ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 1980ನೇ ಇಸವಿಯಲ್ಲಿ ನಡೆದ ಕಥೆಯನ್ನು ಆಧರಿಸಿದ ದೂರದರ್ಶನ ಸಿನಿಮಾದಲ್ಲಿ ಹಳ್ಳಿಯ ಸಾಧಾರಣ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸುಕೇಶ್ ಶೆಟ್ಟಿ ಈ ಹಿಂದೆ ಟ್ರಂಕ್ ಸಿನಿಮಾದಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
“ನನಗೆ ಸಾಕಷ್ಟು ಕಮರ್ಷಿಯಲ್ ಸಿನಿಮಾಗಳ ಆಫರ್ ಬರುತ್ತಿವೆ. ಈ ಸಿನಿಮಾದ ಕಥೆ ನನಗೆ ಹಿಡಿಸಿತು. ಈ ಸಿನಿಮಾದ ಭಾವಪೂರ್ಣ ಕಥೆ , ಪಶ್ಚಿಮ ಘಟ್ಟದ ಸಣ್ಣ ಹಳ್ಳಿಯ ಜೀವನ ದೂರದರ್ಶನ ಪ್ರವೇಶದ ನಂತರ ಹೇಗೆ ಬದಲಾಗುತ್ತವೆ ಎಂಬುದು ಈ ಸಿನಿಮಾ ಕಥೆ”ಎಂದಿದ್ದಾರೆ ಪೃಥ್ವಿ ಅಂಬರ್.
ಈ ಸಿನಿಮಾವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಂಬ ಸಣ್ಣ ಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿದೆ. ನಗರಗಳಲ್ಲಿ ಕಾಣುವ ಮೊಬೈಲ್ ಟವರ್ ಹಾಗೂ ವಾಯರ್ ಗಳ ಕ್ರಿಸ್ ಕ್ರಾಸಿಂಗ್ ನಂತಹ ಆಧುನಿಕ ಅಂಶಗಳ ಸ್ಪರ್ಶವಿಲ್ಲದ ಅನೇಕ ಸ್ಥಳಗಳನ್ನು ಕಾಣಬಹುದು. ಸ್ಥಳೀಯರಿಂದ ಪ್ರೋತ್ಸಾಹ ಪಡೆಯುತ್ತಿರುವ ಸಣ್ಣ ಪುಟ್ಟ ಹೋಟೆಲ್, ಅಂಗಡಿಗಳು ಅಲ್ಲಿವೆ. ನಮಗೆ ಅಂತಹ ವಾತಾವರಣ ಬೇಕಿತ್ತು ಎಂದಿದ್ದಾರೆ ಪೃಥ್ವಿ ಅಂಬರ್.
40 ದಿನಗಳ ಒಳಗೆ ಶೂಟಿಂಗ್ ಮುಗಿಸಿದ್ದೇವೆ. ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಸರಳ ಬಟ್ಟೆಗಳನ್ನು ಧರಿಸಿದ್ದು ಖುಷಿ ತಂದಿದೆ. ಈ ಕಥೆ ನೈಜ ಹಾಗೂ ಪರಿಕಲ್ಪಿತ ಘಟನೆಗಳ ಮಿಶ್ರಣ.ಈ ಸಿನಿಮಾ ಶೂಟಿಂಗ್ ತೃಪ್ತಿ ನೀಡಿತು. ಎಂಬತ್ತರ ದಶಕವನ್ನು ಬಿಂಬಿಸುವ ಜಗತ್ತನ್ನು ಸೃಷ್ಟಿ ಮಾಡಿದ್ದೆವು ಎಂದಿದ್ದಾರೆ ಪೃಥ್ವಿ ಅಂಬರ್.
ಚಿತ್ರದಲ್ಲಿ ಉಗ್ರಂ ಮಂಜು ಪ್ರಮುಖ ಪಾತ್ರ ಮಾಡಿದ್ದಾರೆ.ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ.