Karnataka Bhagya

ಕರ್ನಾಟಕ

ಚಾರ್ಲಿಗೆ ಮನಸೋತ ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದೇನು ನೋಡಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “777 ಚಾರ್ಲಿ” ಇನ್ನು ಎರಡೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಕಿರಣ್ ರಾಜ್ ಕೆ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಿನಿಪ್ರಿಯರ ಮನ ಸೆಳೆದಿತ್ತು. ಟೀಸರ್ ನೋಡಿ ಫಿದಾ ಆದ ಸಿನಿಪ್ರಿಯರು ಯಾವಾಗ ಚಿತ್ರ ರಿಲೀಸ್ ಆಗಲಿದೆ ಎಂದು ಕಾಯುತ್ತಿದ್ದಾರೆ. ಇನ್ನು ಚಿತ್ರ ಬಿಡುಗಡೆಯಾಗುವ ಮೊದಲೇ ಪ್ರೀಮಿಯರ್ ಶೋ ನಡೆದಿದ್ದು ಚಿತ್ರರಂಗದ ಗಣ್ಯಾತಿಗಣ್ಯರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ 777 ಚಾರ್ಲಿ ಸಿನಿಮಾ ನೋಡಿದ್ದು ಈ ಕಥಾಹಂದರಕ್ಕೆ ಸಂಪೂರ್ಣ ಫಿದಾ ಆಗಿದ್ದಾರೆ. ಪ್ರಾಣಿ ಪ್ರಿಯೆ ಅದರಲ್ಲೂ ಶ್ವಾನ ಪ್ರಿಯೆ ಆಗಿರುವ ರಮ್ಯಾ ಅವರು ಈ ಸಿನಿಮಾದ ನೋಡಿ ಮನ ಸೋತಿದ್ದಾರೆ. “ಇದು ಒಂದು ಇಮೋಷನಲ್ ಸಿನಿಮಾ. ಸಿನಿನಾದ ಪ್ರತಿಯೊಂದು ದೃಶ್ಯವನ್ನು ನಾನು ತುಂಬಾ ಎಂಜಾಯ್ ಮಾಡಿದೆ. ಕೆಲವೊಂದು ಸನ್ನಿವೇಶಗಳು ನನ್ನನ್ನು ಭಾವುಕಳನ್ನಾಗಿಯೂ ಮಾಡಿತು‌” ಎನ್ನುತ್ತಾರೆ ಸ್ಯಾಂಡಲ್ ವುಡ್ ಕ್ವೀನ್. “ಕೊರೋನಾದ ಬಳಿಕ ಥಿಯೇಟರ್ ಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಆದರೆ ಈ ಸಿನಿಮಾದ ವಿಚಾರದಲ್ಲಿ ಹಾಗಲ್ಲ. ಸಿನಿಪ್ರಿಯರು ಮತ್ತೆ ಥಿಯೇಟರ್ ನತ್ತ ಮುಖ ಮಾಡಲು ಇದು ಉತ್ತಮ ಸಿನಿಮಾ. ಕೇವಲ ಮಾತ್ರವಲ್ಲದೇ ಮಕ್ಕಳು ಕೂಡಾ ಈ ಸಿನಿಮಾವನ್ನು ಎಂಜಾಯ್ ಮಾಡಬಹುದು” ಎಂದಿದ್ದಾರೆ ರಮ್ಯಾ. ಇದರ ಜೊತೆಗೆ ” ಈ ಸಿನಿಮಾದಲ್ಲಿ ಒಂದು ಒಳ್ಳೆಯ ಸಂದೇಶ ಕೂಡಾ ಇದೆ. ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಅವರ ಈ ಪ್ರಯತ್ನಕ್ಕೆ ನನ್ನ ಕಡೆಯಿಂದ ಬಹುಪರಾಕ್. ಇಷ್ಟು ಒಳ್ಳೆಯ ಕಥಾ ಹಂದರವುಳ್ಳ ಸಿನಿಮಾವನ್ನು ಥಿಯೇಟರ್ ನಲ್ಲೇ ಹೋಗಿ ನೋಡಬೇಕು” ಎಂದು ಹೇಳುತ್ತಾರೆ.

ಚಾರ್ಲಿಗೆ ಮನಸೋತ ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದೇನು ನೋಡಿ Read More »

ಮಚ್ಚೆ ಗೌಡ ಪಕ್ಕಾ ಮನರಂಜನೆ ನೀಡುವ ಪಾತ್ರ – ಚಂದನ್ ಆಚಾರ್

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿರಂಗದಲ್ಲಿ ನಟನಾ ಛಾಪು ಮೂಡಿಸಿರುವ ಚಂದನ್ ಆಚಾರ್ ರಂಗಭೂಮಿಯ ಮೂಲಕ ನಟನಾ ನಂಟು ಬೆಳೆಸಿಕೊಂಡ ಹುಡುಗ. ಕಿರಿಕ್ ಪಾರ್ಟಿಯಲ್ಲಿ ನಾಯಕ ರಕ್ಷಿತ್ ಶೆಟ್ಟಿ ಸ್ನೇಹಿತ ಆಗಿ ಕಾಣಿಸಿಕೊಂಡಿದ್ದ ಚಂದನ್ ಆಚಾರ್ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾದರು. ಮುಂದೆ ಗೋಲ್ಡನ್ ಸ್ಟಾರ್‌ ಗಣೇಶ್ ನಟನೆಯ ಮುಗುಳುನಗೆಯಲ್ಲಿಯೂ ನಾಯಕನ ಸ್ನೇಹಿತ ಆಗಿ ನಟಿಸಿರುವ ಚಂದನ್ ಆಚಾರ್ ಪೋಷಕ ಪಾತ್ರದ ಮೂಲಕ ಮನೆ ಮಾತಾದರು. ಮುಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ನಾಯಕ ಆಗಿ ಭಡ್ತಿ ಪಡೆದ ಚಂದನ್ ಆಚಾರ್ ಮಂಗಳವಾರ ರಜಾದಿನ ಸಿನಿಮಾದಲ್ಲಿ ನಾಯಕನಾಗಿ ಕಮಾಲ್ ಮಾಡಿದ್ದಾರೆ. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಸಿನಿಪ್ರಿಯರನ್ನು ರಂಜಿಸಲಿದ್ದಾರೆ ಚಂದನ್ ಆಚಾರ್. ಈ ಸಿನಿಮಾದಲ್ಲಿ ಮಂಚೇಗೌಡ ಆಗಿ ಅಭಿನಯಿಸಿದ್ದು ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು. ಚಂದನ್ ಆಚಾರ್ ಅವರ ಈ ಹೊಸ ಅವತಾರ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ. “ಮಂಚೇಗೌಡ ಪಾತ್ರದ ಬಗ್ಗೆ ಹೇಳಬೇಕೆಂದರೆ ಇದು ಒಂದು ರೀತಿಯ ಮನರಂಜನೆ ನೀಡುವ ಪಾತ್ರ ಹೌದು. ನನ್ನ ಪಾತ್ರಕ್ಕೆ ಕರ್ಮಷಿಯಲ್ ಆ್ಯಂಗಲ್ ಗಳು ಕೂಡಾ ಇದೆ‌. ಎಲ್ಲಾ ರೀತಿಯಿಂದಲೂ ಇದು ನನಗೆ ಹೊಸ ಅನುಭವ. ಈಗಾಗಲೇ ನನ್ನ ಪಾತ್ರದ ಪೋಸ್ಟರ್ ರಿಲೀಸ್ ಆಗಿದೆ. ಉಳಿದವರ ಪಾತ್ರಗಳನ್ನು ಇದೇ ರೀತಿ ಲಾಂಚ್ ಮಾಡಲು ಚಿತ್ರತಂಡ ಯೋಚಿಸಿದೆ” ಎಂದು ಹೇಳುತ್ತಾರೆ ಚಂದನ್ ಆಚಾರ್‌‌‌. ಇನ್ನು “ಬೆಂಗಳೂರಿಗೆ ಬಂದ ನಾಲ್ಕು ಜನ ಯುವಕರು ತಮ್ಮ ಜೀವನ ನಿರ್ವಹಣೆಗಾಗಿ ಸ್ಟಾಟರ್ಪ್ ಕಂಪನಿಯೊಂದನ್ನು ಶುರು ಮಾಡುವ ನಿರ್ಧಾರ ಮಾಡುತ್ತಾರೆ. ಅವರು ಜೀವನ ನಿರ್ವಹಣೆ ಹೇಗೆ ಮಾಡುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ” ಎಂದು ಸಿನಿಮಾದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ ಚಂದನ್ ಆಚಾರ್.

