಾ ಇದೇ ಜೂನ್ 14ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಆಗದೆ ಹೋದವರು ಜೂನ್ 14ರಿಂದ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ನೋಡಬಹುದಾಗಿದೆ. ಶರಣ್ ಅವರ ಜೊತೆಗೆ ಸಿನಿಮಾದಲ್ಲಿ ಆಶಿಕಾ ರಂಗನಾಥ್, ಸಾಯಿಕುಮಾರ್, ಶ್ರೀನಗರ ಕಿಟ್ಟಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಅವತಾರ ಪುರುಷ’ ಒಂದು ಸರಣಿ ಚಿತ್ರ. ಎರಡು ಭಾಗಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ಈಗ ತೆರೆಕಂಡಿರುವ ಭಾಗಕ್ಕೆ ‘ಅಷ್ಟದಿಗ್ಭಂದನ ಮಂಡಲಕ’ ಎಂದು ಹೆಸರು. ಎರಡನೇ ಭಾಗಕ್ಕೆ ‘ತ್ರಿಶಂಕು ಪಯಣ’ ಎಂದು ಹೆಸರಿಡಲಾಗಿದ್ದು, ಬಹುಪಾಲು ಚಿತ್ರೀಕರಣ ಕೂಡ ಸಂಪೂರ್ಣವಾಗಿದೆ. ಆದಷ್ಟು ಬೇಗ ಎರಡನೇ ಭಾಗವನ್ನು ತೆರೆಕಾಣಿಸೋ ಭರದಲ್ಲಿದೆ ಚಿತ್ರತಂಡ. ಸದ್ಯ ಜೂನ್ 14ರಿಂದ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ನೋಡಲು ಸಿಗುವ ಮೊದಲನೇ ಭಾಗದಲ್ಲಿ ಎರಡನೇ ಭಾಗದ ಬಗೆಗಿನ ಮೂಲಕಥೆಯನ್ನು ಹೇಳಲಾಗಿದೆ.

ಒಟಿಟಿ ಕಡೆಗೆ ಹೊರಟ ‘ಅವತಾರ ಪುರುಷ’ Read More »

