ನಮ್ಮ ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಹೊರಬರುತ್ತಿರುವ ಹೊಸ ಬಗೆಯ ಚಿತ್ರಗಳು ಸದ್ದು ಮಾಡುತ್ತಲೇ ಇದ್ದಾವೆ. ಸದ್ಯ ಈ ಸಾಲಿಗೆ ಸೇರಿಕೊಳ್ಳುತ್ತಿರುವ ಹೊಸ ಸಿನಿಮಾ ‘ಫ್ಲಾಟ್ ನಂಬರ್ 9’. ಯುವ ನಿರ್ದೇಶಕರಾದ ಕಿಶೋರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಒಬ್ಬ ಸೈಕೋ
ಕಿಲ್ಲರ್ ನ ಕುತೂಹಲಕಾರಿ ಮರ್ಡರ್ ಮಿಸ್ಟರಿ ಕಥೆಯಾಗಿರಲಿದೆ.
ಇದೊಂದು ಮಹಿಳಾ ಪ್ರಧಾನ ಸಿನಿಮವಾಗಿದ್ದು, ಇತ್ತೀಚಿಗಷ್ಟೇ ಬಿಡುಗಡೆಯಾದ ‘ಇಂಗ್ಲೀಷ್ ಮಂಜ’ ಸಿನಿಮಾ ಖ್ಯಾತಿಯ ತೇಜಸ್ವಿನಿ ಶರ್ಮ ಅವರು ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಕಥೆಯಲ್ಲಿ ಎರಡು ನಾಯಕರಿದ್ದು, ‘ಚಾರುಲತಾ’, ‘ಯು ಟರ್ನ್’ ಮುಂತಾದ ಹಿಟ್ ಸಿನಿಮಾಗಳಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ, ‘ರಾಧಾ ರಮಣ’ ಧಾರವಾಹಿಯ ಮೂಲಕ ಕನ್ನಡಿಗರ ಮನೆ ಮಗನಾದ ಸ್ಕಂದ ಅವರು ಒಬ್ಬ ನಾಯಕರಾದರೆ,
ಕನ್ನಡ ಕಿರುತೆರೆಯ ಹೆಸರಾಂತ ಧಾರವಾಹಿ ‘ಲಕ್ಷ್ಮೀ ಬಾರಮ್ಮ’ದಲ್ಲಿನ ‘ಚಂದನ್’ ಪಾತ್ರದಲ್ಲೇ ಪ್ರಖ್ಯಾತಾರಾಗಿ, ನಂತರ ‘ರಾಬರ್ಟ್’, ‘ಫ್ಯಾಮಿಲಿ ಪ್ಯಾಕ್’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚಂದು ಗೌಡ ಅವರು ಇನ್ನೊಬ್ಬ ನಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ಧವಾಗಿದ್ದು, ಈ ಹೊಸಬಗೆಯ ಸಿನಿಮಾದ ಝಲಕ್ ಇದೇ ಆಗಸ್ಟ್ 29ರ ಬೆಳಿಗ್ಗೆ 11:20ಕ್ಕೆ ‘ಎ2 ಮ್ಯೂಸಿಕ್(A2 MUSIC)’
ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.
ದಿನೇಶ್ ಕುಮಾರ್ ಅವರ ಸಂಗೀತ ಹಾಗೂ ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಾಹಣ ಚಿತ್ರದಲ್ಲಿದ್ದು, ‘ಕೆಜಿಎಫ್’ ಹಾಗು ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಳಲ್ಲಿನ ತಮ್ಮ ಕೆಲಸಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾದ ಕಿಶೋರ್ ಅವರು ಹಾಗು ಸಂತೋಷ್ ಕುಮಾರ್ (ಟಿ ಕಟ್ಟೆ) ಸಂತೋಷ್ ಜಿ ಎನ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ.