ಕಮಲ್ ಹಾಸನ್ ಇದೀಗ ಸಂಭ್ರಮದಲ್ಲಿದ್ದಾರೆ. ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ವಿಕ್ರಮ್ ಸಿನಿಮಾ ಕರ್ನಾಟಕದಲ್ಲಿಯೂ ಸಾಕಷ್ಟು ಗಳಿಕೆ ಮಾಡಿದ್ದು ಇದೀಗ ಕನ್ನಡಿಗರಿಗೆ ಧನ್ಯವಾದ ಹೇಳಿದ್ದಾರೆ.ಅದು ಕೂಡಾ ಕನ್ನಡದಲ್ಲಿ.

ಹೌದು, ಕನ್ನಡದಲ್ಲಿ ವಿಡಿಯೋ ಮಾಡುವ ಮೂಲಕ ತಮ್ಮ ಸಿನಿಮಾ ಗೆಲ್ಲಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ ಕಮಲ್ ಹಾಸನ್.
“ಕನ್ನಡ ಸಿನಿಮಾ ವೀಕ್ಷಕರು ಒಂದು ಉತ್ತಮ ಸಿನಿಮಾವನ್ನು ಯಾವಾಗಲೂ ಬೆಂಬಲಿಸುತ್ತಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಉತ್ತಮ ನಟರನ್ನು ಕೂಡಾ ಅವರು ಬೆಂಬಲಿಸುತ್ತಾರೆ. ಇದೀಗ ವಿಕ್ರಮ್ ಸಿನಿಮಾವನ್ನು, ನನ್ನನ್ನು ಬೆಂಬಲಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ” ಎಂದು ಹೇಳುತ್ತಾರೆ ಕಮಲ್ ಹಾಸನ್.

ಗೆಲುವಿನ ಸಂಭ್ರಮದಲ್ಲಿರುವ ಕಮಲ್ ಹಾಸನ್ ಸಿನಿಮಾದ ಸಹ ಕಲಾವಿದರುಗಳು ಹಾಗೂ ತಂತ್ರಜ್ಞರನ್ನು ನೆನೆಪಿಸಿಕೊಳ್ಳಲು ಮರೆಯಲಿಲ್ಲ.” ಸಂಗೀತ ನಿರ್ದೇಶಕ ಶ್ರೀ ಅನಿರುದ್ಧ್, ಛಾಯಾಗ್ರಾಹಕ ಶ್ರೀ ಗಿರೀಶ್, ಸಂಕಲನಕಾರ ಶ್ರೀ ಫಿಲೋಮಿನ್ ರಾಜ್, ಸಾಹಸ ನಿರ್ದೇಶಕ ಶ್ರೀ ಅನ್ಬು ಅರಿವ್, ಶ್ರೀ ಸತೀಶ್ ಕುಮಾರ್ ಇವರನ್ನು ಈ ಸಮಯದಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. ಇನ್ನು ಇದರ ಜೊತೆಗೆ ಇವರುಗಳಿಗೆ ಬೆನ್ನೆಲುಬಾಗಿ ಸುಮಾರು ಜನ ಕೆಲಸ ಮಾಡಿದ್ದಾರೆ. ಎಲೆ ಮರೆಯ ಕಾಯಿಯಂತಿರುವ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ಕಮಲ್ ಹಾಸನ್.


“ಶ್ರೀ ವಿಜಯ್ ಸೇತುಪತಿ, ಶ್ರೀ ಫಹಾದ್ ಫಾಸಿಲ್, ಶ್ರೀ ನರೇನ್, ಶ್ರೀ ಚಂಬಲ್ ವಿನೋದ್ ಅವರು ಕೂಡಾ ಈ ಗೆಲುವಿನ ಹಿಂದಿದ್ದಾರೆ” ಎನ್ನುವ ಕಮಲ್ ಹಾಸನ್ ನಟ ಸೂರ್ಯ ಅವರಿಗೂ ಧನ್ಯವಾದ ಹೇಳಿದ್ದಾರೆ.
