Karnataka Bhagya

ಕರ್ನಾಟಕ

ಹೊಸ ಹವಾ ಸೃಷ್ಟಿ ಮಾಡಲಿದೆ ಚಾರ್ಲಿ 777 ಸಿ‌ನಿಮಾದ ಇಮೋಜಿ

ಇಮೋಜಿ.. ಇಂದಿನ ತಂತ್ರಜ್ಞಾನ ಯುಗದಲ್ಲಿ ಕೇಳಿ ಬರುತ್ತಿರುವ ಸರ್ವೇ ಸಾಮಾನ್ಯ ಪದ ಇದು. ಬಹುತೇಕ ಜನರಿಗೆ ಇಮೋಜಿ ಎಂದರೆ ಏನು ಎಂದು ತಿಳಿದಿಲ್ಲ. ಇ ಎಂದರೆ ಅಕ್ಷರ ಮೋಜಿ ಎಂದರೆ ಚಿತ್ರ. ಅಕ್ಷರಗಳು ಚಿತ್ರರೂಪದಲ್ಲಿ ನಮಗೆ ಕಂಡಾಗ ಅದನ್ನು ಇಮೋಜಿ ಎಂದು ಕರೆಯುತ್ತೇವೆ. ಅಂದ ಹಾಗೇ ಈಗ್ಯಾಕೆ ಇಮೋಜಿ ಪದವನ್ನು ಬಳಸುತ್ತಿದ್ದೇವೆ ಎಂದು ಅಂದುಕೊಳ್ಳುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಉಂಟು ಮಾಡಿದ ಹವಾ ಅಷ್ಟಿಷ್ಟಲ್ಲ‌. ಇದರ ಜೊತೆಗೆ ರಾಕಿ ಭಾಯ್ ಯನ್ನು ಇಮೋಜಿಯನ್ನಾಗಿ ಬಳಸಿದ್ದು ಕನ್ನಡ ಸಿನಿಮಾ ರಂಗದಲ್ಲಿ ಇದು ಮೊದಲ ಪ್ರಯತ್ನವಾಗಿತ್ತು. ಇಮೋಜಿಯಾಗಿ ಬಂದ ರಾಕಿಭಾಯ್ ಗೆ ಫಿದಾ ಆಗದವರಿಲ್ಲ. ಇದರ ಜೊತೆಗೆ ಕೆಜಿಎಫ್ 2 ಸಿನಿಮಾ ಇಮೋಜಿ ಮಾಡಿದ ಮೊದಲ ಸಿನಿಮಾ ಎಂದು ಎನ್ನಿಸಿಕೊಂಡಿತು‌. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಂತೂ ಕೇಳುವುದೇ ಬೇಡ, ಎತ್ತ ನೋಡಿದರೂ ರಾಕಿ ಭಾಯ್ ಇಮೋಜಿಯದ್ದೇ ದರ್ಬಾರು. ಇದೀಗ ಚಾರ್ಲಿ ಸರದಿ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಇದರ ಜೊತೆಗೆ ಇದೀಗ ಆ ಸಿನಿಮಾದ ಇಮೋಜಿ ಕೂಡಾ ತಯಾರಾಗಿದೆ. ಚಾರ್ಲಿ 777 ಸಿನಿಮಾದಲ್ಲಿ ನಾಯಿಯೇ ಕೇಂದ್ರಬಿಂದು. ಅಂದ ಹಾಗೇ ಇಮೋಜಿಯಲ್ಲಿಯೂ ನಾಯಿಯನ್ನೇ ಬಳಸಿರುವುದು ವಿಶೇಷ‌. ಒಟ್ಟಿನಲ್ಲಿ ಇನ್ನು ಮುಂದೆ ಚಾರ್ಲಿ ಇಮೋಜಿ ಟ್ರೆಂಡಿಂಗ್ ಆದರೆ ಅಚ್ಚರಿಯೇನಿಲ್ಲ.