ಕರಾವಳಿ ಕುವರಿ ಅಮಿತಾ ಇನ್ನು ಮುಂದೆ ಮಲೆನಾಡ ಹುಡುಗಿ.‌

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ಮಾಣವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಒಲವಿನ ನಿಲ್ದಾಣದಲ್ಲಿ ಮಲೆನಾಡ ಹುಡುಗಿ ತಾರಿಣಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಡುತ್ತಿರುವ ಅಮಿತಾ ಕುಲಾಲ್ ಕರಾವಳಿ ಕುವರಿ. ಮಲೆನಾಡ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರಲಿರುವ ಅಮಿತಾ ಕುಲಾಲ್ ಅವರು ಕನ್ನಡ ಕಿರುತೆರೆಗೆ ಹೊಸಬರು ಹೊರತು ಕಿರುತೆರೆಗಲ್ಲ! ಈಗಾಗಲೇ ಜೀ ತೆಲುಗು ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ರೌಡಿ ಗಾರಿ ಪೆಳ್ಳಂ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿರುವ ಅಮಿತಾ ಕುಲಾಲ್ ಈಗ ತಾರಿಣಿಯಾಗಿ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಸೃಜನ್ ಲೋಕೇಶ್ ನಟನೆಯ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅಮಿತಾ ಕುಲಾಲ್ ಮುಂದೆ ಗಿಫ್ಟ್ ಬಾಕ್ಸ್ ಸಿನಿಮಾದಲ್ಲಿಯೂ ನಾಯಕಿಯಾಗಿ ಸೈ ಎನಿಸಿಕೊಂಡರು. ಇದೀಗ ಕಿರುತೆರೆಗೆ ಕಾಲಿಟ್ಟುರುವ ಈಕೆ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿದ್ದು ಮಾಡೆಲಿಂಗ್ ಮೂಲಕ. ಚಿಕ್ಕಂದಿನಿಂದಲೂ ಮಾಡೆಲಿಂಗ್ ನತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಅಮಿತಾ ಅವರ ಕನಸಿಗೆ ರೆಕ್ಕೆ ಬರುವ ಹಾಗೇ ಮಾಡಿದ್ದು ಟಿವಿ. ಟಿವಿಯಲ್ಲಿ ಬರುತ್ತಿದ್ದ ಫ್ಯಾಷನ್ ಶೋಗಳನ್ನು ನೋಡಿ ಅದರಿಂದ ಪ್ರೇರಣೆಗೆ ಒಳಗಾಗುತ್ತಿದ್ದ ಅಮಿತಾ ಕುಲಾಲ್ ತಾವು ಕೂಡಾ ನಾನಾ ನಮೂನೆಯ ಡ್ರೆಸ್ ಧರಿಸಿ ಕ್ಯಾಟ್ ವಾಕ್ ಮಾಡುತ್ತಿದ್ದರು. ಪದವಿಯ ನಂತರ ಮಾಡೆಲ್ ಆಗುವ ಧೃಡ ನಿರ್ಧಾರ ಮಾಡಿದ ಅಮಿತಾ ಮುಂಬೈಗೆ ಹೋಗಿ ಮಾಡೆಲಿಂಗ್ ನ ಆಳ ಅಗಲ ತಿಳಿದುಕೊಂಡರು. ಫ್ಯಾಷನ್ ಶೋಗಳಲ್ಲಿ ಮಿಂಚಿದರು. ಇದರ ಜೊತೆಗೆ ರೂಪದರ್ಶಿಯಾಗಿ ಕಮಾಲ್ ಮಾಡಿರುವ ಈಕೆಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಬಾದ್ ಸಾರೀಸ್ ಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಇಂತಿಪ್ಪ ಕುಡ್ಲದ ಕುವರಿ ಇದೀಗ ತಾರಿಣಿಯಾಗಿ ಕಿರುತೆರೆಗೆ ಮರಳಲಿದ್ದು ವೀಕ್ಷಕರ ಮನ ಸೆಳೆಯುತ್ತಾರಾ ಎಂದು ಕಾದುನೋಡಬೇಕಾಗಿದೆ.

ಕರಾವಳಿ ಕುವರಿ ಅಮಿತಾ ಇನ್ನು ಮುಂದೆ ಮಲೆನಾಡ ಹುಡುಗಿ.‌ Read More »

ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೊಸ ‘ಹೋಪ್’ ಜೊತೆಗೆ ಬರುತ್ತಿದ್ದಾರೆ ಶ್ವೇತ ಶ್ರಿವಾಸ್ತವ.

ಕನ್ನಡ ಚಿತ್ರರಂಗದಲ್ಲಿ ತಾಯಿಯಾದ ನಂತರ ಮರಳಿ ನಾಯಕನಟಿಯಾಗಿ ನಟಿಸಿದ ನಟಿಯರ ಸಂಖ್ಯೆ ಬೆರಳೆಣಿಕೆಯಷ್ಟು. ಈ ಸಾಲಿಗೆ ಸೇರುತ್ತಿರೋ ಈಗಿನ ನಟಿ ಎಂದರೆ ‘ಸಿಂಪಲ್ ಬೆಡಗಿ’ ಎಂದೇ ಖ್ಯಾತರಾಗಿರುವ ಶ್ವೇತ ಶ್ರಿವಾಸ್ತವ. ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾದಿಂದ ಜನಪ್ರಿಯರಾಗಿದ್ದ ಇವರು ತಾಯಿಯಾದ ಬಳಿಕ ನಟನೆಯಿಂದ ವಿರಾಮ ಪಡೆದಿದ್ದರು. ಇದೀಗ ಮರಳಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ಇದೀಗ ಶ್ವೇತ ಅವರ ಹೊಸ ಸಿನಿಮಾ ತೆರೆಕಡೆಗೆ ಹೊರಟಿದೆ. ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ ಮುಂತಾದ ಮನೋಜ್ಞ ನಟರು ಬಣ್ಣ ಹಚ್ಚಿರುವ ಹೊಸ ಸಿನಿಮಾ ‘ಹೋಪ್’. ಅಂಬರೀಶ ಎಂ ಎಂಬ ಯುವ ನಿರ್ದೇಶಕರ ಮೊದಲ ಪ್ರಯತ್ನ ಇದಾಗಿದ್ದು, ಈ ಸಿನಿಮಾಗೆ ಶ್ವೇತ ಶ್ರಿವಾಸ್ತವ ಅವರೇ ನಾಯಕಿ. ರಾಜಕೀಯದ ಏರು-ಪೇರುಗಳು, ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗೆಗೆ ಮಾತನಾಡುವ ಪೊಲಿಟಿಕಲ್ ಥ್ರಿಲರ್ ಕಥೆ ಇದಾಗಿರಲಿದೆ. ಸಂಪೂರ್ಣ ಹೊಸಬರ ತಂತ್ರಜ್ಞ ತಂಡ ಇರುವ ಈ ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ‘ಸಿಂಪಲ್ ಬೆಡಗಿ’ ಶ್ವೇತ ಶ್ರಿವಾಸ್ತವ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’, ಕಾದಂಬರಿ ಆಧಾರಿತ ‘ಚಿಕ್ಕಿ ಮೂಗುತಿ’ ಇನ್ನು ಹಲವು ಗಮನಾರ್ಹ ಸಿನಿಮಾಗಳಲ್ಲಿ ಶ್ವೇತ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. “ನನ್ನ ಕೆರಿಯರ್ ನಲ್ಲಿ ‘ಹೋಪ್’ ಒಂದು ತಿರುವು ನೀಡಬಹುದಾದಂತಹ ಚಿತ್ರ” ಎಂದು ಸ್ವತಃ ಶ್ವೇತಾ ಹೇಳಿಕೊಂಡಿದ್ದಾರೆ. ಸುಮಲತಾ ಅಂಬರೀಷ್, ಪ್ರಕಾಶ್ ಬೆಳವಾಡಿಯಾವರಂತಹ ಹಿರಿಯ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಸಿನಿಮಾ ಇದೇ ಜುಲೈ 8ರಂದು ಬಿಡುಗಡೆ ಕಾಣುತ್ತಿದೆ.

ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹೊಸ ‘ಹೋಪ್’ ಜೊತೆಗೆ ಬರುತ್ತಿದ್ದಾರೆ ಶ್ವೇತ ಶ್ರಿವಾಸ್ತವ. Read More »

ಮಾಡೆಲ್ ನಿಂದ ನಟನೆಯವರೆಗೆ ಕೃಷ್ಣಾ ಪಯಣ

ಕಲಾವಿದರ ಕುಟುಂಬದ ಕುಡಿಯಾಗಿರುವ ಕೃಷ್ಣಾ ಭಟ್ ಇಂದು ಬಣ್ಣದ ಜಗತ್ತಿನಲ್ಲಿ ಬದುಕು ರೂಪಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಟನೆಯ ಮೇಲೆ ಅವರಿಗಿರುವ ಒಲವು ಹಾಗೂ ಸತತ ಪರಿಶ್ರಮವೇ ಮುಖ್ಯ ಕಾರಣ. ಸವರ್ಣ ದೀರ್ಘ ಸಂಧಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪರಿಚಿತರಾದ ಕೃಷ್ಣಾ ಭಟ್ ಇತ್ತೀಚೆಗೆ ಬಿಡುಗಡೆಯಾಗಿರುವ ತೆಲುಗಿನ ಸರ್ಕಾರಿ ವಾರಿ ಪಾಟು ಸಿನಿಮಾದಲ್ಲಿ ಪೋಷಕ ಪಾತ್ರದ ಮೂಲಕ ಮೋಡಿ ಮಾಡಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯ ಸಿನಿರಂಗದಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಕೃಷ್ಣಾ ಭಟ್ ಪ್ರಾಯಶಃ ಎನ್ನುವ ಕನ್ನಡ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಹಿರಿತೆರೆಯ ಜನಪ್ರಿಯ ನಟಿಯಾಗಿ ಇಂದು ಕಿರುತೆರೆಯಲ್ಲಿ ಅರಸನಕೋಟೆಯ ಅಖಿಲಾಂಡೇಶ್ವರಿಯಾಗಿ ಮಿಂಚುತ್ತಿರುವ ವಿನಯಾ ಪ್ರಸಾದ್ ಅವರ ಮುದ್ದಿನ ಸೊಸೆಯಾಗಿರುವ ಕೃಷ್ಣಾ ಭಟ್ ಕಿರುತೆರೆತ ಸಕ್ರಿಯ ನಟ ರವಿ ಭಟ್ ಅವರ ಮಗಳು. ಅಪ್ಪ ಹಾಗೂ ಅತ್ತೆ ಇಬ್ಬರೂ ನಟನೆಯಲ್ಲಿ ಗುರುತಿಸಿಕೊಂಡಿದ್ದರೂ ಕೃಷ್ಣಾ ಅವರು ನಟಿಯಾಗಿದ್ದು ಆಕಸ್ಮಿಕ. ಯಾವತ್ತಿಗೂ ಕೂಡಾ ತಾನು ನಟಿಯಾಗಬೇಕು ಎಂಬ ಕನಸು ಕಂಡವರಲ್ಲ ಕೃಷ್ಣಾ. ಬದಲಿಗೆ ಕ್ರೀಡೆಯತ್ತ ವಿಶೇಷ ಆಸಕ್ತಿ ಹೊಂದಿದ್ದ ಆಕೆ ಶಾಲಾ ಕಾಲೇಜು ದಿನಗಳಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಕಾಲೇಜು ವಿದ್ಯಾರ್ಥಿನಿಯಾಗಿದ್ದ ಕೃಷ್ಣಾ ಮುಂದೆ ಅತ್ತೆ ವಿನಯಾ ಪ್ರಸಾದ್ ಅವರ ಒತ್ತಾಯದ ಮೇರೆಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಓದಿನ ಜೊತೆಗೆ ಮಾಡೆಲಿಂಗ್ ಅನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದರು. “ಫೆಮಿನಾ ಸ್ಟೈಲ್ ದೀವಾ”ಗೆ ಆಡಿಷನ್ ಕೊಟ್ಟ ಕೃಷ್ಣಾ ಭಟ್ ಫೈನಲ್ ರೌಂಡ್‌ನಲ್ಲೂ ಗೆದ್ದು, ಟ್ರೋಫಿತಯನ್ನು ಪಡೆದುಕೊಂಡರು. ಇದರ ಜೊತೆಗೆ ಫೆಮಿನಾ ಕವರ್‌ಪೇಜ್‌ನಲ್ಲೂ ಇವರ ಫೋಟೋ ಬಂದುದು ಇವರ ಪರಿಶ್ರಮಕ್ಕೆ ಉದಾಹರಣೆ. ಮುಂದೆ ಅನೇಕ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಈಕೆ ಮಿಂಚಿದರು. ಯಾವಾಗ ಮಾಡೆಲ್ ಆಗಿ ಕೃಷ್ಣಾ ಗುರುತಿಸಿಕೊಂಡರೋ ಆಗ ಸಹಜವಾಗಿ ನಟಿಸುವ ಅವಕಾಶಗಳು ಕೂಡಾ ಆಕೆಯನ್ಬು ಅರಸಿ ಬಂದವು. ಹಾಗೇ ಬಂದ ಅವಕಾಶಗಳನ್ನು ಕಂಡ ಕೃಷ್ಣಾ ನಟಿಯಾಗುವ ನಿರ್ಧಾರ ಮಾಡಿದರು. ಉಷಾ ಭಂಡಾರಿಯವರ ನಟನಾ ತರಬೇತಿ ಸೇರಿದ ಆಕೆ ನಟನೆಯ ರೀತಿ ನೀತಿ ತಿಳಿದುಕೊಂಡರು.ಇದೀಗ ನಟನೆಯಲ್ಲಿ ಬ್ಯುಸಿಯಾಗಿರುವ ಕೃಷ್ಣಾ ನಿಜವಾದ ಹೆಸರು ಭಾವನಾ ಭಟ್. ಮೂಲತಃ ಭಾವನಾ ಭಟ್ ಆಗಿದ್ದ ಈಕೆ ಇಂದು ಕೃಷ್ಣಾ ಭಟ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಆಕೆಯ ಅಜ್ಜ. ಕೃಷ್ಣ ಭಟ್ ಆಕೆಯ ಅಜ್ಜನ ಹೆಸರು. ತುಂಬಾ ಪ್ರೀತಿಸುತ್ತಿದ್ದ ಅಜ್ಜ ಇನ್ನಿಲ್ಲ ಎಂದು ಅರಿತುಕೊಂಡಾಗ ನೊಂದುಕೊಂಡ ಭಾವನಾ ಭಟ್ ಅಜ್ಜನ ಹೆಸರನ್ನೇ ತನಗೆ ಇಟ್ಟುಕೊಂಡರು. ಇದೀಗ ಕೃಷ್ಣಾ ಆಗಿರುವ ಈಕೆ ಸಿನಿರಂಗದಲ್ಲಿ ಇನ್ನಷ್ಟು ಬೆಳೆಯಲಿ ಎಂಬುದೇ ನಮ್ಮ ಹಾರೈಕೆ.

ಮಾಡೆಲ್ ನಿಂದ ನಟನೆಯವರೆಗೆ ಕೃಷ್ಣಾ ಪಯಣ Read More »

ಮೂರು ನಿರೀಕ್ಷಿತ ಕನ್ನಡ ಸಿನಿಮಾಗಳು ಒಂದೇ ದಿನ ತೆರೆಗೆ!!

ಕನ್ನಡ ಚಿತ್ರರಂಗ ಪ್ರತೀ ವಾರಾಂತ್ಯಕ್ಕೂ ಸಾಲು ಸಾಲು ಸಿನಿಮಾಗಳನ್ನು ಬೆಳ್ಳಿತೆರೆಗೆ ಕಳಿಸುತ್ತಿದೆ. ಒಂದಷ್ಟು ಚಿತ್ರಗಳು ಭರ್ಜರಿ ಯಶಸ್ಸು ಕಂಡರೆ, ಇನ್ನು ಕೆಲವು ಚಿತ್ರಗಳು ಬಿಡುಗಡೆಯಾದದ್ದೇ ಯಾರಿಗೂ ತಿಳಿಯದೇ ಹೋಗುತ್ತದೆ. ಹೀಗಿರುವಾಗ ಮೂರೂ ಬಹುನಿರೀಕ್ಷಿತ ಹಾಗು ಸುದ್ದಿಯಲ್ಲಿರುವ ಸಿನಿಮಾಗಳು ಒಂದೇ ದಿನ ಬಿಡುಗಡೆಯಗುವುದೆಂದರೆ!! ಹೌದು ಈಗ ಅದೇ ಆಗುತ್ತಿದೆ. ಇದೇ ಬರುವ ಜುಲೈ 1ರಂದು ಎಲ್ಲೆಡೆ ಪರಿಚಿತವಾಗಿರುವ ಹಾಗು ತನ್ನದೇ ಆದ ನಿರೀಕ್ಷಕರನ್ನು ಹೊಂದಿರುವ ಮೂರು ಸಿನಿಮಾಗಳು ಬಿಡುಗಡೆಯಗುತ್ತಿವೆ. ಅದರಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಸಿನಿಮಾ ಕೂಡ ಒಂದು. ಹ್ಯಾಟ್ರಿಕ್ ಹೀರೋ ಶಿವಣ್ಣನವರ 123ನೇ ಸಿನಿಮಾ ‘ಬೈರಾಗಿ’ ಬಿಡುಗಡೆಗೆ ಎಂದೋ ಸಿದ್ದವಾಗಿದ್ದು, ಜುಲೈ 1ರಂದು ತೆರೆಮೇಲೆ ಮೂಡಿಬರಲಿದೆ. ಛಾಯಾಗ್ರಾಹಕರಾದ ವಿಜಯ್ ಮಿಲ್ಟನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತವಿದ್ದು, ಹಾಡು ಹಾಗು ಟ್ರೈಲರ್ ಗಳು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿವೆ. ಶಿವಣ್ಣನ ಜೊತೆಗೆ ಡಾಲಿ ಧನಂಜಯ ಹಾಗು ಪೃಥ್ವಿ ಅಂಬರ್ ಅವರು ನಟಿಸುತ್ತಿರುವುದು ಚಿತ್ರಕ್ಕೆ ಕಾಯುತ್ತಿರುವವರ ಸಂಖ್ಯೆಯನ್ನು ಹೆಚ್ಚಿಸಿದೆ. ಜುಲೈ 1ರಂದು ಬಿಡುಗಡೆ ಕಾಣುತ್ತಿರುವ ಎರಡನೇ ಸಿನಿಮಾ ನಿರೂಪಕಿ-ನಟಿ, ಈಗ ನಿರ್ದೇಶಕಿ ಆಗಿರುವ ಶೀತಲ್ ಶೆಟ್ಟಿ ಅವರ ‘ವಿಂಡೋ ಸೀಟ್’ ಸಿನಿಮಾ. ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ನಾಯಕರಾಗಿ ಸಂಜನಾ ಆನಂದ್, ಅಮೃತ ಐಯೆಂಗಾರ್ ನಾಯಕಿಯರಾಗಿ ನಟಿಸುತ್ತಿರುವ ಈ ಸಿನಿಮಾ ಟ್ರೈಲರ್ ಹಾಗು ವಿಶಿಷ್ಟ ರೀತಿಯ ಹಾಡುಗಳಿಂದ ಜನರನ್ನ ತನ್ನತ್ತ ಆಕರ್ಷಸಿದೆ. ಥ್ರಿಲರ್-ಪ್ರೇಮಕತೆ ರೀತಿಯ ಸಿನಿಮಾ ಇದಾಗಿರುವ ಸಾಧ್ಯತೆಯಿದ್ದು ಸಿನಿರಸಿಕರು ಸಿನಿಮಾಗೆ ಕಾಯುತ್ತಿದ್ದಾರೆ. ‘ಆಟಗಾರ’ ಸಿನಿಮಾದಿಂದ ಯಶಸ್ಸು ಕಂಡ ನಿರ್ದೇಶಕರಾದ ಕೆ ಎಂ ಚೈತನ್ಯ ಅವರ ಮುಂದಿನ ಸಿನಿಮಾ ‘ಅಬ್ಬಬ್ಬಾ’. ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಕಂಡು ಜನಮನ್ನಣೆ ಪಡೆದಿದ್ದ ‘ಫ್ಯಾಮಿಲಿ ಪ್ಯಾಕ್’ ಸಿನಿಮಾ ಖ್ಯಾತಿಯ ಹಿಟ್ ಜೋಡಿ ಲಿಖಿತ್ ಶೆಟ್ಟಿ ಹಾಗು ಅಮೃತ ಐಯೆಂಗರ್ ಅವರು ಮತ್ತೊಮ್ಮೆ ಜೋಡಿಯಾಗಿ ನಟಿಸುತ್ತಿರುವ ಈ ಸಿನಿಮಾ ಒಂದು ರೋಮ್ಯಾಂಟಿಕ್ ಕಾಮಿಡಿ ಆಗಿರಲಿದೆ. ನಾಯಕನ ಸ್ನೇಹಿತರ ಪಾತ್ರದಲ್ಲಿ ತಾಂಡವ್, ಅಜಯ್ ರಾಜ್,ಧನರಾಜ್ ನಟಿಸುತ್ತಿದ್ದು ಸಿನಿಮಾ ಎಲ್ಲರ ಮುಖದಲ್ಲೂ ನಗು ತರಿಸುವುದು ಖಾತ್ರಿಯಾಗಿದೆ. ಈ ಸಿನಿಮಾ ಕೂಡ ಇದೇ ಜುಲೈ 1ರಂದು ಬಿಡುಗಡೆಯಾಗುತ್ತಿದ್ದು, ಇಂದು(ಜೂನ್ 9) ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದೆ. ಜುಲೈ 1ರಂದು ಬಿಡುಗಡೆಯಾಗುತ್ತಿರುವ ಮೂರೂ ಸಿನಿಮಾಗಳು ಚಿತ್ರಮಂದಿರಗಳಿಗೆ ಹೊಸ ಕಳೆ ಕೊಡುವುದು ಖಚಿತ. ಶಿವಣ್ಣ-ಡಾಲಿಯ ಅಭಿಮಾನಿಗಳು ‘ಬೈರಾಗಿ’ಯನ್ನ ಸಂಭ್ರಮಿಸಿದರೆ, ಹಾಸ್ಯಪ್ರೇಮಿಗಳು ‘ಅಬ್ಬಬ್ಬಾ’ ಹಾಗು ಥ್ರಿಲರ್ ಕಥೆಯ ಪ್ರೇಕ್ಷಕರು ‘ವಿಂಡೋ ಸೀಟ್’ ಸಿನಿಮಾಗಳನ್ನು ಕಣ್ತುಂಬಿಕೊಳ್ಳಲು ಸಿನಿಮಂದಿರಗಳ ಕಡೆಗೆ ಹೋಗಲಿದ್ದಾರೆ. ಒಟ್ಟಿನಲ್ಲಿ ಎಲ್ಲೆಡೆ ಕನ್ನಡ ಸಿನಿಮಾಗಳಿಂದಲೇ ಚಿತ್ರಮಂದಿರ ತುಂಬಿತುಳುಕುವ ಸಾಧ್ಯತೆಗಳಿವೆ.

