ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ಅಭಿನಯಿಸುತ್ತಿರುವ ಕಿರಣ್ ರಾಜ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಸಕ್ರಿಯರಾಗಿರುವ ಪ್ರತಿಭೆ. ಕಿರಣ್ ರಾಜ್ ಅಭಿನಯದ ಬಡ್ಡೀಸ್ ಸಿನಿಮಾ ಇದೇ ಜೂನ್ 24 ರಂದು ಬಿಡುಗಡೆಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಭಿನ್ನ ಕಥಾ ಹಂದರವುಳ್ಳ ಬಡ್ಡೀಸ್ ಸಿನಿಮಾವನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದಕ್ಕಾಗಿ ಕಿರಣ್ ರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
“ಬಡ್ಡೀಸ್ ಸಿನಿಮಾ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇನ್ನು ಐಎಂಡಿಬಿ ಹಾಗೂ ಬುಕ್ ಮೈ ಶೋಗಳಲ್ಲಿ ನಮ್ಮ ಸಿನಿಮಾಕ್ಕೆ ಉತ್ತಮ ರೇಟಿಂಗ್ ಕೂಡಾ ದೊರಕಿದೆ. ಈ ಸಿನಿಮಾದಲ್ಲಿನ ನನ್ನ ನಟನೆಯನ್ನು ಕೂಡಾ ಜನ ಮೆಚ್ಚಿಕೊಂಡಿದ್ದು ಅವರ ಪ್ರೀತಿ ನೋಡಿ ನಾನು ಫಿದಾ ಆಗಿದ್ದೇನೆ” ಎಂದು ಹೇಳುತ್ತಾರೆ ಕಿರಣ್ ರಾಜ್.
ಬಡ್ಡೀಸ್ ಸಿನಿಮಾದ ಅರ್ಧ ಪ್ರಚಾರ ಮಾಡಿದ್ದೇ ಅಭಿಮಾನಿಗಳು. ಅವರಿಗೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎನ್ನುವ ಕಿರಣ್ ರಾಜ್ “ಶ್ರಮ ಹಾಕಿ ಕೆಲಸ ಮಾಡಿದರೆ ಪ್ರತಿಫಲ ಸಿಕ್ಕಿಯೇ ಸಿಕ್ಕುತ್ತದೆ. ಅದಕ್ಕೆ ನಾನೇ ಉದಾಹರಣೆ. ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ನನಗೆ ಗೆಲುವು ಸಿಕ್ಕಿದ್ದು ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜನರು ಕೂಡಾ ನನ್ನನ್ನು ಇಷ್ಟಪಟ್ಟಿದ್ದು ಇದರಿಂದ ನನ್ನ ಜವಾಬ್ದಾರಿ ಕೂಡಾ ಹೆಚ್ಚಾಗಿದೆ” ಎನ್ನುತ್ತಾರೆ ಕಿರಣ್ ರಾಜ್.
ಸಿನಿಮಾ ಹಾಗೂ ಸೀರಿಯಲ್ ಇವೆರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುವ ಕಿರಣ್ ರಾಜ್ “ರಾತ್ರಿ ಹಗಲು ಎನ್ನದೆ ನಾನು ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೆ. ತುಂಬಾ ಕಷ್ಟವಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಮಿಸ್ ಮಾಡಲು ನನಗಿಷ್ಟವಿಲ್ಲ” ಎನ್ನುವ ಕಿರಣ್ ರಾಜ್ ಇಂದು ನಟನಾ ಲೋಕದಲ್ಲಿ ಮನೆ ಮಾತಾಗಿದ್ದಾರೆ, ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕನ್ನಡತಿ ಧಾರಾವಾಹಿಯೇ ಕಾರಣ.