ಮಚ್ಚೆ ಗೌಡ ಪಕ್ಕಾ ಮನರಂಜನೆ ನೀಡುವ ಪಾತ್ರ – ಚಂದನ್ ಆಚಾರ್ Read More »

ರಾಕಿಂಗ್ ಸ್ಟಾರ್ ಅವರ ‘ಯಶೋಮಾರ್ಗ’ದಿಂದ ಮತ್ತೊಂದು ಉತ್ತಮ ಕೆಲಸ.

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಭಾರತೀಯ ಬಾಕ್ಸ್ ಆಫೀಸ್ ನ ‘CEO’ ಎಂದು ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದ್ದಾರೆ ಯಶ್. ಸದ್ಯ ತಮ್ಮ ವೃತ್ತಿಜೀವನದಲ್ಲಿ ಎತ್ತರಕ್ಕೆರಿರುವ ಇವರು, ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವವರು. ‘ಯಶೋಮಾರ್ಗ’ ಎಂಬ ತಂಡವೊಂದನ್ನು ಕಟ್ಟಿ, ಅದರ ಮೂಲಕ ಹಲವರು ಸಮಾಜಪರ ಕೆಲಸಗಳನ್ನು ಯಶ್ ಮಾಡಿದ್ದಾರೆ. ಈ ಹಿಂದೆ, ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಯತ್ತಲಿನ ಕೆಲಸಗಳನ್ನು ಮಾಡಿರುವ ಈ ‘ಯಶೋಮಾರ್ಗ’ ಸದ್ಯ ಇನ್ನೊಂದು ಒಳ್ಳೆಯ ಕೆಲಸವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಎಂಬಲ್ಲಿ ‘ಚಂಪಕ ಸರಸ್ಸು’ ಎಂಬ ಮನಮೋಹಕ ಕಲ್ಯಾಣಿಯಿದೆ. ಕೆಳದಿ ಸಂಸ್ಥಾನದ ಅರಸರಾದ ವೆಂಕಟಪ್ಪ ನಾಯಕರು ತಮ್ಮ ಪ್ರೇಯಸಿಯಾದ ಚಂಪಕ ಎಂಬುವರ ನೆನಪಿಗಾಗಿ ನಿರ್ಮಿಸಿದ ಈ ಕೆರೆಗೆ ಸುಮಾರು ನಾಲ್ಕು ಶತಮಾನಗಳ ಇತಿಹಾಸವಿದೆಯಂತೆ. ಆದರೆ ಕಾಲ ಕಳೆದಂತೆ ಕೆರೆ ತಮ್ಮ ಕಳೆಯನ್ನ ಕಳೆದುಕೊಳ್ಳುತ್ತಾ ಬಂದಿತ್ತು. ಆದರೆ ಈಗ ಈ ಕಲ್ಯಾಣಿ ಮರಳಿ ತನ್ನ ಹಳೆಯ ಹೊಳಪನ್ನು ಪಡೆದಿದೆ. ಇದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರ ನೇತೃತ್ವದ ‘ಯಶೋಮಾರ್ಗ’ ತಂಡ. ‘ಯಶೋಮಾರ್ಗ’ ತಂಡವು ಹೈದರಾಬಾದ್ ಮೂಲದ ‘ಫ್ರೀಡಂ ಆಯಿಲ್ ಅಸೋಸಿಯೇಷನ್’ ಸಂಸ್ಥೆಯ ಜೊತೆಗೆ ಕೈಜೋಡಿಸಿ ಸುಮಾರು ಒಂದು ವರ್ಷದ ಹಿಂದೆಯೇ ಕಲ್ಯಾಣಿಯ ಜೀರ್ಣೋದ್ದಾರ ಕಾರ್ಯಕ್ರಮವನ್ನು ಆರಂಭಿಸಿತ್ತು. ಹಿರಿಯ ಜಲಕಾರ್ಯಕರ್ತರಾದ ಶಿವಾನಂದ ಕಳವೆ ಅವರ ಮಾರ್ಗದರ್ಶನದಲ್ಲಿ ಈ ಕೆಲಸವನ್ನು ನಿರ್ವಹಿಸಿದ್ದು, ‘ವಿಶ್ವ ಪರಿಸರ ದಿನಾಚರಣೆ’ಯಾದ ಜೂನ್ 5ರಂದು ಕಲ್ಯಾಣಿಯನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಜನಪ್ರಿಯ ಚಂಪಕ ಸರಸ್ಸು ಕಲ್ಯಾಣಿಯ ಮಧ್ಯಭಾಗದಲ್ಲಿ ಶಿವನ ದೇವಾಲಯವೊಂದಿದೆ, ಹಾಗು ದೇವಾಲಯಕ್ಕೆ ಸಂಪರ್ಕವಾಗಿ ಕಲ್ಲಿನ ಹಾದಿ ಕೂಡ ಇದೆ. ಕಲ್ಯಾಣಿಯ ಸುತ್ತಲಿನ ಗೋಡೆಗಳಲ್ಲಿ ಕಲ್ಲಿನ ಕೆತ್ತನೆಗಳನ್ನು ಮಾಡಲಾಗಿದೆ. ಇಷ್ಟು ಸುಂದರ ಕಲ್ಯಾಣಿಯು ಜನಬಳಕೆ ಕಡಿಮೆಯಾದರಿಂದ ಕಳೆಗುಂದಿತ್ತು. ಸದ್ಯ ‘ಯಶೋಮಾರ್ಗ’ ತಂಡದ ಪರಿಶ್ರಮದಿಂದ ಕೆರೆ ಹಾಗು ಅದರ ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸಿ, ಶಿವಾನಂದ ಕಳವೆ ಅವರ ಮನವಿಯಂತೆ ಕೆರೆಗೆ ಮಣ್ಣಿನಿಂದಲೇ ಆವರಣ ಗೋಡೆಯನ್ನು ನಿರ್ಮಿಸಿ, ಕಲ್ಯಾಣಿಗೆ ಮೊದಲ ಕಳೆಯನ್ನ ಮರಳಿ ನೀಡಿದ್ದಾರೆ. ಜೂನ್ 5ರಂದು ದೇವಾಲಯಕ್ಕೆ ಪೂಜೆ ಹಾಗು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕಲ್ಯಾಣಿಯನ್ನು ಲೋಕಾರ್ಪಣೆ ಮಾಡಲಾಗಿದೆ. “ಈ ಹಿಂದೆ ರಾಜ್ಯದಲ್ಲಿ ಹಾಳಾಗಿ ಹೋಗುವ ಕಡೆಗೆ ಸಾಗುತ್ತಿರೋ ಕಲ್ಯಾಣಿ ಹಾಗು ಕೆರೆಗಳ ಬಗ್ಗೆ ಯಶ್ ಅವರ ಬಗ್ಗೆ ಮಾತನಾಡುವಾಗ ಈ ಚಂಪಕ ಸರಸ್ಸು ಕಲ್ಯಾಣಿಯ ಬಗೆಗೂ ಚರ್ಚಿಸಲಾಗಿತ್ತು. ಈ ಬಗ್ಗೆ ಕಾಳಜಿಯಿರುವ ಯಶ್ ಅವರು ರಾಜ್ಯದ ಜಲಸೆಲೆಗಳು ಉಳಿಯಬೇಕು ಎಂಬ ದೃಷ್ಟಿಯಲ್ಲಿ ಈ ಜೀರ್ಣೋದ್ದಾರ ಕಾರ್ಯ ಮಾಡಿರುವುದು ಸಂತಸ ತಂದಿದೆ” ಎಂದಿದ್ದಾರೆ ಶಿವಾನಂದ ಕಳವೆ.

