ಭಾರತ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’. ಪ್ರತಿಯೊಬ್ಬ ಪ್ರೇಕ್ಷಕನಲ್ಲಿದ್ದ ದೇಶಭಕ್ತಿಯನ್ನು ಹೊರಗೆಳೆದಿಟ್ಟ ಚಿತ್ರವಿದು. ಈ ಚಿತ್ರವನ್ನ ನೋಡುವವರಿಗೆ, ಟಿಕೆಟ್ ದರದಲ್ಲಿನ ಟ್ಯಾಕ್ಸ್ ಅನ್ನು ತೆಗೆದುಹಾಕಲಾಗಿತ್ತು. ಬಿಡುಗಡೆಯಾದ ಕೆಲವು ದಿನಗಳ ಕಾಲ ‘ಐ ಎಂ ಡಿ ಬಿ (IMDB)ಯಲ್ಲಿ ಹತ್ತಕ್ಕೆ ಹತ್ತು ಅಂಕಗಳನ್ನು ಪಡೆದು ಮೆರೆದಿದ್ದ ಚಿತ್ರ ಇದು. ಕರ್ನಾಟಕದ ಸಚಿವರಿಗೆ ಈ ಚಿತ್ರದ ವಿಶೇಷ ಶೋ ಒಂದನ್ನು ಏರ್ಪಡಿಸಲಾಗಿತ್ತು. ಪ್ರತಿಯೊಬ್ಬ ಭಾರತೀಯನ ಮನದೊಳಗು ಒಂದು ವಿಶೇಷ ಸ್ಥಾನವನ್ನ ಪಡೆದ ಈ ಚಿತ್ರ ಸದ್ಯ ಒಟಿಟಿ ಮೆಟ್ಟಿಲೇರಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರ ಬೆಂಬಲವನ್ನು ಮಾತ್ರವಲ್ಲ ಬಾಕ್ಸ್ ಆಫೀಸ್ ನಲ್ಲಿ ಅತ್ಯುತ್ತಮ ಗಳಿಕೆಯನ್ನು ಕಂಡಿತ್ತು. ಸದ್ಯ ಈ ಚಿತ್ರ ಜೀ5(zee5)ನಲ್ಲಿ ಪ್ರದರ್ಶನಕ್ಕೆ ಸಿಗಲು ಸಿದ್ಧವಾಗಿದೆ. ಕೇವಲ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದಂತ ಈ ಸಿನಿಮಾ ಇದೀಗ ಕನ್ನಡ ಸೇರಿದಂತೆ ಒಟ್ಟು ನಾಲ್ಕು ಭಾಷೆಗಳಲ್ಲಿ ಜೀ5ನಲ್ಲಿ ನೋಡಲು ಸಿಗಲಿದೆ. ಇದೇ ಮೇ 13ಕ್ಕೆ ಜೀ5 ನಲ್ಲಿ ಕನ್ನಡ, ಹಿಂದಿ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್ ಫೈಲ್ಸ್’.
ನಮ್ಮ ಭಾರತದ ಮುಕುಟಪ್ರಾಯವಾದ ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ನಡೆದಂತ ಬ್ರಾಹ್ಮಣರ ಸರಣಿ ಹತ್ಯಾಕಾಂಡದ ಸುತ್ತ ಹೆಣಿದುಕೊಂಡಿರುವ ಒಂದು ನೈಜಕತೆಯನ್ನ ತೆರೆಮೇಲೆ ಈ ಚಿತ್ರದ ಮೂಲಕ ತಂದಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಅನುಪಮ್ ಖೇರ್, ಮಿಥುನ್ ಚಕ್ರಬೋರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಮುಂತಾದವರು ನಟಿಸಿರುವ ಈ ಸಿನೆಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಬಿಡುಗಡೆಗೂ ಮುನ್ನವೇ ತನ್ನ ಟ್ರೈಲರ್ ಹಾಗು ಪ್ರೀಮಿಯರ್ ಶೋಗಳಿಂದ ಸಂಚಲನ ಮೂಡಿಸಿದ್ದ ಈ ಸಿನಿಮಾ ಇದೀಗ ಮೇ 13ರಿಂದ ಜೀ5ನಲ್ಲಿ ನೋಡಲು ಸಿಗಲಿದೆ.