ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಅತಿಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರೋ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನಾಯಕ ನಟ. ಕನ್ನಡ ಕಲಾರಸಿಕರಿಂದ ‘ಡಿ ಬಾಸ್’ ಎಂದೇ ಕರೆಸಿಕೊಳ್ಳುವವರು.ಇದೀಗ ಅವರು ನಾಯಕ ನಟರಾಗಿ ಬೆಳ್ಳಿತೆರೆ ಮೇಲೆ ರಾರಾಜಿಸಿದ ಮೊದಲ ಚಿತ್ರಕ್ಕೆ ಬರೋಬ್ಬರಿ ಇಪ್ಪತ್ತು ವರ್ಷಗಳ ಸಂಭ್ರಮ. ಅದೇ ಸಡಗರದಲ್ಲಿ ಮರಳಿ ‘ಮೆಜೆಸ್ಟಿಕ್’ ತೆರೆಮೇಲೆ ಬಂದಿದೆ.
ಫೆಬ್ರವರಿ 8, 2002ರಂದು ಮೊದಲ ಬಾರಿ ಮೆಜೆಸ್ಟಿಕ್ ತೆರೆಕಂಡಿತ್ತು. ಪಿ. ಎನ್. ಸತ್ಯ ಅವರ ನಿರ್ದೇಶನದಲ್ಲಿ ಮಾಸ್-ರೋಮ್ಯಾಂಟಿಕ್ ಹಿಟ್ ಆಗಿ ಹೊರಹೊಮ್ಮಿದ್ದ ಈ ಚಿತ್ರ ಕನ್ನಡಿಗರ ಮನದಲ್ಲಿ ಖಾಸಗಿ ಜಾಗವೊಂದನ್ನ ಖಾತ್ರಿ ಮಾಡಿಕೊಂಡಿತ್ತು. ಈಗಲೂ ಕೂಡ ‘ಡಿ ಬಾಸ್’ ಅಭಿಮಾನಿಗಳ ಮನದಲ್ಲಿ ಮೆಜೆಸ್ಟಿಕ್ ಗೆ ವಿಶೇಷ ಸ್ಥಾನ ಇದೆ. ಹಾಗಾಗಿ ಚಿತ್ರದ ನಿರ್ಮಾಪಕ ಎಂ ಜಿ ರಾಮಮೂರ್ತಿ ಅವರು ಚಿತ್ರವನ್ನ ಮರುಬಿಡುಗಡೆಗೊಳಿಸಿದ್ದಾರೆ. ಇದೇ ಫೆಬ್ರವರಿ 18ರಂದು ಮೆಜೆಸ್ಟಿಕ್ ಬೆಳ್ಳಿತೆರೆ ಮೇಲೆ ಮತ್ತೊಮ್ಮೆ ರೌಡಿಸಂ ಆರಂಭಿಸಿದೆ.
ದಶನ್ ರ ಜೊತೆಗೇ ಸ್ಪರ್ಶ ಖ್ಯಾತಿಯ ರೇಖಾ, ಜೈ ಜಗದೀಶ್, ಮುಂತಾದ ದಿಗ್ಗಜರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸಾಧು ಕೋಕಿಲ ಅವರ ಮನಕಲಕುವ ಸಂಗೀತ ಈ ಸಿನಿಮಾದಲ್ಲಿತ್ತು.