ತೆಲುಗು ಚಿತ್ರರಂಗದ ‘ಡಾರ್ಲಿಂಗ್’ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಅತ್ಯಂತ ನಿರೀಕ್ಷೆಗಳನ್ನ ಬೆನ್ನಿಗಂಟಿಸಿಕೊಂಡಿದ್ದ ಚಿತ್ರ ‘ರಾಧೆ ಶ್ಯಾಮ್’ ಮಾರ್ಚ್ 11ರಂದು ಬೆಳ್ಳಿತೆರೆ ಕಂಡದ್ದು ಎಲ್ಲರಿಗೂ ಗೊತ್ತಿರೋ ವಿಷಯ. ರಾಧಾಕೃಷ್ಣ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಬಹುಪಾಲು ಪ್ರೇಕ್ಷಕರ ಮನಸೆಳೆಯುವಲ್ಲಿ ವಿಫಲವಾಗಿತ್ತು. ಚಿತ್ರಮಂದಿರಗಳನ್ನ ಜನರಿಂದ ತುಂಬಿಸಲು ಈ ಸಿನಿಮಾಗೆ ಸಾಧ್ಯವಾಗಲಿಲ್ಲ. ನಿರೀಕ್ಷೆಗಳ ಸಾಗರವನ್ನೇ ಹೊತ್ತುಬಂದಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೋತಿದ್ದು ಹಲವಾರು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿತ್ತು. ಸದ್ಯ ಈ ಸಿನಿಮಾ ಒಟಿಟಿ ಕಡೆಗೆ ಮುಖಮಾಡಿದೆ.
ಪ್ರಭಾಸ್ ಗೆ ಜೊತೆಯಾಗಿ ಕುಡ್ಲದ ಕುವರಿ ತೆಲುಗಿನ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿರೋ ಈ ಸಿನಿಮಾ ಇದೇ ಏಪ್ರಿಲ್ 1ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಲು ಲಭ್ಯವಾಗಲಿದೆ. ಬಿಡುಗಡೆಯಾಗಿ ಒಂದು ತಿಂಗಳು ತುಂಬದೆಯೇ ಒಟಿಟಿಗೆ ಬರುತ್ತಿರುವುದು ಅಚ್ಚರಿಯನ್ನ ತಂದರು, ಥೀಯೇಟರ್ಗಳಲ್ಲಿ ನೋಡಲಾಗದ ಅಭಿಮಾನಿಗಳಲ್ಲಿ ಆನಂದವನ್ನ ಈ ವಿಷಯ ತಂದಿದೆ.
ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆಯು ಟ್ವಿಟ್ಟರ್, ಇನ್ಸ್ಟಾಗ್ರಾಮ್, ಮುಂತಾದ ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ವಿಚಾರವನ್ನ ಸಿನಿಮಾದ ಪೋಸ್ಟರ್ ಒಂದರ ಜೊತೆಗೆ ಹಂಚಿಕೊಂಡಿದೆ. ರಾಧೆ-ಶ್ಯಾಮನ ಪ್ರೇಮ-ಸಮರದ ಕಥೆಯನ್ನ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಕನ್ನಡ, ತಮಿಳು ತೆಲುಗು ಹಾಗು ಮಲಯಾಳಂ ಭಾಷೆಗಳಲ್ಲಿ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ.