ಕೆ ಜಿ ಎಫ್: ಚಾಪ್ಟರ್ 2, ಪ್ರಪಂಚದಾದ್ಯಂತ ಅತಿನಿರೀಕ್ಷಿತ ಚಿತ್ರ. ಮೊದಲ ಅಧ್ಯಾಯದಲ್ಲಿ ಶುರುಮಾಡಿ ಎರಡನೇ ಅಧ್ಯಾಯದಲ್ಲಿ ಹೇಳ ಹೊರಟಿರೋ ಕಥೆಯನ್ನ ಕೇಳಲು ಭಾಷೆಯ ಬಂಧನಗಳಿಲ್ಲದೆ ಎಲ್ಲ ಸಿನಿರಸಿಕರು ಕಾಯುತ್ತಿದ್ದಾರೆ. ಇನ್ನೇನು ಸಿನಿಮಾದ ಬಿಡುಗಡೆಗೆ ದಿನಗಳು ಸನಿಹವಾಗುತ್ತಿದ್ದಂತೆ, ಸಿನಿಮಾದ ಮೇಲಿನ ಆಕಾಂಕ್ಷೆಗಳು ಮುಗಿಲಿಗೆ ಸನಿಹವಾಗುತ್ತಿವೆ. ಸದ್ಯ ‘ಕೆ ಜಿ ಎಫ್’ ಗರಡಿಯಿಂದ ಹೊರಬಿದ್ದಿರೋ ಹೊಸ ಸುದ್ದಿ ಅಭಿಮಾನಿಗಳಲ್ಲಿ ಸಂತಸವನ್ನ ಹೆಚ್ಚಿಸುತ್ತಿದೆ.
ಚಿತ್ರತಂಡ ಈಗಾಗಲೇ ತನ್ನ ಟ್ರೈಲರ್ ಬಿಡುಗಡೆಗೆ ಮುಹೂರ್ತ ಇಟ್ಟಿತ್ತು. ಮಾರ್ಚ್ 27ರ ಸಂಜೆ 6:40ಕ್ಕೆ ಸರಿಯಾಗಿ ‘ಹೊಂಬಾಳೆ ಫಿಲಂಸ್’ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ. ಆ ಕ್ಷಣಕ್ಕೋಸ್ಕರ ಕಾಯದೆ ಇರೋ ಅಭಿಮಾನಿಯೇ ಇಲ್ಲವೆಂದು ಹೇಳಿದರೆ ತಪ್ಪಾಗಲಾಗದು. ಈಗ ‘ಕೆ ಜಿ ಎಫ್: ಚಾಪ್ಟರ್ 2’ ತನ್ನ ಮೊದಲ ಹಾಡೋಂದನ್ನು ಜನರೆದುರಿಗಿಡಲು ನಿರ್ಧರಿಸಿದೆ.ಇದೇ ಮಾರ್ಚ್ 21ರ ಸೋಮವಾರ ಬೆಳಿಗ್ಗೆ 11:04ಕ್ಕೆ ಸರಿಯಾಗಿ ‘ತೂಫಾನ್’ ಎಂಬ ಹಾಡು ದೂಳೆಬ್ಬಿಸಲು ಸಿದ್ಧವಾಗಿದೆ. ಈ ಸುದ್ದಿಯನ್ನ ಪೋಸ್ಟರ್ ಒಂದರ ಮೂಲಕ ‘ಹೊಂಬಾಳೆ ಫಿಲಂಸ್’ ತನ್ನ ಸಾಮಾಜಿಕ ಖಾತೆಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳ ಆಸೆಗಳನ್ನ ಇನ್ನಷ್ಟು ಹೆಚ್ಚಿಸಿದೆ.
ಇದಷ್ಟೇ ಅಲ್ಲದೇ ಈ ಕನ್ನಡದ ಚಿನ್ನದ ಗಣಿಯಿಂದ ಇನ್ನಷ್ಟು ಅತ್ಯುತ್ತಮ ವಿಷಯಗಳು ಹೊರಬಿದ್ದಿದೆ. ಮಲಯಾಳಂ ಭಾಷೆಯಲ್ಲಿ ಸಿನಿಮಾದ ಅಭಿಮಾನಿಗಳಿಗೋಸ್ಕರದ ಬುಕಿಂಗ್ ಗಳು ಈಗಾಗಲೇ ಆರಂಭವಾಗಿದೆ. ಅಲ್ಲದೇ, ಏಪ್ರಿಲ್ 14ರಂದು ಬೆಳ್ಳಿತೆರೆ ಕಾಣಲಿರೋ ಚಿತ್ರಕ್ಕೆ ಹೊರದೇಶಗಳಲ್ಲಿ ಪ್ರೀಮಿಯರ್ ಶೋನ ಮುಹೂರ್ತ ಕೂಡ ಇಟ್ಟಾಗಿದೆ. ಉತ್ತರ ಅಮೇರಿಕಾದಲ್ಲಿ ಏಪ್ರಿಲ್ 13ರಂದು ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಈ ಭಾಗದಲ್ಲಿ ‘ಸ ರಿ ಗ ಮ ಸಿನಿಮಾಸ್’ ಸಂಸ್ಥೆ ದಕ್ಷಿಣದ ಭಾಷೆಗಳಲ್ಲಿ ಸಿನಿಮಾವನ್ನ ಹೊರತರಲಿದ್ದರೆ, ‘Cinestan AA’ ಸಂಸ್ಥೆ ಹಿಂದಿ ವಿತರಣೆಯ ಜವಾಬ್ದಾರಿ ತೆಗೆದುಕೊಂಡಿದೆ.
ಏಪ್ರಿಲ್ 14ಕ್ಕೆ ಅಭಿಮಾನಿಗಳಲ್ಲಿ ಈಗಿನಿಂದಲೇ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಉತ್ಸಾಹ ಕಾತುರತೆಯಿಂದ ರಾಕಿ ಭಾಯ್ ಅನ್ನು ಸ್ವಾಗತಿಸಲು ಕಾಯುತ್ತಿದ್ದಾರೆ.