ದಕ್ಷಿಣ ಭಾರತದ ಖ್ಯಾತ ನಟಿ ಜೆನಿಲಿಯಾ ತಿಂಗಳುಗಳ ಹಿಂದೆಯಷ್ಟೇ ತಮ್ಮದೇ ಬ್ಯಾನರ್ ನ ಅಡಿಯಲ್ಲಿ ಪತಿ ರಿತೇಶ್ ದೇಶ್ ಮುಖ್ ನಿರ್ದೇಶನದ ಮರಾಠಿ ಚಿತ್ರದಲ್ಲಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಮರಳಿದ್ದರು. ಅದು ಕೂಡಾ ಬರೋಬ್ಬರಿ ಹತ್ತು ವರ್ಷಗಳ ಬಳಿಕ! ಇದೀಗ ಜೆನಿಲಿಯಾ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನೆಂದರೆ ಜೆನಿಲಿಯಾ ಇದೀಗ ಚಂದನವನಕ್ಕೂ ಕಾಲಿಡಲಿದ್ದಾರೆ.
ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರದಲ್ಲಿ ಜೆನಿಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ತನ್ನ ಕಮ್ ಬ್ಯಾಕ್ ಕುರಿತು ಮಾತನಾಡಿರುವ ಜೆನಿಲಿಯಾ ” ಹತ್ತು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ನನದನ ಪಾಲಿನ ಸ್ಪೆಷಲ್ ಪ್ರಾಜೆಕ್ಟ್ ಹೌದು. ಇನ್ನು ಕಿರೀಟಿಗೆ ಇದು ಮೊದಲ ಸಿನಿಮಾ. ರಾಧಾಕೃಷ್ಣ ಅವರು ಬಹಳ ಚೆನ್ನಾಗಿ ಪಾತ್ರ ಬರೆದಿದ್ದಾರೆ. ಒಳ್ಳೆಯ ಸಿನಿಮಾ ಮೂಲಕ ಮರಳಿರುವುದು ಖುಷಿ ತಂದಿದೆ” ಎನ್ನುತ್ತಾರೆ ಜೆನಿಲಿಯಾ.
2008ರಲ್ಲಿ ತೆರೆಕಂಡ ಶಿವರಾಜ್ ಕುಮಾರ್ ಅಭಿನಯದ “ಸತ್ಯ ಇನ್ ಲವ್” ಚಿತ್ರದಲ್ಲಿ ನಟಿಸಿದ್ದ ಜೆನಿಲಿಯಾ ನಂತರ ಪರಭಾಷಾ ಚಿತ್ರಗಳಲ್ಲಿಯೇ ಬ್ಯುಸಿಯಾಗಿದ್ದರು. 2012ರಲ್ಲಿ ರಿತೇಶ್ ಅವರನ್ನು ಮದುವೆಯಾದ ಜೆನಿಲಿಯಾ ಗಂಡ, ಮಕ್ಕಳು, ಸಂಸಾರ ಎಂದು ಬ್ಯುಸಿಯಾಗಿದ್ದರು. ಸದ್ಯ ಬಣ್ಣದ ಲೋಕಕ್ಕೆ ಮರಳಿರುವ ಜೆನಿಲಿಯಾ ಕೈಯಲ್ಲಿ ಹಲವು ಚಿತ್ರಗಳಿರುವುದಂತೂ ನಿಜ.