ಹೊಸ ಹವಾ ಸೃಷ್ಟಿ ಮಾಡಲಿದೆ ಚಾರ್ಲಿ 777 ಸಿ‌ನಿಮಾದ ಇಮೋಜಿ Read More »

ಮೆಂಟಲಿ ಚಾಲೆಂಜ್ಡ್ ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಜಯ್ ಡಿಸೋಜಾ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆಕಾಶದೀಪ ಧಾರಾವಾಹಿಯಲ್ಲಿ ನಾಯಕ ಆಕಾಶ್ ಆಗಿ ಅಭಿನಯಿಸಿದ್ದ ಜಯ್ ಡಿಸೋಜಾ ಮತ್ತೆ ಮರಳಿ ಬಂದಿದ್ದಾರೆ. ಆಕಾಶದೀಪ ಧಾರಾವಾಹಿಯ ನಂತರ ಎಲ್ಲೂ ಕಾಣಿಸಿಕೊಳ್ಳದ ಜಯ್ ಡಿಸೋಜಾ ಇದೀಗ ಕಂ ಬ್ಯಾಕ್ ಮಾಡಿದ್ದಾರೆ. ಆದರೆ ಕನ್ನಡ ಧಾರಾವಾಹಿಯಲ್ಲಿ ಅಲ್ಲ, ಬದಲಿಗೆ ತಮಿಳು ಧಾರಾವಾಹಿಯಲ್ಲಿ. ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಮಿಂಚಿರುವ ಜಯ್ ಡಿಸೋಜಾ ಇದೀಗ ತಮಿಳು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮಿಳಿನ ಸಿಪಿಕ್ಕುಲ್ ಮುತ್ತು ಧಾರಾವಾಹಿಯಲ್ಲಿ ಜಯ್ ನಾಯಕರಾಗಿ ಮೋಡಿ ಮಾಡಿದ್ದಾರೆ. ಸಿಪಿಕ್ಕುಲ್ ಮುತ್ತು ಧಾರಾವಾಹಿಯ ಪಾತ್ರದ ಬಗ್ಗೆ ಮಾತನಾಡಿರುವ ಜಯ್ ಡಿಸೋಜಾ “ಇದು ನಿಜವಾಗಿಯೂ ತುಂಬಾ ಚಾಲೆಂಜಿಗ್ ಆಗಿರುವಂತಹ ಪಾತ್ರ. ಇದೇ ಮೊದಲ ಬಾರಿಗೆ ನಾನು ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನ. ಶ್ರೀಮಂತ ಮನೆತನದ ಮೆಂಟಲಿ ಚಾಲೆಂಜ್ಡ್ ಯುವಕನಾಗಿ ನಾನು ನಟಿಸುತ್ತಿದ್ದೇನೆ” ಎಂದು ಹೇಳುತ್ತಾರೆ. ಪ್ರತಿ ಬಾರಿಯೂ ಭಿನ್ನ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಕಾರವಾರದ ಹ್ಯಾಂಡ್ ಸಮ್ ಹುಡುಗ ಜಯ್ ಡಿಸೋಜಾ ಆಕಸ್ಮಿಕವಾಗಿ ನಟನೆಗೆ ಬಂದು ಇಲ್ಲಿ ಬದುಕು ರೂಪಿಸಿಕೊಂಡಾತ. ಜಯ್ ಡಿಸೋಜಾ ಅವರಿಗೆ ಬಾಲ್ಯದಲ್ಲಿ ಪೈಲಟ್ ಆಗಬೇಕು ಎಂಬ ಆಸೆಯಿತ್ತು. ಅಚಾನಕ್ ಆಗಿ ದೊರೆತ ಅವಕಾಶದಿಂದ ನಟನೆಗೆ ಕಾಲಿಟ್ಟ ಈತ ಇಂದು ಕನ್ನಡದ ಜೊತೆಗೆ ಪರಭಾಷೆ ಕಿರುತೆರೆಯ ವೀಕ್ಷಕರ ಪಾಲಿನ ಚಾಕಲೇಟ್ ಹೀರೋ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಮಾಡೆಲಿಂಗ್ ನತ್ತ ಆಸಕ್ತಿ ಬೆಳೆಸಿಕೊಂಡ ಜಯ್ ಡಿಸೋಜಾ ಒಂದಷ್ಟು ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿದರು. ಬೆರಳೆಣಿಕೆಯಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮೋಡಿ ಮಾಡಿರುವ ಈತ ನಂತರ ನಟನಾಗಬೇಕು ಎಂದು ಬಯಸಿದರು. ಮುಂಬೈಯ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಗೆ ಸಂಬಂಧ ಪಟ್ಟ ತರಬೇತಿ ಪಡೆದು ಬಂದ ಜಯ್ ಆಡಿಶನ್ ಗಳನ್ನು ಅಟೆಂಡ್ ಮಾಡಲಾರಂಭಿಸಿದರು‌. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಜಯ್ ಡಿಸೋಜಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರ ಬಂಧನಂ ನಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಪಾದಾರ್ಪಣೆ ಮಾಡಿದ ಜಯ್ ಡಿಸೋಜಾ ಈಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅದಡೇ ಅಧರಂ ಧಾರಾವಾಹಿಯಲ್ಲಿ ನಟಿಸಿದರು. ಮುಂದೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಲ್ಯಾಣಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ವರ್ಷಗಳ ಸುದೀರ್ಘ ಗ್ಯಾಪ್ ನ ನಂತರ ಕನ್ನಡ ಕಿರುತೆರೆಯತ್ತ ಮುಖ ಮಾಡಿದ ಜಯ್ ಡಿಸೋಜಾ ಆಕಾಶದೀಪ ಧಾರಾವಾಹಿಯ ಆಕಾಶ್ ಆಗಿ ಸೈ ಎನಿಸಿಕೊಂಡರು. ಮಾತ್ರವಲ್ಲ ಇದರ ಜೊತೆಗೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಹಂಸಗೀತಂನಲ್ಲಿ ನಾಯಕ ರಾಹುಲ್ ಆಗಿ ಅಭಿನಯಿಸಿದ್ದು ತಮ್ಮ ನಟನಾ ಕೆರಿಯರ್ ನಲ್ಲಿ ಮೊದಲ ಬಾರಿಗೆ ಇನ್ಸ್ ಪೆಕ್ಟರ್ ಆಗಿ ಮಿಂಚಿದರು. ಇದೀಗ ತಮಿಳು ಕಿರುತೆರೆಯಲ್ಲಿ ಕಮಾಲ್ ಮಾಡಲಿರುವ ಜಯ್ ಡಿಸೋಜಾ ಅವರಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

