ರೈತನ ಮಡದಿಯಾಗಿ ಮೋಡಿ ಮಾಡಿದ ಸೋನು ಗೌಡ
ಇಂತಿ ನಿನ್ನ ಪ್ರೀತಿಯ ಸಿನಿಮಾದಲ್ಲಿ ನಾಯಕಿ ನಮನಾ ಆಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಸೋನು ಗೌಡ ಅಭಿನಯಕ್ಕೆ ಮನಸೋಲದವರಿಲ್ಲ. ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಿದ ಸೋನು ಗೌಡ ಈಗಾಗಲೇ ಮೊದಲ ಬಾರಿಗೆ ಕಿರುತೆರೆಗೂ ಕಾಲಿಟ್ಟಾಗಿದೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಜೊತೆಜೊತೆಯಲಿ ಯಲ್ಲಿ ರಾಜನಂದಿನಿ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಸೋನು ಗೌಡ ಈಗ ವಿಡಿಯೋ ಹಾಡಿನಲ್ಲಿ ರೈತ ಮಹಿಳೆಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋನು ಗೌಡ ಅವರು “ರೈತ “ಎನ್ನುವ ವೀಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಈ ಹಾಡಿನ ಪರಿಕಲ್ಪನೆ, ಸಂಗೀತ ಹಾಗೂ ನಿರ್ದೇಶನ ಹಾಗೂ ಗಾಯನವನ್ನು ಆಲ್ ಓಕೆ ಅಲೋಕ್ ಮಾಡಿದ್ದಾರೆ. ಈ ಹಾಡಿನ ಬಗ್ಗೆ ಮಾತನಾಡಿರುವ ಸೋನು ” ಇದು ನನ್ನ ಮೊದಲ ವಿಡಿಯೋ ಹಾಡು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. “ಆಲ್ ಓಕೆ ಅವರನ್ನು ತುಂಬಾ ವರ್ಷಗಳಿಂದ ಗೊತ್ತಿದೆ. ನನ್ನ ಉತ್ತಮ ಸ್ನೇಹಿತ ಅವರು. ನಾವು ಜೊತೆಯಾಗಿ ಪ್ರಾಜೆಕ್ಟ್ ಮಾಡಬೇಕೆಂದು ಅಂದುಕೊಂಡಿದ್ದೆವು. ಕೊನೆಗೂ ಅದು ರೈತ ಪ್ರಾಜೆಕ್ಟ್ ನಿಂದಾಗಿ ಸಾಧ್ಯವಾಗಿದೆ. ಕೃಷಿ ನಮ್ಮ ದೇಶದಲ್ಲಿ ಇನ್ನೂ ನಿರ್ಲಕ್ಷಿತ ಕ್ಷೇತ್ರವಾಗಿ ಉಳಿದಿರುವುದರಿಂದ ಕೃಷಿಯನ್ನು ತೆಗೆದುಕೊಳ್ಳಲು ಇದು ಹಲವು ಜನರಿಗೆ ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎನ್ನುತ್ತಾರೆ ಸೋನು ಗೌಡ ಇದರ ಜೊತೆಗೆ “ರೈತನ ಮಡದಿಯಾಗಿ ಕಾಣಿಸಿಕೊಂಡು ಅವರಿಗೆ ಆಹಾರ ಒಯ್ಯುವುದು ಉತ್ತಮ ಅನುಭವ ಆಗಿತ್ತು. ರೈತರಿಗೆ ವಿಶೇಷ ಸ್ಥಾನ ಸಿಗಬೇಕು. ಏಕೆಂದರೆ ಆಹಾರ ಬೆಳೆಯುವುದು ಸುಲಭದ ಕೆಲಸವೇನಲ್ಲ. ಇದು ತುಂಬಾ ತಾಳ್ಮೆ ಹಾಗೂ ಪರಿಶ್ರಮದ ಕೆಲಸವನ್ನು ಬೇಡುತ್ತದೆ. ಲಾಕ್ ಡೌನ್ ನಲ್ಲಿ ಗಾರ್ಡನಿಂಗ್ ನಲ್ಲಿ ತೊಡಗಿಸಿಕೊಂಡಾಗ ಈ ಕಷ್ಟ ನನಗೆ ಅರಿವಾಯಿತು”ಎಂದಿದ್ದಾರೆ ಸೋನು.
ರೈತನ ಮಡದಿಯಾಗಿ ಮೋಡಿ ಮಾಡಿದ ಸೋನು ಗೌಡ Read More »