Karnataka Bhagya

ಅಲಿಬಾಬನ ಅವತಾರದಲ್ಲಿ ಮೋಡಿ ಮಾಡಲಿದ್ದಾರೆ ಜೆಕೆ

ಕನ್ನಡ ಕಿರುತೆರೆಯಲ್ಲಿ ಜೆಕೆ ಅಭಿನಯದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಅಂದಿನ ಸಮಯಕ್ಕೆ ಭರ್ಜರಿಯಾಗಿ ಪ್ರಸಾರ ಕಂಡು ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಸಿಕ್ಕಾಪಟ್ಟೆ ಫೇಮಸ್ ಆದರು. ನಂತರದಲ್ಲಿ ಸ್ಯಾಂಡಲ್ವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅಶ್ವಿನಿ ನಕ್ಷತ್ರ ಧಾರಾವಾಹಿಯ ನಂತರ ಹಿಂದಿ ಕಿರುತೆರೆ ಕಡೆ ಮುಖ ಮಾಡಿದ ಜೆಕೆ, ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದರು. ಇದೀಗ ಮತ್ತೆ ಹಿಂದಿ ಸೀರಿಯಲ್ ನತ್ತ ಮತ್ತೆ ಮುಖ ಮಾಡಿದ್ದಾರೆ.

ಹೌದು, ಹೊಸ ಸೀರಿಯಲ್ ನಲ್ಲಿ ಆಲಿಬಾಬನಾಗಿ ಜೆಕೆ ಕಾಣಿಸಿಕೊಳ್ಳಲಿದ್ದಾರೆ.
ಇದೀಗ 5 ವರ್ಷಗಳ ನಂತರ ಹಿಂದಿ ಕಿರುತೆರೆಗೆ ಮತ್ತೆ ಕಾಲಿಟ್ಟಿದ್ದಾರೆ. ಹಿಂದಿಯ ಪ್ರಸಿದ್ಧ ನಿರ್ದೇಶಕ ಮಾನ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿರುವ ‘ಆಲಿಬಾಬಾ ದಸ್ತಾನ್-ಎ-ಕಾಬೂಲ್‘ ಎಂಬ ಸೀರಿಯಲ್ ನಲ್ಲಿ ಜೆಕೆ ನಟಿಸಲಿದ್ದಾರೆ. ಈ ಸೀರಿಯಲ್ನ ಫಸ್ಟ್ ಲುಕ್ ರಿಲೀಸ್ ಆಗಿದೆ.

ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫಸ್ಟ್ ಲುಕ್ ಫೋಟೋವನ್ನು ಹಂಚಿಕೊಂಡಿದ್ದು, ‘‘ಕಾಯುವಿಕೆ ಮುಗಿದಿದೆ! ಇಲ್ಲಿ ಕಾಲ್ಪನಿಕ ಪ್ರಪಂಚದ ಇತಿಹಾಸದಲ್ಲಿ ಭಯಾನಕ ದುಷ್ಟ ರಾಕ್ಷಸ ಬರುತ್ತಾನೆ. ಸೋನಿ ಸಬ್ ನಲ್ಲಿ ಆಲಿ ಬಾಬಾ ದಾಸ್ತಾನ್-ಎ-ಕಾಬೂಲ್ ಸೀರಿಯಲ್ ಬರಲಿದೆ. ಅಲಿಬಾಬಾ ಮತ್ತು 40 ಕಳ್ಳರು ಕಥೆಯಿಂದ ಸಣ್ಣ ಎಳೆಯನ್ನು ತೆಗೆದುಕೊಂಡು ಈ ಸೀರಿಯಲ್ ಅನ್ನು ರೂಪಿಸಲಾಗಿದೆ. ಸೀರಿಯಲ್ ಶೂಟಿಂಗ್ ಅನ್ನು ಲಡಾಖ್‌ನಲ್ಲಿ ಪ್ರಾರಂಭಿಸುತ್ತೇವೆ. ಅಲ್ಲದೇ ಈ ಸೀರಿಯಲ್ ಮೂಲಕ ನಾನು ಜನರ ನಿರೀಕ್ಷೆಯ ಮಟ್ಟವನ್ನು ತಲುಪುತ್ತೇನೆ ಎಂಬ ನಂಬಿಕೆ ಇದೆ‘’ ಎಂದು ಹೇಳಿದ್ದಾರೆ.

ಇನ್ನು, ಕೆಲ ತಿಂಗಳುಗಳ ಹಿಂದೆ ಜೆಕೆ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅದಲ್ಲದೇ ಜೆಕೆ ವಿವಾಹವಾಗುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಈ ಕುರಿತು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ‘ಈ ಸುದ್ದಿ ಸುಳ್ಳು, ಅದೆಷ್ಟು ಬಾರಿ ನನಗೆ ವಿವಾಹ ಮಾಡಿಸುತ್ತಾರೋ ಗೊತ್ತಿಲ್ಲ’ ಎನ್ನುವ ಮೂಲಕ ಸುಳ್ಳು ಸುದ್ದಿಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೆಕೆ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಹೀಗಾಗಿ ಇವರಿಬ್ಬರ ವಿವಾಹವಾಗಲಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಿದ್ದವು.

ಜೆಕೆ ಧಾರಾವಾಹಿ ಮಾತ್ರವಲ್ಲದೆ ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ರನ್ನರ್ ಅಪ್ ಆಗಿ ವಿಜೇತರಾದರು. ಇವುಗಳ ಮದ್ಯೆ ಸ್ಯಾಂಡಲ್ ವುಡ್ ನಲ್ಲಿ ಕೆಂಪೇಗೌಡ, ವರದನಾಯಕ, ಜರಾಸಂಧ, ಆ ಕರಾಳ ರಾತ್ರಿ, ವಿಷ್ಣುವರ್ಧನ, ವಿಸ್ಮಯ, ಜಸ್ಟ್ ಲವ್, ಮೇ 1, ಬೆಂಗಳೂರು 560023 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಸಿದ್ದು, ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಇವರೂ ಒಬ್ಬರು.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap