ಕರುನಾಡಿನ ಪ್ರತಿಯೊಬ್ಬ ಕನ್ನಡಿಗನೂ ಹಾತೊರೆದು ಎದುರು ನೋಡುತ್ತಿರೋ ಸಿನಿಮಾ ‘ಜೇಮ್ಸ್’. ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾದ ಜೇಮ್ಸ್ ಅವರದೇ ಜನುಮದಿನವಾದ ಮಾರ್ಚ್ 17ರಂದು ತೆರೆಗೆ ಅಪ್ಪಳಿಸುತ್ತಿರೋದು ನಮಗೆಲ್ಲ ಪರಿಚಿತ ಸುದ್ದಿ. ಚಿತ್ರತಂಡ ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಅಚ್ಚುಕಟ್ಟಾಗಿ ಎಲ್ಲ ಕೆಲಸಗಳನ್ನ ಮಾಡುತ್ತಿದೆ. ಟೀಸರ್ ಬಿಟ್ಟ ಬೆನ್ನಲೇ ಟ್ರೇಡಮಾರ್ಕ್ ಅನ್ನೋ ಹಾಡೊಂದನ್ನ ಬಿಟ್ಟು ಅಭಿಮಾನಿಗಳ ಉತ್ಸಾಹವನ್ನ ಹೆಚ್ಚಿಸಿತ್ತು ಚಿತ್ರತಂಡ. ಪ್ರಮೋಷನ್ ಗಳು, ಸಂದರ್ಶನಗಳು ಎಲ್ಲ ಭರದಿಂದ ಸಾಗುತ್ತಿವೆ. ಇದೀಗ ಚಿತ್ರದ ಸೆನ್ಸರ್ ಪ್ರಕ್ರಿಯೆ ಕೂಡ ಮುಗಿದಿದೆ.
ಹೌದು, ‘ಜೇಮ್ಸ್’ ಸೃಷ್ಟಿಕರ್ತ ಚೇತನ್ ಕುಮಾರ್ ಅವರು ತಮ್ಮ ಚಿತ್ರವನ್ನ ಸೆನ್ಸರ್ ಮಂಡಳಿ ಮುಂದೆ ಇಟ್ಟಿದ್ದರು. ಚಿತ್ರವನ್ನ ಸಂಪೂರ್ಣ ವೀಕ್ಷಿಸಿದ ಮಂಡಳಿ ಸದಸ್ಯರು ಯಾವುದೇ ತಕರಾರನ್ನು ಎತ್ತಿಲ್ಲ. U/A ಪ್ರಮಾಣವನ್ನ ಚಿತ್ರಕ್ಕೆ ಮಂಡಳಿ ನೀಡಿದೆ. ಅಲ್ಲದೇ ಇಡೀ ಚಿತ್ರದಲ್ಲಿ ಯಾವ ದೃಶ್ಯಾವನ್ನು ಸಹ ತೆಗೆಯುವಂತೆ ಸೆನ್ಸರ್ ಮಂಡಳಿಯಿಂದ ಆದೇಶವಿಲ್ಲವಂತೆ. ಈ ವಿಷಯವನ್ನ ಸಂತೋಷದಿಂದ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ. ಅಂದರೆ, ಅಭಿಮಾನಿಗಳು ಚಿತ್ರವನ್ನ ಯಾವುದೇ ಅಡೆತಡೆಯಿಲ್ಲದೇ, ಯಾವುದೇ ಕೊರತೆಯಿಲ್ಲದೇ, ಹೇಗಿದೆಯೋ ಹಾಗೇ ಚಿತ್ರಮಂದಿರಗಳಲ್ಲಿ ನೋಡಬಹುದಾಗಿದೆ.
ಎಷ್ಟೇ ವರ್ಷಗಳಾದರೂ ಮಿಂಚು ನಿಲ್ಲದ ಯುವನಕ್ಷತ್ರ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ಸಂಪೂರ್ಣ ನಾಯಕರಾಗಿ ಕಂಡು ಸಂತುಷ್ಟರಾಗಲು ಅವರು-ಇವರೆನ್ನದೆ ಸರ್ವರೂ ಕಾಯುತ್ತಿದ್ದೇವೆ. ಮಾರ್ಚ್ 17ರಿಂದ ನಮ್ಮೆಲ್ಲರ ಬಹುನಿರೀಕ್ಷಿತ ಆಸೆ ನೆರವೇರಲಿದೆ.