ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ಇದ್ದಕ್ಕಿದ್ದಂತೆ ಪಾತ್ರವೊಂದರ ಬದಲಾವಣೆಯಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಪಾತ್ರ ಬದಲಾಗುತ್ತಿರುವ ವಿಚಾರ ಸ್ವತಃ ಪಾತ್ರಧಾರಿಗೆ ತಿಳಿದಿಲ್ಲ. ಮಾತ್ರವಲ್ಲ ಈಗಾಗಲೇ ಆ ಪಾತ್ರಕ್ಕೆ ಬೇರೊಬ್ಬರು ಕೂಡಾ ಆಯ್ಕೆಯಾಗಿದ್ದು, ಅವರು ಶೂಟಿಂಗ್ ಗೆ ಹಾಜರಾಗಿದ್ದು ಕೂಡಾ ಅವರಿಗೆ ತಿಳಿಯದಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ಅಂದ ಹಾಗೇ ನಾವೀಗ ಹೇಳುತ್ತಿರುವುದು ತಾರಾ ಪಾತ್ರಧಾರಿ ಬಗ್ಗೆ.
ಕಮಲಿ ಧಾರಾವಾಹಿಯಲ್ಲಿ ನಾಯಕ ರಿಷಿ ಅಮ್ಮ ತಾರಾ ಆಗಿ ನಟಿಸುತ್ತಿರುವ ಸ್ವಪ್ನ ದೀಕ್ಷಿತ್ ಇನ್ನು ಮುಂದೆ ಆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಸ್ವಪ್ನ ದೀಕ್ಷಿತ್ ಈ ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
“ಕಮಲಿ ಧಾರಾವಾಹಿಯಲ್ಲಿ ಇನ್ನು ಮುಂದೆ ನಾನು ತಾರಾ ಆಗಿ ನಟಿಸುತ್ತಿಲ್ಲ. ಅದಕ್ಕೆ ಇರುವ ಕಾರಣ ಇಷ್ಟೇ. ನನಗೆ ಗೊತ್ತಿಲ್ಲದಂತೆಯೇ ಧಾರಾವಾಹಿಯಲ್ಲಿ ನನ್ನ ಪಾತ್ರದ ಬದಲಾವಣೆ ಆಗಿದೆ. ಕೊನೆಯವರೆಗೂ ಅದು ನನ್ನ ಗಮನಕ್ಕೆ ಬರಲಿಲ್ಲ” ಎಂದು ಹೇಳಿದ್ದಾರೆ ಸ್ವಪ್ನ ದೀಕ್ಷಿತ್.
ಇದರ ಜೊತೆಗೆ ” ಕಮಲಿಯಲ್ಲಿ ತಾರಾ ಪಾತ್ರದ ಬದಲಾವಣೆ ಆಗಿದೆ ಎಂದು ನಾನು ಬೇರೆಯವರಿಂದ ತಿಳಿದುಕೊಂಡೆ. ಅಷ್ಟು ಮಾತ್ರವಲ್ಲದೇ ಈಗಾಗಲೇ ಬೇರೊಬ್ಬರು ತಾರಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಎಂಬುದನ್ನು ಕೂಡಾ ನಾನು ಬೇರೆಯವರಿಂದ ತಿಳಿದುಕೊಂಡೆ. ನನಗೆ ಈ ವಿಷಯ ತಿಳಿದಾಗಿನಿಂದ ನಿಜವಾಗಿಯೂ ಬೇಸರವಾಗಿದೆ. ಆದರೂ ಸ್ವತಃ ನಾನೇ ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ”ಎಂದು ಪಾತ್ರ ಬದಲಾವಣೆಯಾದುದರ ಕುರಿತು ವಿವರಣೆ ನೀಡುತ್ತಾರೆ ಸ್ವಪ್ನ ದೀಕ್ಷಿತ್.
“ತಾರಾ ಪಾತ್ರ ಇಂದು ಮನೆ ಮಾತಾಗಿದೆ ಎಂದರೆ ಅದಕ್ಕೆ ನೀವು ನೀಡಿದ ಪ್ರೋತ್ಸಾಹವೇ ಕಾರಣ. ಅಷ್ಟರ ಮಟ್ಟಿಗದ ನೀವು ಆ ಪಾತ್ರವನ್ನು, ನನ್ನನ್ನು ಪ್ರೀತಿಸಿದ್ದೀರಿ. ನನ್ನ ಪಾತ್ರವನ್ನು, ನಟನೆಯನ್ನು ಮೆಚ್ಚಿದ ಎಲ್ಲರಿಗೂ ನಾನು ನನ್ನ ಮನಸಾರೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಿಡಿಯೋದ ಕೊನೆಯಲ್ಲಿ ಹೇಳಿಕೊಂಡಿದ್ದಾರೆ ಸ್ವಪ್ನ ದೀಕ್ಷಿತ್.