ರಾಕಿಂಗ್ ಸ್ಟಾರ್ ಅವರ ‘ಯಶೋಮಾರ್ಗ’ದಿಂದ ಮತ್ತೊಂದು ಉತ್ತಮ ಕೆಲಸ. Read More »

ಸಿನಿಮಾ ನಿರ್ದೇಶಕರಿಗೆ ದುಬಾರಿ ಕಾರು ನೀಡಿದ ಕಮಲ್ ಹಾಸನ್

ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 60 ಕೋಟಿ ರೂಗಳಿಗೂ ಅಧಿಕ ಆದಾಯ ಗಳಿಸಿರುವ ವಿಕ್ರಮ್ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಗಳಿಸಿದ್ದು ಬರೋಬ್ಬರಿ 175 ಕೋಟಿ ರೂಪಾಯಿ. ವಿಕ್ರಮ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಮಲ್ ಹಾಸನ್ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಒಂದು ಅಭೂತಪೂರ್ವ ಮೈಲಿಗಲ್ಲನ್ನೇ ಸೃಷ್ಟಿ ಮಾಡಿದೆ. ಹೌದು, ಇಲ್ಲಿಯ ತನಕ ಕಮಲ್ ಹಾಸನ್ ಅಭಿನಯದ ಯಾವ ಸಿನಿಮಾವೂ ಇಷ್ಟೊಂದು ದಾಖಲೆ ಸೃಷ್ಟಿ ಮಾಡಿದ್ದೇ ಇಲ್ಲ. ಇನ್ನು ಕಮಲ್ ಹಾಸನ್ ಅವರ ಪಾಲಿಗೆ ವಿಕ್ರಮ್ ಸಿನಿಮಾ ಸ್ಪೆಷಲ್ ಹೌದು. ಯಾಕೆಂದರೆ ಇದರಲ್ಲಿ ಅವರು ಕೇವಲ ನಟರಾಗಿ ಮಾತ್ರರಲ್ಲದೇ ನಿರ್ಮಾಪಕರಾಗಿಯೂ ಕಾಣಿಸಿಕೊಂಡಿದ್ದಾರೆ. ವಿಕ್ರಮ್ ಸಿನಿಮಾ ಗೆದ್ದ ಸಂತಸದಲ್ಲಿರುವ ಕಮಲ್ ಹಾಸನ್ ಅವರು ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಮಲ್ ಹಾಸನ್ ಅವರು ಲೋಕೇಶ್ ಅವರಿಗೆ 60 ಲಕ್ಷಕ್ಕೂ ಅಧಿಕ ಮೌಲ್ಯದ ಲೆಕ್ಸಾಸ್ ಕಾರು ಉಡುಗೊರೆ ನೀಡಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಕಮಲ್ ಹಾಸನ್ ಪತ್ರದ ಮೂಲಕ ಧನ್ಯವಾದ ತಿಳಿಸಿದ್ದು ಲೋಕೇಶ್ ಕನಗರಾಜ್ ಅದನ್ನು ಟ್ವಿಟ್ಟರ್ ನಲ್ಲೊ ಹಂಚಿಕೊಂಡಿದ್ದಾರೆ.

ಸಿನಿಮಾ ನಿರ್ದೇಶಕರಿಗೆ ದುಬಾರಿ ಕಾರು ನೀಡಿದ ಕಮಲ್ ಹಾಸನ್ Read More »

ಡಾಲಿಯ ಹೊಸ ಸಿನಿಮಾ ಇದೀಗ ಒಟಿಟಿಗೆ.

‘ನಟರಾಕ್ಷಸ’ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ ಅವರು ಸದ್ಯ ಕನ್ನಡದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳನ್ನು ಕೈಗೆತ್ತಿಕೊಂಡಿರುವ ಡಾಲಿ ಸಾಲು ಸಾಲು ಯಶಸ್ಸುಗಳನ್ನು ಸಹ ಕಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಹೊಸ ಸಿನಿಮಾ ‘ಟ್ವೆಂಟಿ ಒನ್ ಅವರ್ಸ್’. ಜೈಶಂಕರ್ ಪಂಡಿತ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಜನರನ್ನ ಸೆಳೆಯುವಲ್ಲಿ ಕೊಂಚ ಮಟ್ಟಿಗೆ ವಿಫಲವಾಗಿತ್ತು. ನಾಯಕನಾಗಿ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಧನಂಜಯ ಅವರು ತಮ್ಮ ನಟನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರೂ, ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಈ ಸಿನಿಮಾವನ್ನು ಅಭಿನಯ ಚಕ್ರವರ್ತಿ ಸುದೀಪ್ ಅವರು ಕೂಡ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೇ 20ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿದ್ದ ಈ ಚಿತ್ರ ಸದ್ಯ ಒಟಿಟಿ ಕಡೆಗೆ ಓಡಿಬರುತ್ತಿದೆ. ಧನಂಜಯ ಅವರ ಜೊತೆಗೆ, ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಂತಾದವರು ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಒಂದು ಥ್ರಿಲರ್ ಕಥೆಯಾಗಿತ್ತು. ಬೆಂಗಳೂರಿನಲ್ಲಿ ಕಾಣೆಯಾಗುವ ಒಂದು ಮಲಯಾಳಿ ಹುಡುಗಿ, ಆ ಹುಡುಗಿಯನ್ನು ಹುಡುಕಲು ಹೊರಡೋ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಡಾಲಿ. ಈ ನಡುವೆ ಅವರಿಗೆ ಎದುರಾಗುವ ಸಮಸ್ಯೆಗಳು, ಪ್ರಶ್ನೆಗಳು ಮತ್ತಿತರ ಅಂಶಗಳನ್ನೊಳಗೊಂಡ ರೋಮಾಂಚನಕಾರಿ ಚಿತ್ರ ಇದಾಗಿತ್ತು. ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ‘ರೆಂಟ್’ ಮಾದರಿಯಲ್ಲಿ ಸಿನಿಮಾ ನೋಡಲು ಲಭ್ಯವಾಗುತ್ತಿದೆ. ಸಿನಿಮಾ ನೋಡಲು ಕಾಯುತ್ತಿರುವ ‘ನಟರಾಕ್ಷಸನ’ ಅಭಿಮಾನಿಗಳು ಪ್ರೈಮ್ ವಿಡಿಯೋ ನಲ್ಲಿ 129 ರೂಪಾಯಿಯನ್ನು ನೀಡಿ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು. ಇದಕ್ಕೆ ಪ್ರೈಮ್ ಮೆಂಬರ್ ಆಗಿರುವ ಅಗತ್ಯವಿರುವುದಿಲ್ಲ. ಒಂದುವೇಳೆ ಅಮೆಜಾನ್ ನ ಪ್ರೈಮ್ ಸದಸ್ಯ ನೀವಾಗಿದ್ದರು ಸಹ ಈ ಚಿತ್ರ ನೋಡಲು ಅಧಿಕ 129 ರೂಪಾಯಿಯನ್ನು ನೀಡಲೇ ಬೇಕಾಗುತ್ತದೆ. ಇದು ಪ್ರೈಮ್ ವಿಡಿಯೋ ಸಂಸ್ಥೆಯ ಹೊಸ ‘ರೆಂಟ್’ ರೀತಿಯ ನಿಯಮವಾಗಿದೆ.