ಮೂರು ನಿರೀಕ್ಷಿತ ಕನ್ನಡ ಸಿನಿಮಾಗಳು ಒಂದೇ ದಿನ ತೆರೆಗೆ!! Read More »

ಶಿವಣ್ಣ-ರಜನಿ ಚಿತ್ರಕ್ಕೆ ನಾಯಕನಟಿ ಇವರೇ!!

ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರಕ್ಕೆ ರಜನಿಕಾಂತ್ ಹಾಗು ಕರುನಾಡ ಚಕ್ರವರ್ತಿ ಶಿವಣ್ಣ ಒಂದಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ತಮಿಳಿನ ‘ಡಾಕ್ಟರ್’ ಹಾಗು ‘ಬೀಸ್ಟ್’ ಸಿನಿಮಾ ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಮೇರುನಟರನ್ನು ನಿರ್ದೇಶಿಸಲಿದ್ದಾರೆ. ತಲೈವ ರಜನಿಕಾಂತ್ ಅವರ 169ನೇ ಚಿತ್ರ ಇದಾಗಿರಲಿದ್ದು, ತಾತ್ಕಾಲಿಕವಾಗಿ ಚಿತ್ರಕ್ಕೆ ‘ತಲೈವರ್169’ ಎಂದು ಹೆಸರು ಕೂಡ ಇಡಲಾಗಿದೆ. ಶಿವಣ್ಣನ ಜೊತೆಗೆ ಒಂದು ಹಂತದ ಮಾತುಕಥೆಯನ್ನು ನೆಲ್ಸನ್ ಮುಗಿಸಿದ್ದಾರೆ ಎಂಬ ಸುದ್ದಿ ಒಂದುಕಡೆಯಾದರೆ ಇದೀಗ ಚಿತ್ರದ ಹೀರೋಯಿನ್ ಬಗೆಗಿನ ಹೊಸ ಸುದ್ದಿ ಹೊರಬೀಳುತ್ತಿದೆ. ರಜನಿಕಾಂತ್ ಅವರ ಈ ಹೊಸ ಚಿತ್ರಕ್ಕೆ ನಾಯಕಿ ಬೇರಾರು ಅಲ್ಲ, ವಿಶ್ವಸುಂದರಿ ಐಶ್ವರ್ಯ ರೈ. ಬಾಲಿವುಡ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಐಶ್ವರ್ಯ ರೈ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ರಜನಿ ಅವರೊಂದಿಗೆ ‘ರೋಬೊ’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದ ಇವರು, ಇದೀಗ ರಜನಿಕಾಂತ್ ಅವರ 169ನೇ ಚಿತ್ರಕ್ಕೆ ನಾಯಕಿಯಾಗುವುದರ ಮೂಲಕ ಮತ್ತೆ ದಕ್ಷಿಣ ಸಿನಿರಂಗದತ್ತ ಮುಖಮಾಡಲಿದ್ದಾರೆ. ರಜನಿಕಾಂತ್, ಶಿವಣ್ಣ ಜೊತೆಗೆ ಐಶ್ವರ್ಯ ರೈ ಅವರು ಕೂಡ ತಾರಾಗಣವನ್ನು ಸೇರಿಕೊಂಡಿರುವುದು ಸಿನಿಮಾದ ಬಗೆಗಿನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಲಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರಲಿರೋ ಈ ಸಿನಿಮಾಗೆ ಅನಿರುಧ್ ರವಿಚಂದರ್ ಅವರ ಸಂಗೀತ ಇರಲಿದೆ.

ಶಿವಣ್ಣ-ರಜನಿ ಚಿತ್ರಕ್ಕೆ ನಾಯಕನಟಿ ಇವರೇ!! Read More »

ರೂಪದರ್ಶಿಯಾಗಿ ಕರ್ನಾಟಕದ ಕ್ರಶ್

ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿಯಾಗಿ ನಟನಾ ಜಗತ್ತಿಗೆ ಪರಿಚಿತರಾದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕರ್ಣಾಟಕದ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಅಂಗಳದಲ್ಲೂ ತನ್ನ ನಟನಾ ಕಂಪನ್ನು ಪಸರಿಸಿರುವ ಮಂಜಿನ ನಗರಿ ಚೆಲುವೆ ಈಗ ಮಗದೊಂದು ಸಿಹಿಸುದ್ದಿ ನೀಡಿದ್ದಾರೆ. ಅರೇ, ಅದೇನಂತೀರಾ.‌. ಇಲ್ಲಿ ಕೇಳಿ. ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರ ಸಾಲಿಗೆ ಸೇರಿರುವ ಕೊಡಗಿನ ಬೆಡಗಿ ರಶ್ಮಿಕಾ ಇದೀಗ ಸಿನಿಮಾ ಕ್ಷೇತ್ರದ ಪಾಕ್ಷಿಕ ಫಿಲಂಫೇರ್ ನ ಮುಖಪುಟದ ರೂಪದರ್ಶಿಯಾಗಿ ಮೋಡಿ ಮಾಡುತ್ತಿದ್ದಾರೆ. ಕನ್ನಡ ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆಯರ ಪಟ್ಟಿಗೆ ಸೇರಿದ್ದಾರೆ. ಸಿನಿಮಾ ರಂಗದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮನೋ ನಟನೆಯ ಮೂಲಕ ತನ್ನದೇ ಆದ ಹವಾ ಸೃಷ್ಟಿ ಮಾಡಿರುವ ರಶ್ಮಿಕಾ ಮಂದಣ್ಣ ಫಿಲಂಫೇರ್ ಮ್ಯಾಗಜೀನ್ ನ ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ರಶ್ಮಿಕಾ ಅಭಿಮಾನಿಗಳಿಗೆ ಖುಷಿ ತಂದಿದೆ. ಸದ್ಯ ಪರಭಾಷೆಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿದ್ದಾರಾ ಎಂದು ಕಾದುನೋಡಬೇಕಾಗಿದೆ.

ರೂಪದರ್ಶಿಯಾಗಿ ಕರ್ನಾಟಕದ ಕ್ರಶ್ Read More »

Scroll to Top