ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಬಹುನಿರೀಕ್ಷಿತ ‘ಕ್ರಾಂತಿ’, ಬಹುವೇಗದಲ್ಲಿ ತನ್ನ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಚಿತ್ರ ಸದ್ಯ ಚಿತ್ರೀಕರಣದ ಘಟ್ಟದಲ್ಲಿದೆ. ಇತ್ತೀಚಿಗಷ್ಟೇ ಹೊರದೇಶವಾದ ಪೋಲ್ಯಾಂಡ್ ನಲ್ಲಿ ತಮ್ಮ ಒಂದು ಹಂತದ ಚಿತ್ರೀಕರಣವನ್ನು ‘ಕ್ರಾಂತಿ’ ಮುಗಿಸಿಕೊಂಡಿದ್ದು, ಅದರ ಸಂಭಂದಿತ ಫೋಟೋ ಒಂದು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ನಡುವೆ ದರ್ಶನ್ ಅವರು ‘ಕ್ರಾಂತಿ’ ಸಿನಿಮಾದ ಡಬ್ಬಿಂಗ್ ಆರಂಭಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಪಡೆದಿರೋ ನಟರುಗಳಲ್ಲಿ ಒಬ್ಬರಾದ ದಾಸ ದರ್ಶನ್ ಅವರ 55ನೇ ಸಿನಿಮಾ ಎಂದರೆ ಅದರ ಬಗೆಗಿನ ಸಣ್ಣ ಸುದ್ದಿಗಳು ಸಹ ದೊಡ್ಡ ಸದ್ದು ಮಾಡುವುದು ಸಹಜ. ಸದ್ಯ ಸಿನಿಮಾದ ಬಹುಪಾಲು ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ದರ್ಶನ್ ಅವರ ಪಾತ್ರಕ್ಕೆ ಧ್ವನಿ ತುಂಬುವ ಕೆಲಸ ಆರಂಭಿಸಿದೆ. ದರ್ಶನ್ ಅವರು ಡಬ್ ಮಾಡುತ್ತಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ‘ವಾಯ್ಸ್ ಒಫ್ ಕ್ರಾಂತಿ’ ಎಂದು ಬರೆದುಕೊಂಡಿದೆ ಚಿತ್ರತಂಡ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
‘ಯಜಮಾನ’ ಸಿನಿಮಾದ ಮೂಲಕ ನಿರ್ದೇಶನದಲ್ಲಿ ಯಶಸ್ಸು ಕಂಡ ವಿ ಹರಿಕೃಷ್ಣ ಅವರು ‘ಕ್ರಾಂತಿ’ ಸಿನಿಮಾದ ಮೂಲಕ ಮತ್ತೊಮ್ಮೆ ದರ್ಶನ್ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ. ‘ಯಜಮಾನ’ ನಿರ್ಮಾಣ ಮಾಡಿದ್ದ ‘ಮೀಡಿಯಾ ಹೌಸ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಶೈಲಜಾ ನಾಗ್ ಹಾಗು ಸುರೇಶ ಬಿ ಅವರು ‘ಕ್ರಾಂತಿ’ಯ ನಿರ್ಮಾಣ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೇ, ದರ್ಶನ್ ಅವರೊಂದಿಗೆ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಿದ್ದ ರಚಿತಾ ರಾಮ್ ಅವರು ‘ಕ್ರಾಂತಿ’ಯ ಮೂಲಕ ಮೂರನೇ ಬಾರಿ ದರ್ಶನ್ ಅವರ ಜೊತೆ ನಟಿಸುತ್ತಿದ್ದಾರೆ. ಇವರ ಜೊತೆ ಸುಮಲತಾ ಅಂಬರೀಷ್ ಹಾಗು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಕ್ಕ ಮಾಸ್ ಎಂಟರ್ಟೈನರ್ ಆಗಿರುವ ಸಾಧ್ಯತೆಯಿದ್ದು, ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಗುತ್ತಿದ್ದು, ಸಿನಿಮಾ ಯಾವಾಗ ತೆರೆಮೇಲೆ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.