ಕನ್ನಡಿಗರ ನೆಚ್ಚಿನ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು(ಜುಲೈ 2) 42ನೇ ಹುಟ್ಟುಹಬ್ಬದ ಸಂಭ್ರಮ. ಕಾರಣಾಂತರಗಳಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ಗಣೇಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಹಾಗಾಗಿ ಜನುಮದಿನದ ಸಡಗರ ಅಭಿಮಾನಿಗಳಲ್ಲಿ ಸ್ವಲ್ಪ ಕಡಿಮೆಯೇ ಇದ್ದರೂ ಸಹ, ಅವರ ನಟನೆಯಲ್ಲಿ ಮೂಡಿಬರುತ್ತಿರೋ ಹೊಸ ಸಿನಿಮಾಗಳು ಈ ಬಾರಿ ಹುಟ್ಟುಹಬ್ಬಕ್ಕೆ ಉಡುಗೊರೆಗಳನ್ನ ನೀಡುತ್ತಿವೆ. ಇದರಿಂದ ಅಭಿಮಾನಿಗಳು ಕೂಡ ಸಂತುಷ್ಟರಾಗಿದ್ದಾರೆ.
ಹಲವಾರು ಸಿನಿಮಾಗಳನ್ನು ಕೈಗೆತ್ತಿಕೊಂಡಿರುವ ಗಣೇಶ್ ಅವರ ಕೆಲವು ಸಿನಿಮಾಗಳು ಬಿಡುಗಡೆಗೆ ಕೂಡ ಸಿದ್ದವಾಗಿ ಕೂತಿವೆ. ಯೋಗರಾಜ್ ಭಟ್ ಹಾಗು ಗಣೇಶ್ ಅವರ ಜೋಡಿಯಿಂದ ಮೂಡಿಬರುತ್ತಿರೋ ನಾಲ್ಕನೇ ಚಿತ್ರ ಬಹುನಿರೀಕ್ಷಿತ ‘ಗಾಳಿಪಟ 2’ ಚಿತ್ರತಂಡ ಈಗಾಗಲೇ ಹಾಡೊಂದನ್ನು ಬಿಡುಗಡೆಗೊಳಿಸಿದೆ. ‘ನಾನಾಡದ ಮಾತೆಲ್ಲವ’ ಎಂಬ ಈ ಹಾಡು ವರ್ಷದ ಪ್ರೇಮಗೀತೆ ಯಾಗುವಷ್ಟು ಇಂಪಾಗಿದೆ. ಇನ್ನು ಶ್ರೀ ಮಹೇಶ್ ಗೌಡ ಅವರ ನಿರ್ದೇಶನದ ‘ತ್ರಿಬಲ್ ರೈಡಿಂಗ್’ ಚಿತ್ರದಿಂದ ಪೋಸ್ಟರ್ ಒಂದರ ಮೂಲಕ ಹುಟ್ಟುಹಬ್ಬದ ಶುಭಾಶಯ ಹೇಳಲಾಗಿದೆ. ಹಾಗೆಯೇ ಪ್ರೀತಮ್ ಗುಬ್ಬಿ ಹಾಗು ಗಣೇಶ್ ಮತ್ತೊಮೆ ಜೊತೆಯಾಗುತ್ತಿರುವ ‘ಬಾನ ದಾರಿಯಲ್ಲಿ’ ಚಿತ್ರತಂಡ ಕೂಡ ಪೋಸ್ಟರ್ ಒಂದನ್ನು ಬಿಟ್ಟಿದ್ದು, ಗಣಿ ಕ್ರಿಕೆಟ್ ಆಡುವಂತಹ ಚಿತ್ರ ಅದರಲ್ಲಿದೆ.
ಇವೆಲ್ಲದರ ಜೊತೆಗೆ ಸಿಂಪಲ್ ಸುನಿ ಹಾಗು ಗಣೇಶ್ ಅವರು ಎರಡನೇ ಬಾರಿ ಜೋಡಿಯಾಗಿ ಬರುತ್ತಿರುವ ಹೊಸ ಸಿನಿಮಾದ ಬಗೆಗಿನ ಹೊಸ ಸುದ್ದಿಯನ್ನು ನಿರ್ದೇಶಕ ಸುನಿ ಹೊರಬಿಟ್ಟಿದ್ದಾರೆ. ಪಕ್ಕ ಮಾಸ್ ಪೋಸ್ಟರ್ ಗಳಿಂದ ಈ ಹಿಂದೆ ಗಮನ ಸೆಳೆದಿದ್ದ ‘ದಿ ಸ್ಟೋರಿ ಒಫ್ ರಾಯಗಡ’ ಎಂಬ ಸಿನಿಮಾವನ್ನು ಸುನಿ ಹಾಗು ಗಣಿ ಸೇರಿ ಮಾಡುತ್ತಿದ್ದು, ಈ ವರ್ಷದ ನವೆಂಬರ್ ನಿಂದ ಚಿತ್ರೀಕರಣ ಆರಂಭಿಸಲಿದ್ದಾರೆ. ಜೂಡಾ ಸ್ಯಾಂಡಿ ಅವರು ಸಂಗೀತ ತುಂಬಲಿರೋ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಗೋಲ್ಡನ್ ಸ್ಟಾರ್ ಅವರ ‘ಗಾಳಿಪಟ 2’ ಚಿತ್ರ ಇದೇ ಆಗಸ್ಟ್ 12ರಿಂದ ಚಿತ್ರಮಂದಿರಗಳಿಗೆ ಬರಲಿದೆ.