‘ನಟರಾಕ್ಷಸ’ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ ಅವರು ಸದ್ಯ ಕನ್ನಡದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳನ್ನು ಕೈಗೆತ್ತಿಕೊಂಡಿರುವ ಡಾಲಿ ಸಾಲು ಸಾಲು ಯಶಸ್ಸುಗಳನ್ನು ಸಹ ಕಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಹೊಸ ಸಿನಿಮಾ ‘ಟ್ವೆಂಟಿ ಒನ್ ಅವರ್ಸ್’. ಜೈಶಂಕರ್ ಪಂಡಿತ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಜನರನ್ನ ಸೆಳೆಯುವಲ್ಲಿ ಕೊಂಚ ಮಟ್ಟಿಗೆ ವಿಫಲವಾಗಿತ್ತು. ನಾಯಕನಾಗಿ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಧನಂಜಯ ಅವರು ತಮ್ಮ ನಟನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರೂ, ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಈ ಸಿನಿಮಾವನ್ನು ಅಭಿನಯ ಚಕ್ರವರ್ತಿ ಸುದೀಪ್ ಅವರು ಕೂಡ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೇ 20ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿದ್ದ ಈ ಚಿತ್ರ ಸದ್ಯ ಒಟಿಟಿ ಕಡೆಗೆ ಓಡಿಬರುತ್ತಿದೆ.
ಧನಂಜಯ ಅವರ ಜೊತೆಗೆ, ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಂತಾದವರು ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಒಂದು ಥ್ರಿಲರ್ ಕಥೆಯಾಗಿತ್ತು. ಬೆಂಗಳೂರಿನಲ್ಲಿ ಕಾಣೆಯಾಗುವ ಒಂದು ಮಲಯಾಳಿ ಹುಡುಗಿ, ಆ ಹುಡುಗಿಯನ್ನು ಹುಡುಕಲು ಹೊರಡೋ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಡಾಲಿ. ಈ ನಡುವೆ ಅವರಿಗೆ ಎದುರಾಗುವ ಸಮಸ್ಯೆಗಳು, ಪ್ರಶ್ನೆಗಳು ಮತ್ತಿತರ ಅಂಶಗಳನ್ನೊಳಗೊಂಡ ರೋಮಾಂಚನಕಾರಿ ಚಿತ್ರ ಇದಾಗಿತ್ತು. ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ‘ರೆಂಟ್’ ಮಾದರಿಯಲ್ಲಿ ಸಿನಿಮಾ ನೋಡಲು ಲಭ್ಯವಾಗುತ್ತಿದೆ. ಸಿನಿಮಾ ನೋಡಲು ಕಾಯುತ್ತಿರುವ ‘ನಟರಾಕ್ಷಸನ’ ಅಭಿಮಾನಿಗಳು ಪ್ರೈಮ್ ವಿಡಿಯೋ ನಲ್ಲಿ 129 ರೂಪಾಯಿಯನ್ನು ನೀಡಿ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.
ಇದಕ್ಕೆ ಪ್ರೈಮ್ ಮೆಂಬರ್ ಆಗಿರುವ ಅಗತ್ಯವಿರುವುದಿಲ್ಲ. ಒಂದುವೇಳೆ ಅಮೆಜಾನ್ ನ ಪ್ರೈಮ್ ಸದಸ್ಯ ನೀವಾಗಿದ್ದರು ಸಹ ಈ ಚಿತ್ರ ನೋಡಲು ಅಧಿಕ 129 ರೂಪಾಯಿಯನ್ನು ನೀಡಲೇ ಬೇಕಾಗುತ್ತದೆ. ಇದು ಪ್ರೈಮ್ ವಿಡಿಯೋ ಸಂಸ್ಥೆಯ ಹೊಸ ‘ರೆಂಟ್’ ರೀತಿಯ ನಿಯಮವಾಗಿದೆ.