ಕಾಮಿಡಿ ಟೈಮ್ಸ್ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಗಣೇಶ್ ಇಂದು ಹಿರಿತೆರೆಯ ಬ್ಯುಸಿ ನಟ ಹೌದು. ಮುಂಗಾರುಮಳೆಯ ಪ್ರೀತಮ್ ಆಗಿ ಹಿರಿತೆರೆಯಲ್ಲಿ ಮೋಡಿ ಮಾಡಿರುವ ಗಣೇಶ್ ಇಂದು ಸಿನಿ ಪ್ರಿಯರ ಪಾಲಿಗೆ ಗೋಲ್ಡನ್ ಸ್ಟಾರ್. ಪೋಷಕ ಪಾತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಗೋಲ್ಡನ್ ಸ್ಟಾರ್ ಚೆಲ್ಲಾಟ ಸಿನಿಮಾದ ಮೂಲಕ ನಾಯಕರಾಗಿ ಭಡ್ತಿ ಪಡೆದರು.
ಮೂವತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿ ಸೈ ಎನಿಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಜುಲೈ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಗಣೇಶ್ ಅವರು ತಮ್ಮ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದು ಅದರಲ್ಲಿ ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆಚರಿಸದಂತೆ ಮನವಿಯನ್ನು ಮಾಡಿದ್ದಾರೆ.
ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕವೂ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲಿಯೂ ನನ್ನೊಂದಿಗೆ ಹೆಜ್ಜೆ ಹಾಕಿ ನನ್ನ ಯಶಸ್ಸು ನಿಮ್ಮದೆ ಯಶಸ್ಸು ಎಂಬ ರೀತಿಯಲ್ಲಿ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ. ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತಿ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ. ನನ್ನೆಡಿಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿ ಅಭಿಮಾನಕ್ಕೆ ನಾನು ಋಣಿ” ಎಂದು ಬರೆದುಕೊಂಡಿದ್ದಾರೆ ಗಣೇಶ್.
“ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲ ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೆಲ್ಲರ ಪ್ರೀತಿಯನ್ನು ಆಸ್ವಾಧಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಈ ಸಂಭ್ರಮಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲ ಅನಿವಾರ್ಯ ಕಾರಣಗಳಿಂದ ಈ ವರ್ಷ ನನ್ನ ಹುಟ್ಟುಹಬ್ಬದಂದು ಅಂದರೆ ಜುಲೈ 02ರಂದು ನಾನು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ” ಎಂದಿದ್ದಾರೆ ಗೋಲ್ಡನ್ ಸ್ಟಾರ್.
ಪತ್ರದ ಕೊನೆಯಲ್ಲಿ “ನೀವೆಲ್ಲರೂ ಪ್ರತಿಬಾರಿ ಅಭಿಮಾನದಿಂದ ನನಗಾಗಿ ತರುವ ಹಾರ-ತುರಾಯಿ, ಕೇಕ್ ಇತ್ಯಾದಿಗಳ ಬದಲಿಗೆ ಅದೇ ಹಣದಲ್ಲಿ ಅಗತ್ಯವಿರುವ ಕಡೆಗೆ ಬಳಸಿ ನಿಮ್ಮ ಕೈಲಾಗುವ ಸೇವೆ ಮಾಡಿ, ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನಮಗೆ ತಲುಪಿಸಿಬಿಡಿ” ಎಂದು ಬರೆದುಕೊಂಡಿದ್ದಾರೆ ಗಣೇಶ್. ಒಟ್ಟಾರೆಯಾಗಿ ಈ ವರ್ಷವೂ ಕೂಡಾ ಅವರು ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿಲ್ಲ ಎಂಬುದನ್ನು ಪತ್ರದ ಮೂಲಕ ತಿಳಿಸಿದ್ದಾರೆ.