ಸ್ಯಾಂಡಲ್ವುಡ್ ನಿಂದ ಬರುತ್ತಿರುವ ಮುಂದಿನ ಪಾನ್-ಇಂಡಿಯನ್ ಸಿನಿಮಾ, ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲು ದಿನಗಣನೆ ಆರಂಭವಾಗಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ,’ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದ ಮೇಲೆ ಮುಗಿಲೆತ್ತರದ ನಿರೀಕ್ಷೆಗಳು ಸಿನಿರಸಿಕರಲ್ಲಿವೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಹಾಗು ಹಾಡುಗಳು ಎಲ್ಲರನ್ನೂ ‘ವಿಕ್ರಾಂತ್ ರೋಣ’ನ ಲೋಕಕ್ಕೆ ಹೋಗಲು ಸಿದ್ದಪಡಿಸಿವೆ. ಇದೀಗ ಚಿತ್ರತಂಡ ಒಂದೊಂದೇ ಹೊಸ ಅಪ್ಡೇಟ್ ಗಳನ್ನು ಬಿಡುತ್ತಿದೆ. ಇದೊಂದು ಪಾನ್-ಇಂಡಿಯನ್ ಸಿನಿಮಾ ಆದ್ದರಿಂದ ವಿವಿಧ ಭಾಷೆಗಳಲ್ಲಿನ ಚಿತ್ರದ ವಿತರಕರ ಪಟ್ಟಿ ಹೊರಬಿದ್ದಿದೆ.
ಇದೇ ಜುಲೈ 28ಕ್ಕೆ ತೆರೆಕಾಣುತ್ತಿರುವ ‘ವಿಕ್ರಾಂತ್ ರೋಣ’ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್ ಅವರ ‘ಕಿಚ್ಚ ಕ್ರಿಯೇಷನ್ಸ್’ ಹಾಗು ಜಾಕ್ ಮಂಜು ಅವರ ‘ಶಾಲಿನಿ ಆರ್ಟ್ಸ್’ ಸೇರಿ ನಿರ್ಮಿಸುತ್ತಿರುವ ಈ ಸಿನಿಮಾ ಎಲ್ಲೆಡೆ 3ಡಿ ಯಲ್ಲಿಯೂ ತೆರೆಕಾಣುತ್ತಿದೆ. ಕರ್ನಾಟಕದಾದ್ಯಂತ ‘ಶಾಲಿನಿ ಆರ್ಟ್ಸ್’ ಹಾಗು ‘ಕಿಚ್ಚ ಕ್ರಿಯೇಷನ್ಸ್’ ಸೇರಿ ಸಿನಿಮಾ ವಿತರಣೆ ಮಾಡಲಿದ್ದಾರೆ. ಇನ್ನು ತಮಿಳಿನಲ್ಲಿ ‘ಜೀ ಸ್ಟುಡಿಯೋಸ್’, ತೆಲುಗಿನಲ್ಲಿ ‘ಕಾಸ್ಮೋಸ್ ಎಂಟರ್ಟೈನ್ಮೆಂಟ್’ ಹಾಗು ‘ಕೆ ಎಫ್ ಸಿ ಡಿಸ್ಟ್ರಿಬ್ಯೂಷನ್ಸ್’ ಒಂದಾಗಿ ಸಂಪೂರ್ಣ ಆಂಧ್ರ ಹಾಗು ತೆಲಂಗಾಣದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇನ್ನು ಮಲಯಾಳಂನಲ್ಲಿ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ‘ವೇಫೇರರ್ ಫಿಲಂಸ್’ ವಿತರಣೆ ಮಾಡಲಿದ್ದು, ಹಿಂದಿ ಭಾಷೆಯಲ್ಲಿ ‘ಸಲ್ಮಾನ್ ಖಾನ್ ಫಿಲಂಸ್’ ಹಾಗು ‘ಪಿವಿಆರ್ ಪಿಕ್ಚರ್ಸ್’ ಸೇರಿ ವಿತರಿಸುತ್ತಿದ್ದಾರೆ. ಜೊತೆಗೆ ಹೊರದೇಶಗಳಲ್ಲಿ ‘ಒನ್ ಟ್ವೆಂಟಿ ಏಯ್ಟ್ ಮೀಡಿಯಾ’ ಹಾಗು ‘ಫಾರ್ಸ್ ಫಿಲಂಸ್’ ಚಿತ್ರವನ್ನ ಬಿಡುಗಡೆ ಮಾಡುತ್ತಿದೆ.
ಅನೂಪ್ ಭಂಡಾರಿ ಅವರ ಸೃಷ್ಟಿಯ ಈ ಫಾಂಟಮ್ ಲೋಕ ‘ವಿಕ್ರಾಂತ್ ರೋಣ’ನನ್ನು ಥೀಯೇಟರ್ ಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಾರೆ. ಸುದೀಪ್ ಅವರ ಜೊತೆಗೆ ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ ಫೆರ್ನಾಂಡಿಸ್ ಮುಂತಾದವರು ನಟಿಸುತ್ತಿರುವ ಈ ಚಿತ್ರ ಇದೇ ತಿಂಗಳ 28ಕ್ಕೆ ಬಿಡುಗಡೆಯಗುತ್ತಿದ್ದು, ಸದ್ಯ ಬಿಡುಗಡೆಯ ಪೂರ್ವತಯಾರಿಗಳು ಪ್ರಚಾರಗಳು ಭರದಿಂದ ಸಾಗುತ್ತಿದೆ