ನಟಿ ಮೀನಾ ಹೊಸ ಪಯಣ
ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ಮೀನಾ ಈಗ ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಸ್ವತಃ ಮೀನಾ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತನಗೆ ಗೋಲ್ಡನ್ ವೀಸಾ ನೀಡಿದ್ದಕ್ಕೆ ಯುಎಇ ಸರ್ಕಾರಕ್ಕೆ ಧನ್ಯವಾದ ಹೇಳಿರುವ ಮೀನಾ ವೀಸಾ ತೆಗೆದುಕೊಳ್ಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗೋಲ್ಡನ್ ವೀಸಾ ಪಡೆದವರಲ್ಲಿ ಮೀನಾ ಮೊದಲಿಗರೇನಲ್ಲ. ಭಾರತದಲ್ಲಿ ಈಗಾಗಲೇ ಹಲವು ನಟನಟಿಯರಿಗೆ ಈ ಗೋಲ್ಡನ್ ವೀಸಾ ದೊರೆತಿದೆ. ಮಲೆಯಾಳಂ ಚಿತ್ರರಂಗದ ಮೋಹನ್ ಲಾಲ್, ಮಮ್ಮುಟ್ಟಿ ,ಅಮಲಾ ಪೌಲ್, ನಿವಿನ್ ಪೌಲಿ ಸೇರಿದಂತೆ ಬಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ನ ಅನೇಕ ನಟನಟಿಯರಿಗೆ ಸಿಕ್ಕಿದೆ. ಬಾಲಕಲಾವಿದೆಯಾಗಿ 1982ರಲ್ಲಿ ನೆಂಜಂಗಲ್ ಚಿತ್ರದಲ್ಲಿ ನಟಿಸುವ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟರು. ನಂತರ ನಾಯಕಿಯಾಗಿ ತಮಿಳು, ತೆಲುಗು ಮಲಯಾಳಂ ಸಿನಿಮಾ ರಂಗದಲ್ಲಿ ನಟನಾ ಕಂಪನ್ನು ಪಸರಿಸಿದ್ದ ಮೀನಾ ಪುಟ್ನಂಜನ ರೋಸ್ ಆಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಮೊಮ್ಮಗ, ಚೆಲುವ, ಸಿಂಹಾದ್ರಿಯ ಸಿಂಹ, ಸ್ವಾತಿಮುತ್ತು, ಗೇಮ್ ಫಾರ್ ಲವ್, ಗೌಡ್ರು, ಮಹಾಸಾಧ್ವಿ ಮಲ್ಲಮ್ಮ, ಮೈ ಆಟೋಗ್ರಾಫ್, ಹೆಂಡ್ತೀರ್ ದರ್ಬಾರ್ ಸಿನಿಮಾಗಳಲ್ಲಿ ನಟಿಸಿದರು. ಹಿರಿತೆರೆಯ ಜೊತಗೆ ಕಿರುತೆರೆಯಲ್ಲಿಯೂ ತೀರ್ಪುಗಾರ್ತಿಯಾಗಿ ಕಮಾಲ್ ಮಾಡಿರುವ ಮೀನಾ ವಿದ್ಯಾಸಾಗರ್ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇನ್ನು ಮೀನಾ ವಿದ್ಯಾಸಾಗರ್ ದಂಪತಿಗಳಿಗೆ ನೈನಿಕಾ ಎನ್ನುವ ಮಗಳಿದ್ದು ಆಕೆಯೂ ಬಾಲನಟಿಯಾಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಮೀನಾ ಅವರು ನಟಿಸಿರುವ ಮಲೆಯಾಳಂ ನ “ಬ್ರೋ ಡ್ಯಾಡಿ” ಚಿತ್ರ ಹಿಟ್ ಆಗಿದೆ.