ಮೆಂಟಲಿ ಚಾಲೆಂಜ್ಡ್ ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಜಯ್ ಡಿಸೋಜಾ Read More »

ಸೈನಿಕರ ಜೊತೆಗೆ ಕಾಲ ಕಳೆದ ಬಾಲಿವುಡ್ ನಟಿ

ನಟಿ ರಿಚಾ ಚಡ್ಡಾ ಇತ್ತೀಚೆಗೆ ಲಡಾಕ್ ಇಂಟರ್ ನ್ಯಾಷನಲ್ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡಿದ್ದಾರೆ. ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಸೈನಿಕರ ಜೊತೆ ಕಾಲ ಕಳೆಯುವ ಅವಕಾಶ ಅವರಿಗೆ ದೊರಕಿದೆ. ರಿಚಾ ಸೈನಿಕರೊಂದಿಗೆ ಕೆಲವು ದಿನಗಳು ಕಳೆದಿದ್ದಾರೆ. ಈ ಅನುಭವವನ್ನು ಜೀವನದಲ್ಲಿ ಮರೆಯಲಾರೆ ಎಂದಿದ್ದಾರೆ.“ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಯುವ ಸೈನಿಕರೊಂದಿಗೆ ಮರೆಯಲಾರದ ದಿನಗಳನ್ನು ಕಳೆದಿದ್ದೇನೆ. ಇದೊಂದು ಜೀವನದಲ್ಲಿ ಮರೆಯಲಾಗದ ಅನುಭವ” ಎಂದಿದ್ದಾರೆ ರಿಚಾ. “ಈ ಯುವ ಸೈನಿಕರು ಗಡಿಯಲ್ಲಿ ಪರಿಶ್ರಮದ ತರಬೇತಿ ಪಡೆಯುತ್ತಾರೆ. ನಗರಗಳಲ್ಲಿ ಕೆಲಸ ಮಾಡಿ ಐಷಾರಾಮಿ ಬದುಕನ್ನು ಎಂಜಾಯ್ ಮಾಡುವ ಬದಲು ದೇಶವನ್ನು ಕಾಯುತ್ತಾರೆ. ಇವರಿಗೆ ನನ್ನ ಗೌರವವಿದೆ. ಇಲ್ಲಿಗೆ ಬಂದಿರುವುದು ಉತ್ತಮ ಅನುಭವ. ನಮ್ಮ ದೇಶದ ನಿಜವಾದ ಹೀರೋಗಳನ್ನು ಭೇಟಿ ಮಾಡಿದೆ”ಎಂದಿದ್ದಾರೆ. ಭೋಲಿ ಪಂಜಾಬಿನ್ ,ಹೀರಾ ಮಂಡಿ ಮುಂತಾದ ಸಿನಿಮಾಗಳಲ್ಲಿ ರಿಚಾ ನಟಿಸುತ್ತಿದ್ದಾರೆ.

ಸೈನಿಕರ ಜೊತೆಗೆ ಕಾಲ ಕಳೆದ ಬಾಲಿವುಡ್ ನಟಿ Read More »

ಹಳ್ಳಿ ಹುಡುಗನಾಗಿ ರಂಜಿಸಲಿದ್ದಾರೆ ಪೃಥ್ವಿ ಅಂಬರ್

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 1980ನೇ ಇಸವಿಯಲ್ಲಿ ನಡೆದ ಕಥೆಯನ್ನು ಆಧರಿಸಿದ ದೂರದರ್ಶನ ಸಿನಿಮಾದಲ್ಲಿ ಹಳ್ಳಿಯ ಸಾಧಾರಣ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸುಕೇಶ್ ಶೆಟ್ಟಿ ಈ ಹಿಂದೆ ಟ್ರಂಕ್ ಸಿನಿಮಾದಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. “ನನಗೆ ಸಾಕಷ್ಟು ಕಮರ್ಷಿಯಲ್ ಸಿನಿಮಾಗಳ ಆಫರ್ ಬರುತ್ತಿವೆ. ಈ ಸಿನಿಮಾದ ಕಥೆ ನನಗೆ ಹಿಡಿಸಿತು. ಈ ಸಿನಿಮಾದ ಭಾವಪೂರ್ಣ ಕಥೆ , ಪಶ್ಚಿಮ ಘಟ್ಟದ ಸಣ್ಣ ಹಳ್ಳಿಯ ಜೀವನ ದೂರದರ್ಶನ ಪ್ರವೇಶದ ನಂತರ ಹೇಗೆ ಬದಲಾಗುತ್ತವೆ ಎಂಬುದು ಈ ಸಿನಿಮಾ ಕಥೆ”ಎಂದಿದ್ದಾರೆ ಪೃಥ್ವಿ ಅಂಬರ್. ಈ ಸಿನಿಮಾವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಂಬ ಸಣ್ಣ ಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿದೆ. ನಗರಗಳಲ್ಲಿ ಕಾಣುವ ಮೊಬೈಲ್ ಟವರ್ ಹಾಗೂ ವಾಯರ್ ಗಳ ಕ್ರಿಸ್ ಕ್ರಾಸಿಂಗ್ ನಂತಹ ಆಧುನಿಕ ಅಂಶಗಳ ಸ್ಪರ್ಶವಿಲ್ಲದ ಅನೇಕ ಸ್ಥಳಗಳನ್ನು ಕಾಣಬಹುದು. ಸ್ಥಳೀಯರಿಂದ ಪ್ರೋತ್ಸಾಹ ಪಡೆಯುತ್ತಿರುವ ಸಣ್ಣ ಪುಟ್ಟ ಹೋಟೆಲ್, ಅಂಗಡಿಗಳು ಅಲ್ಲಿವೆ. ನಮಗೆ ಅಂತಹ ವಾತಾವರಣ ಬೇಕಿತ್ತು ಎಂದಿದ್ದಾರೆ ಪೃಥ್ವಿ ಅಂಬರ್. 40 ದಿನಗಳ ಒಳಗೆ ಶೂಟಿಂಗ್ ಮುಗಿಸಿದ್ದೇವೆ. ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಸರಳ ಬಟ್ಟೆಗಳನ್ನು ಧರಿಸಿದ್ದು ಖುಷಿ ತಂದಿದೆ. ಈ ಕಥೆ ನೈಜ ಹಾಗೂ ಪರಿಕಲ್ಪಿತ ಘಟನೆಗಳ ಮಿಶ್ರಣ.