ಪುನೀತ್ ರಾಜಕುಮಾರ್ ಅವರನ್ನ ನಾಯಕನಾಗಿ ಹೊಂದಿದ್ದ ಕೊನೆಯ ಚಿತ್ರ, ‘ಜೇಮ್ಸ್’ ಜನಮಾನಸವನ್ನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರಗಳಲ್ಲಿ ಬಿರುಸಿನ ಓಟ ಕಂಡು ಬಾಕ್ಸ್ ಆಫೀಸ್ ಅನ್ನು ಪುಡಿ-ಪುಡಿ ಮಾಡಿತ್ತು. ಈಗ ಆ ಚಿತ್ರದ ನಿರ್ಮಾಪಕರು ತಮ್ಮ ಮುಂದಿನ ಚಿತ್ರದ ಬಗೆಗಿನ ಘೋಷಣೆಯನ್ನ ಮಾಡಿದ್ದಾರೆ. ಸಂತೋಷವೆಂದರೆ, ಈ ಸಿನಿಮಾದ ನಾಯಕನೂ ಕೂಡ ರಾಜ್ ಕುಟುಂಬದ ಕುಡಿಯೇ ಆಗಿರಲಿದ್ದಾರೆ.
‘ಜೇಮ್ಸ್’ ಚಿತ್ರದ ನಿರ್ಮಾಪಕರಾದ ಕಿಶೋರ್ ಪಾತಿಕೊಂಡ ಅವರು ತಮ್ಮ ಹೊಸ ಚಿತ್ರದ ನಾಯಕನಟನನ್ನು ಘೋಷಿಸಿದ್ದಾರೆ. ರಾಜಕುಮಾರ್ ಮೊಮ್ಮಗನಾದ ಧೀರನ್ ರಾಮಕುಮಾರ್ ಈ ಹೊಸ ಚಿತ್ರದ ನಾಯಕ. ತಮ್ಮ ನಿರ್ಮಾಣದ ಮೊದಲ ಚಿತ್ರದಲ್ಲೇ ಯಶಸ್ಸು ಕಂಡಿರುವ ‘ಕಿಶೋರ್ ಪ್ರೊಡಕ್ಷನ್ಸ್’, ‘ಬಡವ ರಾಸ್ಕಲ್’ ಚಿತ್ರದ ನಿರ್ದೇಶಕರಾದ ಶಂಕರ್ ಗುರು ಅವರೊಂದಿಗೆ ಕೈಜೋಡಿಸಿದ್ದಾರೆ. ಧೀರನ್ ಅವರಿಗೆ ಈ ಹೊಸ ಚಿತ್ರವನ್ನ ನಿರ್ದೇಶಿಸಲಿರುವ ಶಂಕರ್ ಗುರು ಅವರು ಈ ಬಗ್ಗೆ ಮಾತನಾಡಿದ್ದು, “ರಾಜಕುಮಾರ್ ಅವರ ಕುಟುಂಬದ ಮೇಲೆ ಕನ್ನಡಿಗರಿಗೆ ಅಪಾರ ಗೌರವವಿದೆ. ಇದನ್ನ ತಲೆಯಲ್ಲಿಟ್ಟುಕೊಂಡೆ ಕೌಟುಂಬಿಕ ಕಥೆಯೊಂದನ್ನ ಮಾಡಿಕೊಂಡಿದ್ದೇನೆ. ‘ಬಡವ ರಾಸ್ಕಲ್’ ರೀತಿಯ ಕೌಟುಂಬಿಕ ಕಥೆಯೇ ಈ ಚಿತ್ರದಲ್ಲೂ ಇರಲಿದೆ. ಧೀರನ್ ಅವರು ಕೂಡ ನಾನು ನಿರ್ದೇಶಕರ ನಟ, ನೀವು ಹೇಳಿದಂತೆ ಕೆಲಸ ಮಾಡುತ್ತೇನೆ, ಎಂದು ತಮ್ಮನ್ನು ತಾವು ಚಿತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ. ಈ ಚಿತ್ರ ಮುಗಿದ ನಂತರ ಮತ್ತೊಮ್ಮೆ ಡಾಲಿಯವರೊಡನೆ ಕೆಲಸ ಮಾಡಳಿದ್ದೇನೆ” ಎಂದಿದ್ದಾರೆ.
ಕನ್ನಡದ ಹಿರಿಯನಟ ರಾಮಕುಮಾರ್ ಹಾಗು ರಾಜಕುಮಾರ್ ಪುತ್ರಿ ಪೂರ್ಣಿಮಾ ದಂಪತಿಯ ಮಕ್ಕಳಾದ ಇಬ್ಬರು ಈ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಇವರ ಮಗಳು ಧನ್ಯ ರಾಮಕುಮಾರ್ ‘ನಿನ್ನ ಸನಿಹಕೆ’ ಚಿತ್ರದಿಂದ ಚಂದನವನಕ್ಕೆ ಕಾಲಿಟ್ಟು, ಇದೀಗ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಪುತ್ರ ಧೀರನ್ ಅವರು ಕೂಡ ಈಗಾಗಲೇ ‘ಶಿವ 143’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ತೆಲುಗಿನ ‘ಆರ್ ಎಕ್ಸ್ 100’ ಚಿತ್ರದ ರಿಮೇಕ್ ಇದಾಗಿದ್ದು ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ರಾಜ್ ಕುಟುಂಬದ ಮೂರನೇ ಪೀಳಿಗೆಯ ಕಾಲ ಆರಂಭವಾಗಲಿದೆ.