ಡಾಲಿಯ ಹೊಸ ಸಿನಿಮಾ ಇದೀಗ ಒಟಿಟಿಗೆ. Read More »

“ಬಿಡುಗಡೆಗೂ ಮುನ್ನವೇ ಚಾರ್ಲಿ ನಮ್ಮನ್ನು ಗೆಲ್ಲಿಸಿದ್ದಾಳೆ”- ರಕ್ಷಿತ್ ಶೆಟ್ಟಿ.

‘777 ಚಾರ್ಲಿ’ ಸಿನಿಮಾದ ಬಗೆಗೆ ಯಾರಿಗೆ ತಾನೇ ಗೊತ್ತಿಲ್ಲ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಇದೇ ಜೂನ್ 10ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿದೆ. ಎಲ್ಲೆಡೆ, ಎಲ್ಲ ಭಾಷೆಗಳಲ್ಲೂ ಮುಗಿಲೆತ್ತರದ ನಿರೀಕ್ಷೆಗಳನ್ನು ಪಡೆದಿದೆ ಈ ಸಿನಿಮಾ. ಚೆನ್ನೈ ನಲ್ಲಿ ‘ಚಾರ್ಲಿ’ಯದೇ ಕಟ್-ಔಟ್ ಕೂಡ ತಲೆ ಎತ್ತಿ ನಿಂತಿದೆ. ಈಗಾಗಲೇ ಹಲವಾರು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡ ಆಯೋಜಿಸಿದ್ದ ಪ್ರೀಮಿಯರ್ ಶೋಗಳು ಪ್ರೇಕ್ಷಕರಿಗೆ ನಿಗದಿತ ಸಿನಿಮಾ ಬಿಡುಗಡೆ ದಿನಾಂಕಕ್ಕೂ ಮುನ್ನವೇ ‘ಧರ್ಮ ಹಾಗು ಚಾರ್ಲಿ’ಯ ಜೀವಗಾಥೆಯನ್ನು ಕಣ್ತುಂಬಿಕೊಳ್ಳಲು ಸಹಕಾರ ನೀಡಿವೆ. ಭಾರತದ ವಿವಿಧೆಡೆ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರದರ್ಶಿತವಾಗುತ್ತಿರೋ ಪ್ರೀಮಿಯರ್ ಶೋಗಳು ಎಲ್ಲೆಡೆ ಸಿನಿರಸಿಕರ ಮನಸೆಳೆಯುತ್ತಿದೆ. ಮನುಷ್ಯ ಹಾಗು ನಾಯಿಯ ನಡುವಿನ ಅವಿನಾಭಾವ ಸಂಭಂದವನ್ನು ಸಾರಿ ಹೇಳುವ ಸಿನಿಮಾ ‘777 ಚಾರ್ಲಿ’. ದೆಹಲಿ, ಕೊಲ್ಕತ್ತಾ, ಲಕ್ನೋ, ಅಹ್ಮದಾಬಾದ್ ಮುಂತಾದ ಭಾಗಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿತ್ತು. ಅದರ ಜೊತೆಗೆ ಹಲವು ಸೆಲೆಬ್ರಿಟಿ ಪ್ರೀಮಿಯರ್ ಶೋಗಳನ್ನು ಕೂಡ ಚಿತ್ರತಂಡ ಆಯೋಜಿಸಿತ್ತು. ಇವುಗಳನ್ನು ಕಂಡ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ಚಿತ್ರತಂಡದವರನ್ನು ಸಂತುಷ್ಟಾರಾಗಿಸಿದೆ. ಈ ಬಗ್ಗೆ ಮಾತನಾಡಿದ ನಿರ್ಮಾಪಕ ಹಾಗು ನಾಯಕ ನಟ ರಕ್ಷಿತ್ ಶೆಟ್ಟಿ,”ಈಗಾಗಲೇ ಆಯೋಜಿಸಲಾದ ಪ್ರೀಮಿಯರ್ ಶೋಗಳನ್ನು ಕಂಡ ಹಲವಾರು ಜನರು ಚಿತ್ರದ ಬಗೆಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಕೆಲವರಂತೂ ಕಣ್ತುಂಬಿಸಿಕೊಂಡು ಚಿತ್ರಮಂದಿರದಿಂದ ಹೊರಗೆ ಬರುತ್ತಿದ್ದಾರೆ. ಈ ರೀತಿಯ ಪ್ರತಿಕ್ರಿಯೆಗಳು ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತಿವೆ. ವ್ಯಾಪಾರದ ದೃಷ್ಟಿಯಲ್ಲಿ ಹೇಳುವುದಾದರೆ “ಬಿಡುಗಡೆಗೂ ಮುನ್ನವೇ ಚಾರ್ಲಿ ನಮ್ಮನ್ನು ಗೆಲ್ಲಿಸಿದ್ದಾಳೆ” ಎನ್ನುತ್ತಾರೆ. ಚಾರ್ಲಿ ಸಿನಿಮಾವನ್ನು ಕಣ್ತುಂಬಿಕೊಂಡ ನಮ್ಮ ಕನ್ನಡದ ಸೆಲೆಬ್ರಿಟಿಗಳಾದ ಮೋಹಕತಾರೆ ರಮ್ಯಾ, ‘ರಾಜಕುಮಾರ’ ಖ್ಯಾತಿಯ ಸಂತೋಷ್ ಆನಂದ್ ರಾಮ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ದಂಪತಿ ಮುಂತಾದವರು ಸಿನಿಮಾ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಚಿತ್ರ ನನ್ನ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ” ಎಂದು ರಮ್ಯಾ ಭಾವುಕರಾದರೆ, “ಈ ರೀತಿಯ ಪಾತ್ರ, ಹಾಗು ಈ ರೀತಿಯ ಸಿನಿಮಾ ಮಾಡಲು ಅಪಾರ ತಾಳ್ಮೆ ಹಾಗು ಉತ್ತಮ ವ್ಯಕ್ತಿತ್ವ ಬೇಕು. ರಕ್ಷಿತ್ ಹಾಗು ಕಿರಣ್ ರಾಜ್ ಅವರು ಸದೃಢ ವ್ಯಕ್ತಿತ್ವದವರು ಎಂಬುದು ಈ ಮೂಲಕ ತಿಳಿಯುತ್ತದೆ” ಎನ್ನುತ್ತಾರೆ ಸಂತೋಷ್ ಆನಂದ್ ರಾಮ್. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರೀಮಿಯರ್ ಶೋ ಪಡೆಯಲಿದೆ. ಜೂನ್ 9ರಂದು ಕರ್ನಾಟಕ ರಾಜ್ಯದಾದ್ಯಂತ ಸುಮಾರು 100 ಪ್ರೀಮಿಯರ್ ಶೋಗಳನ್ನು ಚಿತ್ರ ಕಾಣಲಿದೆ. ಬೆಂಗಳೂರಿನಲ್ಲೇ ಸುಮಾರು 55ಕ್ಕೂ ಹೆಚ್ಚು ಕಡೆಗಳಲ್ಲಿ ಶೋ ಏರ್ಪಾಡಾಗಿದೆ. ಈ ಪ್ರದರ್ಶನಗಳ ಟಿಕೆಟ್ ಗಳು ಕೂಡ ಅಷ್ಟೇ ರಭಸದಿಂದ ಮಾರಾಟವಾಗುತ್ತಿವೆ. ಹಾಗಾಗಿ ಪ್ರೀಮಿಯರ್ ಶೋಗಳಿಂದಲೇ ಸಿನಿಮಾ ಲಾಭ ಪಡೆಯುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ.

“ಬಿಡುಗಡೆಗೂ ಮುನ್ನವೇ ಚಾರ್ಲಿ ನಮ್ಮನ್ನು ಗೆಲ್ಲಿಸಿದ್ದಾಳೆ”- ರಕ್ಷಿತ್ ಶೆಟ್ಟಿ. Read More »

ಶಾಲಾ ಮಕ್ಕಳ ನೆರವಿಗೆ ನಿಂತ ಸಂಯುಕ್ತಾ ಹೊರನಾಡು

ಲೈಫು ಇಷ್ಟೇನೆ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸಂಯುಕ್ತಾ ಹೊರನಾಡು ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರೂ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದಾರೆ. ನಟನೆಯ ಹೊರತಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಸಂಯುಕ್ತಾ ಹೊರನಾಡು ಇದೀಗ ಸೌಲಭ್ಯ ವಂಚಿತ ಶಾಲಾ ಮಕ್ಕಳಿಗೆ ಸೌಲಭ್ಯ ನೀಡಲು ಮುಂದಾಗಿದ್ದಾರೆ. ಹೌದು, ಈಗಾಗಲೇ ರಾಜ್ಯಾದ್ಯಂತ ಶಾಲೆಗಳು ಶುರುವಾಗಿದೆ. ಎರಡು ವರ್ಷಗಳಿಂದ ಶಾಲೆಗೆ ಹೋಗದೇ ಮನೆಯಲ್ಲಿಯೇ ಇರುವ ಮಕ್ಕಳೆಲ್ಲ ಇದೀಗ ಸಂತಸದಿಂದ ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಇದರ ನಡುವೆ ಮನೆಯಲ್ಲಿನ ಬಡತನದಿಂದಾಗಿ ಶಾಲೆಗೆ ಹೋಗಲು ಅಸಾಧ್ಯವಾಗುವ ಪರಿಸ್ಥಿತಿಯಲ್ಲಿಯೂ ಅನೇಕರಿದ್ದಾರೆ. ಇಂತಹ ಸೌಲಭ್ಯದಿಂದ ವಂಚಿತರಾಗಿರುವಂತಹ ಮಕ್ಕಳಿಗೆ ನೆರವಾಗಲೆಂದೇ ಕೇರ್‌ ಮೋರ್‌ ಫೌಂಡೇಶನ್ ರೂಪಿಸಿದ್ದು ಇದರ ಮುಂದಾಳತ್ವ ವನ್ನು ನಟಿ ಸಂಯುಕ್ತಾ ಹೊರನಾಡು ವಹಿಸಿದ್ದಾರೆ. ಆ ಫೌಂಡೇಶನ್ ನ ವತಿಯಿಂದ ಮಕ್ಕಳಿಗೆ ನೆರವಾಗುವ ಅಭಿಯಾನವನ್ನು ಹಮ್ಮಿಕೊಂಡಿದ್ದು ಅದು ಇದೇ ಜೂ.5 ರಿಂದ 20ರವರೆಗೆ ನಡೆಯಲಿದೆ. ಇನ್ನು ಕೇರ್ ಮೋರ್ ಫೌಂಡೇಶನ್ ವತಿಯಿಂದಲೂ ಮಕ್ಕಳಿಗೆ ಬ್ಯಾಗ್ ಗಳನ್ನು ವಿತರಿಸಲಾಗುತ್ತಿದ್ದು, ಇದರ ಜೊತೆಗೆ ಬಳಸದೇ ಇರುವ ಬ್ಯಾಗ್ ಗಳು ಅಥವಾ ಹೊಸ ಬ್ಯಾಗ್ ಗಳನ್ನು ಕೂಡಾ ದೇಣಿಗೆ ನೀಡಬಹುದು ಎಂದು ಸಂಯುಕ್ತಾ ಮನವಿ ಮಾಡಿದ್ದಾರೆ. ಅಂದ ಹಾಗೇ ಯಾರಾದರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದಿದ್ದರೆcaremore foundation caremore fdn ಹೆಸರಿನ ಟ್ವಿಟ್ಟರ್‌ ಹಾಗೂ ಇನ್ಸ್ಟಾಗ್ರಾಮ್ ಪೇಜ್‌ಗಳಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬಹುದು. ನಟನೆಯ ಹೊರತಾಗಿ ಒಂದಲ್ಲ ಒಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಯುಕ್ತಾ ಅವರು ಈಗ ಶಾಲಾ ಮಕ್ಕಳ ನೆರವಿಗೆ ಕೈ ಜೋಡಿಸಿದ್ದು ಇವರ ಕಾರ್ಯಕ್ಕೆ ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಈಕೆ ಅನೇಕರಿಗೆ ಸ್ಫೂರ್ತಿಯೂ ಹೌದು.

ಶಾಲಾ ಮಕ್ಕಳ ನೆರವಿಗೆ ನಿಂತ ಸಂಯುಕ್ತಾ ಹೊರನಾಡು Read More »

‘ಸಪ್ತ ಸಾಗರದಾಚೆ ಎಲ್ಲೋ’ ಅಲೆ ಎಬ್ಬಿಸಿರುವ ರಕ್ಷಿತ್ ಶೆಟ್ರು ಮತ್ತು ತಂಡ.

ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಹೊಸ ಅಲೆಯ ಸಂಸ್ಥಾಪಕ ಎಂದರೆ ತಪ್ಪಾಗದು. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಕನ್ನಡಿಗರಿಗೆ ನಟನಾಗಿಯೂ, ನಿರ್ದೇಶಕನಾಗಿಯೂ ನೀಡುತ್ತಾ ತನಗಿದ್ದ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ ರಕ್ಷಿತ್. ನಿನ್ನೆಯಷ್ಟೇ(ಜೂನ್ 6) ತಮ್ಮ ಜನುಮದಿನವನ್ನು ಆಚರಿಸಿಕೊಂಡ ಇವರು, ತಮ್ಮ ಹೊಸ ಸಿನಿಮಾದ ಟೀಸರ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಹೇಮಂತ್ ಎಂ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟೀಸರ್ ಜೂನ್ 6ರ ಸಂಜೆ 6ಗಂಟೆಗೆ ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ ಹಾಗು ರುಕ್ಮಿಣಿ ವಸಂತ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನ ಎಂದೋ ಹುಟ್ಟುಹಾಕಿತ್ತು. ಇದೀಗ ಬಿಡುಗಡೆಯಾದ ಟೀಸರ್ ಈ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ದೂರದಲ್ಲೆಲ್ಲೋ ಇರುವ ‘ಮನು’ಗೆ ತನ್ನ ಮನಸಿನ ಭಾವನೆಗಳನ್ನ ಹೇಳಿಕೊಳ್ಳುವ ‘ಪ್ರಿಯಾ’ಳ ಮುಗ್ಧ ಮಾತುಗಳನ್ನ ಈ ಟೀಸರ್ ತುಂಬಿಕೊಂಡಿದ್ದು, ಪ್ರೇಕ್ಷಕರೆಲ್ಲರ ಮನಸನ್ನೂ ಹಗುರವಾಗಿಸೋ ಭಾವನೆ ತುಂಬಿದೆ. ಒಂದು ಮಧುರ ಪ್ರೇಮಕಥೆಯನ್ನೊಳಗೊಂಡ ಥ್ರಿಲರ್ ಕಥೆ ಇದಾಗಿರಲಿದೆ ಎಂಬ ಎಲ್ಲ ರೀತಿಯ ಸುಳಿವು ಸಹ ಚಿತ್ರದ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ಚರಣ್ ರಾಜ್ ಅವರ ಸಂಗೀತವಿರುವ ಈ ಚಿತ್ರದಲ್ಲಿ ನಾಯಕ ನಾಯಕಿಯ ಜೊತೆಗೆ ಅವಿನಾಶ್, ಶರತ್ ಲೋಹಿತಾಶ್ವ, ಗೋಪಾಲ್ ಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸ್ವತಃ ರಕ್ಷಿತ್ ಶೆಟ್ಟಿ ಅವರು ತಮ್ಮ ‘ಪರಮ್ ವಾಹ್ ಸ್ಟುಡಿಯೋಸ್’ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಅರ್ಧ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ಆದಷ್ಟು ಬೇಗ ತೆರೆಮೇಲೆ ಬರುವ ಸಾಧ್ಯತೆಯಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಎಂಬ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. • ‘ಐಎಂಡಿಬಿ’ಯಲ್ಲಿ ಹತ್ತಕ್ಕೆ ಹತ್ತು ಅಂಕ!!ಬಿಡುಗಡೆಯ ದಿನಾಂಕ ಕೂಡ ಖಾತ್ರಿಮಾಡಿಕೊಳ್ಳದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ‘ಐಎಂಡಿಬಿ’ ಸಿನಿಮಾ ಪರದೆಯಲ್ಲಿ ಹತ್ತಕ್ಕೆ ಹತ್ತು ಅಂಕಗಳನ್ನು ಪಡೆದಿದೆ. ನಿರ್ದೇಶಕ ಹೇಮಂತ್ ರಾವ್ ಹಾಗು ನಟ ರಕ್ಷಿತ್ ಶೆಟ್ಟಿ ಅವರು ಮೂಡಿಸಿರುವ ಭರವಸೆಯನ್ನು ಈ ರೇಟಿಂಗ್ ಎತ್ತಿ ಹಿಡಿಯುತ್ತಿದೆ ಎನ್ನಬಹುದು. ಸದ್ಯ ‘777 ಚಾರ್ಲಿ’ ಸಿನಿಮಾದ ಬಿಡುಗಡೆಯ ಭರದಲ್ಲಿರುವ ರಕ್ಷಿತ್ ಶೆಟ್ಟಿ, ಆದಷ್ಟಿ ಬೇಗ ‘ಸಪ್ತ ಸಾಗರದಾಚೆ ಎಲ್ಲೋ’ ತಂಡವನ್ನು ಮತ್ತೆ ಸೇರುವ ಸಾಧ್ಯತೆಗಳಿವೆ.

‘ಸಪ್ತ ಸಾಗರದಾಚೆ ಎಲ್ಲೋ’ ಅಲೆ ಎಬ್ಬಿಸಿರುವ ರಕ್ಷಿತ್ ಶೆಟ್ರು ಮತ್ತು ತಂಡ. Read More »