ಈ ಸಿನಿಮಾ ಶೂಟಿಂಗ್ ತೃಪ್ತಿ ನೀಡಿತು‌. ಎಂಬತ್ತರ ದಶಕವನ್ನು ಬಿಂಬಿಸುವ ಜಗತ್ತನ್ನು ಸೃಷ್ಟಿ ಮಾಡಿದ್ದೆವು ಎಂದಿದ್ದಾರೆ ಪೃಥ್ವಿ ಅಂಬರ್. ಚಿತ್ರದಲ್ಲಿ ಉಗ್ರಂ ಮಂಜು ಪ್ರಮುಖ ಪಾತ್ರ ಮಾಡಿದ್ದಾರೆ.ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹಳ್ಳಿ ಹುಡುಗನಾಗಿ ರಂಜಿಸಲಿದ್ದಾರೆ ಪೃಥ್ವಿ ಅಂಬರ್ Read More »

ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ವಿಭಿನ್ನವಾಗಿ ಆಚರಿಸಿದ ಬಿಗ್ ಬಿ ಮೊಮ್ಮಗಳು

ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ “ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ” ಯನ್ನು ಆಚರಿಸಿದ್ದಾರೆ. ಹೌದು, ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ ಸಲುವಾಗಿ ಘಟ್ಕೋಪರ್ ಈಸ್ಟ್ ನಲ್ಲಿ ಗೋಡೆಯಲ್ಲಿ ಚಿತ್ರ ಬಿಡಿಸಿದ್ದಾರೆ. ಗೋಡೆಯಲ್ಲಿ ಚಿತ್ರ ಬಿಡಿಸುವ ವಿಡಿಯೋವನ್ನು ಇನ್ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲು ನಾವು ಗೋಡೆಯ ಮೇಲೆ ಚಿತ್ರಿಸುತ್ತಿದ್ದೇವೆ. ಮುಟ್ಟನ್ನು ಆಚರಿಸಲು ಹಾಗೂ ಸಾರ್ವಜನಿಕ ಸ್ಥಳಗಳನ್ನು ಮುಟ್ಟು ಸ್ನೇಹಿಯಾಗಿ ಮಾಡಲು ನಮ್ಮ ಪ್ರಯತ್ನವಾಗಿದೆ”ಎಂದಿದ್ದಾರೆ. ಇನ್ನು ಫೋಟೋ ಹಂಚಿಕೊಂಡಿರುವ ನವ್ಯಾ ನವೇಲಿ ನಂದಾ “ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ ಶುಭಾಶಯಗಳು “ಎಂದು ಬರೆದುಕೊಂಡಿದ್ದಾರೆ. ನವ್ಯಾ ಅವರ ಈ ಪೋಸ್ಟ್ ನ್ನು ಹಲವು ನೆಟ್ಟಿಗರು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಸಮಾಜದಲ್ಲಿ ಉತ್ತಮ ಸಂದೇಶ ಹಂಚುತ್ತಿರುವುದಕ್ಕೆ ನವ್ಯಾ ಅವರನ್ನು ಹೊಗಳಿದ್ದಾರೆ.

ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ವಿಭಿನ್ನವಾಗಿ ಆಚರಿಸಿದ ಬಿಗ್ ಬಿ ಮೊಮ್ಮಗಳು Read More »

ಕೆಜಿಎಫ್ ನಲ್ಲಿ ‘ಅಂಧ’, ಈಗ ಹೊಸ ಚಿತ್ರದ ನಾಯಕ!

‘ಕೆಜಿಎಫ್’ ಸಿನಿಮಾಗಳು ಪ್ರಪಂಚದಾದ್ಯಂತ ಸದ್ದು ಮಾಡುತ್ತಿವೆ. ಇವುಗಳಲ್ಲಿ ಕೆಲಸ ಮಾಡಿದವರು ಕೂಡ. ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ದೇಶದಾದ್ಯಂತ ಬೇಡಿಕೆಯಲ್ಲಿದ್ದಾರೆ. ನಾಯಕ ಯಶ್ ಅವರ ಮುಂದಿನ ಚಿತ್ರಕ್ಕೆ ಪ್ರಪಂಚದಾದ್ಯಂತದ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ರೀತಿ ಸಿನಿಮಾದ ಸಹಕಲಾವಿದರೊಬ್ಬರು ಹೊಸ ಚಿತ್ರದ ನಾಯಕರಾಗಲಿದ್ದಾರೆ. ಅದ್ಯಾರೆಂದು ತಿಳಿದರೆ ಅಚ್ಚರಿಯಾಗುವುದಂತೂ ಖಂಡಿತ. ಈ ಕಲಾವಿದರು ಬೇರಾರು ಅಲ್ಲದೇ, ಕೆಜಿಎಫ್ ನಲ್ಲಿನ ಅಂಧನ ಪಾತ್ರವಹಿಸಿದ್ದ ಕೃಷ್ಣ ಜಿ ರಾವ್. ಕೇವಲ ಕೆಲವು ಕ್ಷಣಗಳಿಗಷ್ಟೇ ಸೀಮಿತವಾಗಿದ್ದ ಕುರುಡನ ಪಾತ್ರ ಇವರದ್ದಾಗಿದ್ದರೂ, ಕೆಜಿಎಫ್ ಚಿತ್ರದಲ್ಲಿ ಇವರು ಮಾಡಿದ್ದ ಮೋಡಿ ಅಪಾರ. ಇದ್ದ ಚಿಕ್ಕ ಪಾತ್ರದಲ್ಲೆ ಉತ್ತಮವಾಗಿ ನಟಿಸಿ ಪ್ರೇಕ್ಷಕರ ಮನಸಿನಲ್ಲಿ ಕುರುಡುನಾಗೇ ಉಳಿದವರಿವರು. ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾದ ಬಳಿಕ ಇದೀಗ ನಾಯಕನಟನಾಗಿ ತೆರೆಮೇಲೆ ಬರಲು ಸಿದ್ದರಾಗಿದ್ದಾರೆ ಕೃಷ್ಣರಾವ್. ‘ಮುದುಕನ ಲವ್ ಸ್ಟೋರಿ’ ಎಂಬ ಹೊಸ ಚಿತ್ರದಲ್ಲಿ ಕೃಷ್ಣರಾವ್ ನಾಯಕನಟರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲೂ ಸಫಲತೆ ಕಂಡುಕೊಂಡು ಇದೀಗ ಸೆನ್ಸರ್ ಪ್ರಕ್ರಿಯೆಯತ್ತ ಚಿತ್ರತಂಡ ಸಾಗುತ್ತಿದೆ. ಕನ್ನಡ ಕಂಡ ಶ್ರೇಷ್ಠ ನಟ-ನಿರ್ದೇಶಕ ಶಂಕರ್ ನಾಗ್ ಅವರ ಜೊತೆ ಕೆಲಸ ಮಾಡಿದ ಹೆಮ್ಮೆ ಇರುವವರು ಕೃಷ್ಣರಾವ್. ಈ ಬಗ್ಗೆ ಮಾತನಾಡುವ ಅವರು, “ದಶಕಗಳಿಂದ ಕನ್ನಡ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಏನನ್ನು ಗಳಿಸಲಾಗಿರಲಿಲ್ಲ. ಆದರೀಗ ಕೆಜಿಎಫ್ ಎಂಬ ಒಂದು ಚಿತ್ರದಿಂದ ಜೀವನ ಬದಲಾಗಿದೆ. ಕೆಜಿಎಫ್ ಚಾಪ್ಟರ್ 1ರ ನಂತರ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗು, ಚಾಪ್ಟರ್ 2ರ ನಂತರ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಕೆಜಿಎಫ್ ಚಿತ್ರ ನನಗೆ ತುಂಬಾ ನೀಡಿದೆ” ಎಂದಿದ್ದಾರೆ. ಶಂಕರನಾಗ್ ಅವರನ್ನು ನೆನೆಯುತ್ತ “ಅವರ ಕಲೆ ಹಾಗು ಕೆಲಸಗಳಿಗೆ ನಾನು ಸದಾ ಅಭಿಮಾನಿ. ಅವರನ್ನು ಹತ್ತಿರದಿಂದ ನೋಡುತ್ತಾ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಸಂತೋಷ ನನಗಿದೆ” ಎಂದು ಭಾವುಕಾರಾಗಿದ್ದಾರೆ. ‘ಮುದುಕನ ಲವ್ ಸ್ಟೋರಿ’ ಸಿನಿಮಾ ಒಬ್ಬ ಮುದುಕನ ಜೀವನದ ಸುತ್ತ ತಿರುಗೋ ಕಥೆಯಂತೆ. ಮುದುಕನೊಬ್ಬನಿಗೆ ಮದುವೆ ಮಾಡಿಸಲು ಉಂಟಾಗೋ ಅಡೆತಡೆಗಳ ಬಗ್ಗೆ ಹಾಸ್ಯಮಯ ಸಿನಿಮಾ ಮಾಡಲಾಗಿದೆಯಂತೆ. ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿಗಳಿಗಾಗಿ ಕಾದು ನೋಡಬೇಕಿದೆ.

