ಕನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಅವರು ಮೊದಲ ಬಾರಿ ನಿರ್ದೇಶಕರ ಕುರ್ಚಿ ಏರಿದ ಸಿನಿಮಾ ‘ಸಲಗ’. ಅಂಡರ್ ವರ್ಲ್ಡ್ ಲೋಕದ ಕಥೆ ಹೇಳುವಂತಹ ಈ ಚಿತ್ರ ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. 2021ರ ಅಕ್ಟೋಬರ್ 14ರಂದು ತೆರೆಕಂಡಿದ್ದ ಈ ಸಿನಿಮಾ ಸಿನಿರಸಿಕರ ಮೆಚ್ಚುಗೆ ಪಡೆದಿತ್ತು. ಕರ್ನಾಟಕದ ಹಲವು ಕಡೆಗಳಲ್ಲಿ ಭರ್ಜರಿ 100 ದಿನಗಳ ಪ್ರದರ್ಶನ ಪಡೆದು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿ ಎಂಟು ತಿಂಗಳ ನಂತರ ಒಟಿಟಿ ಕಡೆಗೆ ಚಿತ್ರ ಹೊರಟಿದೆ.
ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ನೋಡಲು ಆಗದೆ ಇದ್ದವರು, ನೋಡಿದವರ ಮಾತುಗಳನ್ನು ಕೇಳಿ ಚಿತ್ರ ನೋಡಲು ಉತ್ಸುಕರಾಗಿದ್ದರು. ಯಾವಾಗ ಒಟಿಟಿ ಗೆ ಬರುತ್ತದೆ, ಯಾವುದರಲ್ಲಿ ಬರುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ ಚಿತ್ರತಂಡ ನಮ್ಮ ಚಿತ್ರ ಚಿತ್ರಮಂದಿರಗಳಲ್ಲಿ ಮಾತ್ರ ನೋಡಲು ಸಾಧ್ಯ. ಸದ್ಯಕ್ಕೆ ಯಾವುದೇ ಒಟಿಟಿ ತಾಣಗಳಲ್ಲಿ ಬರೋದಿಲ್ಲ ಎಂದು ಸಿನಿಮಾ ಬಿಡುಗಡೆಯಾದ ಸಂಧರ್ಭದಲ್ಲಿ ಖಡಾಖಂಡಿತವಾಗಿ ಹೇಳಿದ್ದರು. ಇದೀಗ ‘ಸಲಗ’ ಸಿನಿಮಾದ ಒಟಿಟಿ ಬಿಡುಗಡೆಯ ಸುದ್ದಿ ಹೊರಬಿದ್ದಿದೆ. ‘ಸನ್ ನೆಕ್ಸ್ಟ್(SUN NXT)’ ಆಪ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಜುಲೈ ತಿಂಗಳಿಗೆ ಬಿಡುಗಡೆಯಾಗುತ್ತಿದೆ. ಬಹುನಿರೀಕ್ಷಿತ ‘ಸಲಗ’ ಸಿನಿಮಾ ‘ಸನ್ ನೆಕ್ಸ್ಟ್(SUN NXT)’ ನಲ್ಲಿ ಬರುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿದಂತಹ ಈ ಚಿತ್ರದಲ್ಲಿ ಸಂಜನಾ ಆನಂದ್, ಡಾಲಿ ಧನಂಜಯ, ಯಶ್ ಶೆಟ್ಟಿ, ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹಲವು ಹೆಸರಾಂತ ಮೇರು ನಟರು ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಹವಾ ಎಬ್ಬಿಸಿದ ಸಿನಿಮಾ ಇದೀಗ ‘SUN NXT’ ನಲ್ಲಿ ಪ್ರದರ್ಶನ ಕಾಣಲು ಸಿದ್ಧವಾಗಿದೆ.