ಪ್ರಾಕ್ಟಿಕಲ್ ಹುಡುಗಿಯಾಗಿ ಬರುತ್ತಿದ್ದಾರೆ ದಿವ್ಯಾ ಉರುಡುಗ

ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚಿಟ್ಟೆ ಹೆಜ್ಜೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ದಿವ್ಯಾ ಉರುಡುಗ ಆಕಸ್ಮಿಕವಾಗಿ ಬಣ್ಣದ ನಂಟು ಬೆಳೆಸಿಕೊಂಡ ಚೆಂದುಳ್ಳಿ ಚೆಲುವೆ. ಚಿಟ್ಟೆ ಹೆಜ್ಜೆ ಧಾರಾವಾಹಿಯ ನಂತರ ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ದಿವ್ಯಾ ಉರುಡುಗ ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮೋಡಿ ಮಾಡಿದ್ದಾರೆ. ಹುಲಿರಾಯ ಸಿನಿಮಾದ ಲಚ್ಚಿಯಾಗಿ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ದಿವ್ಯಾ ಉರುಡುಗ ಗೆ ಅದೃಷ್ಟ ದೇವತೆ ಅಸ್ತು ಎಂದಿದ್ದರು. ಮುಂದೆ ಧ್ವಜ, ಫೇಸ್ 2 ಫೇಸ್, ಜೋರು, ಗಿರ್ಕಿ, ರಾಂಚಿ ಸಿನಿಮಾಗಳಲ್ಲಿ ನಟಿಸಿ ಸೈ ಮಾಡಿಕೊಂಡಿರುವ ದಿವ್ಯಾ ಸದ್ದು ಮಾಡಲು ಕಾರಣ ಬಿಗ್ ಬಾಸ್. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ದಿವ್ಯಾ ಮಾತು, ನಡವಳಿಕೆ, ಟಾಸ್ಕ್ ಗಳ ಮೂಲಕ ವೀಕ್ಷಕರ ಮನ ಗೆದ್ದರು ಮಾತ್ರವಲ್ಲದೇ ಕದ್ದರು. ದೊಡ್ಮನೆಯಿಂದ ಬಂದ ನಂತರ ಪದವಿಪೂರ್ವ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿರುವ ದಿವ್ಯಾ ಅವರು ಇದೀಗ ಮಗದೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಹೌದು, ತಮ್ಮ ಚೊಚ್ಚಲ ಸಿನಿಮಾ ನಿರ್ದೇಶಕರಾಗಿರುವ ಅರವಿಂದ್ ಕೌಶಿಕ್ ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ಈಕೆ ಆಯ್ಕೆಯಾಗಿದ್ದಾರೆ. ಇನ್ನು ಹೆಸರಿಡಬೇಕಾಗಿರುವ ಈ ಚಿತ್ರದ ಶೂಟಿಂಗ್ ಶೀಘ್ರದಲ್ಲಿ ಆರಂಭವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದಿವ್ಯಾ “ಉತ್ತಮ ಕತೆಯಾಗಿದ್ದ ಕಾರಣ ಕೇಳಿದ ಕೂಡಲೇ ನಟಿಸಲು ಒಪ್ಪಿಕೊಂಡೆ ” ಎನ್ನುತ್ತಾರೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ದಿವ್ಯಾ ಉರುಡುಗ “ನಾನು ಬಹಳ ಸ್ಕ್ರಿಪ್ಟ್ ಕೇಳುತ್ತಿದ್ದೇನೆ. ಅರವಿಂದ್ ಕೌಶಿಕ್ ಅತ್ಯುತ್ತಮ ನಿರ್ದೇಶಕ ಹೌದು. ನನ್ನ ಮೊದಲ ಸಿನಿಮಾ ಹುಲಿರಾಯದ ನಿರ್ದೇಶಕರೂ ಹೌದು. ಇದೀಗ ಮತ್ತೆ ಅವರೊಂದಿಗೆ ನಟಿಸುತ್ತಿರುವುದು ಖುಷಿ ನೀಡಿದೆ” ಎಂದು ಹೇಳಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿರುವ ದಿವ್ಯಾ ಉರುಡುಗ ” ಇದೊಂದು ಪ್ರೇಮಕಥೆಯಾಗಿದ್ದು ಇದರಲ್ಲಿ ನಾನು ಪ್ರಾಕ್ಟಿಕಲ್ ಹುಡುಗಿಯಾಗಿ ನಟಿಸುತ್ತಿದ್ದೇನೆ. ವಾಸ್ತವಕ್ಕೆ ಹತ್ತಿರವಿರುವ ಪಾತ್ರ ಇದು” ಎನ್ನುತ್ತಾರೆ. ಇನ್ನು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈಕೆ ವೆಬ್ ಸರಣಿಯಲ್ಲೂ ಬಣ್ಣ ಹಚ್ಚುತ್ತಿದ್ದಾರೆ.

ಪ್ರಾಕ್ಟಿಕಲ್ ಹುಡುಗಿಯಾಗಿ ಬರುತ್ತಿದ್ದಾರೆ ದಿವ್ಯಾ ಉರುಡುಗ Read More »

‘ಹೊಂಬಾಳೆ’ಯ ಬಹುನಿರೀಕ್ಷಿತ ಮುಂದಿನ ಸಿನಿಮಾಗಳು..

‘ಹೊಂಬಾಳೆ ಫಿಲಂಸ್’ ಸದ್ಯ ಭಾರತದ ಅತಿದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ‘ಕೆಜಿಎಫ್’ ಚಿತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ ಸಾಲು ಸಾಲು ಚಿತ್ರಗಳನ್ನು ನಿರ್ಮಾಣ ಮಾಡುವ ಭರದಲ್ಲಿದೆ. ಅಪ್ಪಟ ಕನ್ನಡ ಸಿನಿಮಾಗಳಿಂದ ಹಿಡಿದು, ಪಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿರೋ ಚಿತ್ರಗಳವರೆಗೆ ಎಲ್ಲವೂ ಇವರ ಕೈಗಳಲ್ಲಿವೆ. • ‘ಸಲಾರ್’ಸದ್ಯ ‘ಹೊಂಬಾಳೆ ಫಿಲಂಸ್’ ತಂಡ ಬಹುನಿರೀಕ್ಷಿತ ‘ಸಲಾರ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.ತೆಲುಗಿನ ಪಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಅವರನ್ನು ನಾಯಕನಟರಾಗಿ ಹೊಂದಿರುವ ಈ ಸಿನಿಮಾ ತಮ್ಮ ಎರಡನೇ ಸುತ್ತಿನ ಚಿತ್ರೀಕರಣವನ್ನು ಆರಂಭಗೊಳಿಸಲು ಸಿದ್ಧತೆ ನಡೆಸುತ್ತಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಪ್ರಭಾಸ್ ಅವರ ಜೊತೆ ಶೃತಿ ಹಾಸನ್, ಜಗಪತಿ ಬಾಬು, ಮಲಯಾಳಂ ನ ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಚಿತ್ರದ ಬಗೆಗಿನ ಸದ್ಯ ಯಾವುದೇ ಹೊಸ ವಿಷಯಗಳನ್ನು ಹೊರಹಾಕದಿರುವ ಚಿತ್ರತಂಡ, ಈ ವರ್ಷಾಂತ್ಯದಲ್ಲಿ ಸಿನಿಮಾ ಬಿಡುಗಡೆಗೋಳಿಸೋ ಸಿದ್ಧತೆಯಲ್ಲಿದೆ. • ‘ಕಾಂತಾರ’ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕರಾವಳಿಯ ದಂತಕತೆ ‘ಕಾಂತಾರ’. ಸಿನಿಮಾದ ರಚನೆ-ನಟನೆ ಹಾಗು ನಿರ್ದೇಶನ ಮೂರೂ ಬಗೆಯ ಜವಾಬ್ದಾರಿಯನ್ನು ಹೊತ್ತಿರುವ ರಿಷಬ್ ಶೆಟ್ಟಿಯವರಿಗೆ ‘ಹೊಂಬಾಳೆ ಫಿಲಂಸ್’ ಸಾಥ್ ನೀಡಿದೆ. ವಿಜಯ್ ಕಿರಗಂದೂರ್ ಅವರ ನಿರ್ಮಾಣದಲ್ಲಿ, ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಈ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಕರಾವಳಿಯ ಸಂಪ್ರದಾಯಗಳ ಬಗೆಗಿನ ‘ಕಾಂತಾರ’ ದಸರಾ ಹಬ್ಬಕ್ಕೆ ಕನ್ನಡಿಗರನ್ನು ರಂಜಿಸಲು ಬರಲಿದೆ. • ‘ರಾಘವೇಂದ್ರ ಸ್ಟೋರ್ಸ್’‘ಮಿಸ್ಟರ್ ಅಂಡ್ ಮಿಸ್ ರಾಮಾಚಾರಿ’, ‘ರಾಜಕುಮಾರ’ ಚಿತ್ರಗಳಿಂದ ಕನ್ನಡಿಗರ ಮನಸೆಳೆದಿರುವ ನಿರ್ದೇಶಕರು ಸಂತೋಷ್ ಆನಂದ್ ರಾಮ್. ಈಗಾಗಲೇ ‘ಹೊಂಬಾಳೆ ಫಿಲಂಸ್’ ಜೊತೆಗೆ ಎರಡು ಚಿತ್ರಗಳನ್ನು ಮಾಡಿರುವ ಇವರು ತಮ್ಮ ನಾಲ್ಕನೇ ಚಿತ್ರವಾದ ‘ರಾಘವೇಂದ್ರ ಸ್ಟೋರ್ಸ್’ ಗೆ ಮತ್ತೆ ಹೊಂಬಾಳೆ ಸಂಸ್ಥೆಯೊಂದಿಗೆ ಸೇರಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಜಗ್ಗಣ್ಣನ ತರಲೆಗಳ ಜೊತೆಗೆ ಸಂತೋಷ್ ಆನಂದ್ ರಾಮ್ ಅವರ ಕಥೆ ಸೇರಿ ಒಂದೊಳ್ಳೆ ಹಾಸ್ಯಭರಿತ ಕೌಟುಂಬಿಕ ಚಿತ್ರ ಸಿದ್ಧವಾಗಿದೆ. ಇದೇ ಆಗಸ್ಟ್ 5ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಮನರಂಜನೆಯನ್ನು ಉಣಬಡಿಸಲಿದೆ ‘ರಾಘವೇಂದ್ರ ಸ್ಟೋರ್ಸ್’. • ‘ಬಘೀರಾ’ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ಬಹುನಿರೀಕ್ಷಿತ ಮುಂದಿನ ಚಿತ್ರ ‘ಬಘೀರಾ’. ಈ ನಿರೀಕ್ಷೆಯ ಇನ್ನೊಂದು ಕಾರಣ ಪ್ರಶಾಂತ್ ನೀಲ್. ‘ಬಘೀರಾ’ ಚಿತ್ರದ ಕಥೆ ಹಾಗು ಚಿತ್ರಕಥೆಯನ್ನು ಬರೆದವರು ಇವರೇ. ‘ಲಕ್ಕಿ’ ಸಿನಿಮಾ ಖ್ಯಾತಿಯ ಡಾ| ಸೂರಿ ಅವರ ನಿರ್ದೇಶನ ಚಿತ್ರದಲ್ಲಿರಲಿದೆ. ಮೇ 20ರಂದು ಸಿನಿಮಾದ ಮುಹೂರ್ತ ನೆರವೇರಿಸಿಕೊಂಡು, ಜೂನ್ 4ರಿಂದ ಚಿತ್ರದ ಚಿತ್ರೀಕರಣವನ್ನು ಆರಂಭಿಸಿಕೊಂಡಿದೆ ಚಿತ್ರತಂಡ. ಸದ್ಯ ಚಿತ್ರೀಕರಣದಲ್ಲಿ ಭರದಿಂದ ತೊಡಗಿಕೊಂಡಿರುವ ಚಿತ್ರತಂಡ ಯಾವಾಗ ಬಿಡುಗಡೆಯ ಬಗೆಗಿನ ಮಾಹಿತಿ ನೀಡುತ್ತಾರೆ ಎಂದು ಶ್ರೀಮುರಳಿ ಅಭಿಮಾನಿಗಳು ಕಾಯುತ್ತಿದ್ದಾರೆ. • ‘ದ್ವಿತ್ವ’ಅಂದುಕೊಂಡಂತೆ ಎಲ್ಲವೂ ಆಗಿದ್ದರೆ, ಪ್ರಾಯಷಃ ಈ ಸಿನಿಮಾದ ಚಿತ್ರೀಕರಣ ಇಷ್ಟೊತ್ತಿಗೆ ಅರ್ಧ ಮುಗಿದಿರುತ್ತಿತ್ತು. ‘ಲೂಸಿಯ’ ಹಾಗು ‘ಯು ಟರ್ನ್’ ಎಂಬ ಎರಡೇ ಚಿತ್ರಗಳಿಂದ ಕನ್ನಡಿಗರ ನಡುವೆ ತಮಗೆ ಒಂದು ಅಭಿಮಾನಿ ಬಳಗವನ್ನೇ ಪಡೆದುಕೊಂಡ ನಿರ್ದೇಶಕ ಪವನ್ ಕುಮಾರ್ ಅವರು. ಕನ್ನಡದ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಪವನ್ ಕುಮಾರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೇ ಹಲವು ಸಂಚಾಲನಗಳನ್ನು ಹುಟ್ಟುಹಾಕಿತ್ತು. ಹೊಂಬಾಳೆ ಸಂಸ್ಥೆ ‘ದ್ವಿತ್ವ’ ಎಂಬ ಹೆಸರಿನಿಂದ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿ, ಚಿತ್ರದ ಟೈಟಲ್ ಪೋಸ್ಟರ್ ಅನ್ನು ಕೂಡ ಬಿಡುಗಡೆಗೊಳಿಸಿತ್ತು. ಆದರೆ ಅಪ್ಪು ಅವರ ಅಕಾಲಿಕ ಅಗಲಿಕೆಯಿಂದ ಈ ಎಲ್ಲ ಕನಸುಗಳು ಆರಂಭಕ್ಕೂ ಮುನ್ನವೇ ಅಂತ್ಯಕಾಣುವಂತಾಯಿತು. ಈ ಸಿನಿಮಾ ಬರಲಿದೆಯಾ, ಬಂದರೂ ನಾಯಕ ಯಾರು ಎಂಬ ಯಾವ ಪ್ರಶ್ನೆಗಳಿಗೂ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಇವುಗಳ ಜೊತೆಗೆ ‘ಹೊಂಬಾಳೆ ಫಿಲಂಸ್’ ರಾಜ್ ಕುಟುಂಬದ ಯುವ ಕುಡಿ ‘ಯುವ ರಾಜಕುಮಾರ್’ ಅವರ ಮೊದಲ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಈ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನವಿರಲಿದೆ. ಇದಲ್ಲದೆ ‘ಕೆಜಿಎಫ್ ಚಾಪ್ಟರ್ 3’ ಅನ್ನು ಕೂಡ ಹೊಂಬಾಳೆ ತರಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.ಸದ್ಯ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನೆಲ್ಲ ಧ್ವಂಸ ಮಾಡುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಇದೀಗ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ನೋಡಲು ಸಿಗಲಿದೆ. ಈ ಎಲ್ಲ ಮುಂದಿನ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ‘ಹೊಂಬಾಳೆ ಸಂಸ್ಥೆ’ ಕನ್ನಡ ಚಿತ್ರಗಳು ಮಾತ್ರವಲ್ಲದೆ ಹಲವು ಪಾನ್ ಇಂಡಿಯನ್ ಚಿತ್ರಗಳ ಮೂಲಕ ದೇಶದಾದ್ಯಂತ ಕನ್ನಡಿಗರ ಶಕ್ತಿ ತೋರಿಸಲು ಸಿದ್ದವಾಗುತ್ತಿದೆ.

‘ಹೊಂಬಾಳೆ’ಯ ಬಹುನಿರೀಕ್ಷಿತ ಮುಂದಿನ ಸಿನಿಮಾಗಳು.. Read More »

Scroll to Top