ಕನ್ನಡ ಕಿರುತೆರೆಯಲ್ಲಿ ಹಲವಾರು ಪ್ರತಿಭಾವಂತ ನಟ-ನಟಿಯರು ತಮ್ಮ ಹೆಸರುಗಳನ್ನು ಅಚ್ಚಾಗಿ ಉಳಿಸಿರುತ್ತಾರೆ. ತಮ್ಮ ನಟನೆ ಅಭಿನಯಗಳಿಂದ ಜನಮನಗೆದ್ದು, ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಾಗಿ ಹಿರಿತೆರೆ ಪ್ರವೇಶಿಸುತ್ತಾರೆ. ಸದ್ಯ ಈ ಸಾಲಿಗೆ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಅಭಿ ದಾಸ್ ಸೇರಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಯಶಸ್ವಿ ಧಾರಾವಾಹಿ ‘ಗಟ್ಟಿಮೇಳ’ದಲ್ಲಿ ವಿಕ್ಕಿ ಪಾತ್ರದರಿಯಾಗಿ ಮನೆಮಾತಾಗಿರುವ ಇವರು, ಇದೀಗ ಹೊಸ ಚಿತ್ರವೊಂದರ ನಾಯಕನಟರಾಗಿ ಘೋಷಿತರಾಗಿದ್ದಾರೆ. ಇವರಿಗೆ ನಾಯಕಿಯಾಗಿ ಅದೇ ಧಾರಾವಾಹಿಯಲ್ಲಿ ‘ಸಾಹಿತ್ಯ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶರಣ್ಯ ಶೆಟ್ಟಿ ನಟಿಸಲಿದ್ದಾರೆ.



ವೆಂಕಟ್ ಭಾರಧ್ವಜ್ ಅವರು ನಿರ್ದೇಶಿಸುತ್ತಿರುವ “ನಗುವಿನ ಹೂಗಳ ಮೇಲೆ” ಸಿನಿಮಾದಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಲಿದ್ದಾರೆ. ಇದೊಂದು ಮಧುರ ಪ್ರೇಮಕತೆಯಾಗಿರಲಿದ್ದು, ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಕನ್ನಡದ ವರನಟ ಡಾ| ರಾಜಕುಮಾರ್ ಅವರು ಹಾಡಿರುವ ಹಾಡಿನ ಸಾಲೊಂದನ್ನು ಶೀರ್ಷಿಕೆಯಾಗಿ ಈ ಸಿನಿಮಾಗೆ ಇಡಲಾಗಿದೆ. ಕೆ ಕೆ ರಾಧಾಮೋಹನ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಲವ್ ಪ್ರಣ್ ಮೆಹತಾ ಅವರು ಸಂಗೀತ ತುಂಬಲಿದ್ದಾರೆ. ಅಭಿ ದಾಸ್ ಹಾಗು ಶರಣ್ಯ ಶೆಟ್ಟಿ ಅವರ ಜೋಡಿ ತೆರೆಮೇಲೆ ಮುದ್ದಾಗಿ ಕಾಣಿಸಲಿದೆ ಎನ್ನುತ್ತಾರೆ ಚಿತ್ರತಂಡ. ಸದ್ಯ ಸಿನಿಮಾ ಘೋಷಣೆಯಾಗಿದ್ದು, ಚಿತ್ರೀಕರಣದ ಬಗ್ಗೆ ಯಾವುದೇ ಸುಳಿವು ಹೊರಬಿಟ್ಟಿಲ್ಲ.




