‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರು ಸಂಪೂರ್ಣ ನಾಯಕರಾಗಿ ನಟಿಸಿದಂತಹ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಗೊಂಡು ಎಲ್ಲೆಡೆ ಚಿತ್ರಮಂದಿರಗಳ ಜೊತೆಗೆ ಕನ್ನಡಿಗರ ಮನಸ್ಸನ್ನು ತುಂಬುತ್ತಿದೆ. ಎಲ್ಲ ಕಡೆ ಹೌಸ್ ಫುಲ್ ಶೋಗಳನ್ನು ಪಡೆಯುತ್ತಿರೋ ಈ ಚಿತ್ರವನ್ನ ಅಲ್ಲಲ್ಲಿ ಚಿತ್ರಮಂದಿರಗಳಿಂದ ತೆಗೆಯುತ್ತಿರುವುದು ಕಂಡುಬಂದದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಈ ವಿಷಯಕ್ಕೆ ನಾಡಿನ ಮುಖ್ಯಮಂತ್ರಿಗಳೇ ಒಂದು ಮಟ್ಟಿನ ತೆರೆ ಎಳೆದಿದ್ದಾರೆ.
ಭಾರತದೆಲ್ಲೆಡೆ ವಿಶೇಷ ಛಾಪು ಮೂಡಿಸುತ್ತಿರೋ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ಭಾಷೆಯ ಹಂಗಿಲ್ಲದೆ ಎಲ್ಲರಿಗೂ ಕಾಶ್ಮೀರದ ಕಥೆ ಹೇಳುತ್ತಿದೆ ಚಿತ್ರ. ಈ ಚಿತ್ರದ ಪ್ರಭಾವ ಎಲ್ಲಿವರೆಗೆ ಬೆಳೆದಿದೆ ಎಂದರೆ ಕರ್ನಾಟಕದ ಹಲವಾರು ಕಡೆ ಕನ್ನಡದ ಸ್ವಂತ ಚಿತ್ರ, ಅದರಲ್ಲೂ ಅಪ್ಪು ಚಿತ್ರವಾದ ‘ಜೇಮ್ಸ್’ ಅನ್ನು ಹೊರಹಾಕುವಷ್ಟು!! ಕಾಶ್ಮೀರ್ ಫೈಲ್ಸ್ ಚಿತ್ರದ ಶೋ ಹೆಚ್ಚಳ ಮಾಡುವ ನಿಟ್ಟಿನಲ್ಲಿ ‘ಜೇಮ್ಸ್’ ಚಿತ್ರದ ಶೋಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲದೇ, ನಾಳೆ(ಮಾ.25)ರಂದು ರಾಜಮೌಳಿಯವರ RRR ಚಿತ್ರ ತೆರೆಕಾಣುತ್ತಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ಚಿತ್ರದ ಪ್ರದರ್ಶನ ನಿಲ್ಲಿಸುವ ಭೀತಿ ಉಂಟಾಗಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರವನ್ನ ತೆಗೆದಲ್ಲಿ ಸಿನಿಮಂದಿರದೊಳಗೆ ನುಗ್ಗಿ ಗಲಭೆ ಮಾಡುವುದಾಗಿ ಹೇಳಿಕೊಂಡಿದ್ದರು.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, “ಅಭಿಮಾನಿಗಳು ಶಾಂತರಾಗಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಜೊತೆಹಾಗು ಶಿವಣ್ಣನವರ ಜೊತೆ ಮಾತನಾಡಿದ್ದೇನೆ. ಎಲ್ಲೇ ಚಿತ್ರವನ್ನು ತೆಗೆದುಹಾಕಿದ್ದು ತಿಳಿದುಬಂದಲ್ಲಿ ನನ್ನ ಗಮನಕ್ಕೆ ತರುವಂತೆ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ‘ಜೇಮ್ಸ್’ ಅನ್ನು ಥೀಯೇಟರ್ ಗಳಿಂದ ತೆಗೆಯುವಂತಿಲ್ಲ” ಎಂದಿದ್ದಾರೆ.
ವಿಪರ್ಯಾಸವೆಂದರೆ ಈ ಚಲನಚಿತ್ರಗಳನ್ನು ಸಹ ಪಕ್ಷಗಳು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು. ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಇಡೀ ದೇಶ ನೋಡಬೇಕೆಂದು ಹೋರಾಡುತ್ತಿರುವ ರಾಜಕಾರಣಿಗಳು ಅದರಲ್ಲೂ ತಮ್ಮ ಲಾಭವನ್ನ ಕಂಡುಕೊಂಡು ಅಪ್ಪು ಅಭಿನಯದ ‘ಜೇಮ್ಸ್’ ಚಿತ್ರವನ್ನ ತೆಗೆಯುತ್ತಿದ್ದಾರೆ. ಜನರೆದುರಿಗೆ ಸುದ್ದಿಗೋಷ್ಠಿಗಳಲ್ಲಿ ಬಂದು ಕಾಂಗ್ರೆಸ್ನವರು ಬಿಜೆಪಿಯವರ ಮೇಲು, ಬಿಜೆಪಿಯವರು ಕಾಂಗ್ರೆಸ್ಸ್ನವರ ಮೇಲು ಪರಸ್ಪರ ಆರೋಪಿಸಿಕೊಳ್ಳುತ್ತಿದ್ದಾರೆ!!