ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಸಿನಿಮಾಗಳ ಪೈಕಿ ಪ್ರೇಮಲೋಕವೂ ಒಂದು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಜೋಡಿಯಾಗಿ ಅಭಿನಯಿಸಿದ್ದ ಪ್ರೇಮಲೋಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿದ್ದು ಇದೀಗ ಇತಿಹಾಸ. ಸಿನಿಮಾ ಒಂದು ರೀತಿಯಲ್ಲಿ ಹಿಟ್ ಆದರೆ ಅದರ ಹಾಡುಗಳಂತೂ ಎವರ್ ಗ್ರೀನ್. ಈಗಲೂ ಪ್ರೇಮಲೋಕದ ಹಾಡುಗಳನ್ನು ಸಂಗೀತ ಪ್ರಿಯರು ಗುನುಗುನಿಸದೇ ಇರುವುದಿಲ್ಲ. ಅಷ್ಟರ ಮಟ್ಟಿಗೆ ಆ ಸಿನಿಮಾ, ಅದರ ಹಾಡುಗಳು ಜನಪ್ರಿಯತೆ ಪಡೆದಿತ್ತು.
ಅಂದ ಹಾಗೇ ಈಗ್ಯಾಕೆ ಪ್ರೇಮಲೋಕದ ವಿಷಯ ಬಂತು ಅಂಥ ಅಂದುಕೊಂಡಿದ್ದೀರಾ? ಪ್ರೇಮಲೋಕದ ಹಾಡುಗಳ ಪೈಕಿ ಒಂದಾಗಿರುವ ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ ಎನ್ನುವ ಹಾಡನ್ನು ಮತ್ತೊಮ್ಮೆ ರಿಕ್ರಿಯೇಟ್ ಮಾಡಲಾಗುತ್ತಿದೆ.
ಹೌದು, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಅವರ ನಟನೆಯ ಹೊಚ್ಚ ಹೊಸ ಸಿನಿಮಾ ತಾಯ್ತದಲ್ಲಿ ಪ್ರೇಮಲೋಕದ ನೋಡಮ್ಮ ಹುಡುಗಿ ಹಾಡನ್ನು ರಿಕ್ರಿಯೇಟ್ ಮಾಡಲಾಗುತ್ತಿದೆ. ಈಗಾಗಲೇ ಶೂಟಿಂಗ್ ಕೂಡಾ ಮಾಡಲಾಗುತ್ತಿದ್ದು ಅದರ ಚಿಕ್ಕ ತುಣುಕೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ ಮಂಜಿನ ನಗರಿ ಚೆಲುವೆ.
ಮೇಕಿಂಗ್ ವಿಡಿಯೋವನ್ನು ಹಂಚಿಕೊಂಡಿರುವ ಹರ್ಷಿಕಾ ಪೂಣಚ್ಚ “ಪ್ರೇಮಲೋಕ ಮತ್ತೆ ಬರುತ್ತಿದೆ.. ತಾಯ್ತ ಸಿನಿಮಾದ ಮೂಲಕ. ಈ ಹಾಡಿನಲ್ಲಿ ನನಗೆ ಜೂಹಿ ಚಾವ್ಲಾ ಕಂಡರೆ ತುಂಬಾ ಇಷ್ಟ” ಎಂದು ಬರೆದುಕೊಂಡಿದ್ದಾರೆ.
ಹರ್ಷಿಕಾ ಪೂಣಚ್ಚ ಅವರ ಪೋಸ್ಟ್ ಗೆ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಇಮೋಜಿ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೂಹಿ ಚಾವ್ಲಾ ಕಮೆಂಟ್ ಕಂಡ ಫಿದಾ ಆಗಿರುವ ಹರ್ಷಿಕಾ ಪೂಣಚ್ಚ “ನನ್ನ ದಿನವನ್ನು ನೀವು ಸಂತೋಷಗೊಳಿಸಿದ್ದೀರಿ” ಎಂದು ಮರುಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಪ್ರೇಮಲೋಕದ ರಿಕ್ರಿಯೇಟ್ ಹಾಡನ್ನು ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