ಕೆಜಿಎಫ್ ನಲ್ಲಿ ‘ಅಂಧ’, ಈಗ ಹೊಸ ಚಿತ್ರದ ನಾಯಕ! Read More »

ಹರಹರ ಮಹಾದೇವ ನನ್ನ ಬದುಕಿನ ತಿರುವು – ವಿನಯ್ ಗೌಡ

ನಟ ವಿನಯ್ ಗೌಡ ಕನ್ನಡ ಪ್ರೇಕ್ಷಕರಿಗೆ ಹೊಸಬರೇನಲ್ಲ. ಪೌರಾಣಿಕ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಮಹಾದೇವದಲ್ಲಿ ನಟಿಸಿರುವ ವಿನಯ್ ಕಿರುತೆರೆಯ ಖ್ಯಾತ ನಟರಲ್ಲಿ ಒಬ್ಬರು. “ಹರ ಹರ ಮಹಾದೇವ ಧಾರಾವಾಹಿ ನನ್ನ ಬದುಕಿನ ತಿರುವು. ನಾವು ಮನೆಯಲ್ಲಿ ಕಾಲಭೈರವೇಶ್ವರನನ್ನು ಪೂಜಿಸುತ್ತೇವೆ. ನಾನು ಕೈಯಲ್ಲಿ ಕಾಲಭೈರವೇಶ್ವರನ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಆದರೆ ಶಿವನ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ಆಕಸ್ಮಿಕ. ನನಗೆ ಶಿವ ದೇವರ ಪಾತ್ರ ಸಿಕ್ಕಿದ್ದು ಆಶೀರ್ವಾದ” ಎಂದು ಹೇಳಿದ್ದಾರೆ. ಶಿವನ ಪಾತ್ರ ಮಾಡುವಾಗ ಇದ್ದ ಸವಾಲುಗಳ ಬಗ್ಗೆ ಹೇಳಿರುವ ವಿನಯ್ “ಭಾಷೆ ನನಗೆ ತುಂಬಾ ಕಷ್ಟವಾಗಿತ್ತು. ಡೈಲಾಗ್ ಹಾಗೂ ಚಿತ್ರಕಥೆ ಕೇಳಿ ಕೆಲವೊಮ್ಮೆ ಬೆಚ್ಚಿದ್ದೆ. ಅದು ತುಂಬಾ ಉದ್ದುದ್ದವಾಗಿ ಇರುತ್ತಿತ್ತು. ಶೂಟಿಂಗ್ ಮುಗಿಸಿ ಮನೆಗೆ ತೆರಳಿದ ಮೇಲೆ ಭಾಷಾ ಕೌಶಲ್ಯದ ಮೇಲೆ ಕೆಲಸ ಮಾಡುತ್ತಿದ್ದೆ. ಪ್ರಾರಂಭದ ದಿನಗಳಲ್ಲಿ ತುಂಬಾ ಕಷ್ಟವಾಗಿತ್ತು. ಆದರೆ ದಿನಗಳೆದಂತೆ ಬದಲಾಗುತ್ತಿತ್ತು.” ಎಂದಿದ್ದಾರೆ. “ದೈನಂದಿನ ಧಾರಾವಾಹಿಗಳಲ್ಲಿ ಇತರ ಪಾತ್ರಗಳಿಗಿಂತ ಭಿನ್ನವಾಗಿ ನಾನು ನೋಡಬಹುದಾದ ಯಾವುದೇ ನೈಜ ಜೀವನದ ಉಲ್ಲೇಖವಿಲ್ಲ. ನಟರು ಈ ಮೊದಲು ಸಿನಿಮಾಗಳಲ್ಲಿ ಶಿವನ ಪಾತ್ರ ಮಾಡಿದ್ದರು ‌. ನನಗೆ ನನ್ನದೇ ಆದ ಅಲೆ ಮೂಡಿಸಬೇಕೆಂದು ಬಯಸಿದ್ದೆ. ಧ್ಯಾನ ನನ್ನ ಭಾವನೆಗಳನ್ನು ತಣಿಸಲು ಹಾಗೂ ಶಿವನನ್ನು ನನ್ನಲ್ಲಿ ತರಲು ಸಹಾಯಕವಾಯಿತು. ಕೆರಿಯರ್ ನಲ್ಲಿ ಎರಡನೇ ಬಾರಿ ಶಿವನ ಪಾತ್ರವನ್ನು ಮಾಡಲು ಪುಣ್ಯ ಮಾಡಿದ್ದೆ. ಕೆಲವು ಸನ್ನಿವೇಶಗಳಿಂದಾಗಿ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯಿಂದ ಹೊರಬರಬೇಕಾಯಿತು. ಎಲ್ಲರಿಗೂ ಇದೇ ರೀತಿಯ ಪಾತ್ರ ಮಾಡಲು ಅವಕಾಶ ಸಿಗುವುದಿಲ್ಲ” ಎಂದಿದ್ದಾರೆ ವಿನಯ್ ಗೌಡ.

ಹರಹರ ಮಹಾದೇವ ನನ್ನ ಬದುಕಿನ ತಿರುವು – ವಿನಯ್ ಗೌಡ Read More »

Scroll to Top