ಈಗಿರುವ ಬ್ಯುಸಿ ಸ್ಯಾಂಡಲ್‌ವುಡ್ ನಟರಲ್ಲಿ ಪೃಥ್ವಿ ಅಂಬರ್ ಕೂಡ ಒಬ್ಬರು. ‘ದಿಯಾ’ ಸಿನಿಮಾದಿಂದ ಶುರುವಾದ ಪೃಥ್ವಿ ಅಂಬರ್ ಅವರ ಯಶಸ್ಸಿನ ಪಯಣ ಭರ್ಜರಿಯಾಗಿ ಸಾಗುತ್ತಿದೆ. ಇತ್ತೀಚೆಗಷ್ಟೇ ಶಿವರಾಜ್‌ಕುಮಾರ್ ಅವರ ಜೊತೆಗೆ ಪೃಥ್ವಿ ಅಂಬರ್ ನಟಿಸಿದ್ದ ‘ಬೈರಾಗಿ’ ಸಿನೆಮಾ ರಿಲೀಸ್ ಆಗಿತ್ತು. ನಂತರ ಜುಲೈ 8 ರಂದು ಪೃಥ್ವಿ ಹೀರೋ ಆಗಿದ್ದ ‘ಶುಗರ್‌ಲೆಸ್’ ರಿಲೀಸ್ ಆಯ್ತು. ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡ ಈ ಸಿನೆಮಾದ ನಂತರ ಈಗ ಪೃಥ್ವಿ ಅಂಬರ್ ಅವರ ಹೊಸ ಸಿನಿಮಾದ ಕುರಿತು ಮಾಹಿತಿ ಹೊರಬಂದಿದೆ.
ಅದೇನೆಂದರೆ, ಪೃಥ್ವಿ ನಟನೆಯ ‘ದೂರದರ್ಶನ’ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ.
ಹೌದು, ಪೃಥ್ವಿ ಅಂಬರ್ ನಟನೆಯ ‘ದೂರದರ್ಶನ’ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಉಂಟಾಗುವ ಪ್ರಭಾವಗಳನ್ನು ಆಧರಿಸಿ ಈ ಸಿನಿಮಾವಿದೆ.
ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್, ಅಯನ ಕಾಣಿಸಿಕೊಂಡಿರುವ ಈ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ವಿಭಿನ್ನ ಕಂಟೆಂಟ್ ಮೂಲಕ ಸದ್ದು ಮಾಡಿರುವ ‘ದೂರದರ್ಶನ’ ಸಿನಿಮಾದ ಈ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಹಳ್ಳಿಯೊಂದರ ಬ್ಯಾಕ್ ಡ್ರಾಪ್ ಇದೆ. ಸುಕೇಶ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಈ ಹಿಂದೆ ಅವರು ಸಂಭಾಷಣೆಕಾರರಾಗಿ, ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಸಿನಿಮಾದ ಕುರಿತು ಮಾತನಾಡಿದ ಅವರು ”1980ರ ಕಾಲಘಟ್ಟದಲ್ಲಿ ನಡೆಯುತ್ತಿರುವ ಕಥೆಯಾಧರಿಸಿ ಇರುವ ಸಿನಿಮಾ ನಾವು ನಮ್ಮ ಹಿರಿಯರ ಜೊತೆ ಅನುಭವಿಸಿದ, ನಾವು ನೋಡಿರುವ, ಕೇಳಿರುವ ಮಾಹಿತಿಯನ್ನು ಕಲೆ ಹಾಕಿ ಮಾಡಿದ ಕಥೆಯಾಗಿದೆ. ಇಡೀ ಕಥೆ ಒಂದು ಟಿವಿ ಸುತ್ತ ನಡೆಯುತ್ತದೆಯಂತೆ. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ಳುತ್ತಾರೆ. ನಾವು ರಿಯಲಿಸ್ಟಿಕ್ ಆಗಿ, ಅದೇ ರೀತಿ ಮ್ಯಾನರಿಸಂ ಧಾಟಿಯಲ್ಲಿ ಕಟ್ಟಿಕೊಡುತ್ತಿದ್ದೇವೆ” ಎಂದರು.
ಇನ್ನು ನಟ ಪೃಥ್ವಿ ಅಂಬರ್ ಮಾತನಾಡಿ ‘ಈ ಸಿನಿಮಾ ನನಗೆ ಬಹಳ ಕನೆಕ್ಟ್ ಆಗಿದೆ. ನಾನು ಹುಟ್ಟಿದ್ದು 1988ರಲ್ಲಿ. ನನ್ನ ಪೀಳಿಗೆಯಲ್ಲಿ ಪ್ರೀ-ಟೆಕ್ನಾಲಜಿ ಹಾಗೂ ಟೆಕ್ನಾಲಜಿ ಎರಡನ್ನೂ ನೋಡಿದ್ದೇನೆ. ನಾನು ಕೂಡ ಹಳ್ಳಿಯಲ್ಲಿ ಹುಟ್ಟಿದವನು. ನಮ್ಮ ಮನೆಗೆ ಟಿವಿ ಬರುವ ಮೊದಲು ಬೇರೆಯವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್ ಸರ್ ಕಥೆ ಹೇಳಿದಾಗ ನಮ್ಮೂರಿನ ಕಥೆಯನ್ನೇ ಕೇಳಿದಂತೆ ಆಯ್ತು. ಈ ಸಿನಿಮಾ ಮಾಡಲೇಬೇಕು ಎಂದು ನಿರ್ಧರಿಸಿ ಮಾಡಿದ್ದೇನೆ. 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ’ ಎಂದರು.
ಉಳಿದಂತೆ ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಅವರ ಛಾಯಾಗ್ರಹಣಹಾಗೂ ನಂದೀಶ್ ಟಿ.ಜಿ. ಸಂಭಾಷಣೆ ಚಿತ್ರಕ್ಕಿದೆ. ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರರು ತಾರಾಗಣದಲ್ಲಿದ್ದಾರೆ.